ತಿರುವನಂತಪುರ: ಕೋವಿಡ್-19 ನಿಯಂತ್ರಣ ಕುರಿತಂತೆ ಸುಳ್ಳು ಪ್ರಚಾರ ಪಡೆದು, ದೇಶದ ನಂಬರ್ 1 ರಾಜ್ಯವೆಂದೆಲ್ಲಾ ಬಿಂಬಿಸಿಕೊಂಡಿದ್ದ ಕೇರಳದ ಎಡರಂಗ ಸರ್ಕಾರಕ್ಕೆ ಈಗ ಶಾಕ್ ತಗುಲಿದೆ.
ಕೋವಿಡ್ ನಿಯಂತ್ರಣಕ್ಕಾಗಿ ಹಣವಿಲ್ಲದೆಯೂ, ಕೋಟ್ಯಂತರ ರೂಪಾಯಿ ಬಜೆಟ್ ಘೋಷಿಸಿ ಜಾಗತಿಕ ಮಟ್ಟದ ಗಮನ ಸೆಳೆದಿದ್ದ ಕೇರಳ ಸರ್ಕಾರ, ಈ ಬಜೆಟಿಗೆ ಹಣ ಹೊಂದಿಸಲು ಮಂದಿರಗಳ ನಿಧಿಗೆ ಕೈ ಹಾಕಿತ್ತು.
ಇದೀಗ ಗುರುವಾಯೂರು ದೇವಸ್ಥಾನದ ನಿಧಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ವರ್ಗಾಯಿಸಿಕೊಂಡಿರುವ 10 ಕೋಟಿ ರೂ. ಹಣವನ್ನು ತಕ್ಷಣವೇ ಮರಳಿಸುವಂತೆ ಕೈರಳ ಹೈಕೋರ್ಟ್ ಶುಕ್ರವಾರ ಸೂಚನೆ ನೀಡಿದೆ.
ಗುರುವಾಯೂರು ದೇವಸ್ವಂ ಮಂಡಳಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ವರ್ಗಾಯಿಸಿರುವುದು ಅಕ್ರಮ. ಗುರುವಾಯೂರು ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲ ಆಸ್ತಿಪಾಸ್ತಿಗಳಿಗೆ ಗುರುವಾಯೂರಪ್ಪನೇ (ಶ್ರೀಕೃಷ್ಣ ದೇವರು) ಉತ್ತರಾಧಿಕಾರಿ. ಟ್ರಸ್ಟಿಯಾಗಿರುವ ದೇವಸ್ವಂ ಮಂಡಳಿಗೆ ದೇವಸ್ಥಾನದ ಆಸ್ತಿ ಕಾಪಾಡಿಕೊಳ್ಳುವ ಹಕ್ಕಿದೆಯೇ ಹೊರತು, ಅದನ್ನು ಬೇರೆಯವರಿಗೆ ವರ್ಗಾಯಿಸಲು ಅಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಹಳೆಯ ವಿವಾದ
2020 ಮೇ ತಿಂಗಳಲ್ಲಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಡ ರಂಗ (ಎಲ್‌ಡಿಎಫ್) ಸರ್ಕಾರವು ಗುರುವಾಯೂರು ದೇವಸ್ವಂ ಮಂಡಳಿ ಮೂಲಕ 10 ಕೋಟಿ ರೂ. ಹಣವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ವರ್ಗಾಯಿಸಲು ಸೂಚಿಸಿತ್ತು. ಅದರ ಅನುಸಾರ ಹಣ ವರ್ಗಾಯಿಸಲಾಗಿತ್ತು.
ಇದು ವಿವಾದಕ್ಕೆ ಕಾರಣವಾಗಿದ್ದು, ಕೇರಳ ಬಿಜೆಪಿ ಮುಖಂಡರು ಈ ಕ್ರಮದ ವಿರುದ್ಧ ಧ್ವನಿಯೆತ್ತಿದ್ದರು. ಹಿಂದು ದೇವಸ್ಥಾನಗಳ ಹಣವನ್ನು ಬಳಸಿಕೊಳ್ಳುತ್ತಿರುವ ಪಿಣರಾಯಿ ಸರ್ಕಾರದ ವಿರುದ್ಧ ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಹರಿಹಾಯ್ದಿದ್ದರು.
ಈ ಹಣವನ್ನು, ಕೇರಳದಲ್ಲಿ ದೀಪ ಹೊತ್ತಿಸುವುದಕ್ಕೂ ಕಷ್ಟ ಪಡುತ್ತಿರುವ ಬಡ ದೇವಸ್ಥಾನಗಳ ಉದ್ಧಾರಕ್ಕೆ ವಿನಿಯೋಗಿಸಬೇಕಿತ್ತು ಎಂದಿದ್ದ ಸುರೇಂದ್ರನ್, ಬೇರೆ ಧರ್ಮಗಳ ಶ್ರದ್ಧಾಕೇಂದ್ರಗಳಿಂದ ಹಣವನ್ನೇಕೆ ಪಡೆಯುತ್ತಿಲ್ಲ ಎಂದೂ ಪ್ರಶ್ನಿಸಿದ್ದರು.

Average Rating