[ವೀರ ವಿಕ್ರಮ್]
ಫ್ರಾನ್ಸ್‌ನಲ್ಲಿ ಪ್ರವಾದಿ ಕುರಿತ ಕಾರ್ಟೂನ್ ರಚಿಸಿದ್ದಕ್ಕಾಗಿ ಹಿಂಸಾಚಾರ ನಡೆದಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರನ್, ‘ಕಾರ್ಟೂನ್ ಮಾಡಿರುವುದರ ಕುರಿತು ಮುಸಲ್ಮಾನರ ಆಕ್ರೋಶ ನನಗೆ ಅರ್ಥವಾಗುತ್ತದೆ. ಆದರೆ, ಇದಕ್ಕಾಗಿ ಹಿಂಸೆಗಿಳಿಯುವುದನ್ನು ಒಪ್ಪಲು ಸಾಧ್ಯವೇ ಇಲ್ಲ. ನನ್ನ ದೇಶದ ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಣೆಗೆ ನಾನು ಬದ್ಧ’ ಎಂದು ಹೇಳಿದ್ದಾರೆ.
ಚರ್ಚ್ ಒಂದರಲ್ಲಿ ಟ್ಯುನಿಷಿಯನ್ ವಲಸಿಗನೊಬ್ಬ ದಾಳಿ ಮಾಡಿ ಮೂವರನ್ನು ಕೊಂದ ಬಳಿಕ ಮತ್ತು ಇದು ಇಸ್ಲಾಂ ಭಯೋತ್ಪಾದಕರ ಕೃತ್ಯ ಎಂಬ ಆಕ್ರೋಶ ಹೆಚ್ಚಾಗುತ್ತಿರುವಂತೆಯೇ ಅಲ್ ಜಝೀರಾಕ್ಕೆ ಅವರು ಸಂದರ್ಶನ ನೀಡಿದ್ದಾರೆ.
ತಮ್ಮದು ಕಟ್ಟಾ ಜಾತ್ಯತೀತ ರಾಷ್ಟ್ರ. ಮುಸಲ್ಮಾನರು ಅಂಗಡಿ ಮಳಿಗೆಗಳಲ್ಲಿ ಹಲಾಲ್ ವಿಭಾಗಗಳನ್ನೂ ತೆರೆಯಬಹುದು ಎಂಬುದೇ ಇದಕ್ಕೆ ಸಾಕ್ಷಿ. ಅವರ ಭಾವನೆಗಳು ನನಗೆ ಅರ್ಥವಾಗುತ್ತದೆ. ಆದರೆ, ನನ್ನ ಪಾತ್ರವೇನೆಂದರೆ, ಪರಿಸ್ಥಿತಿಯನ್ನು ಶಾಂತಗೊಳಿಸುವುದು ಹಾಗೂ ಹಕ್ಕುಗಳನ್ನು ರಕ್ಷಿಸುವುದು ಎಂದವರು ಹೇಳಿದ್ದಾರೆ.
ಆದರೆ, ಹಿಂಸಾಚಾರವನ್ನು ಸಮರ್ಥಿಸಿಕೊಳ್ಳಲು ಕಾರ್ಟೂನ್ ಕಾರಣ ಎಂಬುದನ್ನು ಎಂದಿಗೂ ಒಪ್ಪಲಾರೆ. ಹೇಳಲು, ಬರೆಯಲು, ಯೋಚಿಸಲು ಅಥವಾ ಚಿತ್ರ ಬಿಡಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾನೆಂದಿಗೂ ರಕ್ಷಿಸುತ್ತೇನೆ ಎಂದವರು ಸ್ಪಷ್ಟಪಡಿಸಿದ್ದಾರೆ.
ಮುಸ್ಲಿಂ ರಾಷ್ಟ್ರಗಳು ಫ್ರಾನ್ಸ್‌ಗೆ ಬಹಿಷ್ಕಾರ ಹಾಕಬೇಕು ಎಂದು ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಅಧ್ಯಕ್ಷರ ಈ ಹೇಳಿಕೆ ಹೊರಬಿದ್ದಿದೆ.
ಇತ್ತೀಚೆಗೆ ಇಸ್ಲಾಮಿಕ್ ಮೂಲಭೂತವಾದಿಗಳು ಫ್ರಾನ್ಸ್‌ನಲ್ಲಿ ನೂರಾರು ಜನರನ್ನು ಹತ್ಯೆ ಮಾಡಿದ್ದಾರೆ. 2015ರಲ್ಲಿ ಮುಸ್ಲಿಂ ಪ್ರವಾದಿಯನ್ನು ಟೀಕಿಸಿದ ವ್ಯಂಗ್ಯಚಿತ್ರಗಳನ್ನು ಚಾರ್ಲಿ ಹೆಬ್ಡೋ ಎಂಬ ವಿಂಡಬನೆಗೆ ಸೀಮಿತವಾಗಿದ್ದ ಮ್ಯಾಗಜಿನ್ ಒಂದು ಪ್ರಕಟಿಸಿತ್ತು. ಇದರಿಂದ ಆಕ್ರೋಶಗೊಂಡ ಅಲ್ ಖಾಯಿದಾ ಸದಸ್ಯರು ಪತ್ರಿಕೆಯ ಕಚೇರಿಗೆ ದಾಳಿ ಮಾಡಿ 13 ಮಂದಿಯನ್ನು ಬರ್ಬರವಾಗಿ ಕೊಂದು ಹಾಕಿದ್ದರು.
ಇತ್ತೀಚೆಗೆ ಮ್ಯಾಕ್ರನ್ ಮೇಲೆ ಮೂಲಭೂತವಾದಿಗಳು ಆಕ್ರೋಶಗೊಳ್ಳಲು ಪ್ರಮುಖ ಕಾರಣವೆಂದರೆ, ಇಸ್ಲಾಂ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಅವರು ಹೇಳಿರುವುದು. ಧಾರ್ಮಿಕ ಬೋಧನೆಗಳನ್ನು ಮೂಲಭೂತವಾದಿಗಳು ತಿರುಚಿ, ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುತ್ತಿರುವುದರಿಂದಾಗಿಯೇ ಇಸ್ಲಾಂ ಧರ್ಮವೇ ಸಂಘರ್ಷದಲ್ಲಿದೆ ಎಂದಿದ್ದರು.
ಈ ಹೇಳಿಕೆಯು ಮುಸ್ಲಿಂ ಜಗತ್ತಿನ ಆಕ್ರೋಶಕ್ಕೆ ಕಾರಣವಾಗಿತ್ತು ಮತ್ತು ಫ್ರಾನ್ಸ್ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕೆಲವು ನಾಯಕರು ಕರೆ ನೀಡಿದ್ದರು.
ಅಕ್ಟೋಬರ್ 16ರಂದು ಪ್ಯಾರಿಸ್‌ನ ಶಾಲಾ ತರಗತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಚರ್ಚೆಯಾಗುತ್ತಿದ್ದಾಗ, ಪ್ರವಾದಿಯ ಕಾರ್ಟೂನ್ ತೋರಿಸಿದ್ದ ಸ್ಯಾಮ್ಯುಯಲ್ ಪ್ಯಾಟಿ ಎಂಬ 47ರ ಹರೆಯದ ಶಿಕ್ಷಕರ ತಲೆಯನ್ನೇ ಕತ್ತರಿಸಲಾಗಿತ್ತು. ಈ ಕೃತ್ಯ ಎಸಗಿದ್ದು 18 ವರ್ಷದ ಚೆಚೆನ್ ನಿರಾಶ್ರಿತ.
ಮುಸ್ಲಿಮರೇಕೆ ಫ್ರಾನ್ಸ್ ದ್ವೇಷಿಸುತ್ತಿದ್ದಾರೆ
ಪಶ್ಚಿಮ ಯೂರೋಪ್‌ನಲ್ಲೇ ಅತ್ಯಧಿಕ ಸಂಖ್ಯೆಯ ಮುಸ್ಲಿಮರಿರುವುದು ಫ್ರಾನ್ಸ್‌ನಲ್ಲಿ. ಒಟ್ಟು 6.7 ಕೋಟಿ ಜನಸಂಖ್ಯೆಯಲ್ಲಿ ಮುಸ್ಲಿಮರ ಸಂಖ್ಯೆ ಸುಮಾರು 50 ಲಕ್ಷ. ಇಲ್ಲಿ ಮುಸ್ಲಿಂ ವಲಸಿಗರ ಸಮಸ್ಯೆ ಬಲು ದೊಡ್ಡದು.
ಮುಸ್ಲಿಂ ವಲಸಿಗರನ್ನು ಮುಖ್ಯ ವಾಹಿನಿಗೆ ಸೇರಿಸಿಕೊಳ್ಳುವ ಪ್ರಯತ್ನಗಳಲ್ಲಿ ಸಮಸ್ಯೆಯಿದೆ. ಪ್ರಮುಖ ಕಾರಣವೆಂದರೆ, ಫ್ರಾನ್ಸ್‌ನಲ್ಲಿ ಜನಾಂಗೀಯ ಅಥವಾ ಧಾರ್ಮಿಕ ಹಿನ್ನೆಲೆಯಲ್ಲಿ ಯಾವುದೇ ತಾರತಮ್ಯ ಇಲ್ಲ. ಇಲ್ಲಿರುವವರೆಲ್ಲರೂ ಫ್ರೆಂಚರೇ ಎಂಬ ಏಕರೂಪದ ನೀತಿ.
ಇಲ್ಲಿ ವಾಸ್ತವ ಸಮಸ್ಯೆಯಾಗಿದ್ದೆಂದರೆ, ದೇಶದ ನೀತಿ ಈ ರೀತಿ ಇದ್ದರೂ, ಕೆಥೋಲಿಕ್ ಬಹುಸಂಖ್ಯಾತರಿಗಿಂತ ವಿಭಿನ್ನವಾಗಿ ಕಾಣುವ, ಉಡುಗೆ ಧರಿಸುವ ಅಥವಾ ಪ್ರಾರ್ಥನೆ ಸಲ್ಲಿಸುವವರ ವಿರುದ್ಧ ಅಲ್ಲಿ ತಾರತಮ್ಯ ಕಾಣುತ್ತದೆ.
ತಮ್ಮನ್ನು ಅಗೌರವದಿಂದ ಕಾಣಲಾಗುತ್ತಿದೆ, ಇಸ್ಲಾಮಿಕ್ ಸಂಪ್ರದಾಯಗಳ ಬಗ್ಗೆ ಅಗೌರವ ತೋರಿಸಲಾಗುತ್ತಿದೆ ಎಂಬ ಬಗ್ಗೆ ಮುಸಲ್ಮಾನರಿಗೂ ಆಕ್ರೋಶವಿದೆ. ಇಲ್ಲಿ ಅರಬ್ಬರು ಮತ್ತು ಇತರ ವಲಸಿಗರ ವಿರುದ್ಧ ವರ್ಣಭೇದ ನೀತಿಯೂ ಚಾಲ್ತಿಯಲ್ಲಿದೆ ಎಂಬುದು ಅವರ ಅಸಹನೆಗೆ ಕಾರಣ.
ಫ್ರಾನ್ಸ್‌ನಲ್ಲಿ ನಡೆದ ಇತ್ತೀಚಿನ ಇಸ್ಲಾಮಿಕ್ ಭಯೋತ್ಪಾದನಾ ದಾಳಿಗಳನ್ನು ಫ್ರಾನ್ಸ್‌ನ ಹೊರಗಿನವರು ನಡೆಸಿದ್ದರೂ, ಇತ್ತೀಚಿನ ದಿನಗಳಲ್ಲಿ ನಡೆದ ಅತ್ಯಂತ ಕ್ರೂರ ರಕ್ತಪಾತಗಳಲ್ಲಿ ಆ ದೇಶದಲ್ಲೇ ಹುಟ್ಟಿದ ಯುವಕರು ಕೂಡ ಭಾಗಿಯಾಗಿದ್ದರು ಮತ್ತು ಅವರಲ್ಲಿ ಹೆಚ್ಚಿನವರು ಐಸಿಸ್ ಅಥವಾ ಇಸ್ಲಾಮಿಕ್ ಸ್ಟೇಟ್ ಬಳಗದ ಉಗ್ರರು.
ಇನ್ನೊಂದೆಡೆ, ಹಿಂದೆ ಫ್ರಾನ್ಸ್ ವಸಾಹತುಗಳಾಗಿದ್ದ ಮಾಲಿ ಮತ್ತು ಸಿರಿಯಾದಲ್ಲಿನ ಇಸ್ಲಾಮಿಕ್ ಉಗ್ರಗಾಮಿಗಳ ವಿರುದ್ಧ ಫ್ರೆಂಚ್ ಪಡೆಗಳು ಕಾರ್ಯಾಚರಣೆ ನಡೆಸಿದ್ದವು. ಇದೇ ಕಾರಣದಿಂದಲೇ ಆಫ್ರಿಕಾದ ಸಹೇಲ್ ಎಂಬ ಮಾಜಿ ವಸಾಹತು ಪ್ರದೇಶದಲ್ಲಿ ಕೂಡ ನೂರಾರು ಫ್ರೆಂಚ್ ಸೈನಿಕರು ಇದ್ದಾರೆ.
ಅಲ್ಲಿ ಫ್ರೆಂಚ್ ಸೈನಿಕರ ಉಪಟಳ ನೀಡುತ್ತಿದ್ದಾರೆ ಎನ್ನುವ ಇಸ್ಲಾಮಿಸ್ ಸ್ಟೇಟ್ ಉಗ್ರರು, ಅಲ್ ಖೈದಾ ಮತ್ತು ಇತರ ಭಯೋತ್ಪಾದಕ ಸಂಘಟನೆಗಳು, ಫ್ರೆಂಚ್ ನೆಲದಲ್ಲಿ ಪ್ರತೀಕಾರಾತ್ಮಕ ದಾಳಿ ನಡೆಸಿ, ಫ್ರೆಂಚ್ ಪಡೆಗಳು ತಮ್ಮ ಪ್ರಾಬಲ್ಯವಿರುವ ಜಾಗಗಳಿಂದ ಕಾಲು ಕೀಳುವಂತೆ ಒತ್ತಡ ಹೇರುತ್ತಿವೆ.
ಆದರೆ, ಸದ್ಯದ ಆಕ್ರೋಶಕ್ಕೆ ಪ್ರಮುಖ ಕಾರಣವೆಂದರೆ, ಅಲ್ಲಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಚಾರ್ಲಿ ಹೆಬ್ಡೋ ಪತ್ರಿಕೆಯು ಪ್ರವಾದಿ ಮಹಮದರನ್ನು ವ್ಯಂಗ್ಯವಾಗಿ ಕಾರ್ಟೂನ್‌ನಲ್ಲಿ ಚಿತ್ರಿಸಿರುವುದು. ಆದರೆ, ವಿಶೇಷವೆಂದರೆ, ಈ ಕಾರ್ಟೂನುಗಳು ಮೂಲತಃ ಪ್ರಕಟವಾಗಿರುವುದು 2005ರಲ್ಲಿ, ಅದೂ ಡೆನ್ಮಾರ್ಕ್‌ನಲ್ಲಿ. ಇಂಥದ್ದೇ ಕಾರ್ಟೂನುಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಸಾಕಷ್ಟಿರುವ ಇತರ ದೇಶಗಳಲ್ಲಿಯೂ ಪ್ರಕಟವಾಗಿವೆ.
ಆದರೆ, ತಮ್ಮನ್ನು ಮಾತ್ರವೇ ಇಸ್ಲಾಮಿಕ್ ದೇಶಗಳು ಗುರಿಯಾಗಿರಿಸಿ ಆರೋಪ ಮಾಡುತ್ತಿರುವ ಬಗ್ಗೆ ಫ್ರಾನ್ಸ್‌ಗೂ ಅಸಹನೆಯಿದೆ.
ಇದರ ಜೊತೆಗೆ, ಫ್ರೆಂಚ್ ಸೆಕ್ಯುಲರಿಸಂ (ಜಾತ್ಯತೀತತೆ) ಕೂಡ ಭಾರಿ ಚರ್ಚೆಯ ವಿಷಯವಾಗಿದೆ. 1905ರ ಫ್ರೆಂಚ್ ಜಾತ್ಯತೀತತೆಯ ಕಾನೂನಿನ ಅನುಸಾರ, ಚರ್ಚ್ ಮತ್ತು ಸರ್ಕಾರ ಪ್ರತ್ಯೇಕಗೊಂಡಿದ್ದವು. ಸರ್ಕಾರವು ಪ್ರಬಲ ರೋಮನ್ ಕ್ಯಾಥೋಲಿಕ್ ಧರ್ಮಗುರುಗಳಿಗೆ ಮಾತ್ರ ಉತ್ತರದಾಯಿಯಾಗುವ ಬದಲಾಗಿ, ತಟಸ್ಥ ಸರ್ಕಾರದ ಅಡಿಯಲ್ಲಿ ಎಲ್ಲ ಧರ್ಮೀಯರೂ ಶಾಂತಿಯುತವಾಗಿ ಸಹಜೀವನ ನಡೆಸಬೇಕೆಂಬುದು ಉದ್ದೇಶ. ಒಂದು ಹಂತದಲ್ಲಿ ಈ ಕಾರಣದಿಂದ ಶಾಲಾ ಕಾಲೇಜುಗಳಿಂದ ಶಿಲುಬೆಗಳನ್ನೂ ತೆಗೆದುಹಾಕಲಾಗಿದ್ದು, ಅದು ಭಾರಿ ಚರ್ಚೆಗೂ ಕಾರಣವಾಗಿತ್ತು.
ಆದರೆ, ಒಂದು ಶತಮಾನ ಕಳೆದಾಗ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಬೆಳೆಯತೊಡಗಿತು. ಈ ಜಾತ್ಯತೀತತೆ ನಿಯಮಗಳು ಅನ್ವಯವಾಗತೊಡಗಿದವು. 2004ರಲ್ಲಿ ಮುಸ್ಲಿಮರ ಸಂಕೇತವೇ ಆಗಿರುವ ಟೋಪಿ ಮತ್ತಿತರ ಧಾರ್ಮಿಕ ಲಾಂಛನಗಳನ್ನು ಶಾಲೆಗಳಲ್ಲಿ ನಿಷೇಧಿಸಿದಾಗ, ಫ್ರಾನ್ಸ್ ಹೊರಗಿನವರೇ ಇದರ ಬಗ್ಗೆ ಹೆಚ್ಚು ಧ್ವನಿ ಎತ್ತಿದರು. 2011ರಲ್ಲಿ ಮುಖಪರದೆಗಳನ್ನು ನಿಷೇಧಿಸಿದಾಗ, ಮುಸಲ್ಮಾನರು ಮತ್ತಷ್ಟು ಆಕ್ರೋಶಗೊಂಡರು.
ಇದಲ್ಲದೆ, ಮುಸಲ್ಮಾನರಿಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರನ್ ಕೂಡ ವಿಶೇಷ ಗುರಿ. ಪ್ರತಿಭಟನಾಕಾರರು ಭಾರತದಲ್ಲಿಯೂ ಸೇರಿದಂತೆ ಅವರ ಪ್ರತಿಕೃತಿಗಳನ್ನು ಸುಟ್ಟಿದ್ದಾರೆ, ಬೀದಿಯಲ್ಲಿ ಭಾವಚಿತ್ರ ಹಾಕಿ ತುಳಿದು ತಮ್ಮ ಆಕ್ರೋಶ ಹೊರಗೆಡಹಿದ್ದಾರೆ.
ಇದಕ್ಕೆ ಮುಖ್ಯ ಕಾರಣವೆಂದರೆ, ಇಸ್ಲಾಮಿಕ್ ಮೂಲಭೂತವಾದಕ್ಕೆ ತಡೆಯೊಡ್ಡಲು ಮ್ಯಾಕ್ರನ್ ಕಾನೂನೊಂದನ್ನು ಜಾರಿಗೆ ತರಲು ಉದ್ದೇಶಿಸಿದ್ದಾರೆ. ಇತ್ತೀಚೆಗೆ ಹಲವೆಡೆ ದಾಳಿಗಳು ನಡೆದ ಬಳಿಕ, ಅಸಹಿಷ್ಣುತೆ ಬೋಧಿಸುತ್ತಿರುವ ಮುಸ್ಲಿಮ್ ಗುರುಗಳನ್ನು ಹಾಗೂ ಫ್ರೆಂಚ್ ಕಾನೂನುಗಳನ್ನು ಧಿಕ್ಕರಿಸುವವರಿಗೆ ಸರ್ಕಾರವು ಬಿಸಿ ಮುಟ್ಟಿಸಿತ್ತು.
ಇದಲ್ಲದೆ ಫ್ರೆಂಚ್ ಅಧ್ಯಕ್ಷರ ಮಾತುಗಳು ಕೂಡ ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗುತ್ತಿದ್ದವು. ಯೋಜಿತ ಕಾನೂನು ದೇಶದೊಳಗೆ ಇಸ್ಲಾಮಿಸ್ಟ್ ಪ್ರತ್ಯೇಕತಾವಾದವನ್ನು ಮಟ್ಟ ಹಾಕುವ ಉದ್ದೇಶ ಹೊಂದಿದೆ ಅಂತ ಅವರು ಹೇಳಿರುವುದು ಫ್ರೆಂಚ್ ಮುಸ್ಲಿಮರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿತ್ತು. ಪ್ರಜಾಪ್ರಭುತ್ವದ ನೀತಿ ನಿಯಮಗಳಿಗನುಸಾರವಾಗಿ ಅದನ್ನು ಪ್ರತಿರೋಧಿಸಬೇಕಿದೆ, ಫ್ರೆಂಚ್ ಜೀವನ ಶೈಲಿಯಲ್ಲೇ ಉತ್ತಮವಾಗಿ ಜೀವನ ನಡೆಸುವಂತಾಗುವ ಫ್ರೆಂಚ್ ಮುಸ್ಲಿಂ ಪೌರರನ್ನು ಒಳಗೊಳ್ಳುವ ಇಸ್ಲಾಂನ ಫ್ರೆಂಚ್ ರೂಪವನ್ನು ನಿರ್ಮಿಸಬೇಕಿದೆ ಎಂದಿದ್ದರು ಮ್ಯಾಕ್ರನ್.
ತನ್ನ ತರಗತಿಯಲ್ಲಿ ಪ್ರವಾದಿ ಕಾರ್ಟೂನನ್ನು ತೋರಿಸಿದ್ದಕ್ಕಾಗಿ ಶಿರಚ್ಛೇದಗೊಂಡ ಶಿಕ್ಷಕರೊಬ್ಬರ ಸಂಸ್ಮರಣಾ ಕಾರ್ಯಕ್ರಮದಲ್ಲಿ, ಸಹಿಷ್ಣುತೆ, ಧಾರ್ಮಿಕ ಸ್ವಾತಂತ್ರ್ಯದ ಕುರಿತು ಮಾತನಾಡಿದ್ದರು. ಆದರೆ, “ಕಾರ್ಟೂನುಗಳನ್ನು ನಾವು ಖಂಡಿಸುವುದಿಲ್ಲ, ಇಸ್ಲಾಮಿಕ್ ಮೂಲಭೂತವಾದಿಗಳನ್ನು ನಾಶಪಡಿಸಬೇಕಾಗಿದೆ” ಎಂದು ಅವರು ಹೇಳಿರುವುದು ಟರ್ಕಿ ಅಧ್ಯಕ್ಷರೂ ಸೇರಿದಂತೆ, ಹಲವರ ಕಣ್ಣು ಕೆಂಪಗಾಗಿಸಿದೆ.
ಇದಕ್ಕೂ ಮೊದಲು ಇದೇ ಮ್ಯಾಕ್ರನ್ ಅವರು, “ಇಸ್ಲಾಂ ಎಂಬುದು ಜಗತ್ತಿನಾದ್ಯಂತ ಸಂಘರ್ಷದಲ್ಲಿರುವ ಧರ್ಮವಾಗಿದೆ” ಎಂದು ಹೇಳಿರುವುದು ಮುಸ್ಲಿಂ ರಾಷ್ಟ್ರಗಳನ್ನು ಕೆರಳಿಸಿತ್ತು. ಫ್ರೆಂಚ್ ವಿರೋಧಿ ಪ್ರತಿಭಟನೆಗಳು ನಡೆದಾಗಲೂ ಅವರು, “ನಾವೆಂದಿಗೂ ಹೆದರುವುದಿಲ್ಲ” ಎಂದು ಟ್ವೀಟ್ ಕೂಡ ಮಾಡಿದ್ದರು.
ಭಾರತದಲ್ಲಿ ಮುಸಲ್ಮಾನರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆಯಾದರೂ, ಅಭಿವ್ಯಕ್ತಿ ಸ್ವಾತಂತ್ರ್ಯ ಹೆಸರು ಬಂದಾಗ ಒಬ್ಬೊಬ್ಬರು ತಮ್ಮ ತಮ್ಮ ಮನಸ್ಸಿಗೆ ಹೊಳೆದದ್ದೇ ಅಭಿವ್ಯಕ್ತಿ ಸ್ವಾತಂತ್ರ್ಯ ಅಂತ ಅರ್ಥೈಸುತ್ತಾರೆ. ಇಲ್ಲಿ ಜಾತಿ, ಧರ್ಮಗಳು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಪ್ರಮುಖ ಪಾತ್ರ ಪಹಿಸುತ್ತಿವೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಹಿಂದೂ ದೇವ ದೇವಿಯರನ್ನು ಬಹಿರಂಗವಾಗಿ ನಿಂದಿಸುವವರನ್ನು ನಾವು ನೋಡುತ್ತಿದ್ದೇವೆ, ಆದರೆ ಇದಕ್ಕಾಗಿ ಎಲ್ಲೂ ಹಿಂಸಾಚಾರದ ವರದಿಯಾಗಿದ್ದಿಲ್ಲ. ಕಾರಣವೆಂದರೆ, ಭಾರತೀಯರು ಸಹಿಷ್ಣುಗಳು.
(ಎಪಿ, ಇಂಡಿಯನ್ ಎಕ್ಸ್‌ಪ್ರೆಸ್, ಗಾರ್ಡಿಯನ್ ಹಾಗೂ ಇತರ ಆನ್‌ಲೈನ್ ಮೂಲಗಳಿಂದ)
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

Average Rating