ನವದೆಹಲಿ: ಕೃಷಿಕರ ಒಳಿತಿಗಾಗಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಕಾನೂನಿನ ವಿರುದ್ಧ ಅಪಪ್ರಚಾರ ಮಾಡಿ, ರೈತರನ್ನು ಎತ್ತಿಕಟ್ಟುವಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಯಶಸ್ವಿಯಾಗಿದೆ. ಆದರೆ, ನಿಜವಾದ ರೈತರು ಈ ಕಾಯ್ದೆಯನ್ನು ಬೆಂಬಲಿಸುತ್ತಾರೆಂಬುದೂ ಅಷ್ಟೇ ಸತ್ಯ.
ಇದರ ನಡುವೆಯೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಶರದ್ ಪವಾರ್ ಅವರು ಕೃಷಿ ಕ್ಷೇತ್ರದ ಖಾಸಗೀಕರಣದ ಕುರಿತು ಅಂದು ಎಲ್ಲ ಮುಖ್ಯಮಂತ್ರಿಗಳಿಗೆ ಬರೆದಿದ್ದ ಪತ್ರ ಹಾಗೂ ಕರ್ನಾಟಕದ ವಿರೋಧ ಪಕ್ಷದ ಮುಖಂಡ ಸಿದ್ದರಾಮಯ್ಯ ಅವರು ಬರೆದಿದ್ದ ಪತ್ರ – ಇವೆರಡೂ ಈ ಯುಪಿಎಯ ಬದಲಾದ ಬಣ್ಣವನ್ನು ಬಯಲು ಮಾಡಿದೆ.
ನೂತನ ಕೃಷಿ ಕಾಯ್ದೆಯ ಕುರಿತು ಮಂಗಳವಾರ ಕರ್ನಾಟಕ ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯನ್ನು, ನರೇಂದ್ರ ಮೋದಿಯನ್ನು, ಯಡಿಯೂರಪ್ಪರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುವ ಹಂತದಲ್ಲಿ, ಅವರೇ ಬರೆದಿದ್ದ ಪತ್ರದ ವಿಚಾರವು ಅವರಿಗೇ ಮುಜುಗರವುಂಟು ಮಾಡಿತಷ್ಟೇ ಅಲ್ಲ. ಕಾಂಗ್ರೆಸ್ನ ನಿಜ ಮುಖವನ್ನೂ ಬಯಲು ಮಾಡಿತು.
ಇದನ್ನೂ ಓದಿ: ರೈತರೇಕೆ ಹೋರಾಡುತ್ತಿದ್ದಾರೆ? ಸ್ವಾರ್ಥಕ್ಕಾಗಿ ಕುಮ್ಮಕ್ಕು ನೀಡಿದ ಕಾಂಗ್ರೆಸ್ ಹುನ್ನಾರವೇನು? ಇಲ್ಲಿದೆ ನೋಡಿ ಕಂಪ್ಲೀಟ್ ವಿವರ
ನಿಲುವಳಿ ಸೂಚನೆಯಡಿ ಚರ್ಚೆ ಮಾಡುತ್ತಿದ್ದ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ನಿಗದಿ ಮಾಡಿದ್ದ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಬಗ್ಗೆ ಭರ್ಜರಿಯಾಗಿಯೇ ಮಾತನಾಡಿ, ಲೇವಡಿ ಮಾಡುತ್ತಿದ್ದರು. ಆಗ ಕಾನೂನು ಸಚಿವ ಜೆ.ಮಾಧುಸ್ವಾಮಿ ಮಧ್ಯಪ್ರವೇಶಿಸಿ, ಹಿಗ್ಗಾಮುಗ್ಗಾ ಭಾಷಣದ ವೇಗಕ್ಕೆ ಕಡಿವಾಣ ಹಾಕಿದರು.
ಸಿದ್ದರಾಮಯ್ಯ ಪತ್ರದ ಪ್ರತಿ ಸಿಕ್ಕಿದ್ದ ಮಾಧುಸ್ವಾಮಿ, ಎಪಿಎಂಸಿ ವ್ಯವಸ್ಥೆ ಬೇಕೋ ಬೇಡವೋ ಎಂದು ಮೊದಲೇ ಪ್ರಶ್ನಿಸಿದರು ಮತ್ತು ಸಿದ್ದರಾಮಯ್ಯ ಬೇಕು ಎಂದೂ ಉತ್ತರಿಸಿದರು.
ಆಗ ಮಾಧುಸ್ವಾಮಿ ಧ್ವನಿ ಗಟ್ಟಿ ಮಾಡಿಕೊಂಡು, ಹಾಗಿದ್ದರೆ ನೀವು ಈ ಹಿಂದೆ ಸಹಕಾರ ಇಲಾಖೆಯ ಕಾರ್ಯದರ್ಶಿಗೆ ಬರೆದ ಪತ್ರದ ಬಗ್ಗೆ ಏನನ್ನುತ್ತೀರಿ? ಎಂದು ಪ್ರಶ್ನಿಸಿದಾಗ ಸಿದ್ದರಾಮಯ್ಯ ತಡಬಡಾಯಿಸಿದರು.
2013ರ ಡಿಸೆಂಬರ್ ತಿಂಗಳಲ್ಲಿ ಸಿದ್ದರಾಮಯ್ಯ ಬರೆದ ಪತ್ರದಲ್ಲಿ, ರೈತರ ಬೆಳೆಗೆ ಉತ್ತಮ ಬೆಲೆ ಸಿಗುವಂತಾಗಬೇಕು, ಅವರು ತಮ್ಮ ಉತ್ಪನ್ನಗಳನ್ನು ಮಾರಲು ಮುಕ್ತ ಅವಕಾಶ ದೊರೆಯುವಂತಾಗಬೇಕು, ಅತಿ ಬೇಗನೇ ಕೆಡಬಲ್ಲ ಉತ್ಪನ್ನಗಳನ್ನು ಎಪಿಎಂಸಿ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಬರೆದಿದ್ದರು.
ಇದನ್ನೂ ಓದಿ: Bharat Bandh: ಕೃಷಿ ಕಾಯ್ದೆ ಬಗ್ಗೆ ಕಾಂಗ್ರೆಸ್ ಬಣ್ಣ ಇಂಚಿಂಚೂ ಬಯಲು ಮಾಡಿದ ಬಿಜೆಪಿ
ನರೇಂದ್ರ ಮೋದಿ ಸರ್ಕಾರದ ಕೃಷಿ ಕಾಯ್ದೆಯಲ್ಲಿರುವುದು ಕೂಡ ಇವೇ ಅಂಶಗಳು. ಇದನ್ನೇ ಕಾಂಗ್ರೆಸ್ ಈಗ ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ವಿರೋಧಿಸುತ್ತಿದೆ.
ಆಗ ಸಿದ್ದರಾಮಯ್ಯ ಮುಖ ಬಿಳಿಚಿಕೊಂಡಿತ್ತು. ‘ಅತಿಬೇಗ ಕೆಡುವ ಉತ್ಪನ್ನಗಳಿಗೆ ಮಾತ್ರ ನಾನು ಹೇಳಿದ್ದು’ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದರು.
ಆಗ ಮಾಧುಸ್ವಾಮಿ, ನಿಮಗೂ ಎಪಿಎಂಸಿ ಮೇಲೇನೂ ವಿಶ್ವಾಸವಿಲ್ಲ. ನೀವು ಹೇಳಿದ್ದನ್ನೇ ನಾವು ಜಾರಿಗೆ ತರಲು ಯತ್ನಿಸಿದರೆ ವಿರೋಧ ಮಾಡುತ್ತೀರಿ. ಕಾಂಗ್ರೆಸಿನ ನಿಜವಾದ ಉದ್ದೇಶವಾದರೂ ಏನು? ರೈತರಿಗೆ ಯಾಕೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಮಾಧುಸ್ವಾಮಿ ನೇರಾನೇರ ಪ್ರಶ್ನಿಸಿದಾಗ ಸಿದ್ದರಾಮಯ್ಯ ತಬ್ಬಿಬ್ಬಾದರು.
ಈ ನಡುವೆ, ಯುಪಿಎಯ ಮಾಜಿ ಕೃಷಿ ಸಚಿವ ಶರದ್ ಪವಾರ್ ಅವರ ಪತ್ರವೂ ಬೆಳಕಿಗೆ ಬಂದಿದೆ. ಇದರಿಂದ ತಬ್ಬಿಬ್ಬಾಗಿರುವ ಎನ್ಸಿಪಿ ಮುಖಂಡ ಪವಾರ್, ‘ಎಪಿಎಂಸಿ ಸುಧಾರಣೆಯಾಗಬೇಕೆಂದು ಹೇಳಿದ್ದೆ. ಪತ್ರ ಬರೆದಿಲ್ಲ ಅಂತ ಹೇಳುತ್ತಿಲ್ಲ. ಬರೆದಿದ್ದೇನೆ. ಆದರೆ ಎಪಿಎಂಸಿ ಕಾಯ್ದೆ ಇರಬೇಕು, ಸುಧಾರಣೆಯಾಗಬೇಕು ಎಂದು ಹೇಳಿದ್ದೆ’ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಇದನ್ನೂ ಓದಿ: ರೈತರೇ, ಕೃಷಿ ಕಾಯ್ದೆಯಿಂದ ಎಷ್ಟೆಲ್ಲ ಅನುಕೂಲಗಳಿವೆ ಗೊತ್ತೇ?: ಅಪಪ್ರಚಾರಕ್ಕೆ ಮೋದಿ ಸವಿವರ ತಿರುಗೇಟು
ಆದರೆ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪವಾರ್ ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎಯ ದ್ವಂದ್ವ ನೀತಿಯನ್ನು ಬಯಲಿಗೆಳೆದಿದ್ದರು. 2011ರಲ್ಲಿ ಪವಾರ್ ಪತ್ರ ಬರೆದಿದ್ದರು.
ಅದರ ಪ್ರಕಾರ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿಯಾಗಬೇಕಿದೆ, ಮಾರುಕಟ್ಟೆ, ಮೂಲಸೌಕರ್ಯಗಳಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಪ್ರೋತ್ಸಾಹಿಸಬೇಕಾಗಿದೆ. ರೈತರು, ಗ್ರಾಹಕರು ಮತ್ತು ಕೃಷಿ ಉದ್ಯಮದ ಹಿತಕ್ಕಾಗಿ ಪರ್ಯಾಯವಾದ ಸ್ಫರ್ಧಾತ್ಮಕ ಮಾರುಕಟ್ಟೆ ಚಾನೆಲ್ಗಳನ್ನು ರೂಪಿಸಬೇಕಾಗಿದೆ. ಇದಕ್ಕೆ ಅನುಕೂಲವಾಗುವಂತೆ ಆಯಾ ರಾಜ್ಯಗಳಲ್ಲಿ ಕಾಯ್ದೆ ತಿದ್ದುಪಡಿ ಮಾಡಿಕೊಳ್ಳಿ ಎಂದಿದ್ದರು.
ನರೇಂದ್ರ ಮೋದಿ ಸರ್ಕಾರದ ಕೃಷಿ ಕಾಯ್ದೆಯಲ್ಲಿಯೂ ಇದೇ ಅಂಶಗಳಿವೆ. ಅಲ್ಲದೆ, ಕಾಂಗ್ರೆಸ್ ತನ್ನ 2019ರ ಚುನಾವಣಾ ಪ್ರಣಾಳಿಕೆಗಳಲ್ಲಿಯೂ ಈ ವಿಷಯಗಳಲ್ಲಿ ಭರವಸೆ ನೀಡಿತ್ತು. ಆದರೆ, ನರೇಂದ್ರ ಮೋದಿ ರೈತರ ಹಿತಕ್ಕಾಗಿ ಈ ನೀತಿಯನ್ನು ಜಾರಿಗೆ ತಂದಿದ್ದಾರೆ ಎಂಬ ಕಾರಣಕ್ಕೆ ಕಾಂಗ್ರೆಸ್ ಈ ರೈತರ ಹೋರಾಟಕ್ಕೆ ಕುಮ್ಮಕ್ಕು ನೀಡಿದೆ ಮತ್ತು ಮೋದಿ ವಿರುದ್ಧ ಧಿಕ್ಕಾರ ಕೂಗಿಸುತ್ತಿದೆ ಎಂಬುದು ಈಗ ಬಯಲಾಗಿದೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

Average Rating