ಭಾರತೀಯರ ಹೃದಯ ಮಂದಿರದೊಳಗಿರುವ ಶ್ರೀರಾಮನಿಗೆ ಭಾರತದಲ್ಲಿ ಕೊನೆಗೂ ಒಂದು ಭೌತಿಕ ಮಂದಿರ ನಿರ್ಮಾಣಕ್ಕೆ ಇಂದು ಅಡಿಗಲ್ಲು ಹಾಕಿದ ದಿನ ವಿಶೇಷವಿದು. ಐತಿಹಾಸಿಕವೂ ಹೌದು. ನಮ್ಮದೇ ದೇಶದಲ್ಲಿ, ನಮ್ಮದೇ ಜಾಗದಲ್ಲಿ ನಮ್ಮದೇ ದೇವಮಂದಿರ ನಿರ್ಮಾಣ ಮಾಡಲು ಪಡಬೇಕಾದ ಪಾಡು ಇದೆಯಲ್ಲ! ಅದು ಅಧಿಕಾರಕ್ಕಾಗಿ, ಓಟಿಗಾಗಿಯೇ ಬಾಳುತ್ತಿದ್ದ ರಾಜಕಾರಣಿಗಳ ಅಕ್ಷಮ್ಯ ಅಪರಾಧದ ಒಂದು ಕೈ ಕನ್ನಡಿಯಷ್ಟೇ.
ರಾಮ ರಾಜ್ಯವಾಗಬೇಕಿದ್ದ ದೇಶದಲ್ಲಿ, ವಾಲ್ಮೀಕಿಯನ್ನು ಪೂಜಿಸುವ ನಾಡಿನಲ್ಲಿ, ಸಿಂಪ್ಲೀ ಸಿಂಪ್ಲೀ ರಾಜಕೀಯಕ್ಕಾಗಿ ರಾಮನನ್ನು ನಿರಾಕರಿಸಿದ್ದರಿಂದಾಗಿಯೇ ಸಮಸ್ಯೆಯೇ ಅಲ್ಲದ ವಿಷಯವೊಂದನ್ನು ಸಮಸ್ಯೆಯಾಗಿ ಮಾಡಲಾಗಿತ್ತು. ಭಾರತ ದೇಶದಲ್ಲಿ ಅಯೋಧ್ಯಾಪುರಿಯಲ್ಲಿ ರಾಮನಿಗಿಲ್ಲದ ಮಂದಿರ ಇದ್ದರೂ ಏನು ಪ್ರಯೋಜನ?
ನಮ್ಮ ಆಚರಣೆಗಳೇ ನಮ್ಮ ಧರ್ಮ. ಆದರೆ ಧರ್ಮದ ಕಾರಣಕ್ಕಾಗಿ ಕೋಮು ಬಣ್ಣ ಹಚ್ಚಿದರು, ರಾಮನನ್ನು ಪೂಜಿಸುವವರು ಕೋಮುವಾದಿಗಳು ಎಂದೆಲ್ಲ ಬಿಂಬಿಸಲಾಯಿತು. ಶ್ರೀರಾಮ ಕ್ಷಾತ್ರ ಕುಲದವನು, ವಾಲ್ಮೀಕಿ ವ್ಯಾಧ ಕುಲದವನು. ಆದರೆ ಅವರ ಸಂಸ್ಕಾರಕ್ಕಾಗಿ ಅವರೆಲ್ಲರೂ ದೈವತ್ವಕ್ಕೇರಲಿಲ್ಲವೇ? ನಾವು ಬಡಿದಾಡಿದೆವು, ಅರ್ಥವಿಲ್ಲದ ಮೇಲ್ಜಾತಿ-ಕೆಳಜಾತಿಗಳೆಂಬ ಜಾತಿಭೇದ ಮಾಡುತ್ತಲೇ ಹೊಡೆದಾಡಿದೆವು. ರಾಮ ಸೇತುವನ್ನೂ ವಿರೋಧಿಸಿದೆವು. ಇದೇ ಜಾತ್ಯತೀತತೆ ಅಂತ ವ್ಯಾಖ್ಯಾನಿಸಿದೆವು.
ಆದರೆ, ಈಗಿನ ಪರಿಸ್ಥಿತಿ ಹೀಗಿಲ್ಲ. ರಾಮನ ಅಸ್ತಿತ್ವವನ್ನು ಪ್ರಶ್ನಿಸಿದವರಿಗೆ ಜನರೇ ಪಾಠ ಕಲಿಸಿದ್ದಾರೆ. ಈ ಮನಸ್ಥಿತಿಯವರ ಅನುಸಾರವೇ ಜಾತಿ ಹಿಡಿದು ಮಾತನಾಡುವುದಾದರೆ, ಕ್ಷತ್ರಿಯ ರಾಜನೊಬ್ಬ ಪಿತೃವಾಕ್ಯ ಪರಿಪಾಲಕನಾಗಿ, ಬ್ರಾಹ್ಮಣ್ಯಕ್ಕೆ ವಿರುದ್ಧವಾಗಿ ವರ್ತಿಸಿದ, ಪರಪೀಡನೆಯನ್ನೇ ಗುರಿಯಾಗಿರಿಸಿಕೊಂಡಿದ್ದ ಬ್ರಾಹ್ಮಣ ರಾಜ ರಾವಣನನ್ನು ವಧಿಸಿದ. ಈ ಕಥನವನ್ನು ವಾಲ್ಮೀಕಿ ಎಂಬ ವ್ಯಾಧ ಸಮುದಾಯದ ವ್ಯಕ್ತಿ ಲೋಕಮುಖಕ್ಕೆ ರಾಮಾಯಣ ರೂಪದಲ್ಲಿ ಸಾರಿದರು. ಅಲ್ಲಿಗೆ ಕ್ಷತ್ರಿಯ, ಶೂದ್ರರು ದೈವತ್ವಕ್ಕೇರಿದರೆ, ಲೋಕಕಂಟಕ ರಾಜನಾಗಿ ಮೆರೆಯಲು ಹೊರಟ ಬ್ರಾಹ್ಮಣನು ವಧಿತನಾದ. ಆದರೂ, ಈಗಲೂ ಹೀಗಳಿಕೆಗೆ ಕಾರಣವಾಗಿರುವ ಬ್ರಾಹ್ಮಣರು, ಜೊತೆಗೆ ಎಲ್ಲ ವರ್ಗದವರೂ ಶ್ರೀರಾಮನನ್ನು, ವಾಲ್ಮೀಕಿಯನ್ನು, ಯಾದವ ಕುಲದವನಾದ ಶ್ರೀಕೃಷ್ಣನನ್ನು ಪೂಜಿಸುತ್ತಾರೆ. ಈ ಪರಿಯಾಗಿ ಸಂಸ್ಕಾರಕ್ಕೆ ಗೌರವವನ್ನು ಕೊಡುವ ಬುದ್ಧಿಯನ್ನು, ಮನಸ್ಥಿತಿಯನ್ನು ಕೊಟ್ಟಿದ್ದು ಈ ಭರತ ಭೂಮಿಯ ಮಣ್ಣಿನ ಗುಣ. ಆದರೆ, ಈ ಗುಣವು ಎಲ್ಲರಿಗೂ ಬರಬೇಕಲ್ಲ!
ಪ್ರಜಾಪ್ರಭುತ್ವವಾಗಿ ಮೂಡಿಬಂದ ಭಾರತದಲ್ಲಿ ನಡೆದ ದುರಾಡಳಿತದಿಂದಾಗಿಯೇ ಸಮಸ್ಯೆಯೇ ಅಲ್ಲದ ರಾಮ ಮಂದಿರವು ಸಮಸ್ಯೆಯಾಗಿ ಬೆಳೆದಿತ್ತಷ್ಟೇ. ರಾಮ ಮಂದಿರ ವಿಚಾರವಾಗಿ ಆಂದೋಲನವನ್ನೇ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಸಿದರು ನಮ್ಮನ್ನು ಆಳಿದವರು. ತತ್ಪರಿಣಾಮ, ಒಂದಿಷ್ಟು ಸಹೋದರ ಭಾವದಿಂದ ಇದ್ದ ಸಮಾಜ ಒಡೆಯಿತು. ಒಡೆದು ಆಳುವ ನೀತಿ – ಇದು ಬ್ರಿಟಿಷರ ಕೊಡುಗೆ. ಅಯೋಧ್ಯೆಯಲ್ಲಿ ರಾಮ ಮಂದಿರ ಇರಬೇಕಾಗಿರುವುದು ಎಷ್ಟು ವಿವಾದಾತೀತವೋ, ಈ ವಾದವನ್ನು ರಾಮನ ವಿರೋಧಿಗಳೂ ಮನದೊಳಗೇ ಒಪ್ಪುತ್ತಿದ್ದರು ಎಂಬುದು ಕೂಡ ಅಷ್ಟೇ ಸತ್ಯ. ಆದರೂ ವೈರುಧ್ಯದ ಹೋರಾಟ, ತಾವು ನಂಬಿದ ಪಕ್ಷದ ಸಿದ್ಧಾಂತಕ್ಕೆ ಬದ್ಧವಾಗಿರುವುದೇ ಜೀವಾಳ. ಇಲ್ಲದಿದ್ದರೆ ಅಧಿಕಾರ ತಪ್ಪುತ್ತದೆ!
ಕೊನೆಗೂ ಸುಪ್ರೀಂ ಕೋರ್ಟೇ ಗಟ್ಟಿಯಾಗಿ ನಿಂತು, ಉತ್ಖನನ ನಡೆಸಿ, ಅಲ್ಲಿ ಹಿಂದೆಯೂ ರಾಮ ಮಂದಿರವಿತ್ತು ಎಂಬುದನ್ನು ನೆನಪಿಸಿ, ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕಾಗಿ ಬಂದಿತು.
ತತ್ಪರಿಣಾಮವಾಗಿ ಆಗಸ್ಟ್ 5ರ ಶುಭದಿನವಾದ ಈ ಬುಧವಾರ, ಶ್ರೀರಾಮ ಲಲ್ಲಾನಿಗೊಂದು ಭವ್ಯ ಮಂದಿರದ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯುತ್ತಿದೆ. ಕೋಟ್ಯಂತರ ಭಾರತೀಯರು ಕೊರೊನಾ ವೈರಸ್ ಹಾವಳಿಯಿಂದಾಗಿ ಮನೆಯೊಳಗಿದ್ದುಕೊಂಡೇ ಸಂಭ್ರಮಿಸುತ್ತಿದ್ದಾರೆ. ರಾಮನನ್ನು ವಿರೋಧಿಸುತ್ತಲೇ ಬಂದ ಹಿರಿಯ ರಾಜಕಾರಣಿಗಳಿಗೂ ತಾವು ಮಾಡಿದ ತಪ್ಪಿನ ಅನಿವಾರ್ಯವಾಗಿದೆಯೋ ಅಥವಾ ಅದರಲ್ಲೂ ರಾಜಕೀಯವಿದೆಯೋ… ಅಂತೂ ದಿಗ್ವಿಜಯ್ ಸಿಂಗ್, ಕಮಲ್ನಾಥ್, ರಾಹುಲ್ ಗಾಂಧಿ ಮುಂತಾದವರೇ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದು ಭಾರತೀಯರ ಬಹುಕಾಲದ ಕನಸು ಎಂಬ ಹೇಳಿಕೆ ನೀಡತೊಡಗಿದ್ದಾರೆ.
ಭಾರತದ ನೆಲದಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂದು ನಮ್ಮವರು ಹೋರಾಟ ಮಾಡಲೇಬೇಕಾದಾಗ, ಇದಕ್ಕೆ ದುಷ್ಟ ಶಕ್ತಿಗಳ ವಿರೋಧ ಎದುರಾಯಿತು. ಇದು ಉಗ್ರ ರೂಪ ತಳೆಯಿತು. ಪಾಕಿಸ್ತಾನದಂತಹಾ ಕುಖ್ಯಾತ ದೇಶಗಳು ಉಗ್ರಗಾಮಿಗಳ ಮೂಲಕ ಭಾರತದಾದ್ಯಂತ ಹಿಂಸಾಚಾರವನ್ನು ಹುಟ್ಟು ಹಾಕಿ, ಕೋಮು ಸಂಘರ್ಷವಾಗುವಂತೆ ನೋಡಿಕೊಂಡವು. ಇದಕ್ಕೆ ಇಲ್ಲಿನ ರಾಜಕಾರಣಿಗಳು ತಮಗರಿವಿಲ್ಲದೆಯೇ ಸೊಪ್ಪು ಹಾಕಿ, ಉಗ್ರಗಾಮಿಗಳು ಬೀಸಿದ ಬಲೆಯೊಳಗೆ ಬಿದ್ದರು. ಸಾಮರಸ್ಯದ ಮಂತ್ರ ಜಪಿಸುತ್ತಿದ್ದ ಭಾರತವು ಒಳಗಿಂದೊಳಗೇ ಬಿರುಕು ಬಿಡತೊಡಗಿತು. ಭ್ರಾತೃತ್ವ ಇರಬೇಕಾದ ನಾಡಿನಲ್ಲಿ ಕೋಮು ವಿದ್ವೇಷದ ಹೆಸರಿನಲ್ಲಿ ನಡೆದ ಭಯೋತ್ಪಾದನೆಯ ವೈರಸ್ ಹರಡಿತು. ಈ ಕೊರೊನಾ ವೈರಸ್ ಏನೂ ಅಲ್ಲ, ಕಳೆದ ನಾಲ್ಕು ದಶಕಗಳಿಂದ ಹರಡಿದ ಈ ಕೋಮು ದ್ವೇಷದ ವೈರಸ್ಸೇ ದೇಶವನ್ನು ಅಲುಗಾಡಿಸಿದೆ ಎಂಬ ಅರಿವು ಇನ್ನಾದರೂ ನಮಗೆ ಆಗಬೇಕಿದೆ. ಭರತ ಖಂಡದಲ್ಲಿ ಶಾಂತಿ ಸ್ಥಾಪನೆಯಾಗಬೇಕಿದ್ದರೆ ಭಾರತವನ್ನು, ಭಾರತೀಯತೆಯನ್ನು ಪ್ರೀತಿಸಬೇಕು, ನಮ್ಮ ಸಂಸ್ಕೃತಿ, ಸಂಪ್ರದಾಯ, ಪರಂಪರೆಯನ್ನು ಗೌರವಿಸಬೇಕು, ಈ ಮೂಲಕ ಭಾರತೀಯರಾಗಿರಬೇಕು ಎಂಬುದು ಮನವರಿಕೆಯಾದರೆ ಸಾಕು. ಪಾತಕಿಸ್ತಾನವೇ ಆಗಿಬಿಟ್ಟಿರುವ ಪಾಕಿಸ್ತಾನದ ಉಗ್ರಗಾಮಿಗಳ ಮನಸ್ಥಿತಿಯು ನಮ್ಮ ದೇಶದೊಳಗಿನ ಪ್ರಜೆಗಳ ಮನಸ್ಸಿನಲ್ಲಿ ವೈರಸ್ನಂತೆ ಹರಡದಂತೆ ತಡೆಯಬಹುದು. ಇಲ್ಲಿ ಹಿಂದೂ-ಮುಸ್ಲಿಂ ಎಂಬ ಭಾವನೆಗಿಂತಲೂ ಪರಸ್ಪರರ ಧರ್ಮವನ್ನು, ನಂಬಿಕೆಯನ್ನು ಗೌರವಿಸಿ ಶಾಂತಿಯಿಂದ ಬಾಳಬೇಕಾದ ಮನಸ್ಥಿತಿಯೊಂದು ಇಂದಿನ ಅಗತ್ಯ.
ಗೋವಾದ ಮಹಾಬಲ ಭಟ್ ಅವರು ಈ ಸಂದರ್ಭ ಬರೆದಿರುವ ನುಡಿ ಇಲ್ಲಿದೆ. (ವಾಟ್ಸ್ಆ್ಯಪ್ ಗ್ರೂಪಿನಿಂದ)
ಹೃದಯವೆಂಬುದಯೋಧ್ಯೆಯಾತ್ಮನೆಂಬವ ರಾಮ|
ಷಡ್ವೈರಿ ರಾಕ್ಷಸರಿಗಿದಭೇದ್ಯ ಕೋಟೆ||
ಮನವು ಸೀತೆಯ ತೆರದಿ ರಾಮಧ್ಯಾನದೊಳಿರೆ
ಮಂದಿರವು ನಮ್ಮ ಮನೆ – ರಾಮ ರಾಮ||

Average Rating