ಬಾಂಗ್ಲಾ ಕ್ಷೋಭೆ | ದೇಶ ಭ್ರಷ್ಟರಾದ ಪ್ರಧಾನಿ ಹಸೀನಾ: ಈ ಪ್ರತಿಭಟನೆಯು ಪಿತೂರಿಯೇ?
ಢಾಕಾ: ಬಾಂಗ್ಲಾ ದೇಶದಲ್ಲಿ ಕ್ಷೋಭೆ ಉಂಟಾಗಿರುವ ಹಿನ್ನೆಲೆಯಲ್ಲಿ, ಅದನ್ನು ಸುದೀರ್ಘ ಕಾಲ ಆಳಿದ್ದ ಪ್ರಧಾನಿ ಶೇಖ್ ಹಸೀನಾ ಅವರು ಕಾರಿನಿಂದಿಳಿದು ಹೆಲಿಕಾಪ್ಟರ್ ಮೂಲಕ ದೇಶ ಬಿಟ್ಟು ಪಲಾಯನ ಮಾಡಿದ್ದು, ಅವರು ಭಾರತದ ಆಶ್ರಯ ಪಡೆಯಲು ತ್ರಿಪುರಾಕ್ಕೆ ಆಗಮಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಾಕೆ ಹೀಗೆ, ಏನಾಯಿತು ಅಂತ ಒಂದಿಷ್ಟು ನಿಜ ವಿಷಯವನ್ನು ಅವಲೋಕಿಸೋಣ.
ಪಾಕಿಸ್ತಾನದಿಂದ ಬೇರ್ಪಟ್ಟು, ಬಾಂಗ್ಲಾ ದೇಶದ ಉದಯವಾದ 1971ರ ಸ್ವಾತಂತ್ರ್ಯ ಹೋರಾಟದಲ್ಲಿ ಕೆಚ್ಚೆದೆಯಿಂದ ಹೋರಾಡಿದ ಸೈನಿಕರ ಬಂಧುಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.30ರಷ್ಟು ಮೀಸಲಾತಿ ನೀಡುವ ಹಸೀನಾ ನಿರ್ಧಾರದ ವಿರುದ್ಧ ಜೂನ್ ತಿಂಗಳಲ್ಲಿ ಶಾಂತಿಯುತವಾಗಿ ಆರಂಭವಾಗಿದ್ದ ಪ್ರತಿಭಟನೆಯು ಇಂದು (05 ಆಗಸ್ಟ್ 2024) ಪ್ರಧಾನಿ ದೇಶಭ್ರಷ್ಟರಾಗುವವರೆಗೂ ತಲುಪಿದೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಈಗಾಗಲೇ ಕ್ಷೋಭೆಯಿಂದ ಕೂಡಿರುವ ಮತ್ತು ಉಗ್ರಗಾಮಿಗಳ ಸ್ವರ್ಗವೇ ಆಗಿಬಿಟ್ಟಿರುವ ಪಾಕಿಸ್ತಾನದ ವಿರುದ್ಧ ಹೋರಾಡಿಯೇ ಬಾಂಗ್ಲಾಕ್ಕೆ ಸ್ವಾತಂತ್ರ್ಯ ದೊರೆತಿತ್ತು. ಆದರೂ ಬಾಂಗ್ಲಾದಲ್ಲಿ ಒಳಗಿದ್ದುಕೊಂಡೇ ಮಸಲತ್ತು ಮಾಡುತ್ತಿದ್ದ ಸಾಕಷ್ಟು ಮಂದಿ ಪಾಕಿಸ್ತಾನಿ ಮೂಲಭೂತವಾದಿಗಳಂತೂ ಒಳಗೊಳಗೇ ಕುದಿಯುತ್ತಿದ್ದರು.
ಈಗ ಹಸೀನಾ ಘೋಷಣೆ ಮಾಡಿದ ಕೋಟಾ ಪದ್ಧತಿಯು ತಾರತಮ್ಯ ಉಂಟು ಮಾಡುತ್ತದೆ ಮತ್ತು ಪ್ರಧಾನಿ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಬೆಂಬಲಿಗರಿಗೆ ಮಾತ್ರ ಅನುಕೂಲ ಮಾಡಿಕೊಡುತ್ತದೆ ಎಂಬುದು ಈ ಪ್ರತಿಭಟನಾಕಾರರ ಆರೋಪ. ಯಾಕೆಂದರೆ, ಸ್ವಾತಂತ್ರ್ಯ ಹೋರಾಟ ಮಾಡಿ ಬಾಂಗ್ಲಾ ವಿಮೋಚನೆಗೆ ಕಾರಣವಾಗಿದ್ದೇ ಈ ಅವಾಮಿ ಲೀಗ್ ಪಾರ್ಟಿ! ಇದನ್ನೂ ಗಮನಿಸಬೇಕು.
ಹೀಗೆ, ಪ್ರತಿಭಟನೆ ತೀವ್ರಸ್ವರೂಪ ಪಡೆದುಕೊಂಡ ಬಳಿಕ ಸರ್ಕಾರವು ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಿತ್ತು ಮತ್ತು ಫೇಸ್ಬುಕ್, ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂ ಮುಂತಾದ ಸಾಮಾಜಿಕ ಮಾಧ್ಯಮಗಳ ಬಳಕೆಗೂ ತೊಡಕಾಗಿತ್ತು.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ…
ಹಿಂಸಾಚಾರವು ಹೆಚ್ಚಾದ ಸಂದರ್ಭದಲ್ಲಿ ಕಳೆದ ತಿಂಗಳು ಬಾಂಗ್ಲಾ ದೇಶದ ಸುಪ್ರೀಂ ಕೋರ್ಟು ಮಧ್ಯಪ್ರವೇಶಿಸಿ, ಸ್ವಾತಂತ್ರ್ಯ ಹೋರಾಟಗಾರರ ಕೋಟಾವನ್ನು ಶೇ.5ಕ್ಕೆ ನಿಗದಿಪಡಿಸುವಂತೆಯೂ, ಶೇ.93 ಹುದ್ದೆಗಳನ್ನು ಅರ್ಹತೆಯ ಆಧಾರದಲ್ಲಿಯೇ ನೀಡಬೇಕೆಂದೂ ತೀರ್ಪು ನೀಡಿತ್ತು. ಉಳಿದ ಶೇ. 2 ಭಾಗವನ್ನು ಜನಾಂಗೀಯ ಅಲ್ಪಸಂಖ್ಯಾತರು, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಅಂಗವಿಕಲರಿಗೆ ಮೀಸಲಿಡಬೇಕಾಗುತ್ತದೆ.
ಈ ತೀರ್ಪನ್ನು ಸರ್ಕಾರವು ಒಪ್ಪಿ, ಪರಿಸ್ಥಿತಿಯು ಸುಧಾರಿಸಬಹುದೆಂಬ ಆಶಾವಾದದಲ್ಲಿ ಇಂಟರ್ನೆಟ್ ಸಂಪರ್ಕವನ್ನು ಮರುಸ್ಥಾಪಿಸಿತ್ತು. ಆದರೆ, ಆಗ ಶುರುವಾಗಿದ್ದ ಪ್ರತಿಭಟನೆಯು ಮತ್ತಷ್ಟು ತೀವ್ರ ಸ್ವರೂಪ ಪಡೆಯಿತು. ಪ್ರತಿಭಟನಾಕಾರರ ಈ ಬಾರಿಯ ಬೇಡಿಕೆ ಎಂದರೆ, ಸುದೀರ್ಘ ಕಾಲ ಬಾಂಗ್ಲಾವನ್ನು ಆಳಿದ ಪ್ರಧಾನಿ ಶೇಖ್ ಹಸೀನಾ ಮತ್ತವರ ಸಚಿವ ಸಂಪುಟವು ರಾಜೀನಾಮೆ ನೀಡಬೇಕೆಂಬುದು. ಹಿಂಸಾಚಾರಕ್ಕೆ ಅವರೇ ಕಾರಣ ಎಂಬುದು ಈ ವಿದ್ಯಾರ್ಥಿಗಳ ಬಾಯಲ್ಲಿ ಬಂದ ಮಾತು.
ಸರ್ಕಾರ ಏನು ಹೇಳುತ್ತಿದೆ?
ಆದರೆ ಸರ್ಕಾರದ ಅನುಸಾರ, ಇದರ ಹಿಂದೆ ವಿರೋಧ ಪಕ್ಷಗಳ ಪಿತೂರಿ ಇದೆ. ಈ ಕಾರಣಕ್ಕಾಗಿ, ಹಸೀನಾ ಸರ್ಕಾರವು ಊಹಾಪೋಹಗಳು, ಸುಳ್ಳು ಸುದ್ದಿಗಳು ಹರಡದಂತೆ ಮತ್ತು ಏನೂ ತಿಳಿಯದ ವಿದ್ಯಾರ್ಥಿಗಳು ಅವುಗಳನ್ನೆಲ್ಲ ನಂಬಿ ಪ್ರತಿಭಟನೆ ತೀವ್ರಗೊಳಿಸದಂತೆ ಮಾಡುವುದಕ್ಕಾಗಿ, ಪುನಃ ಅಂದರೆ ಎರಡನೇ ಬಾರಿ ಇಂಟರ್ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಿತು.
ಆಗ ಪ್ರತಿಭಟನೆ ಮುಂದುವರಿದು ಎರಡು ದಿನಗಳಲ್ಲಿ 106 ಮಂದಿ ಸಾವನ್ನಪ್ಪಿದಾಗ, ಪ್ರಧಾನಿ ಶೇಖ್ ಹಸೀನಾಗೆ ಇದು ಕುತಂತ್ರ ಎಂಬುದು ಅರಿವಾಯಿತು. ಅವರೇ ಹೇಳುವಂತೆ, ಹಿಂಸಾಚಾರದಲ್ಲಿ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡುವಲ್ಲಿ ತೊಡಗಿರುವ ಈ ಪ್ರತಿಭಟನಾಕಾರರು ವಿದ್ಯಾರ್ಥಿಗಳಲ್ಲ. ಅವರೆಲ್ಲ ಕ್ರಿಮಿನಲ್ಗಳು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಘೋಷಿಸಿದರು.
ಈ ಪ್ರತಿಭಟನಾಕಾರರು ಢಾಕಾದ ಪ್ರಮುಖ ಸರ್ಕಾರಿ ಆಸ್ಪತ್ರೆಯ ಮೇಲೆ ದಾಳಿ ನಡೆಸಿದರು, ಹಲವಾರು ವಾಹನಗಳನ್ನು ಸುಟ್ಟರು ಮತ್ತು ಆಡಳಿತಾರೂಢ ಪಕ್ಷ ಅವಾಮಿ ಲೀಗ್ನ ಕಚೇರಿಗಳಿಗೂ ಬೆಂಕಿ ಇಟ್ಟರು. ಈಗಿನ ವರದಿಯಂತೆ ಅವಾಮಿ ಲೀಗ್ನ ಮುಖ್ಯ ಕಚೇರಿಗೂ ಬೆಂಕಿ ಹಚ್ಚಿದ್ದಾರೆ. ಇದು ಬಹುತೇಕ ಪಾಕಿಸ್ತಾನ ಮೂಲದ ಉಗ್ರ ಧಾರ್ಮಿಕವಾದಿಗಳ ಕೃತ್ಯಗಳನ್ನೇ ಹೋಲುತ್ತದೆ.
ಅಂದರೆ, ಹಸೀನಾ ರಾಜೀನಾಮೆ ಕೇಳುವ ಈ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ವಿರೋಧ ಪಕ್ಷಗಳು ಹೈಜಾಕ್ ಮಾಡಿವೆ. ಬಾಂಗ್ಲಾದೇಶಿ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ) ಜೊತೆಗೆ ನಿಷೇಧಿತ ಜಮಾತ್-ಇ-ಇಸ್ಲಾಮಿ (ಈ ಪಕ್ಷದ ಚಟುವಟಿಕೆಗಳಿಗಾಗಿ ಅದನ್ನು ನಿಷೇಧಿಸಲಾಗಿತ್ತು ಎಂಬುದೂ ನೆನಪಿಡಬೇಕಾದ ಮತ್ತೊಂದು ವಿಚಾರ) ಪಕ್ಷವೂ ಕೈಜೋಡಿಸಿ, ಈ ಹಿಂಸಾಚಾರದ ಬೆಂಕಿಗೆ ತುಪ್ಪ ಸುರಿದಿವೆ ಎಂಬುದು ಅವಾಮಿ ಲೀಗ್ ಆರೋಪ.
‘ನಾವು ಪ್ರತಿಭಟನಾಕಾರರಿಗೆ ಬೆಂಬಲ ನೀಡಿದ್ದೇವೆ, ಆದರೆ ಪ್ರತಿಭಟನೆಯ ಕಿಚ್ಚಿಗೆ ತುಪ್ಪ ಸುರಿದಿಲ್ಲ’ ಎಂದು ಪ್ರತಿಪಕ್ಷಗಳು ಹೇಳುತ್ತಿವೆ. ಈ ಗಲಾಟೆ ಕಡಿಮೆಯಾಗಬೇಕಿದ್ದರೆ, ತಕ್ಷಣ ರಾಜೀನಾಮೆ ನೀಡಿ ಎಂಬುದು ಬಿಎನ್ಪಿ ಮತ್ತು ಮಿತ್ರ ಪಕ್ಷಗಳ ಆಗ್ರಹ.
ಅಮಾಯಕರ ಸಾವಿಗೆ ಕಾರಣರಾದವರನ್ನು ಕಠಿಣವಾಗಿ ಶಿಕ್ಷಿಸುವುದಾಗಿ ಹಸೀನಾ ಘೋಷಣೆ ಮಾಡಿದರಲ್ಲದೆ, ಹಿಂಸಾಚಾರ ತಡೆಗಾಗಿ ಮಾತುಕತೆಗೆ ಬರುವಂತೆ ವಿದ್ಯಾರ್ಥಿ ಮುಖಂಡರಿಗೆ ಆಹ್ವಾನ ನೀಡಿದ್ದರು. ಆದರೆ, ಈಗಾಗಲೇ ಪ್ರಚೋದನೆಗೊಂಡಿರುವ ವಿದ್ಯಾರ್ಥಿಗಳು ಮಾತುಕತೆಗೆ ಬರಲು ಒಪ್ಪಲೇ ಇಲ್ಲ. ಇಲ್ಲೂ ಹಸೀನಾ ಪಕ್ಷಕ್ಕೆ ಈ ವಿದ್ಯಾರ್ಥಿಗಳ ಹಿಂದೆ ಯಾರೋ ಇದ್ದಾರೆಂಬುದು ಅರಿವಾಗಿತ್ತು.
ಅಂತೂ ಸೋಮವಾರ, ಹಸೀನಾ ಅವರು ಸಹೋದರಿ ಶೇಖ್ ರೆಹನಾ ಜೊತೆಗೆ ಹೆಲಿಕಾಪ್ಟರಿನಲ್ಲಿ ತ್ರಿಪುರದ ಅಗರ್ತಲಾಕ್ಕೆ ತೆರಳಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಇತ್ತೀಚಿನ ವರದಿಯ ಪ್ರಕಾರ, ನಮಗೆ ಈ ಕುರಿತು ಮಾಹಿತಿ ಇಲ್ಲವೆಂದು ತ್ರಿಪುರ ಗೃಹ ಕಾರ್ಯದರ್ಶಿ ಪಿ.ಕೆ.ಚಕ್ರವರ್ತಿ ಅವರು ಪಿಟಿಐಗೆ ತಿಳಿಸಿದ್ದಾರೆ.
ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಬಾಂಗ್ಲಾದ ಸೇನೆಯು ದೇಶದ ಆಡಳಿತ ಚುಕ್ಕಾಣಿಯನ್ನು ತನ್ನ ಕೈಗೆ ತೆಗೆದುಕೊಂಡಿದೆ.
ಆದರೆ ಅತ್ತ ಕಡೆ ಪ್ರಚೋದಿತ ಪ್ರತಿಭಟನಾಕಾರರು ಬಾಂಗ್ಲಾ ಪ್ರಧಾನಿಯ ಅಧಿಕೃತ ನಿವಾಸಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿದ್ದಾರೆ. ಸಾಕಷ್ಟು ವಿಡಿಯೊಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ.
ವಿಷಯ ಏನಪ್ಪಾ ಎಂದರೆ,
76ರ ಹರೆಯದ ಶೇಖ್ ಹಸೀನಾ ಅವರು ಬಾಂಗ್ಲಾ ದೇಶ ಸಂಸ್ಥಾಪಕ ಶೇಖ್ ಮುಜಿಬುರ್ ರಹಮಾನ್ ಅವರ ಪುತ್ರಿ. 2009ರಿಂದಲೂ ಬಾಂಗ್ಲಾವನ್ನು ಆಳುತ್ತಿದ್ದಾರೆ. ಸತತ ದಾಖಲೆಯ ನಾಲ್ಕನೇ ಬಾರಿಗೆ ಮತ್ತು ಒಟ್ಟಾರೆಯಾಗಿ ಐದು ಅವಧಿಗೆ ಅವರು ಬಾಂಗ್ಲಾ ಪ್ರಧಾನಿಯಾಗಿ ದೇಶ ಆಳಿದ್ದರು. 12ನೇ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬಿಎನ್ಪಿ ಹಾಗೂ ಇತರ ಮಿತ್ರ ಪಕ್ಷಗಳು ಚುನಾವಣೆ ಬಹಿಷ್ಕರಿಸಿದ್ದರು.
ಪಾಕಿಸ್ತಾನದ ಐಎಸ್ಐ ಕೈವಾಡ?
ಭಯೋತ್ಪಾದನಾ ವಿರೋಧಿ ಕಾನೂನಿನಡಿ ಜಮಾತ್-ಎ-ಇಸ್ಲಾಮಿ ಮತ್ತು ಅದರ ವಿದ್ಯಾರ್ಥಿ ಘಟಕವಾದ ಇಸ್ಲಾಮಿ ಛಾತ್ರ ಶಿಬಿರವನ್ನು ಹಸೀನಾ ಸರ್ಕಾರ ನಿಷೇಧಿಸಿತ್ತು. ಅಂತೆಯೇ, ಈ ಮೂಲಭೂತವಾದಿ ಪಕ್ಷವು ಸಾರ್ವಜನಿಕ ಭದ್ರತೆಗೆ ಒಡ್ಡಿರುವ ಬೆದರಿಕೆಯನ್ನು ಉಲ್ಲೇಖಿಸಿ, ಗೃಹ ಸಚಿವಾಲಯದ ಸಾರ್ವಜನಿಕ ಭದ್ರತಾ ವಿಭಾಗವು ಗುರುವಾರ ಈ ಇಸ್ಲಾಮಿ ಪಕ್ಷವನ್ನು ನಿಷೇಧಿಸಿತ್ತು. ಪ್ರಧಾನಿ ಶೇಖ್ ಹಸೀನಾ ಸರ್ಕಾರವನ್ನು ಉರುಳಿಸಿ, ಬಿಎನ್ಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪಾಕಿಸ್ತಾನದ ಐಎಸ್ಐ ಹಾಗೂ ಬಾಂಗ್ಲಾ ಸೇನೆಗಳು ನಿರಂತರ ಪ್ರಯತ್ನ ನಡೆಸಿದ್ದವು ಎಂಬ ಮಾಹಿತಿಯೂ ಇದೆ. ಇದಕ್ಕಾಗಿಯೇ ಪ್ರತಿಭಟನೆ ಹಾಗೂ ಹಿಂಸಾಚಾರವನ್ನು ಅವುಗಳು ಪ್ರಚೋದಿಸಿದ್ದವು ಎನ್ನಲಾಗುತ್ತಿದೆ.
ಈ ಕಾರಣಕ್ಕೆ, ದೇಶದ ಹೊರಗಿನ ಶತ್ರುಗಳಿಗಿಂತಲೂ ಒಳಗಿದ್ದುಕೊಂಡೇ ಮಸಲತ್ತು ಮಾಡುವ ಮೂಲಭೂತವಾದಿ ಶತ್ರುಗಳು ಎಷ್ಟು ಅಪಾಯಕಾರಿ ಆಗಬಲ್ಲವು ಎಂಬ ಪಾಠ ಈ ಘಟನೆಯ ಹಿಂದಿದೆ.
ಮತ್ತು
ಭಾರತವೀಗ ಚೀನಾದ ಕೈಗೊಂಬೆಗಳಿಂದಲೇ ಸುತ್ತುವರಿದಂತಾಗಿದೆ! ಎಚ್ಚರಿಕೆಯ ಕರೆಗಂಟೆ ನಮಗಿದು!

Average Rating