ಮುಂಬಯಿ: ಇದೆಲ್ಲ ಆರಂಭವಾಗಿದ್ದು ಶಿವಸೇನೆ-ಕಾಂಗ್ರೆಸ್ ಆಡಳಿತದ ಮಹಾರಾಷ್ಟ್ರದ ಪಾಲ್ಗರ್‌ನಲ್ಲಿ ಸನ್ಯಾಸಿಗಳನ್ನು ಹೊಡೆದು ಕೊಂದ ಪ್ರಕರಣದಿಂದ.
ಹಿಂದೂ ಸನ್ಯಾಸಿಗಳ ಹತ್ಯೆಯ ಬಗ್ಗೆ ತಮ್ಮದೇ ಪಕ್ಷದ ಅಧಿಕಾರವಿರುವ ರಾಜ್ಯದಲ್ಲಿ ನಡೆದ ಈ ಘೋರ ದುರಂತವನ್ನು ಖಂಡಿಸದೇ ಇದ್ದಾಗ, ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಅವರು ತಮ್ಮ ಚಾನೆಲ್‌ನಲ್ಲಿ ‘ಸೋನಿಯಾ ಗಾಂಧಿ ಮೌನ ಆಗಿರುವುದೇಕೆ’ ಎಂದು ಪ್ರಶ್ನಿಸಿದ್ದರಿಂದ. ಈ ಘಟನೆಯ ಹಿನ್ನೆಲೆಯನ್ನು ತಡಕಾಡಿದಾಗ ಸಿಗುವ ಅಂಶವಿದು.
ಪಾಲ್ಗರ್‌ನಲ್ಲಿ ಇಬ್ಬರು ಸಾಧುಗಳನ್ನು ಜನರ ಗುಂಪೊಂದು ಅಟ್ಟಾಡಿಸಿ ಹೊಡೆದು ಕೊಂದು ಹಾಕಿದಾಗ, ನ್ಯಾಯಕ್ಕೆ ಆಗ್ರಹಿಸಿ ಅರ್ನಬ್ ಅವರು ಅಭಿಯಾನವನ್ನೇ ಮಾಡಿದ್ದರು. ಕಾಂಗ್ರೆಸ್ ಪಕ್ಷ ಮತ್ತು ಅದರ ಅಧ್ಯಕ್ಷೆಯ ಮೌನದಿಂದ ರೋಸಿ ಹೋಗಿ, ನೇರ ಪ್ರಶ್ನೆ ಕೇಳಿದ್ದರು.
ಕ್ರಿಶ್ಚಿಯನ್ ಪಾದ್ರಿಗಳೇನಾದರೂ ಈ ರೀತಿ ಬರ್ಬರವಾದ ಸಾವಿಗೆ ಈಡಾಗುತ್ತಿದ್ದರೆ ಇಟಲಿ ಮೂಲದ ಸೋನಿಯಾ ಗಾಂಧಿ ಇದೇ ರೀತಿ ಮೌನ ತಾಳುತ್ತಿದ್ದರೇ ಎಂಬ ಅರ್ನಬ್ ಪ್ರಶ್ನೆಗೆ, ಕಾಂಗ್ರೆಸ್ ಪಕ್ಷವು ಅವರ ಬಾಯಿ ಮುಚ್ಚಿಸಲು ಕೈಗೆತ್ತಿಕೊಂಡ ಅಸ್ತ್ರವೇ ಈ ಆತ್ಮಹತ್ಯೆ ಪ್ರಕರಣ.
ಈ ಹಂತದಲ್ಲಿ, 2015ರಲ್ಲಿ ಕ್ರಿಶ್ಚಿಯನ್ ಮಿಶನರಿ ಗ್ರಹಾಂ ಸ್ಟೈನ್ಸ್ ಘಟನೆಯನ್ನೂ ಅರ್ನಬ್ ಪ್ರಸ್ತಾಪಿಸಿದ್ದರು. ಆ ಕಾಲದಲ್ಲಿ ಕಾಂಗ್ರೆಸ್ ಮುಖಂಡ ಪಿ.ಸಿ.ಥೋಮಸ್ ಸದಸ್ಯರಾಗಿರುವ ಸಮಿತಿಯೊಂದು ಸ್ಟೈನ್ಸ್ ಪತ್ನಿಗೆ ಮದರ್ ತೆರೆಸಾ ಸ್ಮಾರಕ ಸಾಮಾಜಿಕ ನ್ಯಾಯ ಪುರಸ್ಕಾರವನ್ನು ನೀಡಿತ್ತು.
ಇದೂ ಓದಿ: Rajya Sabha: 10ರಲ್ಲಿ ಒಂದು ಸ್ಥಾನವೂ ಇಲ್ಲ: ಕಾಂಗ್ರೆಸ್ ಮಹಾಪತನಕ್ಕೆ ಸಾಕ್ಷಿಯಾದ ಮೇಲ್ಮನೆ ಚುನಾವಣೆ
ತನ್ನೆಲ್ಲ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ಶಿವಸೇನೆಯ ಜೊತೆ ಕೈಜೋಡಿಸಿ ಸರ್ಕಾರ ರಚಿಸಿದ್ದ ಸೋನಿಯಾ ಗಾಂಧಿಯವರ ಕಾಂಗ್ರೆಸ್ ಪಕ್ಷವು ಅವರದೇ ರಾಜ್ಯದಲ್ಲಿ ಇಬ್ಬರು ಸಾಧುಗಳ ಹತ್ಯೆಯ ವಿರುದ್ಧ ಯಾಕೆ ಧ್ವನಿ ಎತ್ತಿಲ್ಲ ಎಂಬುದು ಅರ್ನಬ್ ಪ್ರಶ್ನೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಅರ್ನಬ್ ಗೋಸ್ವಾಮಿ ವಿರುದ್ಧ ಮಹಾರಾಷ್ಟ್ರ ಪೊಲೀಸರ ಮೂಲಕ ಹಲವಾರು ಕಡೆಗಳಲ್ಲಿ ಹಲವು ಎಫ್ಐಆರ್‌ಗಳನ್ನು ದಾಖಲಿಸಿತ್ತು. ಅರ್ನಬ್ ಸೇರಿದಂತೆ ರಿಪಬ್ಲಿಕ್ ಟಿವಿಯ ಅಧಿಕಾರಿಗಳನ್ನು ಪೊಲೀಸರು ನಿರಂತರ ವಿಚಾರಣೆಗೆ ಒಳಪಡಿಸಿದರು. ಇಬ್ಬರು ಗೂಂಡಾಗಳಂತೂ ಅರ್ನಬ್ ಮತ್ತು ಪತ್ನಿಯ ಮೇಲೆ ಹಲ್ಲೆಯನ್ನೂ ಮಾಡಿದ್ದರು. ಆದರೆ, ಅರ್ನಬ್ ಸಲ್ಲಿಸಿದ ದೂರಿನಲ್ಲಿ ಕಾಂಗ್ರೆಸ್ ಹೆಸರು ದಾಖಲಿಸಲು ಪೊಲೀಸರು ನಿರಾಕರಿಸಿದ್ದರು.
ಏನಿದು ಪ್ರಕರಣ?
ಎರಡು ವರ್ಷದ ಹಿಂದೆ, ಮೇ 2018ರಲ್ಲಿ ಒಳಾಂಗಣ ವಿನ್ಯಾಸಕಾರ ಅನ್ವಯ್ ನಾಯಕ್ ಎಂಬವರು ಆಲಿಬಾಗ್‌ನ ತನ್ನ ಬಂಗಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ, ಅರ್ನಬ್ ಗೋಸ್ವಾಮಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಕೇಸು ದಾಖಲಿಸಲಾಗಿತ್ತು.
ರಿಪಬ್ಲಿಕ್ ಟಿವಿಯು ಅನ್ವಯ್ ನಾಯಕ್ ಮಾಡಿದ್ದ ಕೆಲಸಕ್ಕೆ ಹಣ ಪಾವತಿಸಲಿಲ್ಲ, ಈ ಕಾರಣದಿಂದಲೇ ಆತ್ಮಹತ್ಯೆ ಮಾಡಿಕೊಂಡರು ಎಂದು ಪತ್ನಿ ದೂರಿದ್ದರು. ಇದರಲ್ಲಿ ಐಕಾಸ್ಟ್/ಸ್ಕೈಮೀಡಿಯಾದ ಫಿರೋಜ್ ಶೇಖ್ ಹಾಗೂ ಸ್ಮಾರ್ಟ್ ವರ್ಕ್ಸ್ ಕಂಪನಿಯ ನಿತೀಶ್ ಶಾರದಾ ಅವರನ್ನೂ ಸಹ ಆರೋಪಿಗಳಾಗಿ ಗುರುತಿಸಲಾಗಿತ್ತು.
ಆದರೆ, ಮಹಾರಾಷ್ಟ್ರ ಪೊಲೀಸರು ಕೇಸು ದಾಖಲಿಸಿಕೊಂಡು, ತನಿಖೆಯನ್ನು ಸಿಐಡಿಗೆ ವಹಿಸಿದರೂ, ಆರೋಪವನ್ನು ಸಮರ್ಥಿಸುವ ಸಾಕ್ಷ್ಯವಿಲ್ಲದ ಕಾರಣದಿಂದಾಗಿ ತನಿಖೆ ನಡೆಸಲಾಗದೆ, ಈ ಕೇಸನ್ನು ರದ್ದುಗೊಳಿಸಲಾಗಿತ್ತು.
ಆ ಸಂದರ್ಭದಲ್ಲಿ ರಿಪಬ್ಲಿಕ್ ಟಿವಿ ನೀಡಿದ ಸ್ಪಷ್ಟನೆ ಹೀಗಿದೆ:
“ಈ ಸುಳ್ಳು ಪ್ರೊಪಗಾಂಡಾ ಮಾಡುತ್ತಿರುವವರ ವಿರುದ್ಧ ರಿಪಬ್ಲಿಕ್ ಟಿವಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುತ್ತದೆ. ಕೊನ್ಕಾರ್ಡ್ ಡಿಸೈನ್ಸ್ ಪ್ರೈ.ಲಿ. ಕಂಪನಿಯ ಸೇವೆಯನ್ನು 2016ರಲ್ಲಿ ಪಡೆಯಲಾಗಿದ್ದು ಹೌದು. ಅವರು ಮಾಡಿದ ಕೆಲಸಕ್ಕೆ ಒಪ್ಪಂದದ ಅನುಸಾರವೇ ಹಣವನ್ನು ಪಾವತಿ ಮಾಡಲಾಗಿತ್ತು. ಇದಕ್ಕೆ ಸಂಬಂಧಿ ಚೆಕ್ ಸಂಖ್ಯೆ, ಮೊತ್ತ, ಪಾವತಿಯ ದಿನಾಂಕ, ಸಂಬಂಧಿತ ಸಂವಹನ ಮಾಹಿತಿ, ದಾಖಲೆಗಳು ಎಲ್ಲವು ಕೂಡ ರಿಪಬ್ಲಿಕ್ ಟಿವಿ ಬಳಿ ಇದೆ” ಎಂದು ಸ್ಪಷ್ಟನೆಯಲ್ಲಿ ಹೇಳಲಾಗಿತ್ತು.
ಇದೀಗ ಬುಧವಾರವೂ ರಿಪಬ್ಲಿಕ್ ಟಿವಿ ಈ ಕುರಿತು ಸಂಪೂರ್ಣ ಮಾಹಿತಿ ಬಿಡುಗಡೆ ಮಾಡಿದೆ.
ಸಾಕ್ಷ್ಯ ಒದಗಿಸಲು ಪೊಲೀಸರು ವಿಫಲವಾದ ಹಿನ್ನೆಲೆಯಲ್ಲಿ ಈ ಪ್ರಕರಣವೇ ಮುಚ್ಚಿ ಹೋಗಿತ್ತು. ಆದರೆ, ಅಕ್ಷತಾ ನಾಯಕ್ ವಿಡಿಯೊ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದರು ಮತ್ತು ಅದನ್ನು 2020 ಮೇ ತಿಂಗಳಲ್ಲಿ ಕಾಂಗ್ರೆಸ್‌ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಭರ್ಜರಿಯಾಗಿ ಶೇರ್ ಮಾಡಲಾಯಿತು. ಅದರಲ್ಲಿಜ್ಜ ಆರೋಪಗಳು ಸುಳ್ಳಾಗಿದ್ದವು.
ವಾಸ್ತವವೆಂದರೆ, 2019ರ ಏಪ್ರಿಲ್ ತಿಂಗಳಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನೀಡಿದ ಮುಚ್ಚುಗಡೆ ವರದಿಯ ಆಧಾರದಲ್ಲಿ ಅನ್ವಯ್ ನಾಯಕ್ ಆತ್ಮಹತ್ಯೆ ಖಟ್ಲೆಯನ್ನು ನ್ಯಾಯಾಲಯವೇ ಕೊನೆಗೊಳಿಸಿತ್ತು.
ರಾಯಗಢ ಪೊಲೀಸರು ಇಡೀ ಕೇಸಿನ ಪರಿಪೂರ್ಣ ತನಿಖೆ ನಡೆಸಿದ್ದರು. ಅರ್ನಬ್ ಗೋಸ್ವಾಮಿ ಹೇಳಿಕೆಯನ್ನೂ ದಾಖಲಿಸಿದ್ದರು, ಆದರೆ ಅಕ್ರಮವಾದ ಯಾವುದೇ ಸಾಕ್ಷ್ಯ ಇರಲಿಲ್ಲ. ರಾಯಗಢ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅಲಿಬಾಗ್ ಡಿವೈಎಸ್ಪಿ ಅವರು ಪ್ರಕರಣ ಕೊನೆಗೊಳಿಸಿದ ಬಗ್ಗೆ ವರದಿ ನೀಡಿದ್ದು, ಅದನ್ನು 16 ಏಪ್ರಿಲ್ 2019ರಲ್ಲಿ ನ್ಯಾಯಾಲಯವೂ ಸ್ವೀಕರಿಸಿತ್ತು.
ಆದರೆ, ಸಾಕ್ಷ್ಯಾಧಾರವೇ ಇಲ್ಲದ ಆರೋಪದ ಕುರಿತು ಮುಚ್ಚಲಾಗಿದ್ದ ಪ್ರಕರಣವನ್ನು ಮತ್ತೆ ತೆರೆದು, ಸತ್ಯ ತಿರುಚಿ, ಅಧಿಕಾರ ದುರುಪಯೋಗಪಡಿಸಿ, ಅರ್ನಬ್ ಗೋಸ್ವಾಮಿಯನ್ನು ಬಂಧಿಸಿರುವುದು ಮಹಾರಾಷ್ಟ್ರದಲ್ಲಿ ಅಧಿಕಾರಾರೂಢರ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಕ್ಕಾಗಿ ಸೇಡು ತೀರಿಸಿಕೊಳ್ಳುವ ಏಕೈಕ ಉದ್ದೇಶ ಹೊಂದಿದೆ ಎಂದು ರಿಪಬ್ಲಿಕ್ ಟಿವಿ ಹೇಳಿದೆ.
ರಿಪಬ್ಲಿಕ್‌ನ ಮಾತೃ ಸಂಸ್ಥೆ ಎಆರ್‌ಜಿ ಔಟ್‌ಲಯರ್ ಮೀಡಿಯಾ ಪ್ರೈ. ಲಿ. ಈಗಾಗಲೇ ಅನ್ವಯ್ ನಾಯಕ್ ಒಡೆತನದ ಕೊನ್ಕಾರ್ಡ್ ಕಂಪನಿಗೆ ಶೇ.90ರಷ್ಟು ಹಣವನ್ನು ಒಪ್ಪಂದದ ಅನುಸಾರವಾಗಿಯೇ ಎರಡು ವರ್ಷಗಳಲ್ಲಿ ಹಂತ ಹಂತವಾಗಿ ಪಾವತಿ ಮಾಡಿದೆ. ಉಳಿದ ಮೊತ್ತವನ್ನು ಕೆಲಸ ಪೂರ್ಣಗೊಳಿಸಿದ ಬಳಿಕ ಪಾವತಿಸಬೇಕಾಗಿತ್ತು. ಅದನ್ನೂ ಪಾವತಿಸಲು ಮಾಡಿದ ಪ್ರಯತ್ನಕ್ಕೆ ಪತ್ನಿ ಅಕ್ಷತಾ ನಾಯಕ್, ಮಗಳು ಆಜ್ಞಾ ನಾಯಕ್‌ರಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಉದ್ದೇಶಪೂರ್ವಕವಾಗಿಯೇ ತಪ್ಪಿಸಿದ್ದರು.
ವಾಸ್ತವವಾಗಿ 2019ರ ಜುಲೈ ತಿಂಗಳಲ್ಲಿ ಕೊನ್ಕಾರ್ಡ್ ಕಂಪನಿಯ ಖಾತೆಗೆ ಬಾಕಿ ಉಳಿದ ಎಲ್ಲ ಮೊತ್ತವನ್ನೂ ವರ್ಗಾಯಿಸಲಾಗಿತ್ತು, ಆದರೆ ಖಾತೆಯೇ ಕಾರ್ಯಾಚರಣೆಯಲ್ಲಿಲ್ಲದ ಕಾರಣ ಅದು ವಾಪಸ್ ಬಂದಿತ್ತು ಎಂದು ರಿಪಬ್ಲಿಕ್ ಟಿವಿ ಹೇಳಿದೆ.
ತಿರುಚಿದ ಸತ್ಯ: ಅಕ್ಷತಾ ಅವರು ಬಾಕಿ ಇರುವ ಎಲ್ಲ ಹಣವನ್ನೂ ಕೊನ್ಕಾರ್ಡ್ ಕಂಪನಿಯ ಬದಲು ಬೇರೆ ಖಾತೆಗೆ ಹಾಕುವಂತೆ ಹೇಳುತ್ತಲೇ ಇದ್ದರು. ಆದರೆ ಒಪ್ಪಂದದ ಪ್ರಕಾರ ಥರ್ಡ್ ಪಾರ್ಟಿಗೆ ಈ ಹಣವನ್ನು ನೀಡುವಂತಿರಲಿಲ್ಲ. ವ್ಯಾಜ್ಯ ಇತ್ಯರ್ಥದ ಎಲ್ಲ ಪ್ರಯತ್ನಗಳಿಗೂ ಆ ಕಡೆಯಿಂದ ಪ್ರತಿಕ್ರಿಯೆಯೇ ಬಂದಿಲ್ಲ. ಈ ಕುರಿತು ಇಮೇಲ್, ವಾಟ್ಸ್ಆ್ಯಪ್ ಸಂದೇಶಗಳೆಲ್ಲ ತನ್ನ ಬಳಿ ಇವೆ. ಇದೀಗ ಆಕೆ ಸತ್ಯ ತಿರುಚುತ್ತಿದ್ದಾರೆ ಎಂಬುದಕ್ಕೆ ಎಲ್ಲ ಸಾಕ್ಷ್ಯಾಧಾರಗಳೂ ತನ್ನ ಬಳಿ ಇದೆ ಎಂದಿದೆ ರಿಪಬ್ಲಿಕ್ ಟಿವಿ.
ಕಾನ್ಕರ್ಡ್ ಕಂಪನಿಗೆ ಒಟ್ಟು ನೀಡಬೇಕಾಗಿದ್ದುದು 5.4 ಕೋಟಿ ರೂ. ಇದರಲ್ಲಿ ಸ್ಟುಡಿಯೋ ವಿನ್ಯಾಸ ಯೋಜನೆಗಾಗಿ ನೀಡಲಾಗಿದ್ದ ಒಟ್ಟು ಹಣದಲ್ಲಿ 83 ಲಕ್ಷ ರೂ. ಬಾಕಿ ಇತ್ತು ಎಂದು ಟೈಮ್ಸ್ ಆಫ್ ಇಂಡಿಯಾ ಅಂದು ವರದಿ ಮಾಡಿತ್ತು.
ಇದೀಗ ಅರ್ನಬ್ ಮೇಲಿನ ದೌರ್ಜನ್ಯ ಖಂಡಿಸಿರುವ, ಸತ್ಯ ಹೇಳಿದ್ದಕ್ಕಾಗಿ ಇದೇ ಮಹಾರಾಷ್ಟ್ರ ಸರ್ಕಾರದಿಂದ ಮನೆಯ ಭಾಗ ಧ್ವಂಸ ಮಾಡಿಸಿಕೊಂಡಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಕೂಡ ಕೆಂಡ ಕಾರಿದ್ದು, “ಸತ್ಯ ಮುಚ್ಚಿ ಹಾಕಲು ಎಷ್ಟು ಕುತ್ತಿಗೆ ಹಿಸುಕುತ್ತೀರಿ, ಎಷ್ಟು ದಾಳಿ ಮಾಡುತ್ತೀರಿ ‘ಸೋನಿಯಾ ಸೇನಾ’ (ಶಿವಸೇನೆ ಮತ್ತು ಕಾಂಗ್ರೆಸ್ ಮೈತ್ರಿಕೂಟ)” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: TRP Scam ಸಿಬಿಐಗೆ ವಹಿಸಿದ್ದು ಸುದ್ದಿಯಾಗಲಿಲ್ಲ: ಎಫ್ಐಆರ್‌ನಲ್ಲಿದ್ದುದು ರಿಪಬ್ಲಿಕ್ ಅಲ್ಲ, ಇಂಡಿಯಾ ಟುಡೇ ಹೆಸರು!
ಇದನ್ನೂ ಓದಿ: Press Freedom | ಮುಂಬಯಿ ಪೊಲೀಸರಿಗೆ ಕಪ್ಪು ಚುಕ್ಕೆ: ಅರ್ನಬ್ ಗೋಸ್ವಾಮಿಗೆ ಹಲ್ಲೆ ನಡೆಸಿ ಬಂಧನ
ಇದನ್ನೂ ಓದಿ: Arnab Arrest | ಮಾಧ್ಯಮ ಸ್ವಾತಂತ್ರ್ಯಕ್ಕೆ ಅಪಾಯ: ಮತ್ತೆ ತುರ್ತು ಪರಿಸ್ಥಿತಿ ನೆನಪಿಸಿದ ಶಿವಸೇನೆ-ಕಾಂಗ್ರೆಸ್ ಸರ್ಕಾರ

Average Rating