ಹೈದರಾಬಾದ್: ಬಿಜೆಪಿಯ ಹೈದರಾಬಾದ್ ಪ್ರಯೋಗ ಯಶಸ್ವಿಯಾಗಿದ್ದು, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಅಹಂಕಾರಕ್ಕೆ ಶಾಸ್ತಿಯಾಗಿದೆ. ಕಟ್ಟರ್ ಮುಸ್ಲಿಂ ವಾದಿ ಎಐಎಂಐಎಂ ಎದೆಯಲ್ಲಿ ನಡುಕ ಶುರುವಾಗಿದೆ. ಈ ಘಟನೆಗಳು ಮುಂಬರುವ ತೆಲಂಗಾಣ ಚುನಾವಣೆಯ ಸಾಧ್ಯತೆಗಳನ್ನು ಬಗೆದಿಟ್ಚಿದ್ದು, ದಕ್ಷಣದಲ್ಲಿ ಬಿಜೆಪಿ ಮತ್ತೊಂದು ರಾಜ್ಯವನ್ನು ಕೈವಶ ಮಾಡಿಕೊಳ್ಳುವ ಪ್ರಯತ್ನಕ್ಕೆ ಚಾಲನೆ ನೀಡಿದೆ.
ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಶನ್ (GHMC) ಚುನಾವಣೆಗೆ ಇಡೀ ದೇಶವನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂಟ್ರಿಯು ಫಲ ಕೊಟ್ಟಿದೆ. ಅವರ ಚಾಣಾಕ್ಷತನವು ಭಾರತ ವಿರೋಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದು, ಈ ಹಿಂದೆ 4 ಸ್ಥಾನಗಳನ್ನಷ್ಟೇ ಗೆದ್ದುಕೊಂಡಿದ್ದ ಬಿಜೆಪಿ, ಭರ್ಜರಿಯಾಗಿ 48 ಸ್ಥಾನಗಳ್ನು ಕೈವಶ ಮಾಡಿಕೊಂಡು, ಎರಡನೇ ಸ್ಥಾನಕ್ಕೆ ನೆಗೆದಿದೆ. ಕಾಂಗ್ರೆಸ್ ಕೇವಲ 2 ಸ್ಥಾನದಲ್ಲಿ ತಳಮಟ್ಟದಲ್ಲಿದೆ.
150ರಲ್ಲಿ 99 ಸ್ಥಾನಗಳನ್ನು ಹೊಂದಿದ್ದ ಟಿಆರ್‌ಎಸ್ ಕೇವಲ 55 ಸ್ಥಾನಗಳಿಗೆ ತೃಪ್ತಿಪಡಬೇಕಾಗಿದ್ದು, ಅದರ ಗರ್ವ ಭಂಗವಾಗಿದೆ. 44 ಸ್ಥಾನ ಗೆದ್ದ (2016ರಲ್ಲೂ ಅಷ್ಟೇ) ಅಸಾದುದ್ದೀನ್ ಓವೈಸಿಯ ಎಂಐಎಂ ಪಕ್ಷಕ್ಕೆ ದೊಡ್ಡ ಮಟ್ಟದ ಹಾನಿಯಾಗದಿದ್ದರೂ, ಬಿಜೆಪಿಯ ಈ ಪರಿಯ ವಿಜೃಂಭಣೆ ಕಂಡು ನಡುಕ ಹುಟ್ಟಿದ್ದಂತೂ ಸತ್ಯ.
ಒಂದು ಸ್ಥಾನದ ಬಗ್ಗೆ ಹೈಕೋರ್ಟ್‌ನಲ್ಲಿ ತಕರಾರು ಪ್ರಕರಣವಿರುವುದರಿಂದ ಫಲಿತಾಂಶ ಪ್ರಕಟವಾಗಿಲ್ಲ.
ಇದರೊಂದಿಗೆ, ತೆಲಂಗಾಣದ ಈ ಪ್ರಮುಖ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯು ಕಾಂಗ್ರೆಸ್ಸನ್ನು ಪ್ರಧಾನ ಪ್ರತಿಪಕ್ಷ ಸ್ಥಾನದಿಂದ ಕೆಳಕ್ಕಿಳಿಸಿದ್ದು, 2023ರ ಚುನಾವಣೆಯಲ್ಲೂ ತನ್ನ ಛಾಪು ಬೀರಲು ಉತ್ಸಾಹ ಇಮ್ಮಡಿ ಮಾಡಿಕೊಂಡಿದೆ.
ಟಿಆರ್‌ಎಸ್‌ಗೆ ಅತೀ ದೊಡ್ಡ ಹೊಡೆತ ಬಿದ್ದಿದೆ. ವೋಟ್ ಪಾಲಿನಲ್ಲೂ ಟಿಆರ್‌ಎಸ್ ಮತ್ತು ಕಾಂಗ್ರೆಸ್‌ಗೆ ಬಿಜೆಪಿ ಭಾರಿ ಹೊಡೆತ ನೀಡಿದೆ. GHMCಯಲ್ಲಿ 25 ಅಸೆಂಬ್ಲಿ ಕ್ಷೇತ್ರಗಳು ಮತ್ತು ನಾಲ್ಕು ಲೋಕಸಭಾ ಸ್ಥಾನಗಳಿರುವುದರಿಂದ ಎಲ್ಲ ರಾಜಕೀಯ ಪಕ್ಷಗಳಿಗೆ ಹೈದರಾಬಾದ್ ಪ್ರದೇಶವು ಅತ್ಯಂತ ಮಹತ್ವದ ರಾಜಕೀಯ ಹೋರಾಟದ ತಾಣವಾಗಿದೆ ಎಂಬುದು ಗಮನಿಸಬೇಕಾದ ಅಂಶ.
ಇದೀಗ ತೆಲಂಗಾಣ ರಾಷ್ಟ್ರ ಸಮಿತಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಮೇಯರ್ ಪಟ್ಟ ಸಿಗಬೇಕಿದ್ದರೆ ಅದಕ್ಕೆ ಅನ್ಯರ ಸಹಾಯ ಬೇಕೇಬೇಕು.
ಅತಂತ್ರ ಸೃಷ್ಟಿಯಾಗಿರುವುದರಿಂದಾಗಿ ಈಗ ಅಸಾದುದ್ದೀನ್ ಓವೈಸಿ ಕಿಂಗ್ ಮೇಕರ್ ಆಗಿ ಮೂಡಿಬಂದಿದ್ದಾರೆ.
ಬಿಜೆಪಿಯಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶೇಷ ಆಸ್ಥೆ ವಹಿಸಿ ಹೋರಾಟ ಸಂಘಟಿಸಿದ್ದರು. ಜೊತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಬಂದು ಹೋಗಿ, ಗೆದ್ದರೆ ಹೈದರಾಬಾದನ್ನು ಭಾಗ್ಯನಗರವಾಗಿ ಮರು ನಾಮಕರಣ ಮಾಡುತ್ತೇವೆ ಎಂದು ಭರವಸೆ ನೀಡಿ ಹೋಗಿದ್ದರು. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಪ್ರಚಾರಕ್ಕೆ ಬಂದಿದ್ದರು.
ಮತ್ತೊಂದೆಡೆಯಿಂದ ಕನ್ನಡದ ಕೆಚ್ಚಿನ ಕಲಿ, ಭಾರತೀಯ ಜನತಾ ಪಕ್ಷದ ಯುವ ಘಟಕದ ಮುಖ್ಯಸ್ಥ ತೇಜಸ್ವಿ ಸೂರ್ಯ ಅವರೂ ಭರ್ಜರಿ ಪ್ರಚಾರ ಮಾಡಿ, ಎಂಐಎಂಗೆ ನೀಡುವ ಪ್ರತಿಯೊಂದು ಮತವೂ ಭಾರತದ ವಿರುದ್ಧ ಮತ ಚಲಾಯಿಸಿದಂತೆ ಎಂದು ಘರ್ಜಿಸಿ ಬಂದಿದ್ದರು. ಗೆಲ್ಲಿಸಿದರೆ ನಿಜಾಮ್, ನವಾಬ ಸಂಸ್ಕೃತಿಯಿಂದ ನಿಮಗೆ ಮುಕ್ತಿ ನೀಡುತ್ತೇವೆ ಎಂದು ಅಮಿತ್ ಶಾ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಹೈದರಾಬಾದ್ ಚುನಾವಣೆಯು ರಾಷ್ಟ್ರ ಮಟ್ಟದ ಗಮನ ಸೆಳೆದಿತ್ತು. ಹೈದರಾಬಾದ್ ಜನತೆ ಈ ಭರವಸೆಗಳ ಈಡೇರಿಕೆಯ ನಿರೀಕ್ಷೆಯಲ್ಲಿ ಬಿಜೆಪಿಗೆ ಮತ ಚಲಾಯಿಸಿದ್ದರು.
ಚುನಾವಣೆ ಫಲಿತಾಂಶದಲ್ಲಿ ಸ್ಥಳೀಯ ಸಮಸ್ಯೆಗಳಿಗಿಂತಲೂ ರಾಷ್ಟ್ರವಾದ ಹಾಗೂ ರಾಷ್ಟ್ರೀಯ ಮಟ್ಟದ ವಿಷಯಗಳೇ ಹೆಚ್ಚು ಪಾತ್ರ ವಹಿಸಿದ್ದು ನೋಡಿದರೆ, ಬಿಜೆಪಿಯು ದಕ್ಷಿಣ ರಾಜ್ಯದಲ್ಲಿ ಬೇರೂರುವ ಮತ್ತು ದಕ್ಷಿಣದ ರಾಜ್ಯಗಳಲ್ಲಿ ತನ್ನ ಹಿಡಿತ ಸಾಧಿಸುವ ಸಾಧ್ಯತೆಗಳು ದಟ್ಟವಾಗುತ್ತಿವೆ.
ಈಗಾಗಲೇ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, 2023ರಲ್ಲಿ ತೆಲಂಗಾಣದ ಮೇಲೆ ಹಿಡಿತ ಸಾಧಿಸಲು ಹೊರಟಿದೆ. ಇದು ಆಂಧ್ರಪ್ರದೇಶದ ಮೇಲೂ ಪ್ರಭಾವ ಬೀರಲಿದೆ. ಮತ್ತೊಂದೆಡೆ ತಮಿಳುನಾಡಿನಲ್ಲಿ ರಾಜಕೀಯ Void ಸೃಷ್ಟಿಯಾಗಿದ್ದು, ರಜನೀಕಾಂತ್ ಹೊಸ ಪಕ್ಷ ಘೋಷಣೆಗೆ ಹೊರಟಿದ್ದಾರೆ. ಅವರ ಪಕ್ಷವೂ ಬಿಜೆಪಿಯತ್ತ ಒಲವು ಹೊಂದಿರುವುದರಿಂದ ಮುಂದಿನ ಚುನಾವಣೆಗಳು ಭಾರಿ ದೊಡ್ಡ ಇತಿಹಾಸಕ್ಕೆ ನಾಂದಿ ಹಾಡಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಚುನಾವಣೆಗಳಲ್ಲಿ ತೀರಾ ಚಿಂತಾಜನಕ ಪ್ರದರ್ಶನ ನೀಡಿದ್ದೆಂದರೆ ಕಾಂಗ್ರೆಸ್. 2016ರಲ್ಲೂ 2 ಸ್ಥಾನ, ಈ ಬಾರಿಯೂ ಎರಡೇ ಸ್ಥಾನ.
ಟಿಆರ್‌ಎಸ್ ಈಗ ಮೇಯರ್ ಪಟ್ಟ ಪಡೆಯುವುದಕ್ಕಾಗಿ ತನ್ನ ಪ್ರಮುಖ ರಾಜಕೀಯ ಶತ್ರು ಎಐಎಂಐಎಂ ಜೊತೆ ಕೈಜೋಡಿಸಲು ಹೇಸುವುದಿಲ್ಲವೇ ಎಂಬುದು ಕಾದು ನೋಡಬೇಕಾದ ವಿಷಯ. ಬಹುಶಃ ಓವೈಸಿ ಪಕ್ಷಕ್ಕೆ ಉಪಮೇಯರ್ ಪಟ್ಟ ನೀಡುವ ಭರವಸೆಯೊಂದಿಗೆ ಅದು ಹಿಡಿತ ಸಾಧಿಸಲೂಬಹುದು.

Average Rating