ಪ್ರತಿಭಟನೆಯ ಮಧ್ಯೆ ಸಮಾಜಘಾತುಕ ಶಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ನೋಡುವುದು ಹೊಸತೇನಲ್ಲ. ಆದರೆ, ಈಗ ದೇಶವೇ ಪ್ರಕ್ಷುಬ್ಧ ಸ್ಥಿತಿಯಲ್ಲಿದೆ. ಕಾಂಗ್ರೆಸ್ ಪಕ್ಷವು ಕಷ್ಟಪಟ್ಟು ಯುಪಿಎ ಮೈತ್ರಿಕೂಟ ರಚಿಸಿಕೊಂಡು, ಕಷ್ಟಪಟ್ಟು ಅಧಿಕಾರ ಚಲಾಯಿಸಿ, ಇದೀಗ ದೇಶಾದ್ಯಂತ ತಿರಸ್ಕೃತವಾಗುತ್ತಿದೆ. ಈ ಹಂತದಲ್ಲಿ, ಮತ್ತೆ ಚಾಲ್ತಿಗೆ ಬರಬೇಕಾದ ಅನಿವಾರ್ಯತೆಯಲ್ಲಿರುವ ಕಾಂಗ್ರೆಸ್ ಈಗ ಯಾವ್ಯಾವುದೋ ಹಾದಿ ಹಿಡಿಯುತ್ತಿದೆ.
ಪೌರತ್ವ ತಿದ್ದುಪಡಿ ಕಾಯಿದೆಯಿಂದ (ಸಿಎಎ) ದೇಶದ ಮುಸಲ್ಮಾನರೆಲ್ಲರನ್ನೂ ಓಡಿಸಲಾಗುತ್ತಿದೆ ಎಂದು ಸುಳ್ಳು ಹರಡುತ್ತಲೇ ದೇಶಾದ್ಯಂತ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಹುಯಿಲೆಬ್ಬಿಸಿದ್ದು ಇನ್ನೂ ನೆನಪಿದೆ. ಹೀಗಾಗಿ, ಸಿಎಎ ವಿರೋಧಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು, ದೆಹಲಿಯ ಶಾಹೀನ್ಬಾಗ್ನಲ್ಲಿ ಮಾತ್ರವಲ್ಲದೆ ದೇಶದ ವಿವಿಧೆಡೆ ಅದೆಷ್ಟೋ ಮುಗ್ಧ ಜೀವಗಳು ಬಲಿಯಾದವು. ದೇಶವೇ ಸುಖಾಸುಮ್ಮನೆ ಹೊತ್ತಿ ಉರಿಯಿತು. ಇದರಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರವೇನು ಎಂಬುದು ಎಲ್ಲರಿಗೂ ಗೊತ್ತಿದೆ.
ಇದರಿಂದ ಸಾಧಿಸಿದ್ದೇನು? ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹಿತಾಸಕ್ತಿ ಕಾಪಾಡಲು ಜಾರಿಗೊಳಿಸಿರುವ ಕಾಯಿದೆಯೊಂದನ್ನು, ಕೇವಲ ತಮ್ಮ ಓಟು ಬ್ಯಾಂಕಿನ ರಕ್ಷಣೆಗಾಗಿ ವಿರೋಧಿಸುತ್ತಾ, ಇಡೀ ದೇಶವನ್ನೇ ಮೋದಿ ವಿರುದ್ಧ ಎತ್ತಿ ಕಟ್ಟುತ್ತದೆ ಎಂದಾದರೆ, ಜವಾಬ್ದಾರಿಯುತ ಪ್ರತಿಪಕ್ಷವೊಂದು ಈ ರೀತಿ ವರ್ತಿಸುವುದು ಸರಿಯೇ ಎಂಬುದು ಪ್ರಜ್ಞಾವಂತ ಪ್ರಜೆಗಳು ತಮಗೆ ತಾವೇ ಪ್ರಶ್ನಿಸಿಕೊಳ್ಳಬೇಕಾಗುತ್ತದೆ.
ಇಂದಿರಾ ಗಾಂಧಿಯನ್ನು ಹತ್ಯೆಗೈದ ಭಿಂದ್ರನ್ವಾಲೆಯನ್ನು ಬೆಂಬಲಿಸುವ ನಟ ದೀಪ್ ಸಿಧು ಎಂಬಾತನ ಮಾತುಗಳನ್ನೇ ಕೇಳಿ:
ಈಗ ರೈತರ ಸರದಿ. ರೈತರು ಬೆಳೆದ ಉತ್ಪನ್ನಗಳು ನೇರವಾಗಿ ಖರೀದಿದಾರರ ಕೈಗೆ ತಲುಪುವಂತೆ ಮಾಡಿದರೆ, ಮಧ್ಯವರ್ತಿಗಳ ಕೈಗೆ ನೀಡುವ ಹಣವು ಕೂಡ ರೈತರಿಗೇ ಸಿಗುತ್ತದೆ. ಇದುವರೆಗಿದ್ದ ಮಧ್ಯವರ್ತಿಗಳ ಕಾಟವನ್ನು ತಡೆಯಲು ಮೋದಿ ಕೈಗೊಂಡ ದಿಟ್ಟ ಕ್ರಮಗಳನ್ನು ಕೂಡ ಈಗ ‘ರೈತ ವಿರೋಧಿ’ ಅಂತ ಏನೂ ಅರಿಯದ ಮುಗ್ಧ ರೈತರ ಕಿವಿ ಊದಿ, ಅವರನ್ನು ಪ್ರತಿಭಟನೆಗೆ ಪ್ರಚೋದಿಸಲಾಗಿದೆ.
ರೈತರಿಗೆ ತಮ್ಮ ಹಕ್ಕು ಕೇಳುವ ಹಕ್ಕು, ಸ್ವಾತಂತ್ರ್ಯವಿದೆ. ತಪ್ಪಿಲ್ಲ. ಕೇಂದ್ರ ಸರ್ಕಾರವು ಅವರನ್ನು ಮಾತುಕತೆಗೂ ಆಹ್ವಾನಿಸಿದೆ. ಆದರೆ ಇಲ್ಲಿ ರಾಜಕೀಯ ಸೇರಿಕೊಂಡಾಗ ದೇಶವು ಅನಗತ್ಯ ಹೊತ್ತಿ ಉರಿಯುತ್ತದೆ. ಇಂಥದ್ದರಲ್ಲಿ ನಷ್ಟ ಅನುಭವಿಸುವುದು ಎಸಿ ರೂಮುಗಳೊಳಗೆ ಕುಳಿತುಕೊಂಡು ಈ ರೀತಿಯಾಗಿ ಗಲಭೆಗೆ ಪ್ರಚೋದಿಸುವ ಶಕ್ತಿಗಳಲ್ಲ, ಬದಲಾಗಿ ಬಡಪಾಯಿ ರೈತರೇ.
ಯಾಕೆಂದರೆ, ಇದೇ ರೈತರ ಪ್ರತಿಭಟನೆಯ ಮಧ್ಯೆ ಸಮಾಜಘಾತುಕ ಶಕ್ತಿಗಳು, ಗೂಂಡಾಗಳು, ಭಯೋತ್ಪಾದಕರೆಲ್ಲ ಸೇರಿಕೊಳ್ಳುತ್ತಾರೆ. ಇವರಿಗೆಲ್ಲರಿಗೂ ದೇಶದ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವ ನರೇಂದ್ರ ಮೋದಿ ಅವರ ಬಗ್ಗೆ ಭಯವಿದೆ. ಸಹಜವಾಗಿ ಮೋದಿ ಅವರನ್ನು ನಿವಾರಿಸುವ ಮನಸ್ಥಿತಿ ಅವರದಾಗಿರುತ್ತದೆ.
ಕೆಲವು ವರ್ಷಗಳಿಂದ ಮತದಾರರಿಂದ ತಿರಸ್ಕೃತವಾಗಿರುವ ಕಾಂಗ್ರೆಸ್ಗೆ ಕೂಡ, ನರೇಂದ್ರ ಮೋದಿ ಅಧಿಕಾರದಲ್ಲಿರುವಷ್ಟು ಕಾಲವೂ ತಮಗೆ ಖಂಡಿತಾ ಅಧಿಕಾರ ಸಿಗುವುದು ಸಾಧ್ಯವಿಲ್ಲ ಎಂಬುದು ಮನವರಿಕೆಯಾದಂತಿದೆ. ಈ ಕಾರಣಕ್ಕಾಗಿ ಕಾಂಗ್ರೆಸ್ನ ಆಕ್ರೋಶವೂ, ಸಮಾಜಘಾತುಕ ಶಕ್ತಿಗಳ ಆಕ್ರೋಶವೂ ಏಕೀಭವಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ.
ಪಂಜಾಬ್, ಹರ್ಯಾಣದಿಂದ ದೆಹಲಿ ತಲುಪಿದ ರೈತರ ಮಧ್ಯೆ, 1970-80ರ ದಶಕದಲ್ಲಿ ದೇಶವನ್ನೇ ಕಂಗೆಡಿಸಿದ್ದ ಪಂಜಾಬ್ ಭಯೋತ್ಪಾದಕ ಶಕ್ತಿಗಳು ನುಸುಳಿವೆ. ಅಂದು ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯನ್ನು ಹತ್ಯೆಗೈದಿದ್ದ ಖಲಿಸ್ತಾನ್ ಉಗ್ರರು ಈಗ ಮತ್ತೆ ಚಿಗಿತುಕೊಂಡಿದ್ದಾರೆ. ರೈತರ ಪ್ರತಿಭಟನೆಯ ಮಧ್ಯೆ ಇಂದಿರಾ ಗಾಂಧಿಯನ್ನೇ ಹತ್ಯೆ ಘಟನೆ ನೆನಪಿಸಿ, ನರೇಂದ್ರ ಮೋದಿಗೂ ಬೆದರಿಕೆಯೊಡ್ಡಿರುವ ಪ್ರತಿಭಟನಾಕಾರರ ವಿಡಿಯೊಗಳು ಆತಂಕ ಮೂಡಿಸಿವೆ.
ಪೂರ್ಣ ವಿವರ ಇಲ್ಲಿದೆ ನೋಡಿ: Farmers Protest ಹೆಸರಲ್ಲಿ ಮೋದಿ ಹತ್ಯೆಗೆ ಸಂಚು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಇಷ್ಟೇ ಅಲ್ಲ, ಪ್ರತಿಭಟನಾಕಾರರನ್ನು ಚದುರಿಸುವ ಕರ್ತವ್ಯ ನಿರತ ಪೊಲೀಸರ ಮೇಲೆ ಇದೇ ಕೆಲವು ಪ್ರತಿಭಟನಾಕಾರರು (ಬಹುಶಃ ಇವರು ರೈತರು ಆಗಿರಲಾರರು) ಯಾವ ರೀತಿ ಮುಗಿ ಬೀಳುತ್ತಾರೆ ಎಂಬುದರ ದೃಶ್ಯಗಳೂ ನಮ್ಮ ಕಣ್ಣ ಮುಂದಿದೆ. ಪೊಲೀಸರ ಮೇಲೆಯೇ ಟ್ರ್ಯಾಕ್ಟರ್ ಹರಿಸಿ ಕೊಲೆಗೆ ಪ್ರಯತ್ನಿಸುವ ದೃಶ್ಯವಂತೂ ಆತಂಕ ಮೂಡಿಸುತ್ತದೆ.
ಈ ರೀತಿಯಾಗಿ ರೈತರ ಪ್ರತಿಭಟನೆಯನ್ನು ಹೈಜಾಕ್ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುವ ರಾಜಕೀಯ ಶಕ್ತಿಗಳನ್ನು ಯಾವತ್ತೂ ಜನ ಕ್ಷಮಿಸುವುದಿಲ್ಲ ಎಂಬ ಸತ್ಯಾಂಶವು ಅರಿವಿಗೆ ಬರಲು ಇವರಿಗೆ ಎಷ್ಟು ಸಮಯ ಬೇಕು?
ನರೇಂದ್ರ ಮೋದಿ ಎಂದರೆ ಪಾಕಿಸ್ತಾನಕ್ಕೂ ಆತಂಕ, ಚೀನಾಕ್ಕೂ ಆತಂಕ. ಈಗ ನಿಷೇಧಿತವಾಗಿರುವ ಖಲಿಸ್ತಾನ್ ಉಗ್ರರ ಪರ ಸಂಘಟನೆ ‘ಸಿಖ್ಸ್ ಫಾರ್ ಜಸ್ಟೀಸ್’ (SFJ) ಗೆ ಕೂಡ ಪಾಕಿಸ್ತಾನದ ಬೆಂಬಲವಿದೆ. ಈ ಉಗ್ರಗಾಮಿ ಸಂಘಟನೆಗೆ ಭಾರತದ ಸಿಕ್ಖರ ಬೆಂಬಲವಿಲ್ಲ. ಆದರೆ, ಖಲಿಸ್ತಾನ (ಪ್ರತ್ಯೇಕ ಸಿಖ್ ದೇಶ)ಕ್ಕೆ ಬೆಂಬಲ ನೀಡಿದರೆ ರೈತರ ಹೋರಾಟಕ್ಕಾಗಿ 10 ಲಕ್ಷ ಡಾಲರ್ ನೀಡುವುದಾಗಿ SFJ ಘೋಷಿಸಿರುವ ವರದಿ ಕೂಡ ಆತಂಕಕ್ಕೆ ಕಾರಣವಾಗಿದೆ. ಅದರ ವಿವರ ಇಲ್ಲಿದೆ.
ಪಾಕಿಸ್ತಾನಿ ಮಾಧ್ಯಮಗಳು ಕೂಡ ಈಗ ಈ ವಿಷಯದ ಬಗ್ಗೆ ಬರೆಯಲಾರಂಭಿಸಿವೆ. ರೈತರ ಹೋರಾಟದ ಹೆಸರಿನಲ್ಲಿ ಖಲಿಸ್ತಾನ್ ಆಂದೋಲನಕ್ಕೆ ಮತ್ತೆ ಚಾಲನೆ ದೊರೆತಂತಾಗಿದೆ ಎಂದು ಅಲ್ಲಿನ ಮಾಧ್ಯಮ ಡೈಲಿ ಪಾಕಿಸ್ತಾನ ಬರೆದಿದೆ.
ರೈತರ ಸಮಸ್ಯೆಗಳಿದ್ದರೆ, ಅದನ್ನು ಅರಿತು, ಸರ್ಕಾರದ ಮುಂದಿಟ್ಟು ಮಾತುಕತೆ ನಡೆಸಿ ಪರಿಹಾರ ರೂಪಿಸುವ ಜವಾಬ್ದಾರಿ ಇರುವ ವಿರೋಧ ಪಕ್ಷವೊಂದು, ಈ ರೀತಿ ಮಧ್ಯೆ ನನ್ನದೆಲ್ಲಿಡಲಿ ಎನ್ನುತ್ತಾ ತನ್ನದೇ ಬೇಳೆ ಬೇಯಿಸಿಕೊಳ್ಳಲು ಹೊರಟರೆ ಏನಾಗುತ್ತದೆ?
ಜನರಿಂದ ಈ ರಾಜಕೀಯ ಪಕ್ಷಗಳು ಮತ್ತಷ್ಟು ದೂರವಾಗುತ್ತವೆ. ಇಷ್ಟಾದರೂ ಪರವಾಗಿಲ್ಲ, ಸಿಎಎ-ವಿರೋಧಿ ಹೋರಾಟದಲ್ಲಿ ಬಿಂಬಿತವಾದಂತೆ, ವಿನಾಕಾರಣ ಭಾರತದ ಮಾನ ಹರಣವಾಗುತ್ತದೆ. ಇದು ದೇಶದ ಪ್ರತಿಷ್ಠೆಯ ಪ್ರಶ್ನೆ.
ನಿಷ್ಪಾಪಿ ರೈತರು, ಮುಗ್ಧ ರೈತರು ತಮ್ಮ ಹಕ್ಕಿಗಾಗಿ ಹೋರಾಡುವ ಹಂತದಲ್ಲಿ ಸಮಾಜಘಾತುಕರು, ಆತಂಕವಾದಿಗಳ ಪ್ರವೇಶಕ್ಕೆ ಅನುವು ಮಾಡಿಕೊಡದಿರೋಣ, ದೇಶದ ಮರ್ಯಾದೆ ಕಾಪಾಡೋಣ. ಸತ್ಯಕ್ಕಾಗಿ ಹೋರಾಡೋಣ. ಈ ಬುದ್ಧಿಯನ್ನು ಎಲ್ಲ ವಿರೋಧ ಪಕ್ಷಗಳಿಗೂ ಭಗವಂತನು ಕೊಡಲಿ ಎಂದಷ್ಟೇ ನಮ್ಮ ಹಾರೈಕೆ.

Average Rating