[ಆಚರಣೆಗಳನ್ನು ಹೇಗಾದರೂ ಮಾಡಲಿ, ಆದರೆ ನಾವೇಕೆ ನಮ್ಮತನ ಬಿಟ್ಟು ಪರಕೀಯರ ಆಚರಣೆಗೆ ಮನ ಮಾಡುತ್ತಿದ್ದೇವೆ? ನಮ್ಮ ಸಂಸ್ಕಾರಕ್ಕೆ ಕಾರಣವಾಗಿರುವ ದೇಶೀ ಪರಂಪರೆಯ ಕಾಲಗಣನೆಯನ್ನೇಕೆ ಮರೆಯುತ್ತಿದ್ದೇವೆ? ವಿದ್ವಾನ್ ಗಾಳಿಮನೆ ವಿನಾಯಕ ಭಟ್ ಅವರು ಸೋದಾಹರಣಸಹಿತವಾಗಿ ಬರೆದಿದ್ದಾರೆ. ಓದಿ, ಅಭಿಪ್ರಾಯ ತಿಳಿಸಿ]
“ಹೊಸವರ್ಷ ಆರಂಭ ಯಾವಾಗ?”
ಒಂಭತ್ತನೇ ತಿಂಗಳಿಗೆ ವರ್ಷ ಕೊನೆಯಾಗುವುದು ಹೇಗೆ ?
ಕಾಲಗಣನೆಯ ಸೂಕ್ಷ್ಮ ಅತಿಸೂಕ್ಷ್ಮ ವಿಚಾರಗಳನ್ನು ಶೋಧಿಸಿ ಅನುಸರಿಸಿದ ಭಾರತೀಯರೇಕೆ ಇತ್ತೀಚೆಗೆ ಹೀಗೆ ವಿದೇಶದ ಮೋಹಾಂಧಕಾರದಲ್ಲಿ ತೊಳಲಾಡುತ್ತಿದ್ದಾರೆ?
ವಿದ್ಯಾವಂತರಿಗೇಕೆ ಅವೈಜ್ಞಾನಿಕತೆ ಆವರಿಸಿತು ?
ಹೌದು, ನಾವೆಲ್ಲರೂ ಕಳೆದ ಹದಿನೈದು ದಿನಗಳಿಂದ ನಮ್ಮ ಸುತ್ತ ಮುತ್ತಲಿನ ಪರಿಸರ ಪ್ರಭಾವದಿಂದಾಗಿ ಹೊಸವರ್ಷದ ಗುಂಗನ್ನು ಮನಸಿಗೇರಿಸಿಕೊಂಡು ಏನೋ ವಿಚಿತ್ರವಾದ ಸಂಭ್ರಮವನ್ನು ಹೊಂದಿ ನಾಳೆ ಆ ಸಂಭ್ರಮವನ್ನು ಇಮ್ಮಡಿ ನೂರ್ಮಡಿಗೊಳಿಸಿಕೊಳ್ಳುವ ಕಾತರದಲ್ಲಿದ್ದೇವೆ. ಈ ವರ್ಷವಂತೂ ಕೋವಿಡ್‌ನ ಕಾರಣ ಇಂತಹಾ ಅನೇಕ ಸಂಭ್ರಮಾಚರಣೆಗಳು ಸ್ಥಗಿತವಾಗಿದ್ದವು.
ಆತ್ಮೀಯ ಭಾರತೀಯ ಬಂಧುಗಳೆ, ಒಮ್ಮೆ ನಿಧಾನವಾಗಿ ಯೋಚಿಸಿ ಈ ಕಾಲಘಟ್ಟವನ್ನು.
ನಮ್ಮ ಜೀವನದ ಎಲ್ಲಾ ಸಾಂಸ್ಕೃತಿಕ ಸಾಂಪ್ರದಾಯಿಕ ಆಚರಣೆಗಳ ಕಾಲವನ್ನು ಸೂಚಿಸುವ ಭಾರತೀಯ ಕಾಲಗಣನೆಯ ಪ್ರಕಾರ ಒಂಭತ್ತನೇ (09) ತಿಂಗಳು ನಡೆಯುತ್ತಿದೆ. ಇದೀಗ ೧.ಚೈತ್ರ, ೨. ವೈಶಾಖ, ೩. ಜ್ಯೇಷ್ಠ, ೪. ಆಷಾಢ, ೫. ಶ್ರಾವಣ , ೬. ಭಾದ್ರಪದ, ೭.ಆಶ್ವಯುಜ, ೮. ಕಾರ್ತಿಕ ಎಂಬ ಹೆಸರುಗಳ (ಆ ಹೆಸರಿಗೂ ಕಾರಣ ಇದೆ – ಚಿತ್ರಾ ವಿಶಾಖಾ ಇತ್ಯಾದಿ 12 ನಕ್ಷತ್ರಗಳು ಹುಣ್ಣಿಮೆಯ ದಿನ ಬರುವ ಕಾರಣ ಚೈತ್ರ ವೈಶಾಖ ಇತ್ಯಾದಿ ನಾಮಗಳು ಬಂದಿವೆ. ಹನ್ನೆರಡು ತಿಂಗಳುಗಳೂ ಕೂಡ ಇದೇ ನೆಲೆಯಲ್ಲಿ ಹೆಸರನ್ನು ಪಡೆದಿವೆ.) ಇದೀಗ ಒಂಭತ್ತನೇ (೦೯) ತಿಂಗಳಾದ (ಮೃಗಶಿರಾ ನಕ್ಷತ್ರಯುಕ್ತ ಪೂರ್ಣಿಮಾ ವಿಶಿಷ್ಟ ಮಾಸ) ಮಾರ್ಗಶೀರ್ಷ ಮಾಸ ಆರಂಭವಾಗಿ 16ನೇ ದಿನ.
ಹೀಗಿರುವಾಗ ಪೂರ್ಣ ವರ್ಷ (365 ದಿನಗಳು) ಮುಗಿದಿದೆ ಎಂದೂ, ಹೊಸವರ್ಷ ನಾಳೆ ಆರಂಭ ಎಂದು ಒಪ್ಪುವುದು ಹೇಗೆ? ಒಮ್ಮೆ ಮನಃಪೂರ್ವಕವಾಗಿ ಯೋಚಿಸಿ.
ಇಷ್ಟಕ್ಕೂ ಈ “ಡಿಸೆಂಬರ್ 31ನ್ನು” ಈ ವರ್ಷದ ಕೊನೆಯ ದಿನವೆಂದೂ ಮತ್ತು “ಜನವರಿ 01” ನ್ನು ಹೊಸ ವರ್ಷದ ಮೊದಲ ದಿನ ಎಂದು “ನಮಗೆ” ಯಾರು ಹೇಳಿದವರು? ನಾವು ಆಚರಣೆಯಲ್ಲಿರಿಸಿಕೊಂಡ ಯಾವ ಧರ್ಮಗ್ರಂಥಗಳಲ್ಲಿ ಅಥವಾ ಸಂವಿಧಾನದಲ್ಲಿ ಇದರ ಉಲ್ಲೇಖ ಇದೆ? ನಮ್ಮ ದೇಶದ ಯಾವ ಇತಿಹಾಸದ ಪುಟದಲ್ಲಿ ಇದು ದಾಖಲಾಗಿದೆ? ಅಥವಾ ನಮಗೆ ಯಾವ ಧರ್ಮಗುರುಗಳು ಇದನ್ನು ಬೋಧಿಸಿದ್ದರು/ಬೋಧಿಸಿದರು?
ಈ ಮೇಲಿನ ಯಾವ ಕಾರಣವೂ ಇಲ್ಲದೆಯೂ ಆ ಗುಂಗಿನಲ್ಲಿ ತೇಲುತ್ತಿದ್ದೇವೆ. ಅಲ್ಲಾ, ಕಾಣದ ಕೈಗಳು ತೇಲುವಂತೆ ಮಾಡಿದ್ದಾವೆಯೇ? ಇಷ್ಟಕ್ಕೂ ಈ ಸಂಭ್ರಮ(?) ಆಚರಣೆಗೆ ನಮ್ಮ ದೇಶದ ಒಳಗೆ ಐತಿಹಾಸಿಕ, ಧಾರ್ಮಿಕ, ಪಾರಂಪರಿಕ… ಹೀಗೆ ಯಾವುದಾದರೂ ಒಂದೇ ಒಂದಾದರೂ ಮಹತ್ತ್ವವನ್ನು ನಾವು ಕಾಣಲು ಸಾಧ್ಯವಿದೆಯೇ?
ಇದ್ಯಾವುದೂ ಇಲ್ಲದೆಯೂ ಇದು ವಿಜೃಂಭಣೆಯ ಆಚರಣೆಗೆ ತೆರೆದುಕೊಂಡಿದ್ದು ಹೇಗೆ? ಆಚರಣೆಗೆ ತಂದ ಮಹನೀಯರು ಯಾರು? ಇದನ್ನು ನಾವು ಯೋಚಿಸಬೇಕಾಗಿದೆ. (ಒಮ್ಮೆ ಅವಲೋಕನಕ್ಕೆ ಒಳಪಡಿಸಿದರೆ, ನಮ್ಮೊಳಗಿನಿಂದಲೇ ಉತ್ತರ ತಾನಾಗಿ ಮೇಲೆದ್ದು ಬರುತ್ತದೆ.
ಇತಿಹಾಸದ ಪುಟಗಳಲ್ಲಿ ಇಣುಕಿದಾಗ
ನಾವು ಭಾರತೀಯರು, ಬೌದ್ಧಿಕತೆಗಿಂತ ಭಾವನಾತ್ಮಕವಾದ ನೆಲೆಯಲ್ಲಿ ಬದುಕನ್ನು ಕಂಡುಕೊಂಡವರು. ಪ್ರಾಯಶಃ “ವಿವಿಧತೆಯಲ್ಲಿ ಏಕತೆ” ಸಾಧ್ಯವಾಗಿದ್ದು ಈ ಕಾರಣಕ್ಕೆ.
ಇದೇ ಕಾರಣಕ್ಕೆ ಅಮೆರಿಕದಂತ ಅಮೆರಿಕಾದಲ್ಲಿ ಇಂದಿಗೂ ಕರಿಯರು ಮತ್ತು ಬಿಳಿಯರು ಎಂಬ ವರ್ಗೀಕರಣ ವ್ಯವಸ್ಥೆಯನ್ನು ನಿರ್ನಾಮ ಮಾಡಲು ಸಾಧ್ಯವಾಗಿಲ್ಲದಿರುವ ಈ ಕಾಲದಲ್ಲಿ, ಭಾರತ ಇದನ್ನು ಮೀರಿ ನಿಂತಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೆ?
ಈ ನಮ್ಮ ಭಾವುಕತೆಯ ದೌರ್ಬಲ್ಯವನ್ನೇ ತಮ್ಮ ಪ್ರಾಬಲ್ಯಕ್ಕೆ ಅಸ್ತ್ರವಾಗಿಸಿಕೊಂಡು ಪ್ರಪಂಚದಲ್ಲಿ ತಮ್ಮ ಧರ್ಮವಿಸ್ತಾರದ ಕನಸು ಕಂಡು ಓಡಾಡುತ್ತಿದ್ದ “ಮಹನೀಯ”ರಿಗೆ ನಮ್ಮ ದೇಶ ಕಂಡಿತು.
ಇಲ್ಲಿರುವ ಸಂಪತ್ತು, ಇಲ್ಲಿನವರ ಮುಗ್ಧತೆ, ಸರಳತೆ, ಪ್ರಾಮಾಣಿಕತೆಗಳು ಅವರ ಧರ್ಮಾಂಧತೆ ಮೆರೆಯಲು ಹೆದ್ದಾರಿಯನ್ನೇ ನಿರ್ಮಿಸಿಕೊಟ್ಟಿತು.
ಸ್ವಾತಂತ್ರ್ಯ ಬಂದಿದ್ದು ಯಾವ ಕ್ಷೇತ್ರದಲ್ಲಿ?
ನಾವು ಸ್ವತಂತ್ರರು, ಎಂದು ಎದೆ ತಟ್ಟಿ ಹೇಳಲು ಆರಂಭಿಸಿ ಮುಕ್ಕಾಲು ಶತಮಾನ ಕಳೆದರೂ ನಿಜವಾಗಿ “ಭಾರತೀಯತೆಗೆ” ಸ್ವಾತಂತ್ರ್ಯ ಸಿಕ್ಕಿದೆಯೆ? ಎಂಬ ಪ್ರಶ್ನೆಗೆ ಉತ್ತರವನ್ನು ತಡಕಾಡುವ ಸ್ಥಿತಿ ಈಗಲೂ ಹಾಗೆಯೇ ಇದೆ.
ಇದಕ್ಕೆ ಕಾರಣ, ಹಲವು. ಅದರಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಕ್ರೈಸ್ತ ಮಿಶನರಿಗಳ ಕೈಗೆ ಉದಾರವಾಗಿ ಒಪ್ಪಿಸಿ ಕೈಮುಗಿದಿದ್ದು ಒಂದು.
ಆಗಿನ ಪ್ರಧಾನಮಂತ್ರಿಗಳಾದಿಯಾಗಿ ಯಾರಿಗೂ ಭಾರತೀಯ ಪಾರಂಪರಿಕ ಹಾಗೂ ಭಾರತಕ್ಕೆ ಸ್ವಾವಲಂಬಿಗಳಾಗಲು ಅಪೇಕ್ಷಿತವಾದ ಶಿಕ್ಷಣ ವ್ಯವಸ್ಥೆ ಬೇಕೆಂದು ಅನಿಸದೇ ಹೋಗಿದ್ದು ಏಕೆ? ಇದು ಸದಾ ಕಾಡುವ ಪ್ರಶ್ನೆ.
ಆಗರ್ಭ ಶ್ರೀಮಂತಿಕೆ, ಅಪ್ರತಿಮ ಬುದ್ಧಿವಂತಿಕೆ, ಯೌವನ, ಅಮಾನುಷರನ್ನಾಗಿಸುವ ಅಧಿಕಾರದ ಸೊಕ್ಕುಗಳು ಒಂದೊಂದೇ ಸಾಕಂತೆ ಓರ್ವನನ್ನು ಹಾಳು ಮಾಡಲು. ಆದರೆ ಎಲ್ಲವೂ ಸೇರಿದಾಗ ಮತ್ತೆ ಕೇಳಲುಂಟೆ? ಇದು ಬಾಣನ ಕಾದಂಬರಿಯ ಮಾತು. ಸ್ವಾತಂತ್ರ್ಯ ಬಂದ ಕಾಲಘಟ್ಟದಲ್ಲಿ, ಭಾರತದ ಚುಕ್ಕಾಣಿ ಹಿಡಿದವರ ಇತಿಹಾಸ ಓದುವಾಗ ಥಟ್ಟನೆ ನೆನಪಾಗುವ ಸಾಲುಗಳು ಇವು. ಎಂತಹ ವಿಪರ್ಯಾಸ. ಛೆ..!
ಇಡೀ ದೇಶವನ್ನೇ ನುಂಗಿ ನೊಣೆಯಲು ರತ್ನಗಂಬಳಿ ಹಾಕಿ, ಎಲ್ಲವನ್ನೂ ಇದಂ ನ ಮಮ ಎನ್ನುವಂತೆ ಬಿಟ್ಟುಕೊಟ್ಟು, ಕಂಡಕಂಡಲ್ಲಿ ಚರ್ಚ್, ಮಿಶನರಿ ಮತ್ತೂ ಶಾಲಾ – ಕಾಲೇಜು ಆರಂಭಿಸಲು ಕಡಿಮೆ ದರದಲ್ಲಿ ಭೂಮಿಕೊಟ್ಟ ಹಾಗೂ ವಿಶೇಷ ನಿಯಮಗಳನ್ನು ಜಾರಿಗೆ ತಂದು ಇಂತಹವರನ್ನು ರಕ್ಷಿಸಿದರು ಉದಾರಿಗಳು. ಇಂದು ದೇವಸ್ಥಾನಗಳಿಗಿಂತ ಹೆಚ್ಚಿನ ಭೂಮಿ ಸಂಪತ್ತು ಆಸ್ತಿಗಳು ಇವರಲ್ಲಿ ಇಂದು ಇದ್ದರೂ ಆಶ್ಚರ್ಯವಿಲ್ಲ.
ಹೀಗೆ ಎಲ್ಲಾ ಆನುಕೂಲ್ಯ ಒದಗಿಸಿಕೊಟ್ಟ ಈ ರಾಜಕೀಯ ನೇತಾರರೇ ಇಂದಿಗೂ ನಮ್ಮ ದೇಶದಲ್ಲಿ “ಪೂಜನೀಯರು,” ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ (ಮೂಲಸೌಕರ್ಯಗಳಿಲ್ಲದಿದ್ದರೂ) ಈ ಮಹನೀಯರಲ್ಲಿ ಕೆಲವರ ಫೊಟೊಗಳಾದರೂ ನೆತ್ತಿಯ ಮೇಲೆ ರಾರಾಜಿಸಲೇಬೇಕು. ವಿಪರ್ಯಾಸ.
+++
ಶಿಕ್ಷಣ ವ್ಯವಸ್ಥೆ ಹಾಳಾಗಿ ಶತ-ಶತಮಾನ ಕಳೆದಿದೆ. ನಾವು ಆಧುನಿಕ ಶಿಕ್ಷಣ ರಂಗದಲ್ಲಿದ್ದೇವೆ ಎಂಬ ಭ್ರಮೆಯಲ್ಲಿಯೇ ಬದುಕುತ್ತಿದ್ದೇವೆ. ಒಮ್ಮೆ ಯೋಚಿಸಿ, ಒಂದೊಮ್ಮೆ ಅಂದಿನ ಶಿಕ್ಷಣ ವ್ಯವಸ್ಥೆ ದೇಶಕ್ಕೆ ಒಳಿತನ್ನೇ ಉಂಟುಮಾಡಲು ಸಿದ್ಧವಾಗಿದ್ದು ಹೌದು ಅಂತಾದರೆ ನಮ್ಮ ಹಿಂದಿನ ತಲೆಮಾರುಗಳು (ಸುಮಾರು 1940-1965) ಹಾಗೂ ಮುಂದಿನವರೂ ಕೂಡ ದೇಶದ ಅಭಿವೃದ್ಧಿಗೆ ಪೂರಕವಾಗಿ ಶಿಕ್ಷಿತರಾಗದೇ ಉಳಿದಿದ್ದು ಏಕೆ? ಇಂದಿಗೂ ಅನಕ್ಷರಸ್ಥರು ಎಂದು ಹಣೆಪಟ್ಟಿ ಕಟ್ಟಿಕೊಂಡಿರವಂತಾಗಿದ್ದು ಏಕೆ?
ಇದಕ್ಕೆ ಕಾರಣ “ಭಾರತೀಯ ಶಿಕ್ಷಣ ವ್ಯವಸ್ಥೆ”ಯನ್ನು ಸಮಗ್ರವಾಗಿ ಹೊಸಕಿಹಾಕಿ ಮಿಶನರಿ ಪ್ರೇರಿತ (ಮೆಕಾಲೆ ಶಿಕ್ಷಣ ಪದ್ಧತಿ) ಕಾನ್ವೆಂಟ್ ಇತ್ಯಾದಿಗಳಿಗೆ ರಹದಾರಿ ಮಾಡಿಕೊಟ್ಟ “ಕೆಲವು ಉದಾರಿಗಳು”.
ಯಾರು ಧರ್ಮಾಂಧರು?
“ಭಾರತೀಯರು ಧರ್ಮಾಂಧರು” ಎಂದು ಹೇಳುವುದನ್ನು ಕೇಳಿದ್ದೇವೆ. ನಿಜಕ್ಕಾದರೆ ನಮ್ಮ ದೇಶದ ಸಂಸ್ಕೃತಿಯ ಮೇಲೆ ದಾಳಿ ಮಾಡಿ, ಅದನ್ನು ಹಾಳುಮಾಡಿ, ಅದೂ ಸಾಲದು ಅಂತ ಆದಾಗ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಪೂರ್ಣವಾಗಿ ರೂಪಾಂತರ ಮಾಡಿದವರಲ್ಲವೆ ಧರ್ಮಾಂಧರು?
ಇತಿಹಾಸ ಹೇಳಬೇಕಿದೆ ಇದನ್ನು. “ನೈಜ” ಇತಿಹಾಸದ ಪುಟಗಳು ಉತ್ತರಿಸಬೇಕಿವೆ.
ಇಂದೇಕೆ ಈ ಮಾತುಗಳು?
ಜನವರಿಗೆ ಹೊಸವರ್ಷ ಆರಂಭ ಎಂದು ಹೇಳುವಾಗಲೆಲ್ಲ ಮನಸಿನಲ್ಲಿ ಬರುವ ಆಲೋಚನೆಗಳಿವು. “ಭಾರತ ದೇಶವನ್ನು ಕಬಳಿಸಲು, ಒಡೆಯಲು, ಸಂಸ್ಕೃತಿಯನ್ನು ಮೊದಲು ಹಾಳಮಾಡಬೇಕು” ಎಂದು ಓರ್ವ ಬ್ರಿಟಿಷ್ ಅಧಿಕಾರಿ ನೀಡಿದ ಹೇಳಿಕೆಯನ್ನು “ಚ ತು” ತಪ್ಪದೇ ಪಾಲಿಸಿದ್ದಕ್ಕೆ ಇಂದಿನ ಭಾರತೀಯರ ದುರ್ಬಲಚಿಂತನೆಯು ಕೈಗನ್ನಡಿ ಹಿಡಿದಂತೆ ಭಾಸವಾಗುತ್ತದೆ.
ಮುಂದುವರಿದು, ಬಡವ ಬಲ್ಲಿದ ಭೇದವಿಲ್ಲದೆ, ಇಂದಿಗೂ “ಮತಾಂತರ” ಅವ್ಯಾಹತವಾಗಿ ನಡೆಯುತ್ತಿರುವುದು ಇದೇ ಕಾರಣಕ್ಕಾಗಿ. “ಸ್ಲೋ ಪಾಯಸನ್” ಆಗಿ, ಹಿಂಬದಿ ಬಾಗಿಲಲ್ಲಿ ಬಂದು, ಮನೆಯ ಮುಂದಿನ ತುಳಸಿ ಕಟ್ಟೆಯನ್ನು “ಸ್ವಾಭಿಮಾನರಹಿತ” ಭಾರತೀಯರ ಕೈಯಿಂದಲೇ ಕೀಳಿಸಿ “+” ಚಿಹ್ನೆಯನ್ನು ಮನೆಯ ಗೇಟ್‌ಗೇ ಬರುವಂತೆ ಮಾಡುವಷ್ಟು ಬೆಳೆಯುವಲ್ಲಿ, ಇಂತಹವರಿಗೆ ರಾಜಾಶ್ರಯ ನೀಡಿದ, ವೋಟ್ ಬ್ಯಾಂಕ್ ನ ರಾಜಕಾರಣವು ನಮ್ಮ “ದುರ್ಬಲ ನಾಯಕರ ಅಧಿಕಾರ ಲಾಲಸೆಗೆ” ಹಿಡಿದ ಕೈಗನ್ನಡಿ.
ಇಂದಿನ ಹೊಸವರ್ಷದ ಸಂಭ್ರಮದ ಹಿಂದಿನ ಕುತಂತ್ರ ಕರಾಮತ್ತುಗಳನ್ನು ಯೋಚಿಸುವಾಗ ನಾವೆಷ್ಟು ಸ್ವಾಭಿಮಾನಶೂನ್ಯರು ಅಂತ ಅನಿಸದೇ ಇರದು.
ಇದಕ್ಕೆ ಕಾರಣ ಇಂದಿನ ಯುವಜನತೆಯಂತೂ ಖಂಡಿತಕ್ಕೂ ಅಲ್ಲ. ಇಂದಿನಂತೆ ಕಳೆದ ಕೆಲವು ತಲೆಮಾರುಗಳ ಯುವಜನತೆಯ ಹಾದಿ ತಪ್ಪಿಸಿದ, ಧರ್ಮಾಂಧತೆ ಮೆರೆದ ಜಗತ್ತಿನ ಕೆಲವು ಮಹನೀಯ ಧರ್ಮಗಳು ಹಾಗೂ ಧರ್ಮಗುರುಗಳ ಸಂತಾನ.
ಭಾರತಿಯ ಕಾಲಗಣನೆ ಕಣ್ಮರೆಯಾಗಿ ಕ್ರಿಸ್ತಶಕದ ಕ್ಯಾಲೆಂಡರ್ ಮನೆ ಮನೆಗೆ ಬಂದಿದ್ದು ಹೇಗೆ ? ರಾಜಕೀಯ ಇಚ್ಛಾಶಕ್ತಿ, ದುರಾಸೆಗಳ ಕಹಿಫಲವೇ ಕ್ರಿಸ್ತಶಕ ವರ್ಷದ ಕ್ಯಾಲೆಂಡರ್‌ಗಳು ಆಚರಣೆಗೆ ಬರಲು ಕಾರಣ. ಇಂದು ಇದರ ದುಷ್ಪರಿಣಾಮದಿಂದ ನಮ್ಮ ದೇಶದ ಕಾಲಗಣನೆಯನ್ನು ಮರೆತು ಅಂಧಾನುಕರಣೆ ಮಾಡಿ ಹೊಸವರ್ಷದ ಸಂಭ್ರಮಕ್ಕೆ ಸಿದ್ಧರಾಗಿದ್ದೇವೆ.
ಭಾರತೀಯ ಹಬ್ಬಹರಿದಿನಗಳಿಗೆ ಇಂದಿಗೂ ಶಾಲಾ ಕಾಲೇಜುಗಳಲ್ಲಿ ಪೂರ್ಣವಾಗಿ (ಉದಾ- ನವರಾತ್ರಿ -ಒಂಭತ್ತುದಿನಗಳ ನಾಡಹಬ್ಬಕ್ಕೆ ಕೇವಲ ಎರಡು ದಿನ ಮಾತ್ರ ರಜೆಗಳಷ್ಟೆ, ಅಲ್ಲವೆ? ಈ ಮಾತಿನ ಉದ್ದೇಶ ರಜೆ ಹೆಚ್ಚಾಗಬೇಕೆಂಬುದಲ್ಲ) ರಜೆ ಇಲ್ಲ. ಹಾಗಿದ್ದರೂ ಕ್ರಿಸ್ಮಸ್ ರಜೆ ಎಂದು ಒಂದು ವಾರ ರಜಾಘೋಷಣೆಯ ಹಿಂದಿನ ಕಾಣದ ಕೈಗಳು ಯಾವುವು?
ನಮ್ಮ ದೇಶದ ಸಂಸ್ಕೃತಿಯನ್ನು ಯಾರಿಗೂ ತಿಳಿಯದಂತೆ ನಿಧಾನವಾಗಿ ನಾಶ ಮಾಡಲು ಇಂತಹ ಅನೇಕ ನಯವಂಚನೆಯ ಕೆಲಸಗಳನ್ನು ರಾಜಕೀಯ ಬಲವನ್ನು ಬಳಸಿಕೊಂಡು ಎಂದೋ ಮಾಡಿದ್ದಾರೆ.
ರಜೆ ಎಂದರೆ ಯಾರಿಗೆ ತಾನೆ ಬೇಡ? ಅಲ್ಲವೆ. ಇಂತಹ ನಮ್ಮ ಕೆಲವು ಸಹಜವಾದ ಮಾನಸಿಕತೆಯನ್ನು ಬಳಸಿ ಬೆಳೆಸಿದ ಚಿಂತನೆಗಳು ಇವೆಲ್ಲವೂ. ನವರಾತ್ರಿ ಆಚರಣೆ ಒಂಭತ್ತು ದಿನಗಳಲ್ಲಿ ನಡೆಯುತ್ತದೆ. ರಜೆ ಇದ್ದರಲ್ಲವೇ ಎಲ್ಲರೂ ಸೇರಿ ಆಚರಣೆ ಮಾಡುವುದು? ಆದ್ದರಿಂದ ಅದಕ್ಕೆ ರಜೆಯೇ ಇಲ್ಲದಂತೆ ವ್ಯವಸ್ಥೆ ಮಾಡಿದ್ದಾರೆ. ಆದರೆ ಅದನ್ನು ಆಚರಿಸಲಿಕ್ಕೇ ಆಗದಂತೆ ಯಾರಿಗೂ ತಿಳಿಯದಷ್ಟು ಸಹಜವಾದ ವಂಚನೆ ಈ ದೇಶಮಟ್ಟದಲ್ಲಿ ನಡೆದು ಹೋಗಿದೆ.
ಇದನ್ನು ಚಿಂತನೆ ಮಾಡಿ ತೀರ್ಮಾನ ಮಾಡುವುದು ನಿಮಗೆ ಬಿಟ್ಟಿದ್ದು.
ಭಾರತೀಯ ಬಂಧುಗಳೆ, ಒಮ್ಮೆ ಯೋಚಿಸಿ.
೧. ಗಣೇಶನ ಚತುರ್ಥಿ, ನವರಾತ್ರಿ, ವಿಜಯದಶಮಿ, ಭೂಮಿ ಹುಣ್ಣಿಮೆ, ನರಕ ಚತುರ್ದಶಿ, ದೀಪಾವಳಿ, ಬಲಿಪಾಡ್ಯಮಿ, ತುಳಸಿ ವಿವಾಹ, ರಕ್ಷಾ ಬಂಧನ, ಆಟಿ, ಶಿವರಾತ್ರಿ, ಮಕರ ಸಂಕ್ರಾಂತಿ, ರಾಮನವಮಿ, ದುರ್ಗಾಷ್ಟಮಿ, ರಥಸಪ್ತಮಿ ಇತ್ಯಾದಿ ಇತ್ಯಾದಿ ಹಬ್ಬ- ಹರಿದಿನಗಳನ್ನು “ಕ್ರಿಸ್ತಶಕ”ದ ಕ್ಯಾಲೆಂಡರ್ ಅನ್ನು ಅನುಸರಿಸಿ ಆಚರಿಸಿದ್ದೇವೆಯೆ?
ನಮ್ಮಲ್ಲಿ ಶಕಪುರುಷ ಅನೇಕರಿದ್ದು ಪ್ರಸ್ತುತ ಶಾಲಿವಾಹನ ಶಕಪುರುಷ. ಭಾರತೀಯರಿಗೆ ಕ್ರಿಸ್ತ ಶಕಪುರುಷನಾಗಿದ್ದು ಹೇಗೆ ?ಯಾರಿಂದ? ಯಾವಾಗ? ಯೋಚಿಸಿ ನೋಡಿ.
೨. ಎಂದಾದರೂ ನಮ್ಮ ಧಾರ್ಮಿಕ ಆಚರಣೆಗಳಾದ ಉಪಾಕರ್ಮ, ಪಿತೃಗಳಿಗೆ ತರ್ಪಣ ನೀಡಿ ಸ್ಮರಿಸುವ ಮಹಾಲಯ ಅಮಾವಾಸ್ಯೆ, (ಪಿತೃ ಪಕ್ಷ), ಗಂಗಾಷ್ಟಮಿ, ಭೂಪೂಜೆ ಇತ್ಯಾದಿಗಳನ್ನು ಈ ಧರ್ಮಾಂಧರ ನಯವಂಚನೆಯ ಸ್ವರೂಪಕ್ಕೆ ಬಳಕೆ ಮಾಡಿ ನಮ್ಮನ್ನು ನಮ್ಮ ಸಂಸ್ಕೃತಿಯನ್ನು ಹಾಳುಮಾಡುತ್ತಿರುವ ಕ್ರಿಸ್ತಶಕದ ಕ್ಯಾಲೆಂಡರ್ ಅನ್ನು ಅನುಸರಿಸಿ ಆಚರಿಸಿದ್ದೇವೆಯೆ?
೩. ನಮ್ಮ ಮನೆಯಲ್ಲಿ ನಡೆಯುವ ಶುಭಕಾರ್ಯಗಳು, ಮದುವೆ ಉಪನಯನ ಇತ್ಯಾದಿಗಳಲ್ಲಿ ಎಂದಾದರೂ ಈ ಕ್ರಿಸ್ತಶಕದ ಕ್ಯಾಲೆಂಡರ್ ಪ್ರಯೋಜನಕ್ಕೆ ಬಂದಿದೆಯೆ?
೪. ಎಂದಾದರೂ ಮನೆಯಲ್ಲಿ ನಡೆಯುವ ಶ್ರಾದ್ಧಾದಿ ಹಿರಿಯರ ದಿನಗಳನ್ನು ಈ ಕ್ರಿಸ್ತಶಕದ ಕ್ಯಾಲೆಂಡರ್ ಪ್ರಕಾರ ಆಚರಿಸಿದ್ದೇವೆಯೆ?
ಇದೆಲ್ಲ ನಮ್ಮ ಭಾರತೀಯ (ಕ್ಯಾಲೆಂಡರ್)ಪಂಚಾಂಗದ ಪ್ರಕಾರ ನಡೆಯುತ್ತಿದೆಯಲ್ಲವೆ?
“ಇತರ ಎಲ್ಲಾ ಧರ್ಮಗಳನ್ನು ಗೌರವಿಸೋಣ ಭಾರತೀಯತೆಯನ್ನು ಅನುಸರಿಸೋಣ”
ನಮ್ಮ ಆಚಾರ ವಿಚಾರಗಳಿಗೆ ಸಂಬಂಧವೇ ಇಲ್ಲದ, ಅಂತಾರಾಷ್ಟ್ರೀಯ ಸ್ತರದ ಹಾಗೂ ವ್ಯಾವಹಾರಿಕ ಬದುಕಿಗೆ (ಮಾತ್ರ) ಅಗತ್ಯವಾದ, ಕ್ರಿಸ್ತಶಕದ ಕ್ಯಾಲೆಂಡರ್‌ನ ಹೊಸವರ್ಷದ ಸಂಭ್ರಮ ಒಂದು ನಮ್ಮ ಸಂಸ್ಕೃತಿಯನ್ನು ಹಾಳುಮಾಡುವ ಹುನ್ನಾರವಲ್ಲದೇ ಮತ್ತೇನು?
ಯುವಜನತೆಯ ದಾರಿತಪ್ಪಿಸಿ ಅವರ ಮನಸಿನ ಮೇಲೆ ಈ ಮುಖೇನ ದಾಳಿ ಮಾಡಿ ಅದನ್ನು ಹುಚ್ಚೆಬ್ಬಿಸುವ ಈ ಧರ್ಮಾಂಧತೆ ಅರ್ಥವಾಗಬೇಕಲ್ಲವೆ?
ಆಬಾಲವೃದ್ಧರು ಇದನ್ನು ತ್ಯಜಿಸಿ ಭಾರತೀಯ (ಕ್ಯಾಲೆಂಡರ್) ದಿನದರ್ಶಿಕಾವನ್ನು ಅನುಸರಿಸಬೇಕಾದ ಅಗತ್ಯ ಇದೆ.
ಇತರರನ್ನು ಗೌರವಿಸೋಣ – ನಮ್ಮದನ್ನು ಅನುಸರಿಸೋಣ ಅನ್ಯಧರ್ಮಾವಲಂಬಿಗಳು ಇದನ್ನು ಸಂಭ್ರಮದಿಂದಲೇ ಆಚರಿಸಲಿ. ಅವರ ಸಂಭ್ರಮಕ್ಕೆ ಅರ್ಥವಿದೆ. (ಇಲ್ಲಿ ಯಾರನ್ನೂ ನಿಂದಿಸುವ ಅಥವಾ ನೋಯಿಸುವ ಉದ್ದೇಶದಿಂದ ಯಾವ ಮಾತನ್ನೂ ಬರೆದಿಲ್ಲ.) ಆದರೆ, ಯಾವುದೇ ಓರ್ವ ಪಾದ್ರಿ ಅಥವಾ ಚರ್ಚ್ ನಮ್ಮ ಹೊಸವರ್ಷವಾದ ಯುಗಾದಿ/ವಿಷುವನ್ನು ಆಚರಿಸಿದ ನಿದರ್ಶನವಿದೆಯೆ?
ನಾವು ನಮ್ಮ (ಕ್ಯಾಲೆಂಡರ್) ದಿನದರ್ಶಿಕಾ/ಪಂಚಾಂಗದ ಪ್ರಕಾರ ಆಚರಿಸೋಣ. ಆಗ ನಮ್ಮ ಸಂಭ್ರಮಕ್ಕೂ ಅರ್ಥ ಬರುತ್ತದೆಯಲ್ಲವೆ?
ಭಾರತೀಯ ದಿನದರ್ಶಿಕಾ – ಅದುವೇ ಕಾಲಗಣನೆಯ ವಿಜ್ಞಾನ – ಅದುವೇ ನಮ್ಮ ಪಂಚಾಂಗ.
ಹೌದು, ನಮ್ಮ ದಿನದರ್ಶಿಕಾ ಅಂದರೆ ಅದೇ ನಮ್ಮ ಪಂಚಾಂಗ. ಇದರ ಪ್ರಕಾರ ಇಂದಿನ್ನೂ 09ನೇ ತಿಂಗಳ 16ನೇ ದಿನ ನಡೆಯುತ್ತಿದೆ. ಅರ್ಥಾತ್ ಈ ಶಾರ್ವರೀ ನಾಮಕ ವರ್ಷವು ಕಳೆಯಲು ಇನ್ನೂ 2.5 ತಿಂಗಳು ಬಾಕಿ ಇದೆ.
ಗೀತೆಯ ಮಾತಂತೆ, “ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ” ಅರ್ಥಾತ್ “ನಮ್ಮ ನಮ್ಮ ಧರ್ಮವೇ ನಮಗೆ ಶ್ರೇಯಃಕಾರಕ ಹಾಗೂ ಇದರ ಆಚರಣೆಯಲ್ಲಿ ಮರಣ ಪ್ರಾಪ್ತವಾದರೂ ಅದೂ ಸದ್ಗತಿಗೆ ಕಾರಣ. ಆದರೆ ಅನ್ಯಧರ್ಮದ ಆಚರಣೆ ನಮ್ಮನ್ನು ಭಯಗ್ರಸ್ತರನ್ನಾಗಿಸುತ್ತದೆ, ನಮ್ಮ ಪತನಕ್ಕೆ ಕಾರಣವಾಗುತ್ತದೆ.” ಭಗವದ್ಗೀತೆ ೩ನೇ ಅಧ್ಯಾಯ.
ಆದ್ದರಿಂದ ಭಾರತೀಯರಾದ ನಾವು ಈ ದಿನವನ್ನು ಹೊಸವರ್ಷವಾಗಿ ಆಚರಿಸುವುದು ಯುಕ್ತವೇ? ಯೋಚಿಸಿ ನಿರ್ಧರಿಸಿ. ನಮ್ಮ ದೇಶೀಯ ಸಂಸ್ಕೃತಿಯ ನೆಲೆಯಲ್ಲಿ ಇನ್ನು 02.5 ತಿಂಗಳ ನಂತರವೇ ಹೊಸವರ್ಷ. ಅದುವೇ ಯುಗಾದಿ/ವಿಷು.
ಪ್ರಕೃತಿ ಕೂಡ ಆ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಿಚ್ಚಳವಾಗಿ ಆ ಸಂದರ್ಭದಲ್ಲಿ ಬದಲಾವಣೆ ಕಾಣುತ್ತದೆ. ಅದೇ ನಿಜವಾದ ಹೊಸವರ್ಷ. ವೈಜ್ಞಾನಿಕವಾಗಿಯೂ ಯುಗಾದಿಗೆ ಹೊಸವರ್ಷದ ಸಂಭ್ರಮವನ್ನು ಆಚರಿಸಲು ಪ್ರಾಕೃತಿಕ ಬದಲಾವಣೆ ಮುದ್ರೆಯನ್ನೊತ್ತುತ್ತದೆ. ಇದು ಗಮನಾರ್ಹ.
ಪಂಚಾಂಗವೇ ನಮ್ಮ ಭಾರತೀಯ ಕಾಲಮಾನದ ಭದ್ರ ತಳಪಾಯ. ಅದು ಗಣಿತ – ಖಗೋಳ -ಭೂಗೋಳಗಳ ವಿಸ್ಮಯಲೋಕವನ್ನು ತೆರೆ ತೆರೆದು ತೋರುತ್ತದೆ. ಹೌದು, ನಮ್ಮ ಮನೆಯ ಮೂಲೆಯಲ್ಲೆಲ್ಲೋ ತೂಗು ಬಿದ್ದಿರುವ, ಗಣಿತಗಳ ಮಾಯಾಲೋಕವನ್ನೇ ಹೊಂದಿರುವ, ಪಂಚಾಂಗವನ್ನು ನೋಡುವ ದೃಷ್ಟಿ ಬದಲಾಗಬೇಕಿದೆ. ಇದನ್ನು ದೈನಂದಿನ ವ್ಯವಸ್ಥೆಗೆ ಒಗ್ಗಿಸುವ ಕೆಲಸ ಆಗಬೇಕಿದೆ.
ಏಕೆಂದು ಇಲ್ಲಿದೆ. ಓದಿ ಅಭಿಪ್ರಾಯ ಹಂಚಿಕೊಳ್ಳಿ. ಸರಿ ಎನಿಸಿದರೆ ಶೇರ್ ಮಾಡಲು ಮರೆಯದಿರಿ.
ಶುಕ್ಲಪಕ್ಷ ಚಂದ್ರನ ಕಲಾಪೂರ್ಣತೆಯ ಸಂಕೇತವಾದರೆ
ಕೃಷ್ಣ ಪಕ್ಷ ಕಲಾಹೀನತೆಯ ಸಂಕೇತ.
ಚಂದ್ರ ಸೂರ್ಯರ ನೆರಳು ಬೆಳಕಿನ ಸೋಜಿಗ.
ಇದರಲ್ಲಿರುವ ಬೆಳಕು-ನೆರಳಿನಾಟವನ್ನು,
ಭೂಮಿ- ಸೂರ್ಯ-ಚಂದ್ರರ ಗತಿವಿಶೇಷವನ್ನು
ನಮ್ಮ ಭಾರತೀಯ ಕಾಲಗಣನೆ ಗುರುತಿಸಿದೆ.
ಇದೇ ಹಿನ್ನೆಲೆಯಲ್ಲಿ, ಬೇರೆ ಯಾವ ಕಾಲಗಣನೆಯಲ್ಲೂ ಇಲ್ಲದ ತಿಂಗಳ ಅರ್ಧ ಭಾಗಕ್ಕೆ ಹೆಸರು ನೀಡಿದ ವಿಜ್ಞಾನವನ್ನು ಅನುಸರಿಸಿರುವ ಸಂಸ್ಕೃತಿ ನಮ್ಮದು. ಅದಕ್ಕೆ “ಪಕ್ಷ” ಎಂಬ ಅಭಿಧಾನ.
ಹೌದು, ಚಂದ್ರನ ಪೂರ್ಣತೆಯನ್ನು ಶುಕ್ಲಪಕ್ಷ ಎಂದು ಹೇಳಿದರೆ ಅದರ ಕಳಾಹೀನತೆಯನ್ನು ಸೂಚಿಸುತ್ತ “ಕೃಷ್ಣಪಕ್ಷ” ಎಂದು ಹೇಳಲಾಗಿದೆ. ಇದು ನಮ್ಮ ಪಂಚಾಂಗದ ವೈಶಿಷ್ಟ್ಯ, ವೈಜ್ಞಾನಿಕ ಚಿಂತನೆ. ಹೀಗೆ ಆಚರಿಸಿಕೊಂಡು ಬಂದ ಸ್ವರೂಪ ಅತ್ಯಂತ ಶ್ಲಾಘನೀಯ.
ಕೇವಲ “ಮಾಸದ” ಗಣನೆಯಷ್ಟೇ ಅಲ್ಲದೇ ಅದರಲ್ಲಿನ ಕಾಲಚಕ್ರದ ಸಂಕೇತಗಳಾದ ಸೂರ್ಯ ಹಾಗೂ ಚಂದ್ರರ ಗತಿವಿಶೇಷಗಳ ಚಿಂತನೆಯು ಅರ್ಥಪೂರ್ಣ ಎಂಬುದು ನಮ್ಮ ಹೆಮ್ಮೆಗೆ ಕಾರಣವಾಗಬೇಕು.
ಶಾರ್ವರಿ ಈ ವರ್ಷದ ನಾಮಧೇಯ. ಉತ್ತರಾಯಣ ಸೂರ್ಯಗತಿ ವಿಶೇಷದ ಸೂಚನೆ ನೀಡುವ ಕಾಲಮಾನ. ಹೇಮಂತ ಋತು ಸೂರ್ಯಚಂದ್ರರ ಗತಿವಿಶೇಷವನ್ನು ಸಾರುವ ಕಾಲವ್ಯವಸ್ಥೆ. ಋಕ್ ಹಾಗೂ ತೈತ್ತಿರೀಯಾದಿಗಳಲ್ಲಿ ಪೂರ್ವಾಪರಂ ಚರತೋ ಮಾಯಯೈತೌ… ಎಂಬುದು ಚಂದ್ರಮಾಃ ಷಡ್ಢೋತಾ, ಸ ಋತೂನ್ ಕಲ್ಪಯಾತಿ” ಎಂಬುದು ಇದರ ವಿಶೇಷತೆ ತಿಳಿಸಿವೆ. ಎಷ್ಟೊಂದು ಅದ್ಭುತ ಈ ನಮ್ಮ ವ್ಯವಸ್ಥೆ!!!!
ಯುಗ-ಯುಗಾನ್ತರದಷ್ಟು ಪ್ರಾಚೀನವಾದ “ಪೌರಾಣಿಕ ಇತಿಹಾಸ” ಹೊಂದಿರುವ, ಐದು ಸಾವಿರಕ್ಕೂ ಮಿಕ್ಕಿ “ಕಲಿಯುಗದ” ಅವಧಿಯನ್ನು ಸೂಚಿಸುವ ಪಂಚಾಂಗ ಅರ್ಥಾತ್ ಕಾಲಗಣನೆಯನ್ನು ಹೊಂದಿರುವ ದೇಶ ನಮ್ಮದು. ಇದು ಹೆಮ್ಮೆಯ ವಿಷಯ ಅಲ್ಲವೆ?
ಈ ಸಮಗ್ರ ಕಾಲಮಾನವನ್ನು ನಿಖರವಾಗಿ ತಿಳಿಸುವ ಕಾಲಗಣನಾಶಾಸ್ತ್ರವನ್ನು ಹೊಂದಿರುವ ಭಾರತ ದೇಶ, ಭರತಖಂಡ ನಮ್ಮದು.
ಒಮ್ಮೆ ನಮ್ಮ ಪಂಚಾಂಗವನ್ನು ಗಣಿತ ಹಾಗೂ ವಿಜ್ಞಾನದ ಕನ್ನಡಕಗಳನ್ನು ಧರಿಸಿ ನೋಡಿ. ಮುಖ್ಯವಾಗಿ ನಮ್ಮ ಮನೆ ಮನೆಗಳಲ್ಲಿ ಮೂಲೆಯಲ್ಲೆಲ್ಲೋ ಕಾಣುವ ಪಂಚಾಂಗವನ್ನು ನೋಡುವ ಧಾರ್ಮಿಕ ಹಾಗೂ ಮಡಿವಂತಿಕೆಯ ದೃಷ್ಟಿಯ ಕುರಿತು ಒಂದಷ್ಟು ಪ್ರಾಯೋಗಿಕ ಚಿಂತನೆ ಅಗತ್ಯ. ಅಂದರೆ, ಗಣಿತ ಹಾಗೂ ಖಗೋಳ ವಿಜ್ಞಾನದ ದೃಷ್ಟಿಗೆ ಬದಲಾಗಲೇಬೇಕಾದ ಸಂದಿಗ್ಧವಾದ ಕಾಲಘಟ್ಟದಲ್ಲಿ ನಾವಿದ್ದೇವೆ.
ಒಮ್ಮೆ ನಮ್ಮ ಪಂಚಾಂಗವನ್ನು ಗಣಿತದ ನೆಲೆಯಲ್ಲಿ ತೆರೆದು ನೋಡಿ. ಅಲ್ಲಿ ಕಾಣುವುದೆಲ್ಲ ಅದ್ಭುತ ಎನಿಸುವ ಗಣಿತದ ಸೂಕ್ಷ್ಮ – ಅತಿಸೂಕ್ಷ್ಮ ಲೆಕ್ಕಾಚಾರಗಳ ಗೋಚರವಾಗುತ್ತದೆ.
ಒಮ್ಮೆ ವಿಜ್ಞಾನ ದ ದೃಷ್ಟಿಯಿಂದ ಪಂಚಾಂಗ ಬಿಡಿಸಿ ನೋಡಿ. ಅಲ್ಲಿ ಕಾಣುವುದೆಲ್ಲ ಖಗೋಳದ ವಿಸ್ಮಯಗಳನ್ನು ಬಿಚ್ಚಿಡುವ ಖಗೋಳ-ಭೂಗೋಳ ಕಾಲಗಣನೆಗಳ ಅನುಪಮ ವಿಷಯಗಳಾಗಿ ಕಾಣುವುದು.
ಪೂರ್ವಗ್ರಹ ತೊರೆಯೋಣ, ನಮ್ಮ ಋಷಿಮಾನಸದ ಅನುಗ್ರಹವಾದ ನಮ್ಮ ಕಾಲಮಾನವನ್ನು ಅನುಸರಿಸಿ ಸಕಲರಿಗೆ ಇದನ್ನು ತಿಳಿಸೋಣ.
ಪ್ರಸ್ತುತ ಭಾರತೀಯ ಕಾಲಮಾನದ ಪ್ರಕಾರ ಈಗ ಕಲಿಯುಗದ 5122ನೇ ವರ್ಷ ನಡೆಯುತ್ತಿದೆ. ಈ ಪೂರ್ಣ ವರ್ಷಕ್ಕೆ “ಶಾರ್ವರೀ” ಎಂಬ ಹೆಸರು. ಇದರಲ್ಲಿ ಇದೀಗ. 9ನೇ ತಿಂಗಳ 16ನೇ ದಿನವಿಂದು. ಆದ್ದರಿಂದ ಇಂದಿನ ದಿನಾಂಕ- 16.09.5122
ಕಲಿಯುಗ ಪ್ರಥಮಪಾದ ಶಾರ್ವರೀ ನಾಮಕ ವರ್ಷ ಉತ್ತರಾಯಣ ಹೇಮಂತ ಋತು ಮಾರ್ಗಶೀರ್ಷ ಮಾಸ ಕೃಷ್ಣಪಕ್ಷ ಪ್ರತಿಪತ್ ತಿಥಿ (ಬೆಳಿಗ್ಗೆ ೯.೨೯ರ ವರೆಗೆ), ಗುರುವಾರ.
ಇದನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಹೊಣೆ ನಮ್ಮದು. ನಮ್ಮ ದೇಶ ನಮ್ಮ ಹೆಮ್ಮೆ. ಭಾರತಕ್ಕೆ ಬೇಕು ಭಾರತೀಯ ಕಾಲಮಾನ -ಇದು ಒಂದು ಸ್ವದೇಶೀ ಸ್ವಾಭಿಮಾನದ ಆತ್ಮೀಯ ಅಭಿಯಾನ. ಇದಕ್ಕೆ ತಾವೆಲ್ಲರೂ ಕೈಜೋಡಿಸಲು ವಿನಮ್ರ ಕೋರಿಕೆ. ಇದನ್ನು ಭಾರತದಾದ್ಯಂತ ಜಾರಿಗೆ ತರಲು ಶ್ರಮಿಸೋಣ.
ಅಂಧಕಾರದಲ್ಲಿಟ್ಟು ನಮ್ಮ ಜೀವನವನ್ನೂ ಜೀವನ ವ್ಯವಸ್ಥೆಯನ್ನೂ ಸಮಗ್ರವಾದ ಭಾರತೀಯ ಆರ್ಷ ಪರಂಪರೆಯ ಬದುಕನ್ನೂ, ಈ ನಮ್ಮ ಕಾಲಮಾನವನ್ನೂ ಬುಡಮೇಲು ಮಾಡಿ, ಶಿಕ್ಷಣದಿಂದ ಆರಂಭಿಸಿ ಸಕಲತ್ರ ನಮ್ಮತನ್ನವನ್ನೇ ನಾಶಮಾಡಿದ, ಹೀಗೆ, ಇಡೀ ಭಾರತೀಯ ಜೀವನ ವ್ಯವಸ್ಥೆಗೆ ಕೊಡಲಿ ಏಟು ನೀಡಿದವರಿಗೆ ಭಾರತೀಯ ಕಾಲಮಾನವನ್ನು ಮತ್ತೊಮ್ಮೆ ತಿಳಿಸೋಣ.
ಆಮ್ನಾಯಃ ಭಾರತೀಯ ದಿನದರ್ಶಿಕಾವು ಆತ್ಮನಿರ್ಭರ ಭಾರತಮ್‌ಗೆ “ಆಮ್ನಾಯಃ-ಅನ್ತರ್ಜಾಲೀಯ-ವೇದ-ಸಂಸ್ಕೃತ-ಶಾಲಾ ಗನ್ಧವಹಸದನಮ್”ನ ಕೊಡುಗೆ.
ದಯಮಾಡಿ ಶೇರ್ ಮಾಡಿ. ನಮ್ಮ ಸಂಸ್ಕೃತಿ ಯನ್ನು ಉಳಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ಅಭಿಪ್ರಾಯ ತಿಳಿಸಲು ಮುಕ್ತಾವಕಾಶವಿದೆ. ಧನ್ಯವಾದಗಳು.
ಯುಗಾದಿಯು ನಮ್ಮ ಹೊಸವರ್ಷ. ಶುಭಮ್ ಅಸ್ತು ನಿತ್ಯಮ್ 😊🙏
ಇತಿ ನಿಮ್ಮವ,
ಡಾ. ವಿನಾಯಕ ಭಟ್ಟ ಗಾಳಿಮನೆ
ಸ್ಥಾಪಕರು, ಆಮ್ನಾಯಃ ಭಾರತೀಯ ದಿನದರ್ಶಿಕಾ ಗನ್ಧವಹ-ಸದನಮ್ &
ಪ್ರಾಂಶುಪಾಲರು ಅಂಬಿಕಾ ಮಹಾವಿದ್ಯಾಲಯ &
ಸ್ಥಾಪಕರು, ಅನ್ತರ್ಜಾಲೀಯ ವೇದ ಸಂಸ್ಕೃತ ಶಾಲಾ ಗನ್ಧವಹ-ಸದನಮ್, ಗಾಳಿಮನೆ

ಒಂದೊಂದು ಅಕ್ಷರವೂ ಸತ್ಯ! ಧನ್ಯವಾದಗಳು