ವಾರಾಣಸಿ: ಕೇಂದ್ರದ ಕೃಷಿ ಕಾಯ್ದೆಗಳ ಬಗ್ಗೆ ವಿರೋಧ ಪಕ್ಷವಾದ ಕಾಂಗ್ರೆಸ್ ರೈತರಲ್ಲಿ ಸಂಶಯದ ಬೀಜ ಬಿತ್ತಿದ ಪರಿಣಾಮ ಸಾವಿರಾರು ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವಂತೆಯೇ, ‘ಇದು ರೈತರ ಹಿತಕ್ಕಾಗಿಯೇ ಇರುವ ಕಾಯ್ದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಸೋಮವಾರವೂ ಮನವಿ ಮಾಡಿಕೊಂಡಿದ್ದಾರೆ.
ವಾರಾಣಸಿಯಲ್ಲಿ ಸೋಮವಾರ ಹಂಡಿಯಾ (ಪ್ರಯಾಗರಾಜ್) ಮತ್ತು ರಾಜಾತಾಲಾಬ್ (ವಾರಾಣಸಿ) ನಡುವಿನ ರಾಷ್ಟ್ರೀಯ ಹೆದ್ದಾರಿ 19ನ್ನು ದೇಶಕ್ಕೆ ಅರ್ಪಿಸಿದ ಬಳಿಕ ಮಾತನಾಡುತ್ತಿದ್ದ ಮೋದಿ, ಸರ್ಕಾರ ಕೈಗೊಂಡ ಕ್ರಮಗಳನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರಲ್ಲದೆ, ಇದು ರೈತರು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವುದಕ್ಕಾಗಿಯೇ ಇರುವ ಕಾಯ್ದೆ ಎಂದು ಸ್ಪಷ್ಟಪಡಿಸಿದ್ದಾರೆ. ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬೇಕೇ ಅಥವಾ ಬೇಡವೇ ಎಂದು ರೈತರೇ ನಿರ್ಧರಿಸಲು ಈ ಕಾಯ್ದೆ ಅವಕಾಶ ಮಾಡುತ್ತದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಕೇಂದ್ರ ಸರ್ಕಾರವು ರೈತರ ಒಳಿತಿಗಾಗಿ ಮೂರು ಕಾಯ್ದೆಗಳನ್ನು ರೂಪಿಸಿ, ರೈತರು ಮಧ್ಯವರ್ತಿಗಳ ಹಾವಳಿಯಿಂದ ಮುಕ್ತಿ ಪಡೆದು ಸ್ವತಂತ್ರವಾಗಿ ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ಇಳಿಸಲು ಅನುವು ಮಾಡಿಕೊಟ್ಟಿದ್ದರು. ಆದರೆ, ಇದನ್ನೇ ರೈತವಿರೋಧಿ ಎಂದು ಕಾಂಗ್ರೆಸ್ ಸಹಿತ ವಿರೋಧ ಪಕ್ಷಗಳು ಬಿಂಬಿಸಿ, ರೈತರ ಮನದಲ್ಲಿ ಸಂಶಯವನ್ನು ಬಿತ್ತಿದ್ದರಿಂದ ಅವರು ಪ್ರತಿಭಟನೆಗಿಳಿದಿದ್ದಾರೆ. ಈ ಪ್ರತಿಭಟನೆಯ ದುರ್ಲಾಭ ಪಡೆದುಕೊಳ್ಳಲು ಖಲಿಸ್ತಾನ್ ಉಗ್ರಗಾಮಿ ಸಂಘಟನೆಯೂ, ಪ್ರತಿಭಟಿಸುವ ರೈತರಿಗೆ 10 ಲಕ್ಷ ಡಾಲರ್ ಹಣ ವಿತರಿಸುವುದಾಗಿಯೂ ಹೇಳಿತ್ತು.
ಇದನ್ನೂ ಓದಿ: Farmers Protest: ರೈತರಿಗೆ 10 ಲಕ್ಷ ಡಾಲರ್ ಘೋಷಿಸಿದ ಖಲಿಸ್ತಾನ್ ಪರ ಸಂಘಟನೆ!
ನರೇಂದ್ರ ಮೋದಿ ಅವರು ರೈತರಿಗೆ ಭರವಸೆ ತುಂಬಿದ ಮಾತುಗಳು ಹೀಗಿವೆ:
- ಸ್ವಾಮಿನಾಥನ್ ಆಯೋಗದ ವರದಿಯ ಶಿಫಾರಸಿನನ್ವಯ ನಾವು ಒಂದುವರೆ ಪಟ್ಟು ಕನಿಷ್ಠ ಬೆಂಬಲ ಬೆಲೆ ನೀಡುತ್ತೇವೆಂದು ಭರವಸೆ ನೀಡಿದ್ದೆವು. ಈ ಭರವಸೆಯನ್ನು ಕೇವಲ ಕಾಗದದಲ್ಲಿ ಮಾತ್ರವೇ ಈಡೇರಿಸಿದ್ದಲ್ಲ, ಬದಲಾಗಿ ಈಗಾಗಲೇ ಹಣವು ರೈತರ ಖಾತೆಗಳಿಗೆ ಜಮೆಯಾಗಿದೆ.
- ಹೊಸ ಕೃಷಿ ಕಾನೂನುಗಳನ್ನು ರೈತರ ಲಾಭಕ್ಕಾಗಿಯೇ ಜಾರಿಗೊಳಿಸಲಾಗಿದೆ. ಈ ಕಾಯ್ದೆಗಳ ಲಾಭ ಅಥವಾ ಪ್ರಯೋಜನವೇನೆಂಬುದು ಮುಂಬರುವ ದಿನಗಳಲ್ಲಿ ನಿಮಗೇ ಗೊತ್ತಾಗಲಿದೆ. ಆದರೆ, ಈಗ ಹೊಸ ಟ್ರೆಂಡ್ ಶುರುವಾಗಿದೆ. ಸರ್ಕಾರದ ನಿರ್ಧಾರಗಳನ್ನು ಹಿಂದೆಲ್ಲಾ ವಿರೋಧಿಸುತ್ತಿದ್ದರಷ್ಟೇ. ಆದರೆ, ಈಗ ಅಪಪ್ರಚಾರ, ಸುಳ್ಳು ಸುದ್ದಿಗಳೇ ವಿರೋಧ ಪಕ್ಷಗಳ ಪ್ರತಿಭಟನೆಯ ಮೂಲವಾಗಿಬಿಟ್ಟಿದೆ. ಈ ನಿರ್ಧಾರ ಸರಿಯೇ ಇದ್ದರೂ, ಏನೇ ತೊಂದರೆಯಾಗದಿದ್ದರೂ, ‘ಇದರಿಂದ ಬೇರೇನೋ ಆಗುತ್ತದೆ, ಅಪಾಯ’ ಅಂತೆಲ್ಲ ಪುಕಾರು ಹಬ್ಬಿಸಲಾಗುತ್ತದೆ. ಇದೇ ಟ್ರೆಂಡನ್ನು ಕೃಷಿ ಕಾಯ್ದೆಗಳಿಗೂ ಬಳಸುತ್ತಿದ್ದಾರೆ ವಿರೋಧ ಪಕ್ಷದವರು.
- ಈ ಮೊದಲು, ಮಾರುಕಟ್ಟೆಯ ಹೊರಗಿನ ವ್ಯವಹಾರಗಳು ಅಕ್ರಮವಾಗಿದ್ದವು. ಅಂತಹಾ ಪರಿಸ್ಥಿತಿಯಲ್ಲಿ ಸಣ್ಣ ರೈತರಿಗೆ ವಂಚನೆ ಮಾಡಲಾಗುತ್ತಿತ್ತು ಮತ್ತು ಅವರು ವಿವಾದದಲ್ಲೂ ಸಿಲುಕುತ್ತಿದ್ದರು. ಈಗ ಮಾರುಕಟ್ಟೆಯ ಹೊರಗಿನ ಯಾವುದೇ ವಹಿವಾಟಿಗೆ ಸಣ್ಣ ರೈತರು ಕೂಡ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ. ವಂಚನೆ ಮಾಡುವುದರ ವಿರುದ್ಧ ಸಣ್ಣ ರೈತರಿಗೂ ಹೊಸ ಅಸ್ತ್ರ ಸಿಕ್ಕಿದೆ ಮತ್ತು ಕಾನೂನು ರಕ್ಷಣೆಯೂ ಸಿಕ್ಕಂತಾಗಿದೆ.
- ದೇಶದ ಕೃಷಿ ಉತ್ಪನ್ನಗಳು ಇಡೀ ಜಗತ್ತಿನಲ್ಲೇ ಖ್ಯಾತಿ ಪಡೆದಿವೆ. ಈ ದೊಡ್ಡ ಮಾರುಕಟ್ಟೆಗಳಿಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿ, ಹೆಚ್ಚು ಹಣ ಸಂಪಾದಿಸುವ ಹಕ್ಕು ರೈತನಿಗೆ ಇರಬಾರದೇ? ಹೋಗಲಿ, ಹಳೆಯ ವ್ಯವಸ್ಥೆಯಲ್ಲೇ ವಹಿವಾಟು ನಡೆಸುತ್ತಾರೆಂದರೆ, ಅವರನ್ನು ಯಾರು ತಡೆಯುತ್ತಾರೆ? ಅಭ್ಯಂತರವೇ ಇರುವುದಿಲ್ಲ.
- ರೈತರಿಗೆ ದೊಡ್ಡ ಮಾರುಕಟ್ಟೆಯ ಆಯ್ಕೆಗಳನ್ನೂ ನೀಡುವ ಮೂಲಕ ಅವರಿಗೆ ಹೊಸ ಬಲ ಬಂದಂತಾಗಿದೆ. ಸುಧಾರಣೆಗಳನ್ನು ರೈತರ ಹಿತಕ್ಕಾಗಿಯೇ ಮಾಡಲಾಗಿದೆ, ಅವರಿಗೆ ಹೆಚ್ಚು ಆಯ್ಕೆಗಳು ದೊರೆಯುತ್ತವೆ. ಹೆಚ್ಚು ಹಣ ಮತ್ತು ಹೆಚ್ಚು ಅನುಕೂಲ ಒದಗಿಸುವವರಿಗೆ ತಮ್ಮ ಉತ್ಪನ್ನಗಳನ್ನು ಮಾರುವ ಹಕ್ಕನ್ನು ರೈತರಿಗೆ ಕೊಡಬಾರದೇ?
- ಕಳೆದ ಕೆಲವು ವರ್ಷಗಳಲ್ಲಿ ಬೆಳೆ ವಿಮೆ ಅಥವಾ ನೀರಾವರಿ, ಬೀಜ ಇಲ್ಲವೇ ಮಾರುಕಟ್ಟೆಗೆ ಸಂಬಂಧಿಸಿದಂತೆ ಎಲ್ಲ ಮಟ್ಟದಲ್ಲೂ ಕೆಲಸ ಮಾಡಲಾಗಿದೆ. ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯು ದೇಶದ 4 ಕೋಟಿ ರೈತಾಪಿ ಕುಟುಂಬಕ್ಕೆ ಸಹಾಯ ಮಾಡಿದೆ. ಪ್ರಧಾನ ಮಂತ್ರಿ ಕೃಷಿ ನೀರಾವರಿ ಯೋಜನೆಯ ಅನುಸಾರ 47 ಲಕ್ಷ ಹೆಕ್ಟೇರ್ ಜಮೀನಿಗೆ ಕಿರು ನೀರಾವರಿ ವ್ಯವಸ್ಥೆ ಒದಗಿಸಲಾಗಿದೆ.
"ರೈತರೇ, ಈಗ ವಂಚನೆಯಿಂದ ಯಾವುದೇ ಕೆಲಸ ಆಗುವುದಿಲ್ಲ. ನಮ್ಮ ಉದ್ದೇಶವು ಗಂಗೆಯಷ್ಟೇ ಪವಿತ್ರ. ಆತಂಕ ಸೃಷ್ಟಿಸಿ ಅಪಪ್ರಚಾರ ಮಾಡುತ್ತಿರುವವರ ನೈಜ ಮುಖ ಹಲವಾರು ಬಾರಿ ಜನರೆದುರು ಬಯಲಾಗುತ್ತಲೇ ಇದೆ. ಒಂದು ವಿಷಯದಲ್ಲಿ ಅವರ ಸುಳ್ಳು ರೈತರಿಗೆ ತಿಳಿದ ತಕ್ಷಣ, ಮತ್ತೊಂದು ವಿಷಯದಲ್ಲಿ ಸುಳ್ಳು ಹರಡಲು ಅವರು ಯತ್ನಿಸುತ್ತಾರೆ. ಇಪ್ಪತ್ತನಾಲ್ಕು ಗಂಟೆಯೂ ಅವರಿಗೆ ಇದೇ ಕೆಲಸ. ದೇಶದ ರೈತರಿಗೆ ಇದು ಗೊತ್ತಿದೆ. ಇನ್ನೂ ಸಂದೇಹವಿದ್ದ ರೈತರಿಗೆ ಉತ್ತರಿಸಲು, ಸಮಸ್ಯೆ ಪರಿಹರಿಸಲು ಸರ್ಕಾರ ಯತ್ನಿಸುತ್ತಲೇ ಇದೆ. ಕೃಷಿ ಸುಧಾರಣೆಗಳ ಬಗ್ಗೆ ಕಳವಳ ಹೊಂದಿರುವ ರೈತರು ಈ ಸುಧಾರಣೆಗಳ ಲಾಭ ಪಡೆಯುತ್ತಾರೆ ಮತ್ತು ತಮ್ಮ ಆದಾಯ ಹೆಚ್ಚಿಸಿಕೊಳ್ಳುತ್ತಾರೆ ಎಂಬ ಭರವಸೆ ನನಗಿದೆ" ಎಂದಿದ್ದಾರೆ ಮೋದಿ. "ನಾವು ಮಂಡಿಗಳನ್ನು ತೆಗೆದುಹಾಕಿ ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು ರದ್ದುಪಡಿಸುತ್ತೇವೆ ಎಂದಾದರೆ, ನಾವೇಕೆ ಅದರಲ್ಲಿ ಅಷ್ಟೊಂದು ಹಣ ಹೂಡಿಕೆ ಮಾಡುತ್ತೇವೆ? ಮಂಡಿಗಳನ್ನು ಮತ್ತಷ್ಟು ಆಧುನೀಕರಣಗೊಳಿಸಲು ನಮ್ಮ ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿರುವುದು ನಿಜ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಬಗ್ಗೆಯೂ ಇದೇ ಜನಗಳು ಈ ಹಿಂದೆ ಸಾಕಷ್ಟು ಅಪಪ್ರಚಾರ ಮಾಡಿರುವುದು ನಿಮಗೆ ಗೊತ್ತೇ ಇದೆ. ಮೋದಿ ಅವರು ಚುನಾವಣೆಗಾಗಿಯೇ ಈ ಯೋಜನೆ ಜಾರಿಗೆ ತಂದಿದ್ದಾರೆ ಅಂತಲೂ ಅವರು ಅಪಪ್ರಚಾರ ಮಾಡಬಹುದು" ಎಂದು ಮೋದಿ ಕಿಡಿ ಕಾರಿದ್ದಾರೆ.
ಇಷ್ಟೆಲ್ಲ ಅನುಕೂಲಗಳಿದ್ದರೂ, ರೈತರ ದಾರಿ ತಪ್ಪಿಸಿ, ಅವರ ಮನಸ್ಸಿನಲ್ಲಿ ಹೆದರಿಕೆಯುಂಟಾಗುವಂತೆ ಮಾಡಿ, ನರೇಂದ್ರ ಮೋದಿ ವಿರುದ್ಧ ಅವರನ್ನು ಎತ್ತಿ ಕಟ್ಟಲಾಗುತ್ತಿದೆ ಎಂದು ಬಿಜೆಪಿಯೂ ಟೀಕಿಸಿದೆ.
ಇದನ್ನೂ ಓದಿ: ರೈತ ಹೋರಾಟದಲ್ಲಿ ವಿದ್ರೋಹಿ ಶಕ್ತಿಗಳು: ಮೋದಿ, ಬಿಜೆಪಿ ಗಮನಿಸಬೇಕಿದೆ
Farmers Protest ನಡುವೆ ಸಮಾಜಘಾತುಕ ಶಕ್ತಿಗಳು: ಮೋದಿ ಹತ್ಯೆ ಬೆದರಿಕೆ ಘೋಷಣೆ – ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Average Rating