Read Time:12 Minute, 39 Second

Congress Letter Bomb: ಕಾಂಗ್ರೆಸ್‌ಗೆ ಪತ್ರ ಬರೆದ 23 ನಾಯಕರು ಯಾರು? ಅಂಥದ್ದೇನಿತ್ತು?: ಇಲ್ಲಿದೆ ಡೀಟೇಲ್ಸ್

0 0

ಇತ್ತೀಚೆಗೆ ‘ಬಂಡಾಯ’ ನಾಯಕರೆಂದು ಹಣೆಪಟ್ಟಿ ಕಟ್ಟಲಾಗಿರುವ 23 ಮಂದಿ ಹಿರಿಯ ಕಾಂಗ್ರೆಸಿಗರು ಪಕ್ಷಾಧ್ಯಕ್ಷರಿಗೆ ಪತ್ರ ಬರೆದು, ಪಕ್ಷೀಯರಿಂದಲೇ ‘ವಿಶ್ವಾಸಘಾತುಕರು’ ಹಾಗೂ ‘ಬಿಜೆಪಿ ಜೊತೆ ಕೈ ಮಿಲಾಯಿಸಿದವರು’ ಎಂದೆಲ್ಲಾ ದೂಷಿಸಿಕೊಂಡರು. ಆದರೆ, ತಮ್ಮ ಜೀವನದ ಬಹುಭಾಗವನ್ನು ಕಾಂಗ್ರೆಸಿನಲ್ಲೇ ಕಳೆದಿದ್ದ ಹಿರಿಯ ಮುಖಂಡರು, ಪಕ್ಷದ ಪುನಶ್ಚೇತನಕ್ಕೆ ಏನೆಲ್ಲಾ ಮಾಡಬೇಕು ಎಂಬ ಅಂಶಗಳನ್ನು ಸುದೀರ್ಘ ಪತ್ರದಲ್ಲಿ ವಿವರಿಸಿದ್ದರು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ನಿಜಕ್ಕೂ ಈ ಪತ್ರದಲ್ಲೇನಿತ್ತು? ಇಲ್ಲಿದೆ ಪತ್ರದ ಮುಖ್ಯಾಂಶಗಳು.

“ಕಾಂಗ್ರೆಸಿನಲ್ಲೇ ಜೀವನ ಸವೆಸಿದ, ಕೆಳಗೆ ಸಹಿ ಮಾಡಿರುವ ನಾವುಗಳು, ಪ್ರಸಕ್ತ ರಾಜಕೀಯ ವಾತಾವರಣ ಮತ್ತು ಕಾಂಗ್ರೆಸ್ ಪಕ್ಷದೊಳಗಿನ ಸಾಂಸ್ಥಿಕ ವ್ಯವಹಾರಗಳ ಕುರಿತ ನಮ್ಮ ದೃಷ್ಟಿಕೋನಗಳನ್ನು ಮುಂದಿಡಲು ಈ ಅವಕಾಶ ಬಳಸಿಕೊಳ್ಳುತ್ತಿದ್ದೇವೆ” ಎಂಬ ಒಕ್ಕಣೆಯೊಂದಿಗೆ ಈ ಪತ್ರ ಆರಂಭವಾಗುತ್ತದೆ.

  • ಭಾರತವಿಂದು ಸ್ವಾತಂತ್ರ್ಯೋತ್ತರ ಕಾಲದಲ್ಲೇ ಅತ್ಯಂತ ಅಪಾಯಕಾರಿ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನೆದುರಿಸುತ್ತಿದೆ. ಸಂವಿಧಾನದ ಮೂಲ ಮೌಲ್ಯಗಳ ಮೇಲೆ ಪ್ರಹಾರ ನಡೆಯುತ್ತಿದೆ, ಬಿಜೆಪಿ ಮತ್ತು ಅದರ ಸಹಯೋಗಿಗಳ ಕೋಮು ಹಾಗೂ ವಿಭಜನಾ ಅಜೆಂಡಾವೇ ರಾಜಕೀಯದಲ್ಲಿ ಮೆರೆಯುತ್ತಿದೆ. ಭಯ ಮತ್ತು ಅಭದ್ರತೆಯು ದೇಶವನ್ನಾವರಿಸಿದೆ. ಸವಾಲಿಗೆ ಎದೆಯೊಡ್ಡುವ ಕರ್ತವ್ಯ ಕಾಂಗ್ರೆಸ್‌ಗಿದೆ. ಜನರ ಮೂಲಭೂತ ಹಕ್ಕುಗಳ ರಕ್ಷಕರು ನಾವು ಎಂಬುದನ್ನು ನಾವಿಂದು ಸಮರ್ಥಿಸಿಕೊಳ್ಳಬೇಕಿದೆ. ಪುನಶ್ಚೇತನಗೊಂಡಿರುವ ಮತ್ತು ಗುರಿಯಿರುವ ಕಾಂಗ್ರೆಸ್ ಪಕ್ಷದಿಂದ ಮಾತ್ರ ಇದು ಸಾಧ್ಯ.
  • ಗಂಭೀರವಾದ ಸಾಮಾಜಿಕ, ಆರ್ಥಿಕ ಬಿಕ್ಕಟ್ಟಿದೆ. ಭಾರಿ ಪ್ರಮಾಣದ ನಿರುದ್ಯೋಗ, ರೈತರ ಸಂಕಷ್ಟ ಮತ್ತು ಆರ್ಥಿಕ ಹಿಂಜರಿತವು ಜನರನ್ನು ಮೂಲೆಗಳಿಗೆ ತಳ್ಳುತ್ತಿದೆ. ಕೊರೊನಾ ಪಿಡುಗು ಕೂಡ ಇದಕ್ಕೆ ಸೇರಿಕೊಂಡಿದೆ. ಜನ ಉದ್ಯೋಗ ಕಳೆದುಕೊಳ್ಳತೊಡಗಿದ್ದಾರೆ, ಆದಾಯವಿಲ್ಲ, ವೇತನವಿಲ್ಲ. ಬಡವರು, ವಿಶೇಷವಾಗಿ ವಲಸೆ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಈ ಸವಾಲುಗಳನ್ನು ಕಾಂಗ್ರೆಸ್ ಕೈಗೆತ್ತಿಕೊಂಡು, ಸಮಗ್ರ ಪರಿಹಾರಾತ್ಮಕ ಕ್ರಮಗಳಿಗೆ ಮುಂದಾಗಬೇಕಿದೆ.
  • ಗಡಿಯ ಪರಿಸ್ಥಿತಿ, ಚೀನಾದೊಂದಿಗಿನ ಮಿಲಿಟರಿ ಸಂಘರ್ಷವೂ ಆತಂಕಕಾರಿ. ವಿದೇಶಾಂಗ ನೀತಿಯ ಬದಲಾವಣೆಯಿಂದ ಇದುವರೆಗೆ ನಾವು ಆತ್ಮೀಯವಾಗಿಯೂ ಚೆನ್ನಾಗಿಯೂ ಇದ್ದ ನೆರೆಕರೆಯವರೊಂದಿಗಿನ ಸಂಬಂಧವಿಂದು ಕೆಟ್ಟುಹೋಗಿದೆ. ಸ್ವಾತಂತ್ರ್ಯ ಆಂದೋಲನದ ನೇತೃತ್ವ ವಹಿಸಿದ್ದ ಮತ್ತು ಅತ್ಯಂತ ಹಳೆಯ ರಾಜಕೀಯ ಪಕ್ಷವಾಗಿ ಕಾಂಗ್ರೆಸ್ ಪಕ್ಷವು ವಿದೇಶಾಂಗ, ರಕ್ಷಣೆ ಮತ್ತು ರಾಷ್ಟ್ರೀಯ ಭದ್ರತೆ ವಿಷಯಗಳಲ್ಲಿ ಸಮರ್ಥ ನಿಲುವು ತೆಗೆದುಕೊಳ್ಳಬೇಕಾಗಿದೆ.
  • ರಾಜ್ಯಗಳ ಹಾಗೂ 2014, 2019ರ ಮಹಾ ಚುನಾವಣೆಗಳಲ್ಲಿ ನಾವು ಸ್ಥಿರವಾಗಿ ಕುಸಿಯುತ್ತಾ ಬಂದಿದ್ದೇವೆ. ಕಾರಣಗಳು ಹಲವು ಇವೆ ಮತ್ತು ತಕ್ಷಣವೇ ಗುರುತಿಸಬೇಕಾಗಿದೆಯಷ್ಟೇ. ಇಲ್ಲವೆಂದಾದರೆ, ಕಾಂಗ್ರೆಸ್ ಪಕ್ಷವು ರಾಜ್ಯ, ರಾಷ್ಟ್ರೀಯ ಮಟ್ಟಗಳಲ್ಲಿ ಮೂಲೆಗುಂಪಾಗಲಿದೆ
  • ಬೆಂಬಲದ ಮೂಲ ಸೆಲೆ ಬತ್ತಿಹೋಗುತ್ತಿದೆ, ವಿಶೇಷವಾಗಿ ಯುವಜನರಿಂದ ನಾವು ದೂರವಾಗುತ್ತಿರುವುದು ಆತಂಕಕಾರಿ ಸಂಗತಿ. ಕಳೆದ ಎರಡು ರಾಷ್ಟ್ರೀಯ ಚುನಾವಣೆಗಳಲ್ಲಿ ಭಾರತದಲ್ಲಿ ಹೊಸದಾಗಿ (2014ರಲ್ಲಿ 10.15 ಕೋಟಿ ಹಾಗೂ 2019ರಲ್ಲಿ 8.55 ಕೋಟಿ) 18.7 ಕೋಟಿ ಮತದಾರರು ಸೇರ್ಪಡೆಯಾಗಿದ್ದಾರೆ. ಯುವ ಜನಾಂಗದವರು ಮೋದಿ ಮತ್ತು ಬಿಜೆಪಿಗೆ ಭರ್ಜರಿಯಾಗಿ ಮತ ನೀಡಿದ್ದಾರೆ. ಬಿಜೆಪಿಯ ಮತದ ಪಾಲು 2009ರಲ್ಲಿ 7.84 ಕೋಟಿ ಇದ್ದದ್ದು 2014ರಲ್ಲಿ 17.6 ಕೋಟಿಗೂ, 2019ರಲ್ಲಿ 22.9 ಕೋಟಿಗೂ ಏರಿಕೆಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ 2009ಗಿಂತ 1.23 ಕೋಟಿ ಮತಗಳನ್ನು ಕಳೆದುಕೊಂಡಿದೆ.
  • 2019ರ ಚುನಾವಣೆ ಕಳೆದು 14 ತಿಂಗಳಾದರೂ, ತನ್ನ ನಿರಂತರ ಸೋಲಿಗೆ ಕಾಂಗ್ರೆಸ್ ಪಕ್ಷವು ಪ್ರಾಮಾಣಿಕ ಆತ್ಮವಿಮರ್ಶೆಗೆ ಮುಂದಾಗಲೇ ಇಲ್ಲ. ಈ ಕುಸಿತ ತಡೆಗಾಗಿಯೇ ಮತ್ತು ಅಪಾಯದಲ್ಲಿರುವ ಕಾಂಗ್ರೆಸ್ ಭವಿಷ್ಯದ ಹಿತದೃಷ್ಟಿಯಿಂದ ಈ ರೀತಿಯಾಗಿ ನಾವಿಂದು ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ಧ್ವನಿಯೆತ್ತಬೇಕಾಗಿದೆ.
  • ನಾಯಕತ್ವದ ಅನಿಶ್ಚಿತತೆಯು ಕಾಂಗ್ರೆಸ್ ಕಾರ್ಯಕರ್ತರಲ್ಲಿ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿದೆ. ವಿವಿಧ ರಾಜ್ಯಗಳಲ್ಲಿ ನಾಯಕರು ಮತ್ತು ಕಾರ್ಯಕರ್ತರು ಪಕ್ಷ ತೊರೆಯುತ್ತಿದ್ದು, ಬೆಂಬಲದ ಮೂಲವೇ ಕುಸಿಯುತ್ತಿದೆ.
  • ಬಿಜೆಪಿ ಸರ್ಕಾರದ ವಿಭಜನಾತ್ಮಕ ಮತ್ತು ಜನವಿರೋಧಿ ರಾಜಕೀಯದ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಪಕ್ಷಕ್ಕೆ ಸಿಡಬ್ಲ್ಯುಸಿ ಸೂಕ್ತ ಮಾರ್ಗದರ್ಶನ ನೀಡುತ್ತಿಲ್ಲ. ಸಕಾಲಿಕ ಮತ್ತು ಸಾಂದರ್ಭಿಕ ವಿಷಯಗಳಿಗಷ್ಟೇ ಅದರ ಸಭೆಗಳು ಸೀಮಿತವಾಗುತ್ತಿದ್ದು, ರಾಷ್ಟ್ರೀಯ ಕಾರ್ಯಸೂಚಿಯನ್ನಾಗಲೀ, ಅನುಸರಿಸಬೇಕಾದ ನೀತಿಗಳನ್ನಾಗಲೀ ಚರ್ಚಿಸುತ್ತಿಲ್ಲ. ಸಿಪಿಪಿ ನಾಯಕನ ಭಾಷಣ ಹಾಗೂ ಶ್ರದ್ಧಾಂಜಲಿಗಷ್ಟೇ ಸಿಪಿಪಿ ಸಭೆಗಳು ಸೀಮಿತವಾಗಿಬಿಟ್ಟಿವೆ. ಸಮಸ್ಯೆಗಳ ಚರ್ಚೆಯಾಗುತ್ತಿಲ್ಲ. ಪಿಸಿಸಿ ಅಧ್ಯಕ್ಷರು, ಪದಾಧಿಕಾರಿಗಳು ಡಿಸಿಸಿ ಅಧ್ಯಕ್ಷರ ನೇಮಕಗಳು ಅನಗತ್ಯವಾಗಿ ವಿಳಂಬವಾಗುತ್ತಿದೆ. ಆದರೂ, ಅವರಿಗೆ ಸಾಂಸ್ಥಿಕ ನಿರ್ಣಯ ಕೈಗೊಳ್ಳುವ ಅಧಿಕಾರವಿರುವುದಿಲ್ಲ. ನಾಯಕತ್ವ ವಿಫಲವಾದಾಗಲೆಲ್ಲಾ ಉತ್ತರದಾಯಿತ್ವಕ್ಕೆ ಅವಕಾಶವೂ ಇರುವುದಿಲ್ಲ.
  • ಎನ್‌ಎಸ್‌ಯುಐ ಹಾಗೂ ಯುವ ಕಾಂಗ್ರೆಸ್‌ನಿಂದ ಅರಳುವ ಯುವ ಮುಖಂಡರಿಗೆ ಒಳ್ಳೆಯ ಸ್ಪಷ್ಟ ಚಿಂತನೆ ಮತ್ತು ಕಾರ್ಯಬದ್ಧತೆಯಿದೆ. ಅಂಥವರನ್ನು ಪೋಷಿಸುವ ಇತಿಹಾಸ ಪಕ್ಷಕ್ಕಿದೆ. ಇತ್ತೀಚಿನ ವರ್ಷಗಳಲ್ಲಿ ಮೆರಿಟ್ ಆಧಾರದಲ್ಲಿ ಮತ್ತು ಒಮ್ಮತಾಧಾರಿತ ಆಯ್ಕೆ ಆಗುತ್ತಿಲ್ಲ. ಇಲ್ಲಿಯೂ ಸಂಘರ್ಷ ನಡೆಯುತ್ತಿದೆ. ಒಳ್ಳೆಯ ಧನಬಲ, ಸಂಪನ್ಮೂಲ ಬಲ ಇರುವವರ ಪಾಲಾಗುತ್ತಿದೆ. ಇದು ಯುವ ಸಮರ್ಥ ನಾಯಕರು ಹೊರಹೊಮ್ಮುವುದಕ್ಕೆ ತಡೆಯಾಗಿದೆ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿಯೂ ನಾಯಕತ್ವವನ್ನು ಬೆಳೆಸುವ ಸಂಪ್ರದಾಯ ಈಗ ಮರೆಯಾಗುತ್ತಿದೆ.

ಇದನ್ನೂ ಓದಿ: ಪತ್ರ ಬರೆದವರಿಗೆ ಸ್ಪಷ್ಟ ಸಂದೇಶ: ಯುವ ನಾಯಕರಿಗೆ ಮಣೆ ಹಾಕಿದ ಕಾಂಗ್ರೆಸ್

ಪಕ್ಷಕ್ಕೆ ಪುನಶ್ಚೇತನ ನೀಡಲು, ಕೋಟ್ಯಂತರ ಕಾರ್ಯಕರ್ತರಿಗೆ ವಿಶ್ವಾಸ ತುಂಬಲು ಹೀಗೆ ಮಾಡಬಹುದು:

  • ಕ್ಷೇತ್ರದಲ್ಲಿ ಸಕ್ರಿಯವಾಗಿರುವ, ಎಲ್ಲರ ಕೈಗೂ ಸಿಗುವ ಪೂರ್ಣಕಾಲಿಕ, ಪರಿಣಾಮಕಾರಿ ನಾಯಕತ್ವ
  • ಪಿಸಿಸಿ, ಜಿಲ್ಲಾ ಸಮಿತಿಗಳಲ್ಲಿ ಎಲ್ಲರಿಗೂ ಪ್ರಾತಿನಿಧ್ಯ. ಸಾಂಸ್ಥಿಕ ಹೊಣೆಗಾರಿಕೆಯೊಂದಿಗೆ ಕೆಲಸದಲ್ಲಿ ಸ್ವಾಯತ್ತತೆ.
  • ಕೇಂದ್ರೀಯ ನಾಯಕತ್ವವೇ ಜಿಲ್ಲಾ ಮಟ್ಟದ ನೇಮಕಾತಿಗಳನ್ನು ಮಾಡಿರುವುದು ಇದುವರೆಗೆ ವಿಫಲವಾಗಿದೆ. ಅದು ನಿಲ್ಲಬೇಕು. ಪಿಸಿಸಿ ಅಧ್ಯಕ್ಷರ ನೆರವಿನಲ್ಲಿ ರಾಜ್ಯ ಉಸ್ತುವಾರಿಗಳು ರಾಜ್ಯ ರಾಜಧಾನಿಯಲ್ಲೇ ಡಿಸಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು.
  • ಸಾಂಸ್ಥಿಕ ವಿಷಯಗಳು, ನೀತಿಗಳು, ಕಾರ್ಯಕ್ರಮಗಳ ಬಗ್ಗೆ ಸಾಮುದಾಯಿಕ ಚಿಂತನೆ ಮತ್ತು ನಿರ್ಣಯ ಕೈಗೊಳ್ಳುವಂತಾಗಲು ಕೇಂದ್ರೀಯ ಸಂಸದೀಯ ಮಂಡಳಿ (ಸಿಪಿಬಿ) ತುರ್ತಾಗಿ ರಚಿಸಬೇಕಿದೆ.
  • ದೇಶಾದ್ಯಂತ ಸದಸ್ಯತ್ವ ಹಾಗೂ ನೋಂದಾವಣೆ ಆಂದೋಲನ ಆದ್ಯತೆಯ ಮೇರೆಗೆ ನಡೆಯಬೇಕು
  • ಬ್ಲಾಕ್, ಪಿಸಿಸಿ ಹಾಗೂ ಎಐಸಿಸಿಗೆ ಪಾರದರ್ಶಕವಾಗಿ ಸದಸ್ಯರ ಆಯ್ಕೆ. ಕಾಂಗ್ರೆಸ್ ಸಂವಿಧಾನದ ಆಶಯದ ಪ್ರಕಾರವೇ ಸಿಡಬ್ಲ್ಯುಸಿ ಸದಸ್ಯರ ನೇಮಕ.
  • ಸಾಂಸ್ಥಿಕ ಹಿನ್ನೆಲೆಯುಳ್ಳ, ಅನುಭವಿ, ಕ್ಷೇತ್ರದಲ್ಲಿ ಅನುಭವವುಳ್ಳ ಸದಸ್ಯರನ್ನೊಳಗೊಂಡ ಕೇಂದ್ರೀಯ ಚುನಾವಣಾ ಆಯೋಗ ಪುನಃ ರಚಿಸಬೇಕು.
  • ಸಂಸತ್ ಮತ್ತು ವಿಧಾನಸಭೆ ಅಭ್ಯರ್ಥಿಗಳ ಆಯ್ಕೆಯ ಸ್ಕ್ರೀನಿಂಗ್ ಕಮಿಟಿಯಲ್ಲಿ ಸುದೀರ್ಘ ಕಾಲದ ಸಾಂಸ್ಥಿಕ ಅನುಭವವುಳ್ಳವರ ನೇಮಕ.
  • ಆಂತರಿಕ ಚುನಾವಣೆಗಳು ಮುಕ್ತ, ನ್ಯಾಯಯುತ ಮತ್ತು ಪ್ರಜಾಸತ್ತಾತ್ಮಕವಾಗಿರಲು, ವಿಶ್ವಾಸಾರ್ಹರಾದ ಹಿರಿಯ ಮುಖಂಡರನ್ನೊಳಗೊಂಡ ಸ್ವತಂತ್ರ ಚುನಾವಣಾ ಪ್ರಾಧಿಕಾರ ಸ್ಥಾಪನೆ
  • ಪಕ್ಷ ಎದುರಿಸುತ್ತಿರುವ ಸವಾಲಿನ ತೀವ್ರತೆಯ ಆಧಾರದಲ್ಲಿ, ಪಕ್ಷದ ಪುನಶ್ಚೇತನಕ್ಕೆ ಸಮಗ್ರವಾಗಿ ಮಾರ್ಗದರ್ಶನ ಮಾಡಬಲ್ಲ ಸಾಂಸ್ಥಿಕ ನಾಯಕತ್ವ ಕಾರ್ಯತಂತ್ರವೊಂದನ್ನು ತುರ್ತಾಗಿ ರೂಪಿಸಬೇಕಿದೆ.

ಇದನ್ನೂ ಓದಿ: ಕಾಂಗ್ರೆಸ್ ನಾಯಕತ್ವ: ಸಿಡಬ್ಲ್ಯುಸಿ ಸಭೆ ಒಳಗೆ ಹೊರಗೆ ಬಿಸಿಬಿಸಿ ವಾಗ್ವಾದ: ಹಲವರ ರಾಜೀನಾಮೆ?

ಮುಂದೆ?
ಕಷ್ಟಕಾಲದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ನೀವು ನೀಡಿದ ನಾಯಕತ್ವವನ್ನು ನಾವು ಹೃದಯಾಂತರಾಳದಿಂದ ಶ್ಲಾಘಿಸುತ್ತೇವೆ ಮತ್ತು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಗುರುತಿಸಬಹುದಾದ ಶ್ರಮಗಳನ್ನು ನಾವು ಗುರುತಿಸಿದ್ದೇವೆ. ನೆಹರು-ಗಾಂಧಿ ಕುಟುಂಬವು ಯಾವತ್ತಿಗೂ ಕಾಂಗ್ರೆಸ್ ಪಕ್ಷದ ಸಾಮುದಾಯಿಕ ನಾಯಕತ್ವದ ಅವಿಭಾಜ್ಯ ಅಂಗವಾಗಿರುತ್ತದೆ.

  • ಸವಾಲನ್ನು ಅವಕಾಶವಾಗಿ ಪರಿವರ್ತಿಸಿ, ಪ್ರತಿ ಹೋರಾಟಕ್ಕೆ ಕಾಂಗ್ರೆಸ್ ಸಜ್ಜಾಗಬೇಕಿದೆ. ಯುವಜನರು, ಮಹಿಳೆಯರು, ರೈತರು, ಅಲ್ಪಸಂಖ್ಯಾತರು, ದಲಿತರು ಮತ್ತು ಫ್ಯಾಕ್ಟರಿ ಕಾರ್ಮಿಕರಲ್ಲಿ ವಿಶ್ವಾಸ ಮೂಡಿಸುವ ಕಾರ್ಯ ಆಗಬೇಕಿದೆ.
  • ಬಿಜೆಪಿ ಅಜೆಂಡಾವನ್ನು ಎದುರಿಸಲು ಮತ್ತು ಸೋಲಿಸಲು, ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಶಕ್ತಿಗಳ ರಾಷ್ಟ್ರೀಯ ಮೈತ್ರಿಕೂಟ ರಚಿಸುವ ಕ್ರಮಕ್ಕೆ ಕಾಂಗ್ರೆಸ್ ಮುಂದಾಗಬೇಕಿದೆ. ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭಾಗವಾಗಿದ್ದ ರಾಜಕೀಯ ಪಕ್ಷಗಳ ಮುಖಂಡರನ್ನೆಲ್ಲಾ ಒಂದೇ ವೇದಿಕೆಯಡಿ ತರಲು ಪ್ರಾಮಾಣಿಕ ಪ್ರಯತ್ನ ಆಗಬೇಕಿದೆ.
  • ಪಕ್ಷದ ಹಿತದೃಷ್ಟಿ ಮತ್ತು ಭಾರತೀಯ ಪ್ರಜಾಸತ್ತೆಯ ಭವಿಷ್ಯದ ದೃಷ್ಟಿಯಿಂದ ಈ ಪ್ರಸ್ತಾವನೆಗಳನ್ನು ಕಾಂಗ್ರೆಸ್ ಸಂವಿಧಾನದ ಅನುಸಾರ ಪರಿಗಣಿಸಿ, ಅನುಷ್ಠಾನಕ್ಕೆ ತರಬೇಕೆಂದು ನಾವು ವಿನಮ್ರವಾಗಿ ವಿನಂತಿಸುತ್ತಿದ್ದೇವೆ.

ಸಹಿ ಹಾಕಿದ ಪ್ರಮುಖರು

  • ಗುಲಾಂ ನಬಿ ಆಜಾದ್
  • ಆನಂದ್ ಶರ್ಮಾ
  • ಕಪಿಲ್ ಸಿಬಲ್
  • ಭೂಪಿಂದರ್ ಸಿಂಗ್ ಹೂಡಾ
  • ಮುಕುಲ್ ವಾಸ್ನಿಕ್
  • ಶಶಿ ತರೂರ್
  • ರಾಜಿಂದರ್ ಕೌರ್ ಭಟ್ಟಲ್
  • ಮನಿಷ್ ತಿವಾರಿ
  • ಜಿತಿನ್ ಪ್ರಸಾದ
  • ರಾಜ್ ಬಬ್ಬರ್
  • ಪೃಥ್ವಿರಾಜ್ ಚವಾಣ್
  • ವೀರಪ್ಪ ಮೊಯಿಲಿ
  • ವಿವೇಕ್ ತಂಖಾ
  • ಪಿ.ಜೆ.ಕುರಿಯನ್
  • ಮಿಲಿಂದ್ ದೇವ್ರಾ
  • ರೇಣುಕಾ ಚೌಧುರಿ
  • ಅರವಿಂದರ್ ಸಿಂಗ್ ಲವ್ಲಿ
  • ಕೌಲ್ ಸಿಂಗ್ ಠಾಕೂರ್
  • ಅಖಿಲೇಶ್ ಪ್ರಸಾದ್ ಸಿಂಗ್
  • ಕುಲದೀಪ್ ಶರ್ಮಾ
  • ಯೋಗಾನಂದ ಶಾಸ್ತ್ರಿ
  • ಸಂದೀಪ್ ದೀಕ್ಷಿತ್
  • ಅಜಯ್ ಸಿಂಗ್
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy.
Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ಜನಸಂಖ್ಯೆ ಆಧಾರದಲ್ಲಿ Minority ಸ್ಥಾನಮಾನ ನೀಡಬೇಕೇ?: Supreme Court ಹೇಳಲಿದೆ!
Next post Covid-19 ಪ್ರಸರಣ ಹೆಚ್ಚಾಗಲು ಜನರ ನಿರ್ಲಕ್ಷ್ಯವೇ ಕಾರಣ

ಸುದ್ದಿ ಸಂಚಯ

ಇವುಗಳನ್ನೂ ನೋಡಿ