ನವದೆಹಲಿ: ಭಾರತೀಯ ಮುಸ್ಲಿಮರಿಗೆ ಯಾವುದೇ ತೊಂದರೆಯುಂಟು ಮಾಡದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ನಡೆದ ಪ್ರತಿಭಟನೆ, ಹಿಂಸಾಚಾರದ ಕರಾಳ ನೆನಪುಗಳು ಇನ್ನೂ ಜನಮಾನಸದಿಂದ ಮರೆಯಾಗಿಲ್ಲ.
ದೇಶದ ಕಾಯ್ದೆ ವಿರೋಧಿಸಿ ಅನಗತ್ಯ ಹಿಂಸಾಚಾರ ನಡೆಸಲು ಅಷ್ಟೊಂದು ಹಣಕಾಸು ನೆರವು ಬಂದದ್ದೆಲ್ಲಿಂದ? ಇದರ ಹಿಂದೆ ಬೆನ್ನುಹತ್ತಿದ ಅನುಷ್ಠಾನ ನಿರ್ದೇಶನಾಲಯ (ಇಡಿ), ಗುರುವಾರ ಒಂಬತ್ತು ರಾಜ್ಯಗಳ 26 ಕಡೆಗಳಲ್ಲಿ ದಾಳಿ ನಡೆಸಿದೆ.
ನಿಷೇಧಿತ ಮತೀಯವಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ಗೆ ಸಂಬಂಧಪಟ್ಟ 26 ಸ್ಥಳಗಳಲ್ಲಿ ಅಲ್ಲದೆ, ಅದರ ಮುಖ್ಯಸ್ಥ ಒ.ಎಂ.ಅಬ್ದುಲ್ ಸಲಾಂ ಮತ್ತು ಕೇರಳ ರಾಜ್ಯಾಧ್ಯಕ್ಷ ನಸರುದ್ದೀನ್ ಇಲಮಾರಮ್ ನಿವಾಸಗಳಿಗೂ ದಾಳಿಯಾಗಿದೆ.
ಇದನ್ನೂ ಓದಿ: ಟ್ರಂಪ್ ಭೇಟಿ ವೇಳೆ ದೆಹಲಿ ದಂಗೆ: ತಪ್ಪೊಪ್ಪಿಕೊಂಡ ತಾಹಿರ್ ಹುಸೇನ್ ಬಿಚ್ಚಿಟ್ಟ ಆತಂಕಕಾರಿ ರಹಸ್ಯಗಳು
ಕರ್ನಾಟಕ, ತಮಿಳುನಾಡು, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ದೆಹಲಿ ಹಾಗೂ ಕೇರಳದ ಮಲಪ್ಪುರ ಮತ್ತು ತಿರುವನಂತಪುರಗಳ ಒಟ್ಟು 26 ಕಡೆಗಳಲ್ಲಿ ಇಡಿ ಅಧಿಕಾರಿಗಳು, ಮನಿ ಲಾಂಡರಿಂಗ್ ತಡೆ ಕಾಯ್ದೆಯ ಅನುಸಾರ ಶೋಧ ಕಾರ್ಯ ನಡೆಸಿದ್ದಾರೆ.
ಸಿಎಎ-ವಿರೋಧಿ ಹೋರಾಟಗಳಿಗೆ ಪಿಎಫ್ಐ ಹಣಕಾಸು ನೆರವು ನೀಡಿತ್ತೆಂಬ ಮಾಹಿತಿ ಹಿಂದೆಯೇ ಬಯಲಾಗಿತ್ತು. ಅದರ ಹಣಕಾಸು ಲಿಂಕ್‌ಗಳ ಬಗ್ಗೆ ಕೇಂದ್ರೀಯ ಏಜೆನ್ಸಿ ಇಡಿ, ತನಿಖೆ ನಡೆಸುತ್ತಿತ್ತು. ಫೆಬ್ರವರಿ ತಿಂಗಳಲ್ಲಿ ದೇಶದ ವಿವಿಧೆಡೆ ನಡೆದ ಹಿಂಸಾತ್ಮಕ ಪ್ರತಿಭಟನೆ, ದೆಹಲಿಯಲ್ಲಿ ನಡೆದ ಗಲಭೆಗಳಲ್ಲಿ ಪಿಎಫ್ಐ ಪಾತ್ರವೂ ಬಯಲಾಗಿತ್ತು.
ಆದರೆ, ಈ ದಾಳಿಗಳು ರೈತರ ಪ್ರತಿಭಟನೆಯ ವಿಷಯದಿಂದ ಗಮನ ಬೇರೆಡೆ ಸೆಳೆಯುವ ಯತ್ನ ಎಂದು ಸಲಾಂ ಪ್ರತಿಕ್ರಿಯಿಸಿದ್ದಾನೆ.
2006ರಲ್ಲಿ ಪಿಎಫ್ಐ ಸಂಘಟನೆಯು ಕೇರಳದಲ್ಲಿ ಹುಟ್ಟಿಕೊಂಡಿದ್ದು, ದೆಹಲಿಯಲ್ಲಿ ಮುಖ್ಯಾಲಯವನ್ನು ಹೊಂದಿದೆ. ಸಿಎಎ ವಿರೋಧಿ ಹೋರಾಟಗಳಲ್ಲಿ ಕಿಚ್ಚು ಹಚ್ಚುವುದಕ್ಕಾಗಿ ಅಕ್ರಮ ಹಣ ವರ್ಗಾವಣೆಯಾಗಿದೆ ಎಂಬ ಆರೋಪದಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ), ಪಿಎಫ್ಐ ಹಾಗೂ ಭೀಮ್ ಆರ್ಮಿ ನಡುವಿನ ಹಣಕಾಸು ಸಂಬಂಧವನ್ನೂ ತನಿಖೆ ನಡೆಸುತ್ತಿದೆ. ಎಲ್ಲ ರೀತಿಯ ತನಿಖೆಗೂ ಸಿದ್ಧ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್, ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ‘ಟುಕ್ಡೇ ಗ್ಯಾಂಗ್’ನಿಂದ ರೈತರ ಹೆಸರಲ್ಲಿ ಶಹೀನ್‌ಬಾಗ್ 2.0 ಸಂಚು: ಬಿಜೆಪಿ ಎಚ್ಚರಿಕೆ
ಇಡಿ ಅಧಿಕಾರಿಗಳ ಪ್ರಕಾರ, ಕಳೆದ ವರ್ಷದ ಡಿಸೆಂಬರ್ 4 ಹಾಗೂ ಈ ವರ್ಷದ ಜನವರಿ 6ರ ಮಧ್ಯೆ, ದೇಶದ ವಿವಿಧೆಡೆ ಭೀಮ್ ಆರ್ಮಿಗೆ ಸಂಬಂಧಿಸಿದ ಹಲವಾರು ಬ್ಯಾಂಕ್ ಖಾತೆಗಳಿಗೆ 1.04 ಕೋಟಿ ರೂ. ಜಮೆಯಾಗಿತ್ತು.
ಅದೇ ರೀತಿ, ಪಿಎಫ್ಐಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳಿಗೆ ಒಟ್ಟು 120 ಕೋಟಿ ರೂ. ಜಮೆಯಾಗಿತ್ತು ಎಂದು ಮೂಲಗಳು ತಿಳಿಸಿವೆ.
ಈ ಶಂಕಾಸ್ಪದ ಠೇವಣಿಗಳನ್ನು ಒಂದೋ ನಗದು ರೂಪದಲ್ಲಿ ಅಥವಾ ಐಎಂಪಿಎಸ್ ಮೂಲಕ ವರ್ಗಾಯಿಸಲಾಗಿದ್ದು, ಸಿಎಎ-ವಿರೋಧಿ ಅನಗತ್ಯ ಪ್ರತಿಭಟನೆಯ ಹೋರಾಟದಲ್ಲಿ ಗರಿಷ್ಠ ದೊಂಬಿ, ಗಲಭೆ ನಡೆದಿದ್ದ ಉತ್ತರ ಪ್ರದೇಶದಲ್ಲಿ ಗರಿಷ್ಠ ಹಣಕಾಸು ಪೂರೈಕೆಯಾಗಿತ್ತು.
ಸಿಎಎ-ವಿರೋಧಿ ಹೋರಾಟದ ಸಂದರ್ಭದಲ್ಲಿ ಈ ಬ್ಯಾಂಕ್ ಖಾತೆಗಳಿಂದ ಹಣವನ್ನು ನಗದೀಕರಿಸಲಾಗಿತ್ತು. ಈ ಹಣವನ್ನು ಬಳಸಿಯೇ ದೇಶದ ವಿವಿಧೆಡೆ ನಡೆದ ದೊಂಬಿಗಳಿಗೆ ಬಳಸಲಾಗಿತ್ತು ಎಂದು ಇಡಿ ಕಂಡುಕೊಂಡಿದ್ದು, ಈ ಕುರಿತು ಕೇಂದ್ರಕ್ಕೆ ಅದು ವರದಿಯನ್ನೂ ಕಳುಹಿಸಿದೆ.
ಏಜೆನ್ಸಿಯು ಆಮ್ ಆದ್ಮೀ ಪಾರ್ಟಿಯ ಮಾಜಿ ದೆಹಲಿ ಕೌನ್ಸಿಲರ್ ತಾಹಿರ್ ಹುಸೇನ್‌ನನ್ನೂ ಆಗಸ್ಟ್ ತಿಂಗಳಲ್ಲೇ ಬಂಧಿಸಿತ್ತು. ಆತನ ಒಡೆತನದ ಮನೆಯ ಮಹಡಿ ಮೇಲಿಂದ ಕಲ್ಲು, ಮದ್ದುಗುಂಡುಗಳ ಸಿಕ್ಕಿದ್ದು, ಹಿಂಸಾಚಾರದಲ್ಲಿ ಆತನ ನೇರ ಪಾತ್ರ ವಹಿಸಿರುವುದಕ್ಕೆ ಸಂಬಂಧಿಸಿದಂತೆ ಪೊಲೀಸರು ವರದಿಯನ್ನೂ ಸಲ್ಲಿಸಿದ್ದಾರೆ. ಆತನಿಗೂ ಪಿಎಫ್ಐ ಮೂಲಕ ಹಣ ಸಂದಾಯವಾಗಿತ್ತು ಎಂಬ ಆರೋಪವಿದೆ.
ಇದನ್ನೂ ಓದಿ: ಪಂಜಾಬಿನಲ್ಲಿ ಸುಟ್ಟ ಟ್ರ್ಯಾಕ್ಟರನ್ನೇ ದೆಹಲಿಯಲ್ಲೂ ತಂದು ಸುಟ್ಟ ಕಾಂಗ್ರೆಸ್: ದೇಶಕ್ಕೆ ಅವಮಾನ ಎಂದ ಬಿಜೆಪಿ

Average Rating