ಐದು ದಶಕಗಳ ನಿಷ್ಕಳಂಕ ರಾಜಕೀಯ ಜೀವನದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಿಟ್ಟು ಹೋದ ಹೆಜ್ಜೆ ಗುರುತುಗಳು ಚಿರಸ್ಮರಣೀಯ. ಸಂಖ್ಯಾಬಲದ ಏಳುಬೀಳುಗಳ ಸಂದರ್ಭದಲ್ಲಿ ಅವರನ್ನು ಭಾರತದ ಪ್ರಧಾನಿಯಾಗಿಸಬೇಕೆಂಬ ಒತ್ತಡ ಹೆಚ್ಚಾಗುತ್ತಿದ್ದಂತೆಯೇ, 13ನೇ ರಾಷ್ಟ್ರಪತಿಯಾಗಿ ಅವರನ್ನು ನೇಮಿಸಲಾಯಿತು.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆಪ್ತರಾಗಿದ್ದ ಪ್ರಣಬ್ ಮುಖರ್ಜಿ, 1969ರಲ್ಲಿ ಅವರಿಂದಾಗಿಯೇ ಕಾಂಗ್ರೆಸ್ ಪಕ್ಷದ ಮೂಲಕ ಮೊದಲ ಬಾರಿ ರಾಜ್ಯಸಭೆಗೆ ಪ್ರವೇಶಿಸಿದ್ದರು.
ತದನಂತರ ಪಕ್ಷದಲ್ಲಿ ಹಲವಾರು ಸ್ಥಾನಗಳೊಂದಿಗೆ, ಕೇಂದ್ರ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ, ವಿದೇಶಾಂಗ ಸಚಿವರಾಗಿ ಮತ್ತು ಹಣಕಾಸು ಸಚಿವರಾಗಿ ಪ್ರಣಬ್ ನೀಡಿದ ಕೊಡುಗೆ ಮತ್ತು ಅವರು ಪ್ರಕಟಿಸಿದ ನಾಯಕತ್ವದ ಛಾತಿ ಅನನ್ಯ. ಬಹುಶಃ ಪಿ.ವಿ.ನರಸಿಂಹ ರಾವ್ ಬಿಟ್ಟರೆ, ಬೇರಾವುದೇ ಕಾಂಗ್ರೆಸ್ ನಾಯಕರಿಗೆ ಈ ಪರಿಯ ಸಾಮರ್ಥ್ಯವಿರಲಿಲ್ಲ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಶಿಫಾರಸಿನ ಮೇರೆಗೆ ಅವರಿಗೆ 2019ರಲ್ಲಿ ಭಾರತ ರತ್ನ ಪುರಸ್ಕಾರ ಒಲಿದು ಬಂತು.
ಇಂದಿರಾ ಗಾಂಧಿಯವರ ಬಲಗೈಯಾಗಿ ಬೆಳೆದ ಅವರು 1973ರಲ್ಲಿಯೇ ಆಕೆಯ ಸಂಪುಟದಲ್ಲಿ ಸ್ಥಾನಪಡೆದಿದ್ದರು. 1975-77ರ ಸರ್ವಾಧಿಕಾರಿ ಧೋರಣೆಯನ್ನು ಪ್ರಕಟಿಸಿದ, ಭಾರತದ ಇತಿಹಾಸದ ಕಪ್ಪು ಚುಕ್ಕೆಯೇ ಆಗಿದ್ದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ರಣಬ್ ಮುಖರ್ಜಿ ಮೇಲೂ ಸಾಕಷ್ಟು ಆರೋಪಗಳು ಕೇಳಿಬಂದವು.
1982-84ರವರೆಗೆ ಕೇಂದ್ರದ ಹಣಕಾಸು ಸಚಿವರಾಗಿದ್ದ ಅವರು 1980ರಿಂದ 85ರವರೆಗೆ ರಾಜ್ಯಸಭೆಯಲ್ಲಿ ಸದನದ ಕಾಂಗ್ರೆಸ್ ನಾಯಕನಾಗಿಯೂ ಕೆಲಸ ಮಾಡಿದ್ದರು. ಸರ್ಕಾರದ ಹಣಕಾಸು ಪರಿಸ್ಥಿತಿಯನ್ನು ಸುಧಾರಿಸಿದ್ದ ಅವರು, ಇಂದಿರಾ ಸರ್ಕಾರವು ಐಎಂಎಫ್ ಸಾಲದ ಕೊನೆಯ ಕಂತು ಕಟ್ಟುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ನಂ.1 ಸ್ಥಾನಕ್ಕೇರುವ ಎಲ್ಲ ಅರ್ಹತೆಗಳಿದ್ದ ಹೊರತಾಗಿಯೂ ಇಂದಿರಾ ಗಾಂಧಿ ಬಳಿಕ ಕಾಂಗ್ರೆಸ್ ಪಕ್ಷವು ಅವರಿಗೆ ಬೆಳೆಯಲು ಬಿಡಲಿಲ್ಲ. 1984ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯಾದಾಗ, ಪ್ರಧಾನಿ ಪಟ್ಟಕ್ಕೆ ಯಾರು ದಿಕ್ಕು ಎಂಬ ಸಂದರ್ಭದಲ್ಲಿ ಎಲ್ಲರೂ ಊಹಿಸಿದ್ದು ಸಮರ್ಥ ನಾಯಕನಾಗಿ ಬೆಳೆದಿದ್ದ ಪ್ರಣಬ್ ಅವರ ಹೆಸರನ್ನು.
ಆಗ ರಾಜಕೀಯದಲ್ಲಿ ಅನನುಭವಿಯಾಗಿದ್ದ ರಾಜೀವ್ ಗಾಂಧಿಯ ಬದಲು ದೇಶ ಮುನ್ನಡೆಸುವಲ್ಲಿ ಪ್ರಣಬ್ ಅವರೇ ಸಮರ್ಥರು ಎಂಬ ಅಭಿಪ್ರಾಯವು ಅವರಿಗೂ ಇತ್ತು, ಇತರರಿಗೂ ಇತ್ತು. ಆದರೆ ಪಕ್ಷವೇ ಬಿಡಲಿಲ್ಲ. ಅವರನ್ನು ಮೂಲೆಗುಂಪು ಮಾಡಲಾಯಿತು. ಇಂದಿರಾ ಪುತ್ರ ರಾಜೀವ್ಗಿಂತ ಪ್ರಣಬ್ಗೆ ಸಾಕಷ್ಟು ಅನುಭವವಿದ್ದರೂ, ರಾಜೀವ್ ಅವರು ಪಕ್ಷವನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.
ತತ್ಪರಿಣಾಮವಾಗಿ ಕ್ಯಾಬಿನೆಟ್ ಹುದ್ದೆ ಕಳೆದುಕೊಂಡ ಪ್ರಣಬ್ರನ್ನು ಪಶ್ಚಿಮ ಬಂಗಾಳ ಕಾಂಗ್ರೆಸ್ಗೆ ಕಳುಹಿಸಿ, ರಾಜ್ಯದ ಜವಾಬ್ದಾರಿ ನೋಡಿಕೊಳ್ಳುವಂತೆ ಸೂಚಿಸಲಾಯಿತು. ಇಂದಿರಾ ಉತ್ತರಾಧಿಕಾರಿ ಎಂದೇ ಬಿಂಬಿತರಾದವರನ್ನು ಮುಖ್ಯವಾಹಿನಿಯಿಂದಲೇ ದೂರ ತಳ್ಳಲಾಯಿತು.
1986ರಲ್ಲಿ ಪಕ್ಷ ತ್ಯಾಗ ಮಾಡಿದ ಪ್ರಣಬ್, ತಮ್ಮದೇ ಆದ ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಕಟ್ಟಿದರು. ಆದರೆ, 1989ರಲ್ಲಿ ರಾಜೀವ್ ಗಾಂಧಿ ಅವರೊಂದಿಗೆ ಮುನಿಸು ಬಿಟ್ಟು ತಮ್ಮ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಿ, ಮರಳಿ ಕಾಂಗ್ರೆಸಿಗರಾದರು.
1991ರಲ್ಲಿ ರಾಜೀವ್ ಗಾಂಧಿ ಹತ್ಯೆಯಾದ ಬಳಿಕ, ಪಿ.ವಿ.ನರಸಿಂಹ ರಾವ್ ಪ್ರಧಾನಿ ಗಾದಿಗೇರಿದಾಗ ಪ್ರಣಬ್ ರಾಜಕೀಯ ವೃತ್ತಿಗೆ ಹೊಸ ಬೆಲೆ ಬಂತು. ರಾವ್ ಅವರು ಪ್ರಣಬ್ರನ್ನು ಯೋಜನಾ ಆಯೋಗದ ಮುಖ್ಯಸ್ಥರನ್ನಾಗಿಯೂ, 1995ರಲ್ಲಿ ವಿದೇಶಾಂಗ ಸಚಿವರಾಗಿಯೂ ನೇಮಿಸಿಕೊಂಡು ಅರ್ಹತೆಗೆ ಮಣೆ ಹಾಕಿದರು.
1998ರಲ್ಲಿ ಕಾಂಗ್ರೆಸ್ ಅಧ್ಯಕ್ಷತೆಗೆ ಸೋನಿಯಾ ಗಾಂಧಿಯನ್ನು ಏರಿಸಲು ಪ್ರಣಬ್ ಅವರ ಪರಿಶ್ರಮವಿತ್ತು. ಮನಮೋಹನ್ ಸಿಂಗ್ ಅವರನ್ನು ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಗೆ ನೇಮಿಸುವ ಪತ್ರಕ್ಕೆ ಸಹಿ ಹಾಕಿದ್ದೇ ಅಂದಿನ ಹಣಕಾಸು ಸಚಿವರಾಗಿದ್ದ ಪ್ರಣಬ್!
2004ರಲ್ಲಿ ಕಾಂಗ್ರೆಸ್ ನೇತೃತ್ವದ ಮಿಶ್ರಣ ಸರ್ಕಾರ ‘ಯುಪಿಎ’ ಹೆಸರಿನಲ್ಲಿ ಅಧಿಕಾರಕ್ಕೆ ಬಂದಾಗ, ಪ್ರಣಬ್ ಅವರೂ ಮೊದಲ ಬಾರಿಗೆ ಲೋಕಸಭೆ ಚುನಾವಣೆ ಗೆದ್ದಿದ್ದರು. ಆ ಸಂದರ್ಭದಲ್ಲೇ ಅವರು ಪ್ರಧಾನಿಯಾಗಬಹುದು ಎಂದು ಲೆಕ್ಕಾಚಾರ ಹಾಕಿದವರು ಬಹಳಷ್ಟು ಮಂದಿ. ಆದರೆ, ಸೋನಿಯಾ ನಿಷ್ಠ ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಗಾದಿ ನೀಡಲಾಯಿತು.
ಆದರೆ, 2012ರವರೆಗೂ ಅವರು ಮನಮೋಹನ್ ಸಿಂಗ್ ಸರ್ಕಾರದಲ್ಲಿ ನಂ.2 ಸ್ಥಾನದಲ್ಲೇ ಉಳಿದರು. 2007ರಲ್ಲಿಯೇ ರಾಷ್ಟ್ರಪತಿ ಹುದ್ದೆಗೆ ಅವರನ್ನು ನೇಮಿಸುವ ಪ್ರಯತ್ನಗಳು ನಡೆದಿದ್ದವು. ಆದರೆ, ಅಂದು ರಚನೆಯಾಗಿದ್ದ ಚೌಚೌ ಪಕ್ಷಗಳ ಕೇಂದ್ರ ಸರ್ಕಾರಕ್ಕೆ ಅವರ ಅನುಭವದ ಅಗತ್ಯವಿತ್ತು. ರಕ್ಷಣಾ ಸಚಿವರಾಗಿ, ವಿದೇಶಾಂಗ ಸಚಿವರಾಗಿ ಹಾಗೂ 2009ರಿಂದ 2012ರವರೆಗೆ ವಿತ್ತ ಸಚಿವರಾಗಿಯೂ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು.
ಪಕ್ಷದಲ್ಲಿ ಅವರ ನಾಯಕತ್ವವು ಬೆಳೆಯತೊಡಗಿದಂತೆಯೇ, 2014ರ ಪ್ರಧಾನಿ ಅಭ್ಯರ್ಥಿಯಾಗುವ ಮಾತುಗಳು ಕೇಳಿಬರುತ್ತಿರುವಂತೆಯೇ, 2012ರಲ್ಲೇ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಎನ್ಡಿಎ ಅಭ್ಯರ್ಥಿ ಪಿ.ಎ.ಸಂಗ್ಮಾ ಅವರೆದುರು ಗೆದ್ದು ರಾಷ್ಟ್ರಪತಿ ಗಾದಿಗೇರಿದರು ಪ್ರಣಬ್.
ಪ್ರಣಬ್ ಅವರು ಪಕ್ಷದೊಳಗಿನ ನಿಜ ಕಾಂಗ್ರೆಸಿಗರಿಗೆ ಆಪ್ತರಾಗಿದ್ದಷ್ಟೇ ಅಲ್ಲದೆ, ಪಕ್ಷದ ಹೊರಗೆ ಪ್ರತಿಪಕ್ಷಗಳ ಗೌರವಕ್ಕೂ ಪಾತ್ರರಾಗಿದ್ದರು. ಯುಪಿಎ-2 ಸರ್ಕಾರವು ಅಮೆರಿಕದೊಂದಿಗೆ ಪರಮಾಣು ವಿತರಣಾ ಒಪ್ಪಂದ ಮಾಡಿಕೊಂಡ ಸಂದರ್ಭದಲ್ಲಿ ಅವಿಶ್ವಾಸ ನಿರ್ಣಯವನ್ನು ಸೋಲಿಸಿ, ಸರ್ಕಾರ ಉಳಿಸುವಲ್ಲಿ ಪ್ರಣಬ್ ಅವರ ಮಾತುಕತೆಯ ಚಾಕಚಕ್ಯತೆ ಪ್ರಧಾನ ಪಾತ್ರ ವಹಿಸಿತ್ತು. ಉತ್ತಮ ಆಡಳಿತಗಾರ ಪ್ರಶಸ್ತಿಯಲ್ಲದೆ, ಪದ್ಮವಿಭೂಷಣ ಪುರಸ್ಕಾರಕ್ಕೂ ಅವರು ಭಾಜನರಾಗಿದ್ದರು.
ಅವರಿಂದಾಗಿಯೇ ಕಾಂಗ್ರೆಸ್ ಮಾತ್ರವೇ ಅಲ್ಲ, ದೇಶವೂ ಹಲವಾರು ಸಂಕಷ್ಟಗಳಿಂದ ಪಾರಾಗಿದ್ದು ಈಗ ಇತಿಹಾಸ ಸೇರಿದ ವಿಷಯ. ಪ್ರಣಬ್ ತೋರಿದ ರಾಜಕೀಯ ಮುತ್ಸದ್ಧಿತನ ಮಾತ್ರ ಆಂತರಿಕವಾಗಿಯೇ ಉಳಿಯಿತು. ಅವರು ಮಾಡಿದ ಮೌನಸಾಧನೆಗಳಿಗೆ ಪ್ರಚಾರ ದೊರೆಯದಂತಾದ ಕಾರಣದಿಂದಾಗಿ, ಅವರ ಪೂರ್ಣಪ್ರಮಾಣದ ಮೇರು ವ್ಯಕ್ತಿತ್ವ ಇನ್ನೂ ಬೆಳಕು ಕಾಣಬೇಕಿದೆ.
ನಿಗರ್ವಿ, ನ್ಯಾಯಯುತ ಆಳ್ವಿಕೆ ನೀಡಿದ ಚಾಣಾಕ್ಷ ಪ್ರಣಬ್ಗಾ, ಅವರಿಗಿದೋ ಶ್ರದ್ಧಾಂಜಲಿ.

Average Rating