ಜ್ವರಕ್ಕೆ ಬಳಸುವ ಡೋಲೋ-650 ಮಾತ್ರೆಯ ತಯಾರಕರು, 650 ಮಿ.ಗ್ರಾಂ. ಸಾಮರ್ಥ್ಯದ ಮಾತ್ರೆಯನ್ನೇ ವೈದ್ಯರು ಪ್ರಿಸ್ಕ್ರೈಬ್ ಮಾಡಬೇಕೆಂಬ ಕಾರಣಕ್ಕೆ 1000 ಕೋಟಿ ರೂ. ಮೊತ್ತದ ಕೊಡುಗೆಗಳನ್ನು ವೈದ್ಯರಿಗೆ ಹಂಚಿದ್ದಾರೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಆರೋಪಿಸಿದ್ದು, ಭಾರತೀಯರಿಗೆ ಆಘಾತ ಮೂಡಿಸಿದೆ. ಇದೊಂದು ತೀರಾ ಗಂಭೀರ ವಿಚಾರ ಎಂದು ಸ್ವತಃ ಸುಪ್ರೀಂ ಕೋರ್ಟೇ ಅಚ್ಚರಿ ವ್ಯಕ್ತಪಡಿಸಿದ್ದು, ಈ ಕುರಿತು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ (PIL)ಗೆ 10 ದಿನಗಳೊಳಗೆ ಉತ್ತರಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ.
ನ್ಯಾಯಾಲಯಕ್ಕೆ ಹೋದ ಕಾರಣ ಏನು?
ಭಾರತೀಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಒಕ್ಕೂಟ (Federation of Medical & Sales Representatives Association of India – FMSRAI) ಈ ಕುರಿತು ಸುಪ್ರೀಂ ಕೋರ್ಟಿಗೆ ಅರ್ಜಿಯೊಂದನ್ನು ಸಲ್ಲಿಸಿತ್ತು. Dolo 500 ಎಂಜಿ ಸಾಮರ್ಥ್ಯದ ಮಾತ್ರೆಯ ಬೆಲೆಯನ್ನು ಕೇಂದ್ರ ಸರಕಾರವೇ ನಿಯಂತ್ರಿಸುವುದರಿಂದ, ಹೆಚ್ಚಿನ ಸಾಮರ್ಥ್ಯದ ಅಂದರೆ Dolo – 650 ಮಿಲಿಗ್ರಾಂ ಸಾಮರ್ಥ್ಯದ ಮಾತ್ರೆಗಳ ತಯಾರಿಗೆ ಮುಂದಾಗಿರುವ ತಯಾರಕರು, ಇದಕ್ಕೆ ಮನಬಂದಂತೆ ಬೆಲೆ ನಿಗದಿಪಡಿಸುತ್ತಿದ್ದರು. ಇದನ್ನೇ ಪ್ರಿಸ್ಕ್ರೈಬ್ ಮಾಡುವಂತೆ ಮಾತ್ರೆ ತಯಾರಕರು ವೈದ್ಯರಿಗೆ ‘ಪ್ರೋತ್ಸಾಹಕ’ ಕೊಡುಗೆಗಳನ್ನು ನೀಡುತ್ತಿದ್ದರು ಎಂಬುದು ಅವರ ಆರೋಪ. ಈ ಡೋಸ್ ಕೂಡ ಅಸಹಜವಾದ ಅಥವಾ ತರ್ಕಹೀನವಾದ ಪ್ರಮಾಣದ ಡೋಸ್ ಎಂದು ಅವರು ಮನವಿಯಲ್ಲಿ ಹೇಳಿದ್ದಾರೆ.
ಫಾರ್ಮಾ ಕಂಪನಿಗಳು ವೈದ್ಯರಿಗೆ ನೀಡುವ ಯಾವುದೇ ಕೊಡುಗೆಗಳ ಮೇಲೆ ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ನಡೆಸಿ, ಅದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವಂತೆ, ಫಾರ್ಮ್ಯಾಸ್ಯೂಟಿಕಲ್ ಮಾರ್ಕೆಟಿಂಗ್ ಪ್ರಾಕ್ಟೀಸಸ್‌ನ ಸಮಾನ ನೀತಿ ಸಂಹಿತೆ (UCPMP)ಯನ್ನು ಕಾನೂನಾಗಿ ಪರಿವರ್ತಿಸಬೇಕೆಂಬುದು FMSRAI ಒಕ್ಕೂಟದ ಆಗ್ರಹ. ಆದರೆ, ಈ ವಾದವನ್ನು ಸುಪ್ರೀಂ ಕೋರ್ಟ್ ಒಪ್ಪಲಿಲ್ಲ.
ಹೆಚ್ಚಿನ ಸಾಮರ್ಥ್ಯದ ಮಾತ್ರೆಗಳನ್ನು ನೀಡಿದರೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅಪಾಯವಿದೆ. ಇದಕ್ಕೆ ಈ ‘ಕೊಡುಗೆ’ಗಳು ಕಾರಣವಾಗುತ್ತವೆ ಎಂದಿರುವ ಒಕ್ಕೂಟವು, ಕೋವಿಡ್-19 ಕಾಡಿದ ಸಂದರ್ಭದಲ್ಲಿ ರೆಮ್‌ಡಿಸಿವಿರ್ ಔಷಧಿಯನ್ನು ಬೇಕಾಬಿಟ್ಟಿ ಪ್ರಿಸ್ಕ್ರೈಬ್ ಮಾಡುತ್ತಿದ್ದ ಪ್ರಕರಣವನ್ನು ಅದು ಉದಾಹರಣೆಯಾಗಿ ವಿವರಿಸಿದೆ. ರೆಮ್‌ಡಿಸಿವಿರ್ ಹೆಚ್ಚು ಕ್ರಯಕ್ಕೆ ಮಾರಾಟವಾಗುತ್ತಿದ್ದು, ಇದು ಕೊರೊನಾ ವೈರಸ್ ಮೇಲೆ ಯಾವುದೇ ಹೆಚ್ಚಿನ ಪರಿಣಾಮ ಬೀರುತ್ತಿರಲಿಲ್ಲ ಎಂದೂ ಅದು ಹೇಳಿದೆ.
ಗಮನಿಸಬೇಕಾದ ವಿಚಾರವೆಂದರೆ, ಫಾರ್ಮಾ ಕಂಪನಿಗಳು ತಾವು ವೈದ್ಯರಿಗೆ ನೀಡುವ ಆಮಿಷದ ಕೊಡುಗೆಗಳಿಗೆ ತೆರಿಗೆ ವಿನಾಯಿತಿಗಾಗಿಯೂ ಹಿಂದೆ ಇದೇ ಸುಪ್ರೀಂ ಕೋರ್ಟನ್ನು ಕೋರಿದ್ದವು. ಅದನ್ನು ನ್ಯಾಯಾಲಯವು ತಳ್ಳಿ ಹಾಕಿತ್ತು. ಅಪೆಕ್ಸ್ ಲ್ಯಾಬೊರೇಟರಿ ಎಂಬ ಫಾರ್ಮಾ (ಔಷಧಿ ತಯಾರಕ) ಕಂಪನಿಯು ಈ ಕುರಿತು ಮನವಿ ಸಲ್ಲಿಸಿತ್ತು.

Average Rating