ಒಂದೊಂದು ಜೀವಕ್ಕೂ ಜೀವನಕ್ಕೂ ಅದರದ್ದೇ ಆದ ಮೌಲ್ಯ ಮತ್ತು ಗೌರವವಿದೆ. ಇವತ್ತಿನ ದಿನಮಾನದಲ್ಲಿ ಮನೆಯ ಜಾನುವಾರುಗಳಿಗಾದರೂ ಗೌರವ ಸಿಕ್ಕೀತು, ಹೆಣ್ಣಿಗಲ್ಲ ಎಂಬ ಪರಿಸ್ಥಿತಿಗೆ ಬಂದು ನಿಂತಿದೆ ನಮ್ಮ ಸಮಾಜದ ಒಂದು ವರ್ಗ.
ಮೊದಲು ಶೋಷಣೆ, ಅತ್ಯಾಚಾರವೆಂಬ ಅಸ್ತ್ರ ಕೇವಲ ರಕ್ಕಸ ವರ್ಗದವರ ತೀಟೆ ತೀರಿಸಿಕೊಳ್ಳುವ ಸಾಧನವಾಗಿದ್ದರೆ ಇಂದು ಅದೇ ಕುಕೃತ್ಯ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಲಾಗುತ್ತಿರುವುದನ್ನು ನಾವಿಂದು ಕಣ್ಣೆದುರೇ ಕಾಣುತ್ತಿದ್ದೇವೆ. ಇದರ ಜೊತೆಗೆ, ಸೆಲೆಕ್ಟಿವ್ ಅಮ್ನೇಷಿಯಾ ಕೂಡ. ಇದರಿಂದ ನ್ಯಾಯ ಸಿಗಬೇಕಾದವರಿಗೆ ನ್ಯಾಯ ಸಿಗುವುದಿಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ.
ಒಂದು ದೃಷ್ಟಿಯಿಂದ ನೋಡಿದರೆ ಬರಿಯ ರಾಜನ ಬದಲಾವಣೆಯಿಂದ ದೇಶದ ಉದ್ಧಾರ ಸಾಧ್ಯವಿಲ್ಲ. ಮೇಲಾಗಿ ಪ್ರಜೆಗಳೂ, ಅವರ ಮನಸ್ಥಿತಿಯೂ ಬದಲಾಗಬೇಕಾದ್ದು ಅನಿವಾರ್ಯ.
ಪ್ರಧಾನಿ ಶ್ರೀ ನರೇಂದ್ರ ದಾಮೋದರದಾಸ ಮೋದಿಯವರು ದೇಶದ ಚುಕ್ಕಾಣಿ ಹಿಡಿದು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವುದನ್ನು ನೋಡಲಾರದೆ ಒಳಗೊಳಗೇ ಸುಟ್ಟು, ಮನಸ್ಸನ್ನೂ ಕರಕಲಾಗಿಸಿಕೊಳ್ಳುತ್ತಿರುವವರ ಸಂಖ್ಯೆ ನೋಡಿದರೆ ಅಳುವುದೋ ನಗುವುದೋ ತಿಳಿಯುತ್ತಿಲ್ಲ. ಸತ್ಯದ ದಾರಿ ತುಳಿಯಲು ತಿಳಿಯದವರು ಷಡ್ಯಂತ್ರದ ಹಾದಿಯಲ್ಲಿ ನಡೆದು ಚುನಾವಣೆ ಸಮೀಪಕ್ಕೆ ಬಂದಾಗಲಷ್ಟೇ ಚಿಗಿತುಕೊಂಡು, ಮೋದಿಯವರ ತೇಜೋವಧೆ ಮಾಡಲು ಕೀಳು ಮಟ್ಟದ ಪ್ರಯತ್ನ ಮಾಡುವುದನ್ನು ನೋಡಿದರೆ ಸಾಕು, ನಮ್ಮ ದೇಶ ಹೇಗೆ ಪರಕೀಯರ ವಶವಾಯ್ತು ಅನ್ನುವುದು ಅರಿವಿಗೆ ಬರುತ್ತದೆ.
ಇಂತಹ ಕ್ರೂರತೆಗೆ ಸ್ಪಷ್ಟ ಕನ್ನಡಿ ಎಂದರೆ ಮೋದಿ-ಪ್ರಿಯರನ್ನು ಸಾಮಾಜಿಕ ಜಾಲತಾಣದಲ್ಲಿ ವಾಚಾಮಗೋಚರವಾಗಿ ಬೈದಾಡುತ್ತಾ ತಮ್ಮ ಸಂಸ್ಕಾರವನ್ನು ಬಯಲು ಮಾಡುತ್ತಿರುವ ಅಧಮರು. ಇವರ ನಡೆ ನುಡಿಗಳಲ್ಲಿ ದೇಶಭಕ್ತಿಯ ಸಣ್ಣ ಕುರುಹೂ ಇರುವುದಿಲ್ಲ, ಆದರೆ ಹೋರಾಟಗಾರನೋ, ಕಾರ್ಯಕರ್ತನೋ ಎಂಬ ಹಣೆಪಟ್ಟಿ ಹಚ್ಚಿಕೊಳ್ಳುತ್ತಾರೆ!
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಆಗ್ರಹಿಸುವುದರಲ್ಲಿಯೂ ಜಾತಿ ಭೇದ ಹಾಗೂ ಅಸಮಾನತೆ ಎದ್ದು ಕಾಣುತ್ತಿದೆ. ಇದು ರಾಜಕೀಯದ ಪರಮಾವಧಿ. ಹತ್ರಾಸ್ ಘಟನೆ ಒಂದು ತಿರುಚಲಾದ ಸುದ್ದಿ ಎಂಬುದು ಹೆಚ್ಚಿನವರಿಗೆ ಗೊತ್ತು. ಎರಡು ಕುಟುಂಬಗಳ ನಡುವೆ ನಡೆದ ಒಳ ಜಗಳದಲ್ಲಿ ಯುವತಿಯ ಮೇಲೆ ಹಲ್ಲೆಯಾಗುತ್ತದೆ. ಹೀಗಂತ ಆಕೆಯೇ ತಿಳಿಸಿದ್ದಾಳೆ. ಈ ಬಗ್ಗೆ ಅನಿಸಿಕೆ ಹೇಳಿದ ಬಿಜೆಪಿ ಬೆಂಬಲಿಗ ಮಹಿಳೆಯರನ್ನು ಅತೀ ಅಸಹ್ಯಕರವಾದ ಭಾಷೆಯಲ್ಲಿ ನಿಂದಿಸಲಾಯಿತು.
ಬಿಜೆಪಿ ಕಾರ್ಯಕರ್ತರ ಅದರಲ್ಲೂ ಮಹಿಳೆಯರ ತೇಜೋವಧೆಯದಾಗಲೂ ಎಡಪಂಥೀಯರಿಗೆ ತಮ್ಮ ತಪ್ಪಿನ ಅರಿವಾಗುತ್ತಿಲ್ಲವೆಂಬುದು ಮಹಿಳೆಯ ಮೇಲಿರುವ ಅವರ ಗೌರವದ ದ್ಯೋತಕ. ಈ ರೀತಿಯಾಗಿ ವ್ಯಕ್ತಿ ನಿಂದನೆ ಮಾಡುತ್ತಾ, ಸತ್ಯ ಮರೆ ಮಾಚುತ್ತಾ ಇರುವ ಇವರು ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ತಮ್ಮನ್ನು ತಾವೇ ಬಲಿಯಾಗಿಸಲು ತಯಾರಾಗಿದ್ದಾರೆ ಅಂತನೇ ತಿಳಿದುಕೊಳ್ಳಬಹುದು. ಎಲ್ಲರೂ ವಿದ್ಯಾವಂತರಾಗಿರುವ ಈ ಕಾಲಮಾನದಲ್ಲಿ ಇಂತಹಾ ನಕಾರಾತ್ಮಕ ಧೋರಣೆ ಹಾಗೂ cheap tricks ಗಳಿಂದಾಗಿ, ಗೆಲ್ಲುವ ಸಾಧ್ಯತೆಯಿರುವ ಚುನಾವಣೆಯಲ್ಲೂ ಅವರು ಸೋಲಿನ ಚಪ್ಪಡಿಯನ್ನು ತಾವೇ ಎಳೆದುಕೊಳ್ಳುತ್ತಿದ್ದಾರೆ.
ಗಾಂಧೀಜಿ ಸತ್ಯಕ್ಕಾಗಿ ಹೋರಾಡಿದರು, ಸತ್ಯಾಗ್ರಹ ಮಾಡಿದರು ಎಂಬುದನ್ನು ಕೇಳಿದ್ದೇವೆ. ಆದರೆ ಈಗಿನ ರಾಜಕೀಯದ ಪರಿಸ್ಥಿತಿ ಏನಾಗಿದೆ? ರಾಜಕೀಯಕ್ಕಾಗಿ ಸತ್ಯವನ್ನೇ ಮುಚ್ಚಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಮಾತ್ರವೇ ಅತ್ಯಾಚಾರ ನಡೆಯುತ್ತಿರುವಂತೆ ಬಿಂಬಿಸಲಾಗುತ್ತಿದೆ. ದೇಶಾದ್ಯಂತ ವಿವಿಧೆಡೆ ನಿಷ್ಪಾಪಿ ಹೆಣ್ಣು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳ ಬಗ್ಗೆ ಸೊಲ್ಲೆತ್ತುವುದಿಲ್ಲ. ತಮ್ಮದೇ ಆಡಳಿತವಿರುವ ರಾಜ್ಯಗಳಲ್ಲಾಗಲೀ, ಎಡಪಂಥೀಯರ ಅಥವಾ ಮೈತ್ರಿ ಪಕ್ಷದ ಆಡಳಿತದ ರಾಜ್ಯಗಳಲ್ಲಾಗಲೀ ನಡೆಯುತ್ತಿರುವ ಮಹಿಳಾ ದೌರ್ಜನ್ಯಗಳ ಬಗ್ಗೆ ಗಪ್-ಚುಪ್. ಆದರೆ ಬಿಜೆಪಿ ಆಳ್ವಿಕೆಯ ರಾಜ್ಯದಲ್ಲಾದರೆ ಮಾತ್ರ ಅದು ಅತ್ಯಾಚಾರ ಎಂಬ ಸೆಲೆಕ್ಟಿವ್ ಪ್ರತಿಭಟನೆ. ಯಾಕಾಗಿ?
ಬೇರೆ ರಾಜ್ಯಗಳಲ್ಲಿರೋರು ಕೂಡ ಮಹಿಳೆಯರೇ ಅಲ್ಲವೇ? ಅವರಿಗೆ ಯಾಕಾಗಿ ರಾಜಕೀಯ ಅಸ್ಪೃಶ್ಯತೆ? ಅತ್ಯಾಚಾರ ಮಾಡುವ ಕ್ಷುದ್ರ ಜೀವಿಗಳು ದಲಿತರು, ಮೇಲ್ವರ್ಗದವರು ಅಂತೆಲ್ಲ ನೋಡುತ್ತಾರೆಯೇ? ಇಲ್ಲವಲ್ಲ! ಬಲಿಯಾಗುತ್ತಿರುವುದು ಒಂದು ಮುಗ್ಧ ಹೆಣ್ಣಲ್ಲವೇ? ಸ್ತ್ರೀಶೋಷಣೆ, ದೌರ್ಜನ್ಯ – ಇವೆಲ್ಲವನ್ನೂ ರಾಜಕೀಯದ ತಕ್ಕಡಿಯಲ್ಲಿಟ್ಟು, ಒಬ್ಬರ ಪರವಾಗಿ ಮಾತ್ರ ಪ್ರತಿಭಟನೆ, ಮತ್ತೊಬ್ಬರ ಬಗ್ಗೆ ಸೊಲ್ಲೆತ್ತುವುದಿಲ್ಲ. ಇದು ಯಾಕೆ?
ಯಾವುದೇ ರಾಜ್ಯದಲ್ಲಿ ಚುನಾವಣೆ ಬರುತ್ತಿದೆ ಎಂದಾದ ತಕ್ಷಣ ಇಂಥದ್ದೊಂದು ಕ್ಷುದ್ರ ರಾಜಕೀಯಕ್ಕೆ ಅಲ್ಲಿ ವೇದಿಕೆ ರಚಿಸುವವರು ಸಾಕಷ್ಟು ಮಂದಿ ಇದ್ದಾರೆ. ಚುನಾವಣೆಗಳು ಬಂದಾಗ, ಸುಳ್ಳುಗಳನ್ನು ಪೋಣಿಸುತ್ತಲೇ ವಾಚಾಮಗೋಚರವಾಗಿ ದೇಶದ ಪ್ರಧಾನಿಯನ್ನೂ ಬಿಡದೆ ನಿಂದಿಸುವ ಈ ಕುಟುಂಬ ಮತ್ತು ಅದರ ಅನುಯಾಯಿಗಳು, ಎಲ್ಲ ರೀತಿಯ ಡ್ರಾಮಾಗಳನ್ನೂ ಶುರುಹಚ್ಚಿಕೊಳ್ಳುತ್ತಾರೆ. ಹಲವು ನ್ಯಾಯಾಲಯಗಳಲ್ಲಿ ಹಲವು ಮೊಕದ್ದಮೆಗಳು ಹಾಗೂ ಒಂದಕ್ಕೂ ಸಮರ್ಪಕ ಉತ್ತರವಿಲ್ಲದ ವಾದಗಳಿಗಷ್ಟೆ ಈ ‘ನಮ್ಮ ಭವಿಷ್ಯದ ಪ್ರಧಾನ ಮಂತ್ರಿ’ ಅಂತ ಅನುಯಾಯಿಗಳಿಂದ ಕರೆಸಿಕೊಳ್ಳುತ್ತಿರುವ ರಾಹುಲ್ ಗಾಂಧಿಯ ಪರಿಶ್ರಮ ಸೀಮಿತವಾಯಿತೇ? ಎಂಬುದು ಕಾಡುವ ಪ್ರಶ್ನೆ.
ಒಬ್ಬ ನಾಯಕನಿಗಿರಬೇಕಾದ ಯಾವ ಲಕ್ಷಣವಿದೆ ರಾಹುಲ್ ಗಾಂಧಿಗೆ ಎಂದರೆ ಕಾಂಗ್ರೆಸ್ ನಾಯಕರಲ್ಲಿ ಯಾರಲ್ಲೂ ನಿಖರವಾದ, ಸ್ಪಷ್ಟವಾದ ಉತ್ತರವಿರುವುದಿಲ್ಲ. ತಮ್ಮ ಬಾಲಿಶ ವರ್ತನೆಗಳು, ಹೇಳಿಕೆಗಳ ಮೂಲಕ ಜಗತ್ತಿನೆದುರು ಪದೇ ಪದೇ ಬಟಾ ಬಯಲಾಗುತ್ತಿರುವ ಈ ನಾಯಕನಿಗೆ ಪಂಚಾಯತಿ ಅಧ್ಯಕ್ಷನಾಗಿಯೋ, ಮುಖ್ಯಮಂತ್ರಿಯಾಗಿಯೋ, ಶಾಸಕನೋ ಆಗಿ ಕೆಲಸ ಮಾಡಿದ ಅನುಭವವೇ ಇಲ್ಲ. ಹೀಗಿರುವಾಗ ರಾಜ್ಯವಾಳಿಯೇ ದೇಶವಾಳಲು ಹೊರಟಿರುವ ನರೇಂದ್ರ ಮೋದಿಗೆ ಹೇಗೆ ಸರಿಸಮವಾದ ನಾಯಕನಾಗಬಲ್ಲ ಮತ್ತು ದೇಶವನ್ನು ಹೇಗೆ ತಾನೇ ಮುನ್ನಡೆಸಬಲ್ಲ? ಆ ಪಕ್ಷದ ಅನುಭವಿಗಳು ಈ ಪ್ರಶ್ನೆಯೊಂದನ್ನು ಆಲೋಚಿಸಿ ನೋಡಬೇಕು. ಆದರೆ, ‘ಕಾಂಗ್ರೆಸಿಗೆ ಬೇರೆ ಯಾರೂ ದಿಕ್ಕಿಲ್ಲ, ರಾಹುಲ್ ಗಾಂಧಿಯೇ ಪಕ್ಷವನ್ನು ಒಗ್ಗಟ್ಟಿನಲ್ಲಿರಿಸಬಲ್ಲರು, ಹೀಗಾಗಿ ಆತನೇ ನಮಗೆ ಪ್ರಧಾನಿ’ ಎಂಬ ಧೋರಣೆ ಬದಲಾಗಬೇಕಿದೆ. ದೇಶದ ಪ್ರಗತಿಗೆ ಇಂಥ ನಾಯಕ ಎಷ್ಟು ಕೊಡುಗೆ ನೀಡಬಲ್ಲ ಎಂದು ಯೋಚಿಸಿದರೆ, ಪ್ರಶ್ನೆಗೆ ಉತ್ತರ ದೊರಕೀತು.
ಹಾಗಿದ್ದರೆ ಸಾಮಾಜಿಕ ಜಾಲತಾಣದಲ್ಲಾಗಲೀ, ನಿಜ ಜೀವನದಲ್ಲೇ ಆಗಲಿ; ಪಪ್ಪು ಎಂಬ ಅಡ್ಡ ಹೆಸರು ಯಾಕೆ ಬಂದಿತು? ದೇಶವಾಳಿದ ಮಹಾನ್ ಕುಟುಂಬದ ಕುಡಿ ರಾಹುಲ್ ಗಾಂಧಿ. ಆತನಲ್ಲಿರಬೇಕಾದ ನಾಯಕತ್ವ ಗುಣಗಳು ದೇಶದ ಉದ್ಧಾರಕ್ಕೆ ಪೂರಕವಾಗಿರಬೇಕಿತ್ತು. ಆದರೆ, ವಿದೇಶದಲ್ಲಿ ಹೋಗಿ ಭಾರತವನ್ನು ಹಳಿಯುವುದು, ಚುನಾವಣೆ ಬಂದಾಗಲೆಲ್ಲಾ ಸುಳ್ಳುಗಳ ಸರಮಾಲೆ ಪೋಣಿಸುವುದು, ದೇಶದ ಕಾನೂನು ಉಲ್ಲಂಘಿಸುವುದು – ಇವುಗಳೆಲ್ಲ ನಾಯಕತ್ವದ ಯಾವ ಗುಣಗಳು? ಹತ್ರಾಸ್ ಪ್ರಕ್ಷುಬ್ಧವಾಗಿದೆ, ಕಾನೂನು ಸುವ್ಯವಸ್ಥೆ ಕಾಪಾಡಬೇಕಿದೆ, ಇದಕ್ಕಾಗಿ ರಾಜಕೀಯ ಕಾರಣಕ್ಕಾಗಿ ಹತ್ರಾಸ್‌ಗೆ ಹೋಗಬೇಡಿ ಅಂತ ತಡೆದರೂ, ಮತ್ತೆ ಹೋಗುವೆ ಎಂಬ ಹಠ ಯಾಕಾಗಿ? ಈ ನೆಲದ ಕಾನೂನಿನ ಮೇಲೆ ತನಗೆ ಗೌರವ ಎಷ್ಟಿದೆ ಎಂಬುದನ್ನು ಸಾಬೀತುಪಡಿಸುವುದಕ್ಕಾಗಿಯೇ?
ಇದು ಹೆಣ್ಣಿಗೆ ರಕ್ಷಣೆ ನೀಡುವ ವಿಧಾನ ಅಲ್ಲ. ಆಕೆ ಆ ಮೇಲ್ವರ್ಗ, ಕೆಳವರ್ಗ, ಆ ಜಾತಿ, ಈ ಜಾತಿ, ಈ ಪಕ್ಷದ ಆಳ್ವಿಕೆಯಿರುವ ರಾಜ್ಯದಲ್ಲಿ ಹೀಗಾಗಿದೆ, ಆ ರಾಜಕೀಯ ಪಕ್ಷದವಳು, ಸರ್ಕಾರದ ವಿರುದ್ಧ ಹೋರಾಡಲು ಅಸ್ತ್ರ ಸಿಕ್ಕಿತು – ಎಂಬೆಲ್ಲ ಪಕ್ಕಾ ಕುತಂತ್ರಿ ರಾಜಕೀಯ ದೃಷ್ಟಿಕೋನ ಬಿಡಿ, ಹೆಣ್ಣುಗಳಿಗೆ ಹೆಣ್ಣಿಗೆ ಹೆಣ್ಣು ಎಂಬ ಕಾರಣಕ್ಕೆ ರಕ್ಷಣೆ ಕೊಡಿ, ಸ್ತ್ರೀಯರ ಮೇಲೆ ತಮಗಿರುವ ಗೌರವ ಸಾಬೀತುಪಡಿಸಿ! ನಮಗಷ್ಟೇ ಬೇಕಿರುವುದು.

Great Article very well explained facts by the Author, we as Citizens should show responsibility to understand Motive of Political Peoples to show their thrust to gain Publicity and down play their motive , more concentration need to eradicate such incidents from the society, help to get justice.
Thanks for this great article