Read Time:5 Minute, 21 Second

ಕೃಷಿ ಕಾಯ್ದೆ ಹೋರಾಟ ಹೆಸರಲ್ಲಿ ಭಾರತ-ವಿರೋಧಿ ಬ್ರಿಗೇಡ್‌ಗೆ ನಾವೇಕೆ ಸುಲಭವಾಗಿ ಬಲಿಯಾಗಬೇಕು?: ಕಂಗನಾ ಪ್ರಶ್ನೆ

0 0

ನವದೆಹಲಿ: ರೈತರ ಪರವಾಗಿರುವ ಕಾನೂನನ್ನು ವಿರೋಧಿಸುತ್ತಾ, ರೈತ ಪ್ರತಿಭಟನೆಯ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿರುವ ವಿರೋಧ ಪಕ್ಷಗಳ ಬಂಡವಾಳವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಯಲು ಮಾಡಿದ ಮರುದಿನವೇ, ಖ್ಯಾತ ನಟಿ, ಕಂಗನಾ ರಾಣಾವತ್ ಕೂಡ ಆಘಾತಕಾರಿ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.

ಭಯೋತ್ಪಾದಕ ಶಕ್ತಿಗಳು, ವಿದೇಶೀ ಶಕ್ತಿಗಳು ಹಾಗೂ ಭಾರತ-ವಿರೋಧೀ ಬ್ರಿಗೇಡ್ ಈಗ ದೇಶದಲ್ಲಿ ವಿಜೃಂಭಿಸಲು ಆರಂಭಿಸಿದ್ದು, ಕ್ಷೋಭೆ ಉಂಟು ಮಾಡಲು ಪ್ರಯತ್ನಿಸುತ್ತಿರುವುದರ ಬಗ್ಗೆ ಕಂಗನಾ ಎಚ್ಚರಿಸಿದ್ದಾರೆ.

ರೈತರಿಗೆ ಹೆಚ್ಚು ಲಾಭವಾಗಬೇಕೆಂಬ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ಅವರನ್ನು ಮುಕ್ತರಾಗಿಸುವ ಉದ್ದೇಶದಿಂದ ಮೋದಿ ಸರ್ಕಾರವು ಕೃಷಿ ಕಾನೂನುಗಳನ್ನು ಜಾರಿಗೊಳಿಸಿತ್ತು. ಇವನ್ನು ಕಾಂಗ್ರೆಸ್, ಆಮ್ ಆದ್ಮೀ ಪಾರ್ಟಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲೇ ಪ್ರಸ್ತಾಪಿಸಿದ್ದರೂ, ಮೋದಿ ಜಾರಿಗೊಳಿಸಿದರೆಂಬ ಏಕೈಕ ಕಾರಣಕ್ಕೆ ಅಪಪ್ರಚಾರ ಮಾಡಿ, ಕಾಯ್ದೆಯಿಂದ ರೈತರಿಗೆ ಅಪಾಯವಿದೆ ಎಂಬ ಪುಕಾರು ಹಬ್ಬಿಸಲಾಗುತ್ತಿದೆ ಎಂದು ಮೋದಿ ಗುರುವಾರವಷ್ಟೇ ಹೇಳಿದ್ದರು.

ಕಂಗನಾ ಅವರು ಟ್ವಿಟರ್‌ನಲ್ಲಿ ಈ ಬಗ್ಗೆ ವಿಡಿಯೊ ಹಂಚಿಕೊಂಡಿದ್ದು, ಕಳೆದ 10-12 ದಿನಗಳಲ್ಲಿ ತನಗೆ ಜೀವ ಬೆದರಿಕೆಗಳು, ಅತ್ಯಾಚಾರ ಬೆದರಿಕೆಗಳು, ಆನ್‌ಲೈನ್‌ನಲ್ಲಿ ಭಾವನಾತ್ಮಕ ಮತ್ತು ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಈಗ ಮೋದಿಯವರೇ ರೈತರ ಪ್ರತಿಭಟನೆಯ ಹಿಂದಿರುವ ರಾಜಕೀಯ ಉದ್ದೇಶ ಬಯಲಿಗೆಳೆದಿದದಾರೆ. ಪ್ರತಿಭಟನೆಯಲ್ಲಿ ಭಯೋತ್ಪಾದಕರೂ ಸಾಥ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾಜಕ್ಕೆ ಕೆಲವು ಪ್ರಶ್ನೆಗಳನ್ನು ಕೇಳುವುದು ತನ್ನ ಹಕ್ಕು ಎಂದು ಕಂಗನಾ ಹೇಳಿಕೊಂಡಿದ್ದಾರೆ.

ಪಂಜಾಬಿನಲ್ಲೇ ಹುಟ್ಟಿ ಬೆಳೆದ ತನಗೆ ಅಲ್ಲಿನ ಜನರ ಬಗ್ಗೆ ಅರಿವಿದೆ. ಪಂಜಾಬಿಗಳೆಲ್ಲರೂ ರಾಷ್ಟ್ರವಾದಿಗಳೇ ಆಗಿದ್ದು, ಅವರಿಗೆ ಖಲಿಸ್ತಾನ ಅಥವಾ ಪ್ರತ್ಯೇಕ ದೇಶ ಬೇಕಾಗಿರುವುದಿಲ್ಲ ಎಂದು ಹೇಳಿರುವ ಕಂಗನಾ, ಆದರೆ, ಈ ದೇಶದ ಮುಗ್ಧ ಜನರು ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳ ನಿಯಂತ್ರಣಕ್ಕೆ ತಮ್ಮನ್ನೇಕೆ ಒಡ್ಡಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

‘ನನಗೇನೂ ಉಗ್ರರೊಂದಿಗೆ ಜಗಳವಾಗಿಲ್ಲ. ಭಾರತ-ವಿರೋಧಿ ಬ್ರಿಗೇಡ್ ಹರಡುತ್ತಿರುವ ಈ ವಿಷದ ಭಾವನೆಗಳನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ನನ್ನ ಪ್ರಶ್ನೆ ಇರುವುದು ಈ ದೇಶದ ಮುಗ್ಧ ಜನರಿಗೆ. ನೀವೇಕೆ ಭಯೋತ್ಪಾದಕರು ಮತ್ತು ಅರಾಜಕತಾವಾದಿಗಳ ಬಲೆಗೆ ಇಷ್ಟು ಸುಲಭವಾಗಿ ಬೀಳುತ್ತಿದ್ದೀರಿ?’ ಎಂದು ಕಂಗನಾ ಪ್ರಶ್ನಿಸಿದ್ದಾರೆ.

ದೆಹಲಿಯ ಶಹೀನ್‌ಬಾಗ್‌ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ವೃಥಾ ಪ್ರತಿಭಟನೆಯಲ್ಲಿ ಏನೂ ತಿಳಿಯದ ಅಶಿಕ್ಷಿತ ದಾದಿಯರೂ ಪಾಲ್ಗೊಂಡಿದ್ದು ಹೇಗೆ? ಇದೇ ರೀತಿ ಪಂಜಾಬ್‌ನಲ್ಲೂ ವೃದ್ಧ ಮಹಿಳೆಯರು ಇದೇ ರೀತಿ ದಾರಿ ತಪ್ಪಿದ ಪ್ರತಿಭಟನೆಯಲ್ಲಿದ್ದಾರೆ ಎಂದು ಕಂಗನಾ ಹೇಳಿದರು.

ನಾನು ದೇಶದ ಹಿತಕ್ಕಾಗಿ ಧ್ವನಿಯೆತ್ತಿದರೆ ರಾಜಕೀಯ ಮಾಡುತ್ತಿದ್ದೇನೆ ಎನ್ನುತ್ತಾ ಪ್ರಶ್ನಿಸುತ್ತಾರೆ. ಆದರೆ ಈ ದಿಲ್‌ಜಿತ್ ಡೋಸಾಂಜ್, ಪ್ರಿಯಾಂಕಾ ಚೋಪ್ರಾ ಮತ್ತಿತರರು ಯಾವ ನೀತಿ ಅನುಸರಿಸುತ್ತಿದ್ದಾರೆಂದು ಪ್ರಶ್ನಿಸುವುದಿಲ್ಲ. ರೈತರ ಪ್ರತಿಭಟನೆ ಬೆಂಬಲಿಸುತ್ತಿರುವುದಕ್ಕಾಗಿ ಅವರನ್ನು ಎಡಪಂಥೀಯ ಮಾಧ್ಯಮಗಳು ಹಾಡಿ ಹೊಗಳುತ್ತಿವೆ ಎಂದಿದ್ದಾರೆ ಕಂಗನಾ.

ರೈತರ ಪರವಾಗಿರುವ ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬಂಧಿತ ಅರ್ಬನ್ ನಕ್ಸಲರು, ಇಸ್ಲಾಮಿಸ್ಟ್‌ಗಳು ಹಾಗೂ ಪ್ರತ್ಯೇಕತಾವಾದಿಗಳ ಬ್ಯಾನರ್ ಮತ್ತು ಪೋಸ್ಟರ್ ಹಿಡಿದಿದ್ದ ಪ್ರತಿಭಟನಾಕಾರರ ವಿರುದ್ಧ ಕಂಗನಾ ಈ ಹಿಂದೆಯೂ ಧ್ವನಿಯೆತ್ತಿದ್ದರು.

ಕೇಂದ್ರದ ಐತಿಹಾಸಿಕ ಕೃಷಿ ಕಾಯ್ದೆಗಳಿಂದ ರೈತರಿಗೆ ಭಾರಿ ಲಾಭವಿದೆ ಎಂಬ ಸತ್ಯ ವಿಷಯ ಗೊತ್ತಿದೆ. ಆದರೂ ಅದನ್ನು ಪ್ರತಿಭಟಿಸುತ್ತಿದ್ದಾರೆ. ಕೃಷಿ ಕಾಯ್ದೆ ವಿರೋಧಿ ಪ್ರತಿಭಟನಾಕಾರರು ತಮ್ಮ ಕ್ಷುಲ್ಲಕ ಲಾಭಕ್ಕಾಗಿ ಮುಗ್ಧ ರೈತರನ್ನು ಹಿಂಸೆಗಿಳಿಯುವಂತೆ, ದ್ವೇಷ ಭಾವನೆ ಬೆಳೆಸಿಕೊಳ್ಳುವಂತೆ ಪ್ರಚೋದಿಸುತ್ತಿದ್ದಾರೆ ಎಂದು ಸರಣಿ ಟ್ವೀಟ್ ಮೂಲಕ ಕಂಗನಾ ಎಚ್ಚರಿಸಿದ್ದರು.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ಕಾಯ್ದೆಯಿಂದ ರೈತರಿಗೆ ಲಾಭ, ಕಾಂಗ್ರೆಸ್ ಸುಳ್ಳುಗಳನ್ನು ನಂಬಬೇಡಿ ಅಂದಿದ್ದೇಕೆ ಮೋದಿ? ಇಲ್ಲಿದೆ ಡೀಟೇಲ್ಸ್!
Next post Rape in Rajasthan: ಉದ್ಯಮಿ ಹತ್ಯೆಗೆ ಬಂದವರಿಂದ ತ್ರೀಸ್ಟಾರ್ ಹೋಟೆಲ್ ಸಿಬ್ಬಂದಿ ಮೇಲೆ ರೇಪ್

ಸುದ್ದಿ ಸಂಚಯ

ಇವುಗಳನ್ನೂ ನೋಡಿ