ನವದೆಹಲಿ: ರೈತರ ಪ್ರತಿಭಟನೆಯಲ್ಲಿ ಖಲಿಸ್ತಾನ್ ಉಗ್ರರು ನುಸುಳಿದ್ದಾರೆ ಎಂಬ ವರದಿಗಳ ಬೆನ್ನಿಗೇ, ಸೋಮವಾರ ಪೂರ್ವ ದೆಹಲಿಯ ಶಂಕರಪುರ ಪ್ರದೇಶದಲ್ಲಿ ಐವರು ಶಂಕಿತ ಉಗ್ರಗಾಮಿಗಳನ್ನು ಬಂಧಿಸಲಾಗಿದೆ.
ಇದೇ ವೇಳೆ, ನೋಟು ರದ್ದತಿಯಿಂದ, ನಕಲಿ ನೋಟುಗಳೆಲ್ಲ ಚಲಾವಣೆಯಾಗದೆ ಕೈಖಾಲಿಯಾದ ಉಗ್ರಗಾಮಿಗಳು, ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ಹೊಂಚಲು ಡ್ರಗ್ಸ್ ದಂಧೆಗೆ ಇಳಿದಿರುವ ಸಂಗತಿಯೂ ಬಯಲಾಗಿದೆ.
ಬಂಧಿತರು ಶೌರ್ಯ ಚಕ್ರ ಪದಕ ವಿಜೇತ ಬಲವಿಂದರ್ ಸಿಂಗ್ ಅವರ ಕೊಲೆಯಲ್ಲಿಯೂ ಇವರು ಪ್ರಮುಖ ಪಾತ್ರ ವಹಿಸಿರುವ ಬಗ್ಗೆ ಮಾಹಿತಿ ಇದೆ. ಕಾಶ್ಮೀರದಲ್ಲಿನ ಉಗ್ರಗಾಮಿ ಚಟುವಟಿಕೆಗಳೊಂದಿಗೆ ಖಲಿಸ್ತಾನಿ ಉಗ್ರರನ್ನೂ ಬೆಸೆಯಲು ಪಾಕಿಸ್ತಾನದ ಬೇಹು ದಳ ಐಎಸ್ಐ ಪ್ರಯತ್ನಿಸುತ್ತಿದೆ ಎಂಬ ಮಾಹಿತಿಯನ್ನು ಈ ಬಂಧಿತರು ಬಹಿರಂಗಪಡಿಸಿರುವುದಾಗಿ ಮೂಲಗಳು ತಿಳಿಸಿವೆ.
ಪೊಲೀಸರ ಪ್ರಕಾರ, ಬಂಧಿತ ಐವರಲ್ಲಿ ಮೂರು ಮಂದಿ ಕಾಶ್ಮೀರದವರು, ಉಳಿದವರು ಪಂಜಾಬಿನವರು. ಈ ಪಂಜಾಬಿನ ಇಬ್ಬರೇ ಬಲವಿಂದರ್ ಸಿಂಗ್ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರಗಾಮಿಗಳ ವಿರುದ್ಧ ವೀರಾವೇಶದಿಂದ ಹೋರಾಡಿದ್ದಕ್ಕಾಗಿ ಶೌರ್ಯ ಚಕ್ರ ಪುರಸ್ಕಾರ ಪಡೆದಿದ್ದ ಬಲವಿಂದರ್ ಅವರನ್ನು ಅಕ್ಟೋಬರ್ ತಿಂಗಳಲ್ಲಿ ಗುಂಡಿಟ್ಟು ಕೊಲೆ ಮಾಡಲಾಗಿತ್ತು.
ಇದೀಗ ಬಂಧಿತರಿಂದ ಮೂರು ಪಿಸ್ತೂಲುಗಳು, ಎರಡು ಕೆಜಿ ಹೆರಾಯಿನ್ ಮತ್ತು 1 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಅವರು ಸಂಚರಿಸುತ್ತಿದ್ದ ಎರಡು ಕಾರುಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಡೀಮಾನೆಟೈಸೇಶನ್ (ನೋಟು ಅಮಾನ್ಯೀಕರಣ) ಬಳಿಕ ನಕಲಿ ನೋಟುಗಳೆಲ್ಲ ಚಲಾವಣೆಯಾಗದ ಕಾರಣದಿಂದಾಗಿ ಕಾಶ್ಮೀರದ ಉಗ್ರಗಾಮಿಗಳು, ಭಯೋತ್ಪಾದನೆಗೆ ಹಣ ಹೊಂದಿಸಲು ಡ್ರಗ್ಸ್ ಮಾರಾಟ ಮಾಡಿ ಹಣ ಸಂಪಾದನೆಗೆ ಕೈಹಚ್ಚಿದ್ದರು ಎಂಬುದನ್ನು ವಿಶೇಷ ತನಿಖಾ ದಳದ ಡಿಸಿಪಿ ಪ್ರಮೋದ್ ಖುಷ್ವಾಹ ಹೇಳಿದ್ದಾರೆ.
ಕಾಶ್ಮೀರಿ ಭಯೋತ್ಪಾದಕರು ಮತ್ತು ಪಂಜಾಬಿನ ಖಲಿಸ್ತಾನಿ ಉಗ್ರರನ್ನು ಪರಸ್ಪರ ಬೆಸೆದು, ದೇಶದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಬೆಂಬಲ ನೀಡುವ ಪ್ರಯತ್ನ ನಡೆದಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ.
ಬಂಧಿತರಲ್ಲಿ ಶಬ್ಬೀರ್ ಅಹ್ಮದ್, ಅಯೂಬ್ ಪಠಾಣ್ ಮತ್ತು ರಿಯಾಜ್ ಎಂಬವರಿಗೆ ಹಿಜ್ಬುಲ್ ಮುಜಾಹಿದೀನ್ ಲಿಂಕ್ ಇರುವುದು ದೃಢಪಟ್ಟಿದೆ.
ಬಂಧಿತ ಮೂವರು ಕಾಶ್ಮೀರಿಗಳು ಹತ್ಯೆ ಮತ್ತಿತರ ಕೃತ್ಯಗಳಿಗಾಗಿ ಉಳಿದ ಇಬ್ಬರಿಗೆ ಹಣಕಾಸು ನೆರವು ನೀಡುತ್ತಿದ್ದರು. ಡ್ರಗ್ಸ್ ಮಾರಾಟದ ಮೂಲಕ ಹಣ ಸಂಗ್ರಹಿಸಲಾಗುತ್ತಿತ್ತು ಎಂದು ಮೂಲಗಳು ತಿಳಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

Average Rating