ಮೋದಿ Independence Day ಭಾಷಣದ ಮುಖ್ಯಾಂಶಗಳು: ಮರೆತುಹೋದ ಸ್ವಾತಂತ್ರ್ಯ ಹೋರಾಟಗಾರರಿಗೆ ಮಣೆ, ಪಂಚ ಪ್ರತಿಜ್ಞೆ
Read Time:9 Minute, 14 Second

ಮೋದಿ Independence Day ಭಾಷಣದ ಮುಖ್ಯಾಂಶಗಳು: ಮರೆತುಹೋದ ಸ್ವಾತಂತ್ರ್ಯ ಹೋರಾಟಗಾರರಿಗೆ ಮಣೆ, ಪಂಚ ಪ್ರತಿಜ್ಞೆ

0 0

Independence Day Speech by Narendra Modi: Highlights

75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸೋಮವಾರ ಕೆಂಪುಕೋಟೆಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಮುಖ್ಯಾಂಶಗಳು (ನೀವು ತಿಳಿದಿರಲೇಬೇಕಾದವು) ಇಲ್ಲಿವೆ.

ದೇಶದ ಸ್ವಾತಂತ್ರ್ಯದ ಶತಮಾನೋತ್ಸವದೊಳಗೆ ನಾವು ಪಂಚಪ್ರತಿಜ್ಞೆಗಳನ್ನು ಸಾಧಿಸಲೇಬೇಕಾಗಿದೆ ಎಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ತಮ್ಮ 82 ನಿಮಿಷಗಳ ಭಾಷಣದಲ್ಲಿ ದೇಶದ ಬಗೆಗೆ ಹೆಮ್ಮೆ ಮೂಡಿಸುವ ಅಂಶಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಇದೇ ಸಂದರ್ಭದಲ್ಲಿ ದೇಶಕ್ಕೆ ಕಂಟಕಪ್ರಾಯವಾದ ಭ್ರಷ್ಟಾಚಾರ ಮತ್ತು ಕುಟುಂಬ ವಾದ ರಾಜಕೀಯದ ಬಗೆಗೂ ಎಚ್ಚರಿಸಿದರು.

ಪಂಚಪ್ರಾಣ

ಅಮೃತ ಮಹೋತ್ಸವವು ಅಮೃತಕಾಲವಾಗಿ ಪರಿವರ್ತನೆಯಾಗಬೇಕಿದ್ದರೆ ಐದು ಶಪಥಗಳನ್ನು ಕೈಗೊಳ್ಳಬೇಕಿದೆ ಎಂದ ಪ್ರಧಾನಿ ಮೋದಿ ಅವರು ಹೇಳಿದ ಐದು ಪ್ರತಿಜ್ಞೆಗಳು ಇಲ್ಲಿವೆ:

  • ಅಭಿವೃದ್ಧಿಶೀಲ ದೇಶದ ಬದಲು ಅಭಿವೃದ್ಧಿ ಹೊಂದಿದ ದೇಶವಾಗಿ ರೂಪಿಸುವುದು
  • ವಸಾಹತುಶಾಹಿ ಮತ್ತು ಗುಲಾಮ ಮನಸ್ಥಿತಿಯ ಯಾವುದೇ ಸುಳಿವನ್ನೂ ವಿನಾಶಗೊಳಿಸುವುದು
  • ಭಾರತೀಯತೆಯ ಬೇರುಗಳ ಬಗ್ಗೆ ಹೆಮ್ಮೆ ಪಡುವುದು
  • ಏಕತೆ
  • ನಾಗರಿಕರಲ್ಲಿ ಕರ್ತವ್ಯ ಪ್ರಜ್ಞೆ

ಮುಂದಿನ 25 ವರ್ಷಗಳಲ್ಲಿ ಇವುಗಳ ಮೇಲೆ ಗಮನ ಕೇಂದ್ರೀಕರಿಸಬೇಕಾದ ಅಗತ್ಯವಿದೆ ಎಂದು ಮೋದಿ ಕರೆ ನೀಡಿದರು.

ಭ್ರಷ್ಟಾಚಾರ – ಪರಿವಾರವಾದದ ವಿರುದ್ಧ ಘರ್ಜನೆ
ಭ್ರಷ್ಟಾಚಾರ ಮತ್ತು ಪರಿವಾರವಾದದ ಹುಳುಕುಗಳ ವಿರುದ್ಧ ಹೋರಾಡಬೇಕೆಂದು ಅವರು ದೇಶಕ್ಕೆ ಕರೆ ನೀಡಿದರು. ಕೋಟ್ಯಂತರ ಸವಾಲುಗಳಿದ್ದರೆ ಕೋಟ್ಯಂತರ ಪರಿಹಾರಗಳೂ ಇರುತ್ತವೆ. 130 ಕೋಟಿ ಮಂದಿ ಒಂದು ಹೆಜ್ಜೆ ಮುಂದಿಟ್ಟರೆ, ದೇಶವು 130 ಕೋಟಿ ಹೆಜ್ಜೆ ಮುಂದಕ್ಕೆ ಸಾಗುತ್ತದೆ ಎಂದ ಪ್ರಧಾನಿ ಮೋದಿ, ಭ್ರಷ್ಟಾಚಾರ ಮತ್ತು ಪರಿವಾರವಾದ (ಕೌಟುಂಬಿಕ ರಾಜಕೀಯ) – ಇವೆರಡನ್ನು ನೇರಾನೇರ ಎದುರಿಸಿ ಹೋರಾಡಬೇಕಿದೆ ಎಂದರು.

ಭ್ರಷ್ಟಾಚಾರವು ಗೆದ್ದಲಿನಂತೆ ದೇಶವನ್ನು ಕೊರೆಯುತ್ತಿದ್ದು, ದೇಶವನ್ನು ಲೂಟಿ ಮಾಡಿದ ಭ್ರಷ್ಟ ಜನರು, ತಾವು ಕೊಳ್ಳೆ ಹೊಡೆದುದನ್ನು ಮರಳಿಸುವಂತೆ ಮಾಡುವಲ್ಲಿ ತಮ್ಮ ಸರಕಾರವು ಪ್ರಯತ್ನಿಸುತ್ತಿದೆ ಎಂದರು.

ಪ್ರತಿಭಾನ್ವಿತರಿಗೆ ಮತ್ತು ದೇಶದ ಅಭಿವೃದ್ಧಿಗೆ ದುಡಿಯುವವರಿಗೆ ನಾವು ಅವಕಾಶಗಳನ್ನು ನೀಡಬೇಕಾಗಿದ್ದು, ನವಭಾರತದ ಆಧಾರದ ಪ್ರತಿಭೆಗಳನ್ನು ಬೆಳೆಸಬೇಕಾಗಿದೆ. ದೇಶದ ಪ್ರತಿಯೊಂದು ಸಂಸ್ಥೆಗಳನ್ನೂ ಸ್ವಚ್ಛಗೊಳಿಸಬೇಕಿದ್ದರೆ, ಸ್ವಜನಪಕ್ಷಪಾತ ಮತ್ತು ವಂಶಪಾರಂಪರ್ಯದ ಮನಸ್ಥಿತಿಯನ್ನು ತೊಡೆದು, ಅರ್ಹ ನಾಗರಿಕರಿಗೆ ಅವಕಾಶ ನೀಡುವಂತೆ ಪ್ರಯತ್ನಿಸಬೇಕು ಎಂದರು.

ನಾರಿಶಕ್ತಿಗೆ ಮಣೆ

ಐತಿಹಾಸಿಕ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ

ಭಾವನಾತ್ಮಕವಾಗಿಯೇ ಕೆಂಪುಕೋಟೆಯಿಂದ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಪ್ರಗತಿಗೆ ಮಹಿಳೆಯರು ಪ್ರಮುಖ ಆಧಾರಸ್ಥಂಭಗಳಾಗಿ ಕೆಲಸ ಮಾಡಿದ್ದಾರೆ. ಮಹಿಳೆಯರ ಗೌರವವನ್ನು ತಗ್ಗಿಸುವ ಯಾವುದನ್ನೂ ನಾವು ಮಾಡಬಾರದು ಎಂದ ಅವರು, ಈ ನಿಟ್ಟಿನಲ್ಲಿ ನಮ್ಮ ವರ್ತನೆ ಮತ್ತು ಮೌಲ್ಯಗಳ ಮೂಲಕ ಇಂಥ ಮನಸ್ಥಿತಿಯನ್ನು ತೊಲಗಿಸುವ ಪ್ರತಿಜ್ಞೆ ಕೈಗೊಳ್ಳೋಣವೇ ಎಂದು ಕೇಳಿದರು.

ಭಾರತವು ಪ್ರಜಾಪ್ರಭುತ್ವಗಳ ತಾಯಿ ಮತ್ತು ಆಕೆಯು ಸಶಕ್ತವಾಗಿದ್ದಾಳೆ. ನಮ್ಮೊಳಗಿನ ದೇಶಭಕ್ತಿಯು ಭಾರತವು ಎಂದಿಗೂ ಅಲುಗಾಡದಂತೆ ಹಿಡಿದಿಟ್ಟಿದೆ. ಭಾರತವೇ ಒಂದು ಮಹತ್ವಾಕಾಂಕ್ಷೆಯ ಸಮಾಜವಾಗಿದ್ದು, ಇದುವೇ ನಮ್ಮ ಆಸ್ತಿ ಎಂದರು.

ಐತಿಹಾಸಿಕ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವಾಚರಣೆ ಭಾಷಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ

200 ಕೋಟಿ ಕೋವಿಡ್ ಲಸಿಕೆಗಳನ್ನು ವಿತರಿಸುವಲ್ಲಿ ಭಾರತದ ಯಶಸ್ಸು ಸಾಧಿಸುತ್ತಿರುವಾಗ, ಜಗತ್ತು ಇನ್ನೂ ಹೊಸ ವ್ಯಾಕ್ಸಿನ್‌ಗಳ ಕಾರ್ಯನಿರ್ವಹಣೆಗಳ ಬಗ್ಗೆ ಚರ್ಚೆ ಮಾಡುತ್ತಾ ಕೂತಿತ್ತು ಎಂದರು.

ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್
ಮಾಜಿ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಅವರು ಜೈ ಜವಾನ್, ಜೈ ಕಿಸಾನ್ ಘೋಷಣೆಯನ್ನು ಕೊಟ್ಟರು. ನಂತರ ಅಟಲ್ ಬಿಹಾರಿ ವಾಜಪೇಯಿ ಅವರು ಜೈ ವಿಜ್ಞಾನ್ ಎಂದು ಸೇರಿಸಿದರು. ಇದೀಗ ಮತ್ತೊಂದು ಅಗತ್ಯ – ಜೈ ಅನುಸಂಧಾನ್ (ಸಂಶೋಧನೆ ಮತ್ತು ನಾವೀನ್ಯತೆ) – ಅಗತ್ಯವಿದೆ ಎಂದ ಮೋದಿ, ಜವಾನ್, ಕಿಸಾನ್, ವಿಜ್ಞಾನ್ ಮತ್ತು ಅನುಸಂಧಾನ್‌ಗೆ ಶುಭವಾಗಲಿ ಎಂದರು.

ನಿಜವಾದ ಸ್ವಾತಂತ್ರ್ಯ ಹೋರಾಟಗಾರರು
ಇದೇ ವೇಳೆ, ಸ್ವಾತಂತ್ರ್ಯ ಹೋರಾಟಗಾರರ ಬಗೆಗೆ ಉಲ್ಲೇಖಿಸಿದ ಪ್ರಧಾನಿ ಮೋದಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಮ್ಮ ಹೋರಾಟಗಾರರು ಕ್ರೌರ್ಯ, ಹಿಂಸೆ ಅನುಭವಿಸದ ದಿನಗಳಿಲ್ಲ. ಗಾಂಧೀಜಿ, ಭಗತ್ ಸಿಂಗ್, ರಾಜ್‌ಗುರು, ರಾಮಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್, ರಾಣಿ ಲಕ್ಷ್ಮೀಬಾಯಿ, ಸುಭಾಷ್ ಚಂದ್ರ ಬೋಸ್, ತಾತ್ಯಾ ಟೋಪೆ, ಅಂಬೇಡ್ಕರ್ ಮತ್ತಿತರರು ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವನ್ನೇ ಅಲುಗಾಡಿಸಿದರು. ಭಗವಾನ್ ಬಿರ್ಸಾ ಮುಂಡಾ, ಸಿಧು ಕಾನ್ಹು, ಗುರು ಗೋವಿಂದ, ತೀರತ್ ಸಿಂಗ್ ಮತ್ತು ಅಲ್ಲೂರಿ ಸೀತಾರಾಮ ರಾಜು ಮುಂತಾದವರು ಮಾತೃಭೂಮಿಗಾಗಿ ಪ್ರಾಣ ಕೊಟ್ಟರು ಎಂದ ನರೇಂದ್ರ ಮೋದಿ, ಡಾ.ರಾಜೇಂದ್ರ ಪ್ರಸಾದ್, ಸಾವರ್ಕರ್, ನೆಹರೂಜಿ, ಸರ್ದಾರ್ ಪಟೇಲ್, ಎಸ್.ಪಿ.ಮುಖರ್ಜಿ, ಶಾಸ್ತ್ರಿ, ದೀನದಯಾಳ್ ಉಪಾಧ್ಯಾಯ, ಜಯಪ್ರಕಾಶ್ ನಾರಾಯಣ್, ಆರ್.ಎಂ.ಲೋಹಿಯಾ, ವಿನೋಬಾ ಬಾವೆ, ನಾನಾಜಿ ದೇಶಮುಖ್, ಸುಬ್ರಹ್ಮಣ್ಯ ಭಾರತಿ ಮುಂತಾದವರನ್ನೂ ಸ್ಮರಿಸಿಕೊಂಡರು.

ದೇಶವು ಇಂದು ಮರೆತು ಹೋದ ಹಾಗೂ ಸೂಕ್ತವಾದ ಮನ್ನಣೆ ಸಿಗದ ಸ್ವಾತಂತ್ರ್ಯ ಹೋರಾಟಗಾರರನ್ನು ಇಂದು ಸ್ಮರಿಸಿಕೊಳ್ಳುವಂತಾಗಿದೆ ಎಂದರು.

ಹರ್ ಘರ್ ತಿರಂಗಾ
ಪ್ರತಿ ಮನೆಯಲ್ಲೂ ಇಂದು ರಾಷ್ಟ್ರಧ್ವಜವು ಹೆಮ್ಮೆಯಿಂದ ಹಾರಾಡುವುದು ಸಾಧ್ಯವಾಗಿದೆ. ಇದು ವೈಭವೋಪೇತ ರಾಷ್ಟ್ರದ ಆತ್ಮಶಕ್ತಿಯ ಉದಾಹರಣೆ. ಕಳೆದ ಮೂರು ದಿನಗಳಲ್ಲಿ ದೇಶದ ಮೂಲೆಮೂಲೆಗಳಲ್ಲೂ ರಾಷ್ಟ್ರಧ್ವಜದ ಬಗೆಗೆ ಗೌರವ ಹೆಚ್ಚಾಗಿರುವುದು ಅತ್ಯಂತ ಸಂತಸದ ವಿಚಾರ ಎಂದರು.

ಇದೀಗ ಇಡೀ ಜಗತ್ತು ಭಾರತದ ಪ್ರಗತಿಯ ಬಗೆಗೆ ಅಚ್ಚರಿಯಿಂದ, ವಿಶ್ವಾಸದಿಂದ ಮತ್ತು ಸಮಸ್ಯೆ ಪರಿಹರಿಸುವ ರಾಷ್ಟ್ರ ಎಂಬ ದೃಷ್ಟಿಯಲ್ಲಿ ನೋಡುತ್ತಿದೆ. ಅವರ ದೃಷ್ಟಿಕೋನ ಬದಲಾಗಿದೆ ಎಂದು ಮೋದಿ ಹೆಮ್ಮೆಯಿಂದ ಹೇಳಿದರು.

ಯುವಕರ ಮೇಲೆ ನಿರೀಕ್ಷೆ, ದೇಶ ಮೊದಲು
ನಾವೇನೇ ಮಾಡುವುದಿದ್ದರೂ ದೇಶವೇ ಮೊದಲು ಎಂಬ ಮನಸ್ಥಿತಿ ನಮ್ಮದಾಗಬೇಕಿದೆ. ಯುವಪೀಳಿಗೆಯು ಮುಂದಿನ 25 ವರ್ಷಗಳ ಕಾಲ ಭಾರತದ ಅಭಿವೃದ್ಧಿಯತ್ತ ಗಮನ ಕೇಂದ್ರೀಕರಿಸಬೇಕಿದೆ. ಇಡೀ ಮಾನವ ಸಮೂಹದ ಪ್ರಗತಿಯತ್ತ ನಾವು ಶ್ರಮಿಸೋಣ. ಇದು ಭಾರತದ ಶಕ್ತಿ. ಸ್ವಾತಂತ್ರ್ಯದ 100ನೇ ವರ್ಷದೊಳಗೆ, ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕಂಡಿದ್ದ ಕನಸುಗಳನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕಿದೆ ಎಂದರು ನರೇಂದ್ರ ಮೋದಿ.

ಭಾರತ ನಿರ್ಮಿತ ಗನ್ ಮೂಲಕ ಗೌರವಾರ್ಪಣೆ
ಈ ಮಧ್ಯೆ, 75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಐತಿಹಾಸಿಕ ಕೆಂಪು ಕೋಟೆಯಲ್ಲಿ ನಡೆದ ದೇಶದ ಪ್ರಧಾನ ಸ್ವಾತಂತ್ರ್ಯೋತ್ಸವದಲ್ಲಿ, ಭಾರತ ನಿರ್ಮಿತ ತುಪಾಕಿಯಿಂದಲೇ 21 ಶಾಟ್‌ಗಳ ಗೌರವ ನಮನ ಸಲ್ಲಿಸಲಾಯಿತು.

ಮೋದಿಯವರ ಉಡುಗೆ
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಾಂಪ್ರದಾಯಿಕ ಕುರ್ತಾ ಮತ್ತು ಪೈಜಾಮದೊಂದಿಗೆ, ನೀಲಿ ಜಾಕೆಟ್ ಮತ್ತು ನೀಲಿ ಶೂಗಳನ್ನು ಧರಿಸಿದ್ದರು. 76ನೇ ಸ್ವಾತಂತ್ರ್ಯೋತ್ಸವದ ಸಂದರ್ಭ ಅವರು ತಲೆಗೆ ಕೂಡ ತ್ರಿವರ್ಣದ ಪಟ್ಟಿಗಳಿರುವ ಪೇಟಾವನ್ನು ಶಿರದಲ್ಲಿ ಧರಿಸಿದ್ದರು.

Avatar for Web Desk

About Post Author

Web Desk

Kannada News Enthusiasts | Professional Journalists | ಕನ್ನಡದ ಸುದ್ದಿ ಜೀವಿಗಳು
Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ಹಿಂದುಗಳ ವೇಷ ಧರಿಸಿ ಗೋರಿಯಲ್ಲಿ ಚಾದರ್‌ಗೆ ಬೆಂಕಿ: ಇಬ್ಬರ ಬಂಧನ
Next post Netaji Death | ಹಿಂದಿನ ಸರಕಾರಗಳು ನಿರ್ಲಕ್ಷಿಸಿದವು, ಡಿಎನ್ಎ ಪರೀಕ್ಷೆ ಮಾಡಲಿ: ನೇತಾಜಿ ಪುತ್ರಿ ಅನಿತಾ

ಸುದ್ದಿ ಸಂಚಯ

ಇವುಗಳನ್ನೂ ನೋಡಿ