ಹೌದು, ಒಂದು ದೇಶವು ಜಗತ್ತಿನೆದುರು ಎದೆಸೆಟೆದು ನಿಲ್ಲಬೇಕಿದ್ದರೆ, ಆರ್ಥಿಕವಾಗಿ ಸಬಲವಾಗಿ ಸ್ವಾವಲಂಬಿಯಾಗಿ ಅಭಿವೃದ್ಧಿ ಹೊಂದಬೇಕಿದ್ದರೆ, ಇತರ ವಿರೋಧಿ ದೇಶಗಳಿಗೆ ಬುದ್ಧಿ ಕಲಿಸಬೇಕಿದ್ದರೆ, ಸಮರ್ಥವಾದ ಆಡಳಿತ ಪಕ್ಷವೊಂದು ಎಷ್ಟು ಮುಖ್ಯವೋ, ಅಷ್ಟೇ ಪ್ರಧಾನ ಪಾತ್ರವು ಅದು ಎಡವಿದಾಗ ತಿದ್ದುವ ಪ್ರತಿಪಕ್ಷಕ್ಕಿದೆ.
ಕಳೆದ ಏಳು ದಶಕಗಳಲ್ಲಿ ಸ್ವಜನಪಕ್ಷಪಾತ, ಜಾತಿ, ಮತ, ಧರ್ಮದ ಆಧಾರದಲ್ಲಿಯಷ್ಟೇ ಅಭಿವೃದ್ಧಿ ಕಾಣುತ್ತಿದ್ದ ದೇಶದಲ್ಲಿ, ಕೊಂಚವಾದರೂ ಅರ್ಹರಿಗೂ ಅಷ್ಟಿಷ್ಟು ಯೋಜನೆಗಳ ಫಲ ದೊರೆತಿದ್ದಕ್ಕೆ ಪ್ರಮುಖ ಕಾರಣವೇ ಸಮರ್ಥವಾದ ಪ್ರತಿಪಕ್ಷ.
ಆದರೆ, ಈ ನರೇಂದ್ರ ಮೋದಿ ಎಂಬ ನಿಸ್ವಾರ್ಥಿ, ದೇಶದ ಬಗ್ಗೆಯಷ್ಟೇ ಚಿಂತೆ ಮಾಡುವ ವೀರ ಸೇನಾನಿಯೊಬ್ಬ ದೇಶದ ಚುಕ್ಕಾಣಿ ಹಿಡಿದಂದಿನಿಂದ ಕಾಲವೇ ಬದಲಾಗಿಬಿಟ್ಟಿತು. ಮೋದಿ ಅವರು ವಿದೇಶೀ ಮುಖಂಡರೊಂದಿಗೆ ಮೈತ್ರಿ ಸಾಧಿಸುತ್ತಲೇ, ಭಾರತಕ್ಕೆ ಕಂಟಕಪ್ರಾಯವಾಗಿರುವ ಚೀನಾ ಮತ್ತು ಪಾಕಿಸ್ತಾನವನ್ನು ಎಲ್ಲಿಡಬೇಕೋ ಅಲ್ಲೇ ಇಡುವಂತೆ ಮಾಡುವಲ್ಲಿ ಯಾವಾಗ ಶ್ರಮಿಸಲಾರಂಭಿಸಿದರೋ, ದೇಶದೊಳಗಿನ ವಿದ್ರೋಹಿ ಶಕ್ತಿಗಳಿಗೆ ಅದು ನುಂಗಲಾಗದ ತುತ್ತಾಯಿತು.
ಈ ಕಾರಣಕ್ಕಾಗಿಯೇ, ನರೇಂದ್ರ ಮೋದಿ ಮಾಡುವ ಪ್ರತಿಯೊಂದು ಕೆಲಸ-ಕಾರ್ಯವನ್ನೂ ಟೀಕಿಸುವುದೇ ಅವರ ಕಾರ್ಯವಾಯಿತು. ಏಳು ದಶಕಗಳಲ್ಲಿ ನಡೆದ ಭ್ರಷ್ಟಾಚಾರ, ಹಿಂಸಾಚಾರ, ಜನರ ನರಳಾಟ, ಹಿಂಸಾಚಾರ, ಗಲಭೆಗಳ ಸಂದರ್ಭದಲ್ಲಿ ಎಂದೂ ಆಗದ ಸಂಗತಿಗಳು ಈಗ ಆಗತೊಡಗಿವೆ. ಕೋಮುಗಲಭೆಯೋ, ಕೋವಿಡ್ ಮಹಾಮಾರಿಯಂತಹಾ ದುರಂತಗಳೋ – ಇವುಗಳ ಫೋಟೋ ಸಿಕ್ಕಾಕ್ಷಣ, ಅದನ್ನು ವಿದೇಶೀ ಮಾಧ್ಯಮಗಳಿಗೆ ಕಳುಹಿಸಿ ದುಡ್ಡು ಮಾಡುವ ದಂಧೆಯೂ ಆರಂಭವಾಯಿತು.
ಹೆಣ ಸುಡುವ, ಸಿಎಎ ವಿರುದ್ಧ ವೃಥಾ ಹಿಂಸಾಚಾರ ನಡೆಸಿದ, ಕೋಮುಗಲಭೆಯಾದ ದೃಶ್ಯಗಳಲ್ಲೆಲ್ಲಾ, ಬೆಂಕಿ, ರಕ್ತವನ್ನೇ ತೋರಿಸುವ ಚಿತ್ರಗಳನ್ನು ಈ ಭಾರತ ವಿರೋಧೀ ಶಕ್ತಿಗಳು ವಿದೇಶೀ ಮಾಧ್ಯಮಗಳಿಗೆ ಮಾರಿದವು. ಟೈಮ್ ಮುಂತಾದ ಪ್ರಖ್ಯಾತ ವಿದೇಶೀ ಪತ್ರಿಕೆಗಳು ಇವನ್ನೇ ಮುಖಪುಟದಲ್ಲಿ ಪ್ರಕಟಿಸಿ, ‘ಮೋದಿ ವೈಫಲ್ಯ’ ಎಂದೆಲ್ಲಾ ಬಿಂಬಿಸಲು ಆರಂಭಿಸಿದವು.
ಇದರ ಹಿಂದೆ ಬಲುದೊಡ್ಡ ಹುನ್ನಾರವಿದೆ. ಈ ದೇಶದೊಳಗಿನ ವಿದ್ರೋಹಿಗಳು ತಮ್ಮ ತಾಯಿಗೇ ಮೋಸ ಮಾಡುತ್ತಿದ್ದಾರೆ ಎಂಬ ಅರಿವು ಅವರ ಗಮನಕ್ಕೆ ಬಾರದೇ ಹೋಯಿತು.
ಕೋವಿಡ್ ಕಾಲವನ್ನೇ ಗಮನಿಸಿ. ಲಾಕ್ಡೌನ್ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು, ಲಾಕ್ಡೌನ್ ಮಾಡಿದ್ದೇಕೆ ಎಂದು ಪ್ರಶ್ನಿಸಿದರು. ಲಸಿಕೆ ಉತ್ಪಾದಿಸಿಲ್ಲ ಯಾಕೆ ಅಂತ ಪ್ರಶ್ನಿಸಿದರು, ಉತ್ಪಾದಿಸಿದ ಬಳಿಕ, ಲಸಿಕೆ ಹಾಕಿಕೊಳ್ಳಬೇಡಿ ಅಪಾಯ ಎಂದೆಲ್ಲಾ ಹುಯಿಲೆಬ್ಬಿಸಿದರು.
ಲಾಕ್ಡೌನ್ ಮಾಡಿದಾಗ, ವಲಸೆ ಕಾರ್ಮಿಕರ ಪಾಡನ್ನು ಬಿಂಬಿಸುವ ಚಿತ್ರಗಳನ್ನೆಲ್ಲಾ ವಿದೇಶೀ ಮಾಧ್ಯಮಗಳಿಗೆ ಕಳುಹಿಸಿ, ಮೋದಿ ಹೀಗೆ ಮಾಡಿದರು ಅಂತೆಲ್ಲಾ ಹೀಗಳೆದರು. ಏನು ಮಾಡಬಹುದು ಎಂಬ ಸಲಹೆ ಕೊಡುವುದಿರಲಿ, ಮೋದಿ ಎಲ್ಲಿ ಸರಿ ಮಾಡಿದ್ದಾರೆ, ಅದನ್ನು ಹೇಗೆ ತಪ್ಪೆಂದು ಬಿಂಬಿಸುವುದು ಎಂಬ ಚಿಂತನೆಯಲ್ಲೇ ಈ ಬುದ್ಧಿಜೀವಿಗಳು ಕಾಲ ಕಳೆದುಬಿಟ್ಟರು.
ವಿರೋಧ ಪಕ್ಷಗಳು ನಿಜವಾದ ವಿರೋಧಿ ಪಕ್ಷಗಳಾದವು.
ಚೀನಾದಿಂದ ಬಂದ ಕೋವಿಡ್ ಕಾಯಿಲೆಯನ್ನು ತಡೆಯಲು ದೇಶ-ವಿದೇಶದಲ್ಲಿ ಲಸಿಕೆ ತಯಾರಿಕೆಗೆ ಪೈಪೋಟಿ ಏರ್ಪಟ್ಟಿತು. ಚೀನಾ ಕೂಡ ಸುಮ್ಮನೆ ಕೂರಲಿಲ್ಲ. ತನ್ನ ಲಸಿಕೆಯನ್ನೂ ತಯಾರಿಸಿತು, ಅಮೆರಿಕವೂ ಅಷ್ಟೆ. ಯಾಕೆಂದರೆ, ಇದೊಂದು ಸಹಸ್ರ ಕೋಟಿ ವ್ಯವಹಾರವಾಗುತ್ತಿತ್ತು.
ಇಂಥ ಕಾಲದಲ್ಲಿ ಭಾರತದ 140 ಕೋಟಿ ಜನರಿಗೆ ಲಸಿಕೆ ಮಾರಿ ತಾನು ದುಡ್ಡು ಮಾಡುವ ಚೀನಾದ ಹುನ್ನಾರವನ್ನೆಲ್ಲ ಕಟ್ಟಿ ಹಾಕಿದ್ದು ಇದೇ ನರೇಂದ್ರ ಮೋದಿ. ಭಾರತದಲ್ಲೇ ಅಭಿವೃದ್ಧಿಪಡಿಸಿದ ಲಸಿಕೆಗಳನ್ನು ಉತ್ತೇಜಿಸಿದರು. ಲಸಿಕೆ ತಯಾರಿಸುವ ಕಂಪನಿಗಳಿಗೆ ಭರ್ಜರಿ ಪ್ರೋತ್ಸಾಹ ನೀಡಿದರು. ಅಗತ್ಯವಿರುವ ದೇಶಗಳಿಗೆಲ್ಲ ಅದನ್ನು ವಿತರಿಸಿದರು. ಇದರಿಂದ ದೇಶದ ಆರ್ಥಿಕತೆಯೂ ಸುಧಾರಿಸಿತು.
ಕೋವಿಡ್ 2ನೇ ಅಲೆ ಇಷ್ಟು ತೀವ್ರವಾಗಬಹುದು ಎಂದು ಅಂದುಕೊಂಡಿರಲಿಲ್ಲ. ಆದರೂ, ದೇಶದ ಜನರಿಗೆ ಹಂತ ಹಂತವಾಗಿ ಲಸಿಕೆ ವಿತರಣೆಗೆ, ಅದು ಕೂಡ ಉಚಿತವಾಗಿಯೇ ವಿತರಿಸುವ ಸಾಹಸಕ್ಕೆ ಕೈ ಹಾಕಿದರು. ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ಗಳು ದೇಶ-ವಿದೇಶದಲ್ಲಿ ಮನ್ನಣೆ ಗಳಿಸಿದವು.
ಆದರೆ, ದೇಶದೊಳಗಿರುವ ವಿರೋಧಿಗಳಿಗೆ ಇದರಿಂದಲೂ ಕಣ್ಣು ಕೆಂಪಾಯಿತು. ತಮ್ಮ ‘ಮಿತ್ರ’ ಚೀನಾಕ್ಕೆ ದೊರೆಯಬಹುದಾಗಿದ್ದ ಲಾಭದ ಪಾಲನ್ನು ದೊರೆಯದಂತೆ ಮಾಡಿದ ಮೋದಿ ಮೇಲೆ ಇವರಿಗೆ ಎಲ್ಲಿಲ್ಲದ ಕೋಪ. ಅಮೆರಿಕವೇ ಒಪ್ಪಿಕೊಂಡ ಭಾರತದ ಲಸಿಕೆಯ ಸಾಮರ್ಥ್ಯದ ಬಗ್ಗೆ ಸುಳ್ಳು ಸುದ್ದಿ ಹರಡಲು ಆರಂಭಿಸಿದರು. ಲಸಿಕೆ ತೆಗೆದುಕೊಂಡರೆ ಅಪಾಯ, ಸೈಡ್ ಎಫೆಕ್ಟ್ ಜಾಸ್ತಿ, ಅದರಿಂದಾಗಿಯೇ ಪ್ರಾಣ ಹೋಗುತ್ತದೆ ಎಂದೆಲ್ಲಾ ಬಿಂಬಿಸಿದರು. ಆದರೆ, ಉಚಿತವಾಗಿ ಇದೇ ಮೋದಿ ಸರ್ಕಾರ ಕೊಡಮಾಡಿದ ಲಸಿಕೆಯನ್ನು ತಾವು ರಹಸ್ಯವಾಗಿ ಹಾಕಿಸಿಕೊಂಡರು. ಜನರು ಅದನ್ನು ಬಳಸದಂತೆ ಮಾಡಿ, ತಮ್ಮ ಕಾರ್ಯಸಾಧನೆಗೋಸ್ಕರ ಜನರ ಜೀವವನ್ನು ಅಪಾಯಕ್ಕೆ ತಳ್ಳಿದರು.
ಇವ್ಯಾವುದೂ ಪಾಪದ ಜನಗಳಿಗೆ ಗೊತ್ತಾಗಲೇ ಇಲ್ಲ. ಲಸಿಕೆ ಉಚಿತವಾಗಿ ನೀಡಿದರೂ ತೆಗೆದುಕೊಳ್ಳದೆ, ಹಲವು ಮಂದಿ ಕೋವಿಡ್ಗೆ ತುತ್ತಾಗಿಯೂಬಿಟ್ಟರು.
ಆಕ್ಸಿಜನ್ ಅಥವಾ ಪ್ರಾಣವಾಯು ಆಮ್ಲಜನಕದ ಕೊರತೆಯಾಗಿದೆ ಹೌದು. ಆದರೆ, ಅದು ಸಕಾಲಕ್ಕೆ ಆಸ್ಪತ್ರೆಗಳಿಗೆ ದೊರೆಯದಂತೆ ಆಗುವಲ್ಲಿ ಈ ಲಾಬಿಯ ಕೈವಾಡವೂ ಇದೆಯೇ ಎಂಬುದು ತನಿಖೆಗೆ ಅರ್ಹ. ಯಾಕೆಂದರೆ, ಏನೇ ದುರಂತ ಸಂಭವಿಸಿದರೂ ಮೋದಿಗೆ ಕೆಟ್ಟ ಹೆಸರು ಅಂಟಿಸುವುದು ಸುಲಭವಾಗುತ್ತದೆಯಲ್ಲಾ?
ಆದರೆ, ಕೋವಿಡ್ ಮೊದಲ ಅಲೆಯಲ್ಲಿ ನರೇಂದ್ರ ಮೋದಿ ಅವರು ಬೇರೆ ಬೇರೆ ದೇಶಗಳಿಗೆ ನೆರವು ನೀಡಿ, ಅವರೊಂದಿಗೆ ಮೈತ್ರಿ ಸಾಧಿಸಿಬಿಟ್ಟರು. ತತ್ಪರಿಣಾಮವಾಗಿ, ಎರಡನೇ ಅಲೆಯು ಭಾರತಕ್ಕೆ ಜೋರಾಗಿಯೇ ಬಡಿದಾಗ, ಇದೇ ಭಾರತದ ನೆರವಿಗೆ ಬಂದವರು ಅಮೆರಿಕ, ಯುಕೆ, ಫ್ರಾನ್ಸ್, ಸಿಂಗಾಪುರ, ಬ್ರೆಜಿಲ್ ಮುಂತಾದ ದೇಶಗಳೇ ಹೊರತು, ದೇಶದೊಳಗಿದ್ದುಕೊಂಡೇ ಮೋದಿ ವಿರುದ್ಧ, ಭಾರತದ ಕ್ರಮಗಳ ವಿರುದ್ಧ ಊಳಿಡುತ್ತಿರುವ ವಿರೋಧಿಗಳಲ್ಲ! ಆಕ್ಸಿಜನ್ ಸಮಸ್ಯೆಯಿರುವಾಗ ಈ ದೇಶಗಳು ಅದೆಷ್ಟು ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ವಿಮಾನದಲ್ಲಿ ಕಳುಹಿಸಿಕೊಟ್ಟಿಲ್ಲ! ಹೆಮ್ಮೆ ಪಡಬೇಕು ಭಾರತೀಯರು.
ಅದೇ ರೀತಿ, ರೆಮ್ಡಿಸಿವಿರ್ ಎಂಬ ಜೀವರಕ್ಷಕ ಔಷಧಿ. ಇದರ ಬಗ್ಗೆಯೂ ಅಪಪ್ರಚಾರ ಮಾಡಿ, ಕಾಳಸಂತೆಯಲ್ಲಿ ಅದನ್ನು ಮಾರುವಂತೆಯೂ ನೋಡಿಕೊಂಡರು ಈ ದುರುಳರು. ಅದನ್ನು ವೈದ್ಯರ ಸಲಹೆಯಿಲ್ಲದೆ ತೆಗೆದುಕೊಳ್ಳಬಾರದು ಎಂಬ ಕನಿಷ್ಠ ಜ್ಞಾನವನ್ನು, ಜಾಗೃತಿಯನ್ನು ಮೂಡಿಸುವ ಬದಲು, ರೆಮ್ಡಿಸಿವಿರ್ ಔಷಧಿ ದೊರೆಯುತ್ತಿಲ್ಲ, ಮೋದಿ ಕಾರಣ ಎಂದು ದೂರಲಾರಂಭಿಸಿದರು.
ಆದರೆ, ಈ ದುರುಳರಿಗೆ ಒಂದು ವಿಷಯ ನೆನಪಿಲ್ಲ. ಕೋವಿಡ್ ಎಂಬುದು ಬರೇ ಭಾರತವನ್ನು ಕಾಡಿದ್ದಲ್ಲ. ಚೀನಾದವರ ಈ ವೈರಸ್, ಇಡೀ ಜಗತ್ತನ್ನೇ ವ್ಯಾಪಿಸಿದೆ.
ವಿಶ್ವದ ದೊಡ್ಡಣ್ಣ ಎಂದು ಕರೆಯಲಾಗುವ ಅಮೆರಿಕದ ಜನಸಂಖ್ಯ ಕೇವಲ 33 ಕೋಟಿ. ಫ್ರಾನ್ಸ್ 6.5 ಕೋಟಿ, ಬ್ರೆಜಿಲ್ 21 ಕೋಟಿ, ಅರ್ಜೆಂಟೀನಾ 4.5 ಕೋಟಿ, ಯುಕೆ (ಇಂಗ್ಲೆಂಡ್) 6.5 ಕೋಟಿ, ಇಟಲಿ 6 ಕೋಟಿ… ಹೀಗೆ ಅದೆಷ್ಟೋ ದೇಶಗಳನ್ನು ಸೇರಿಸಿದರೂ ನಮ್ಮ ಭಾರತದ ಜನಸಂಖ್ಯೆಯ ಸಮೀಪವೂ ಬರುವುದಿಲ್ಲ.

ಭಾರತದಲ್ಲಿರುವುದು 140 ಕೋಟಿ ಜನ ಸಂಖ್ಯೆ. ವಿಶೇಷವಾಗಿ ಇಂಥ ಸಂಕಷ್ಟ ಪರಿಸ್ಥಿತಿಯಲ್ಲಿ ಇದನ್ನು ನಿಭಾಯಿಸಲು ಕನಿಷ್ಠ ಹತ್ತಾರು ಪ್ರಧಾನಿಗಳು ಬೇಕು. ಅಂಥ ಸಂದರ್ಭದಲ್ಲಿ ನೆರವಾಗಬೇಕಿರುವುದು ಪ್ರತಿಪಕ್ಷಗಳ ಧರ್ಮ. ಆದರೆ, ಭಾರತದಲ್ಲಿ ಏನಾಗುತ್ತಿದೆ? ಪ್ರತಿಪಕ್ಷಗಳು ಮೋದಿ ವಿರೋಧಿ ಪಕ್ಷಗಳಾಗಿಬಿಟ್ಟವು. ರಾಷ್ಟ್ರೀಯತೆ ಮರೆತುಹೋಯಿತು. ಕಮ್ಯುನಿಸ್ಟರು, ವಿದೇಶೀ ಶಕ್ತಿಗಳ ಪ್ರಭಾವಕ್ಕೆ ಒಳಗಾದರು. ಭಾರತದ ಬೆಳೆಯುತ್ತಿರುವ ವರ್ಚಸ್ಸನ್ನು ತಡೆಯುವ ವಿದೇಶೀ ಶಕ್ತಿಗಳ ಹುನ್ನಾರಕ್ಕೆ ಅಡಿಯಾಳಾದರು. ಮೋದಿ ಕೈಗೊಳ್ಳುವ ಪ್ರತಿಯೊಂದು ಕ್ರಮವನ್ನೂ ಟೀಕಿಸತೊಡಗಿದರು.
ಈ ಚಾರ್ಟ್ ಗಮನಿಸಿದರೆ (ಇದು https://www.worldometers.info/ ಮೂಲಕ ದೊರೆತ ಚಾರ್ಟ್) ಅರ್ಥವಾಗುತ್ತದೆ. ಇಷ್ಟು ದೊಡ್ಡ ಜನಸಂಖ್ಯೆಯಿರುವ ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ಅವಿರತ ಶ್ರಮಿಸುತ್ತಾ, ಸಾವಿನ ಸಂಖ್ಯೆಯನ್ನಾಗಲೀ, ಕೋವಿಡ್ ಪ್ರಕರಣಗಳ ಸಂಖ್ಯೆಯನ್ನಾಗಲೀ ಎಷ್ಟು ನಿಯಂತ್ರಣದಲ್ಲಿಟ್ಟುಕೊಂಡಿದೆ ಎಂಬುದು ನಮಗೇ ವೇದ್ಯವಾಗುತ್ತದೆ. ಅಮೆರಿಕ, ಬ್ರೆಜಿಲ್, ಫ್ರಾನ್ಸ್ ಮುಂತಾದ ಮುಂದುವರಿದ ರಾಷ್ಟ್ರಗಳಲ್ಲಿ ಸಾವಿನ ಸಂಖ್ಯೆ ಹತ್ತು ಲಕ್ಷಕ್ಕೆ ಒಂದುವರೆ ಸಾವಿರಕ್ಕಿಂತ ಹೆಚ್ಚಿದ್ದರೆ, ಭಾರತದಲ್ಲಿ ಈ ಪ್ರಮಾಣ ಹತ್ತು ಲಕ್ಷಕ್ಕೆ ಕೇವಲ 160!
ಇದು ಭಾರತವು, ಭಾರತೀಯರು ಹೆಮ್ಮೆ ಪಡಬೇಕಾದ ವಿಚಾರವಲ್ಲವೇ? ನರೇಂದ್ರ ಮೋದಿ ಅವರ ತಾಕತ್ತು ಇದಲ್ಲವೇ? ಅದು ಕೂಡ, ವಿರೋಧಿಸುತ್ತಲೇ ಇರುವ, ಸಂಕಷ್ಟ ಪರಿಸ್ಥಿತಿಯಲ್ಲಿಯೂ ದೇಶಕ್ಕಾಗಲೀ, ದೇಶದ ಜನರಿಗಾಗಲೀ, ಭಾರತೀಯರಿಗಾಗಲೀ ನೆರವು ನೀಡದೇ ಇರುವ ವಿರೋಧ ಪಕ್ಷಗಳ ಕೂಗಾಟ, ಅರಚಾಟದ ಮಧ್ಯೆ! ಇಷ್ಟು ದೊಡ್ಡ ದೇಶವನ್ನು ನಿಭಾಯಿಸಲು ವಿದೇಶಗಳಿಂದ ಈ ಪರಿಯಾಗಿ ಸಂಕಷ್ಟದ ಕಾಲದಲ್ಲಿ ನೆರವು ದೊರೆಯುವುದಕ್ಕೆ ಕಾರಣ ನರೇಂದ್ರ ಮೋದಿ ಅವರು ಕೈಗೊಂಡ ರಾಜತಾಂತ್ರಿಕ ಕ್ರಮಗಳು.
ಇದೇ ಕಾರಣಕ್ಕೆ ಮೋದಿ ಎಂದರೆ ಚೀನಾ ಮತ್ತು ಪಾಕಿಸ್ತಾನಕ್ಕೆ ಈಗಲೂ ನುಂಗಲಾಗದ ತುತ್ತು. ಇದಕ್ಕಾಗಿಯೇ ಈ ದುಷ್ಟ ಶಕ್ತಿಗಳು ದೇಶದ ಆಂತರಿಕ ದುಷ್ಟ ಶಕ್ತಿಗಳೊಂದಿಗೆ ಸೇರಿಕೊಂಡು ಮೋದಿ ವಿರುದ್ಧ ಕತ್ತಿ ಮಸೆಯುತ್ತಲೇ ಇವೆ. ನಮ್ಮ ದೇಶವನ್ನು ಈ ಪರಿಯಾಗಿ ಕಾಪಾಡಿದ, ಸಂಕಷ್ಟದ ಕಾಲದಲ್ಲಿಯೂ ವಿರೋಧ ಪಕ್ಷಗಳ ತೆಗಳಿಕೆಗೂ ಜಗ್ಗದೆ, ಕರ್ತವ್ಯನಿರತರಾಗಿರುವ ಈ ನಾಯಕನನ್ನು ನಾವು ರಕ್ಷಿಸಿಕೊಳ್ಳಬೇಕಿದೆ. ಭಾರತ ಮಾತೆಯ ಪುತ್ರರಾಗಿ ನಮ್ಮ ದೇಶ ಮುನ್ನಡೆಸುತ್ತಿರುವ ನಾಯಕನಿಗೆ ಬೆಂಬಲಿಸಬೇಕಾಗಿದೆ.
ಜೈಹೋ ನರೇಂದ್ರ ಮೋದಿ!

Average Rating