ನವದೆಹಲಿ: ನರೇಂದ್ರ ಮೋದಿ ವಿರೋಧಕ್ಕಾಗಿ, ವಿರೋಧ ಪಕ್ಷವೆಂಬ ಕಾರಣಕ್ಕಾಗಿಯಷ್ಟೇ ರೈತರ ಹಿತಕ್ಕಾಗಿರುವ ಕಾನೂನನ್ನು ವಿರೋಧ ಪಕ್ಷಗಳು ಸುಳ್ಳು ಹರಡುತ್ತಾ ವಿರೋಧಿಸುತ್ತಿವೆ ಎಂದು ಬಿಜೆಪಿ ಕೆಂಡ ಕಾರಿದೆ.
ಇದೀಗ ರೈತರು ತಮ್ಮ ಹಿತಕ್ಕಾಗಿಯೇ ಜಾರಿಗೊಳಿಸಿದ್ದ ಕಾಯ್ದೆ ವಾಪಸಾತಿಗೆ ಆಗ್ರಹಿಸಿ ಡಿ.8ರಂದು ಭಾರತ ಬಂದ್ ಮಾಡುತ್ತಿದ್ದು, ಅದಕ್ಕೆ ಕಾಂಗ್ರೆಸ್ ಸಹಿತ ವಿರೋಧ ಪಕ್ಷಗಳು ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ, ನಿಜವಾದ ರೈತರಿಗೆ ಕಾಂಗ್ರೆಸ್‌ನ ಕುತಂತ್ರಕ್ಕೆ ಬಲಿಯಾಗದಂತೆ ಮನವಿ ಮಾಡಿಕೊಂಡಿದೆ.
2019ರ ಚುನಾವಣಾ ಪ್ರಣಾಳಿಕೆಗಳಲ್ಲಿಯೇ ಕಾಂಗ್ರೆಸ್ ಭರವಸೆ ನೀಡಿತ್ತು. ಎಪಿಎಂಸಿ ಕಾಯ್ದೆಯನ್ನು ರದ್ದು ಮಾಡುತ್ತೇವೆ ಮತ್ತು ರಫ್ತು ಸೇರಿದಂತೆ ಕೃಷಿ ಉತ್ಪನ್ನಗಳ ವಹಿವಾಟಿಗೆ ಇದ್ದ ಎಲ್ಲ ನಿರ್ಬಂಧಗಳನ್ನು ತೆಗೆದುಹಾಕುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಇದನ್ನು ನರೇಂದ್ರ ಮೋದಿ ಮಾಡಿದ್ದಾರೆಂಬ ಕಾರಣಕ್ಕೆ ಈಗ ವಿರೋಧಿಸುತ್ತಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಕಿಡಿಕಾರಿದ್ದಾರೆ.
ಯುಪಿಎ ಸರ್ಕಾರ ಇದ್ದಾಗ, ಇದೇ ಕಾಂಗ್ರೆಸ್ ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಕೈಗೊಂಡಿತ್ತು. ಅದನ್ನೇ ಮೋದಿ ಈಗ ಮುಂದುವರಿಸಿದ್ದಾರೆ. ಈಗವರು ಚುನಾವಣೆಗಳಲ್ಲಿ ಸೋಲುತ್ತಿದ್ದಾರೆ. ಅಸ್ತಿತ್ವಕ್ಕಾಗಿ ಅವರು ಯಾವುದೇ ಪ್ರತಿಭಟನೆಗೂ ಧುಮುಕುತ್ತಿದ್ದಾರೆ ಎಂದು ಪ್ರಸಾದ್ ಸೋಮವಾರ ಆರೋಪಿಸಿದರು.
ವಿಶೇಷವೆಂದರೆ ಎನ್‌ಸಿಪಿಯ ಶರದ್ ಪವಾರ್ ಕೂಡ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿದ್ದಾರೆ. ಅಲರು ಕೃಷಿ ಸಚಿವರಾಗಿದ್ದಾಗ, ಮಾರುಕಟ್ಟೆ ಮೂಲಸೌಕರ್ಯದಲ್ಲಿ ಖಾಸಗಿ ವಲಯದ ಸಹಭಾಗಿತ್ವದ ಬಗ್ಗೆ ಎಲ್ಲ ಮುಖ್ಯಮಂತ್ರಿಗಳಿಗೂ ಪತ್ರಬರೆದಿದ್ದುದು ಮರೆತು ಹೋಯಿತೇ ಎಂದು ರವಿಶಂಕರ್ ಪ್ರಸಾದ್ ಪ್ರಶ್ನಿಸಿದರು.
ಇದನ್ನೂ ಓದಿ: ಕೃಷಿ ಕಾಯ್ದೆ: ರೈತರ ಅನುಕೂಲಕ್ಕಿರುವ ಕಾಯ್ದೆ ಬಗ್ಗೆ ಕಾಂಗ್ರೆಸ್‌ನ ಸುಳ್ಳು ಪ್ರಚಾರ ಬಯಲು
ಈ ಮಧ್ಯೆ, ಕೃಷಿ ಕ್ಷೇತ್ರದ ಖಾಸಗೀಕರಣಕ್ಕೆ ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಕೃಷಿ ಸಚಿವ ಪವಾರ್ ಮಾಡಿದ್ದ ಮನವಿಯ ಪ್ರತಿಯು ಲಭ್ಯವಾಗಿದ್ದು, ವೃಥಾ ರೈತರನ್ನು ಮೋದಿ ವಿರುದ್ಧ ಎತ್ತಿಕಟ್ಟುವ ಹುನ್ನಾರವೀಗ ಬಯಲಾಗಿದೆ.
ಪರಿಸ್ಥಿತಿಗೆ ತಕ್ಕಂತೆ ಊಸರವಳ್ಳಿಗಳಂತೆ ಬಣ್ಣ ಬದಲಾಯಿಸುತ್ತಾ, ಅವರು ಭರವಸೆ ನೀಡಿದ್ದನ್ನೇ ಮೋದಿ ಸರ್ಕಾರ ಮಾಡಲು ಹೊರಟರೆ, ಅದರ ಬಗ್ಗೆ ಅಪಪ್ರಚಾರ ಮಾಡುತ್ತಾ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಭಾಗವಹಿಸುತ್ತಿರುವುದು ಅದರ ನಿಜ ಬಣ್ಣವನ್ನು ಬಯಲಾಗಿಸಿದೆ ಎಂದು ಬಿಜೆಪಿ ಮುಖಂಡ ಬಿಎಲ್.ಸಂತೋಷ್ ದಾಖಲೆ ಸಹಿತವಾಗಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Farm Bill | ಅಪಪ್ರಚಾರ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ದುರ್ವರ್ತನೆಗೆ ಕಾರಣ ಇಲ್ಲಿದೆ!

Average Rating