ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ ಹಿಂದಿನ ಕಾಂಗ್ರೆಸ್ ಆಳ್ವಿಕೆಯು ಮಾಡಿದ್ದ ತಪ್ಪು ಸರಿಪಡಿಸಿದ ನರೇಂದ್ರ ಮೋದಿ ಸರ್ಕಾರದ ಕ್ರಮದ ವಿರುದ್ಧ ವರ್ಷದ ಬಳಿಕ ಇದೀಗ ಅಲ್ಲಿ ಬಲಹೀನವಾಗಿರುವ ರಾಜಕೀಯ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿವೆ.
ಜನರ ಪ್ರಾಮಾಣಿಕ ಹಕ್ಕುಗಳ ರಕ್ಷಣೆಗಾಗಿ ಹೋರಾಡುವುದಾಗಿಯೂ, ಆರ್ಟಿಕಲ್ 370 ರದ್ದಾದ ಬಳಿಕ ಅಂದಿನ ರಾಜ್ಯದ ಅಸ್ತಿತ್ವವೇ ಕಳೆದುಹೋಗಿದ್ದು , ಅದರ ಮರುಸ್ಥಾಪನೆಗೆ ಹೋರಾಟ ಮುಂದುವರಿಸುವುದಾಗಿ ಹೇಳಿವೆ.
ಇಲ್ಲಿನ ಭೂಮಿ ಮತ್ತು ಉದ್ಯೋಗದ ಹಕ್ಕುಗಳ ರಕ್ಷಣೆಯೊಂದಿಗೆ, ಜಮ್ಮು ಮತ್ತು ಕಾಶ್ಮೀರಕ್ಕೆ ಪರಿಪೂರ್ಣ ರಾಜ್ಯದ ಸ್ಥಾನಮಾನ ನೀಡುವ ಬಗ್ಗೆ ಕಾಂಗ್ರೆಸ್ ಹಿಂದಿನಿಂದಲೂ ಹೇಳುತ್ತಲೇ ಇದೆ. ಅದೇ ರೀತಿ ಲಡಾಖ್‌ನಲ್ಲೂ ಸಂವಿಧಾನದ ಆರನೇ ಶೆಡ್ಯೂಲ್ ಪ್ರಕಾರ ಅಲ್ಲಿನ ನಿವಾಸಿಗಳ ಹಕ್ಕುಗಳ ರಕ್ಷಣೆಯ ಬೇಡಿಕೆಯನ್ನು ಪಕ್ಷವು ಬೆಂಬಲಿಸುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿ.ಎ.ಮೀರ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.
2019ರ ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವರ್ಷ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದ್ದ ಕೇಂದ್ರ ಸರ್ಕಾರವು, ಅಲ್ಲಿನ ಭಯೋತ್ಪಾದನಾ ಚಟುವಟಿಕೆಗಳಿಗೆ ಸಾಕಷ್ಟು ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿತ್ತು. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಕೇಂದ್ರಾಡಳಿತ ಪ್ರದೇಶಗಳನ್ನು ನಿರ್ಮಿಸುವ ಮೂಲಕ, ಪ್ರತ್ಯೇಕತಾವಾದಿಗಳ ಆಟಾಟೋಪಕ್ಕೆ ಕಡಿವಾಣವನ್ನೂ ಹಾಕಲಾಗಿತ್ತು.
ಅಲ್ಲಿನ ರಾಜಕಾರಣಿಗಳು 370ನೇ ವಿಧಿ ಅಡಿಯಲ್ಲಿ ಸಾಕಷ್ಟು ಸೌಲಭ್ಯಗಳನ್ನು ಆನಂದಿಸುತ್ತಿದ್ದರು ಮತ್ತು ಪ್ರತ್ಯೇಕತಾವಾದಿಗಳೂ ಸ್ವಚ್ಛಂದವಾಗಿ ಉಗ್ರಗಾಮಿಗಳೊಂದಿಗೆ ಶಾಮೀಲಾಗಿದ್ದ ಕಾರಣದಿಂದಾಗಿ, ಅಲ್ಲಿನ ಮೂಲನಿವಾಸಿಗಳಾದ ಕಾಶ್ಮೀರಿ ಪಂಡಿತರ ಬದುಕಿಗೇ ಕುತ್ತು ಬಂದಿತ್ತು.
ಈ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಮೊದಲ ಬಾರಿಗೆ ಆರು ಪ್ರಮುಖ ರಾಜಕೀಯ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಕಾಂಗ್ರೆಸ್, ಪೀಪಲ್ ಕಾನ್ಫರೆನ್ಸ್, ಸಿಪಿಎಂ ಹಾಗೂ ಅವಾಮಿ ನ್ಯಾಶನಲ್ ಕಾನ್ಫರೆನ್ಸ್ ಪಕ್ಷಗಳು ಶನಿವಾರ ಒಟ್ಟಾಗಿ ಸೇರಿ, ತಮ್ಮ ಅಸ್ತಿತ್ವದ ಆತಂಕದೊಂದಿಗೆ ಸಭೆ ನಡೆಸಿವೆ.
ಇದುವರೆಗೆ ಆರೂ ಪಕ್ಷಗಳು ತಮ್ಮ ತಮ್ಮೊಳಗೇ ಕಚ್ಚಾಡಿಕೊಂಡು, ರಾಜ್ಯದ ಜನರಿಗೆ ದೊರೆಯ ಬೇಕಾದ ಹಕ್ಕುಗಳ ಬಗ್ಗೆ ಮರೆತಿದ್ದವು. ಈಗ 2019ರ ಆಗಸ್ಟ್ 4ರವರೆಗೂ ಇದ್ದ ವಿಶೇಷಾಧಿಕಾರದ ಮರುಸ್ಥಾಪನೆಯ ಗುರಿಯೇ ಜಮ್ಮು ಮತ್ತು ಕಾಶ್ಮೀರದ ಈ ಆರೂ ಪಕ್ಷಗಳನ್ನು ಒಂದುಗೂಡಿಸಿವೆ.
ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಪೀಪಲ್ಸ್ ಕಾನ್ಫರೆನ್ಸ್ ಮುಖ್ಯಸ್ಥ ಸಾಜಾದ್ ಲೋನೆ, ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಅಧ್ಯಕ್ಷ ಜಿ.ಎ.ಮೀರ್, ಸಿಪಿಎಂನ ಎಂ.ವೈ.ತಾರಿಗಾಮಿ ಮತ್ತು ಅವಾಮಿ ನ್ಯಾಷನಲ್ ಕಾನ್ಫರೆನ್ಸ್‌ನ ಮುಜಫರ್ ಶಾ ಅವರು ನೀಡಿದ ಜಂಟಿ ಹೇಳಿಕೆಯಲ್ಲಿ, ಈ ವಿಷಯ ಪ್ರಕಟಿಸಲಾಗಿತ್ತು.
ಕಳೆದ ವರ್ಷದ ಆಗಸ್ಟ್ 4ರಂದು, ವಿಶೇಷಾಧಿಕಾರ ರದ್ದು ಮಾಡುವ ಕೆಲವೇ ಕ್ಷಣಗಳ ಮೊದಲು ಅಲ್ಲಿನ ರಾಜಕಾರಣಿಗಳೆಲ್ಲರನ್ನೂ ಗೃಹಬಂಧನದಲ್ಲಿರಿಸಲಾಗಿತ್ತು. ನಂತರ, ರಾಜ್ಯಕ್ಕೆ ಸೇನಾಪಡೆಗಳನ್ನು ಕಳುಹಿಸಿ, ಉಗ್ರಗಾಮಿಗಳು, ಅವರ ಬೆಂಬಲಿಗರು ತಲೆ ಎತ್ತದಂತೆ ಮತ್ತು ಶಾಂತಿ ಸ್ಥಾಪನೆಗಾಗಿ ಶ್ರಮಿಸಲಾಗಿತ್ತು. ವರ್ಷದ ಮೌನದ ಬಳಿಕ ಅಲ್ಲಿನ ರಾಜಕೀಯ ಪಕ್ಷಗಳೀಗ ಎದ್ದು ನಿಂತಿವೆ.
ಕಳೆದ ಒಂದು ವರ್ಷದಲ್ಲಿ ಕಾಶ್ಮೀರದ ಜನತೆ ಹೆಚ್ಚಿನವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಭಾರತೀಯ ಸೇನಾ ಪಡೆಗಳ ಕಲ್ಲು ತೂರಾಟಗಾರರ ಹಾವಳಿ ಕಡಿಮೆಯಾಗಿದೆ. ಉಗ್ರಗಾಮಿ ಚಟುವಟಿಕೆಗೂ ಕಡಿವಾಣ ಬಿದ್ದಿದೆ. ಕಟ್ಟು ನಿಟ್ಟಿನ ಕ್ರಮದಿಂದಾಗಿ ವಿದೇಶದಿಂದ ಬರುತ್ತಿರುವ ಹಣಕ್ಕೂ ತೊಂದರೆಯಾಗಿದೆ. ಪಿಡಿಪಿ ಪಕ್ಷವೇ ಒಡೆದು ಹೋಗಿ, ಒಂದು ಸಣ್ಣ ಗುಂಪು ಮಾತ್ರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಜೊತೆಯಲ್ಲಿದೆ.
ಆದರೆ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಒಡೆದಿಲ್ಲವಾದರೂ, ಪಕ್ಷದ ಮೌನದ ಬಗ್ಗೆ ಒಡಕಿನ ಧ್ವನಿ ಕೇಳಿಬಂದಿದೆ. ಯಾಕೆಂದರೆ ಹಿಂದೆಯೂ ಎನ್‌ಡಿಎ, ಬಿಜೆಪಿ ಜೊತೆ ಕೈಜೋಡಿಸಿ ಗಾಳಿ ಬಂದ ಕಡೆ ತೂರಿಕೊಂಡಿದ್ದ ಪಕ್ಷವಿದು.
ಕಾಶ್ಮೀರದ ಈ ಎಲ್ಲ ಪಕ್ಷಗಳಿಗೆ ಆಧಾರವೇ ಅಲ್ಲಿನ ಬಹುಸಂಖ್ಯಾತ ಮುಸ್ಲಿಂ ಮತಗಳು. ಅವರಿಗೆ ಚಿಂತೆಯಾಗಿರುವುದೇಕೆಂದರೆ, ಕೇಂದ್ರದ ಈ ನೀತಿಗಳು ಅಲ್ಲಿನ ಜನಸಂಖ್ಯಾ ಸ್ಥಿತಿಗತಿಯನ್ನೇ ಬದಲಾಯಿಸಬಹುದೆಂಬ ಆತಂಕ. ಅಲ್ಲಿ ಹೊಸದಾಗಿ ಬಂದಿರುವ ವಾಸಯೋಗ್ಯತೆಯ ಅಧಿವಾಸ ನಿಯಮಗಳು, ಶಸಸ್ತ್ರ ಸೇನಾಪಡೆಗಳು ಸ್ಥಳೀಯ ಆಡಳಿತದ ಅನುಮತಿಯಿಲ್ಲದೆಯೂ ನಿರ್ಮಾಣ ಕಾಮಗಾರಿಗಳನ್ನು ನಡೆಸಬಹುದೆಂಬ ನೀತಿ, ಹೊಸ ವಸತಿ ನೀತಿ, ಸ್ಥಳೀಯರಲ್ಲದವರಿಗೆ ಉದ್ಯಮ ಸ್ಥಾಪನೆಗೆ ಅನುಮತಿ, ಕಾಶ್ಮೀರಿ ನದಿಗಳ ಗಣಿಗಾರಿಕೆ ಅನುಮತಿಯನ್ನೂ ಹೊರಗಿನವರಿಗೆ ನೀಡುವುದು ಮುಂತಾದವೆಲ್ಲವೂ ರಾಜ್ಯದ ಜನಸಂಖ್ಯಾ ವಿಧಾನವನ್ನೇ ಬದಲಿಸಲಿದ್ದು, ತಮ್ಮ ಆಟ ನಡೆಯದೆಂಬ ಆತಂಕ ಈ ಆರೂ ಪಕ್ಷಗಳಿಗೆ ಇವೆ.
ಅದೇ ರೀತಿ, ಕೇಂದ್ರ ಸರ್ಕಾರವು ಸ್ಥಳೀಯ ಸರಪಂಚರು, ಸ್ಥಳೀಯ ರಾಜಕಾರಣಿಗಳನ್ನು ಒಳಗೊಂಡಂತೆ ‘ನವ ಕಾಶ್ಮೀರ’ ನಿರ್ಮಾಣಕ್ಕಾಗಿ ಮುಖ್ಯವಾಹಿನಿಯ ತಂಡವೊಂದನ್ನು ರಚಿಸಿತ್ತು. ಅದರಲ್ಲಿ ಪಿಡಿಪಿಯ ಮಾಜಿ ಶಾಸಕರು, ಮಾಜಿ ಮಂತ್ರಿಗಳು, ಸ್ಥಳೀಯ ರಾಜಕಾರಣಿಗಳನ್ನೊಳಗೊಂಡ ಅಪ್ನೀ ಪಾರ್ಟಿ, ಪಂಚರು ಮತ್ತು ಸರಪಂಚರ ತಂಡ ಇದೆ.
ಇಲ್ಲಿ ಆಸಕ್ತಿದಾಯಕ ವಿಷಯವೆಂದರೆ, ಸಾಜಾದ್ ಲೋನೆ ಮತ್ತವರ ಪೀಪಲ್ಸ್ ಕಾನ್ಫರೆನ್ಸ್ 2014ರ ವಿಧಾನಸಭೆ ಚುನಾವಣೆಗೆ ಮುನ್ನವೇ ಬಿಜೆಪಿ ಜೊತೆ ಸೇರಿಕೊಂಡಿತ್ತು. ಇದೀಗ ಗೃಹ ಬಂಧನಕ್ಕೊಳಗಾದ ಲೋನೆ ಸಹಿತ ಎಲ್ಲರಿಗೂ ಬಿಜೆಪಿಯ ‘ನಯಾ ಕಾಶ್ಮೀರ’ದಲ್ಲಿ ತಮಗೆ ಸ್ಥಾನವಿಲ್ಲ ಎಂಬುದು ಅರಿವಿಗೆ ಬಂದಿದೆ. ಹೀಗಾಗಿ, ತಮಗೆ ಮುಂದೆ ಯಾವುದೇ ದಾರಿ ಕಾಣದ ಈ ಪಕ್ಷಗಳು, ರದ್ದುಗೊಂಡ ವಿಶೇಷಾಧಿಕಾರ ಮರುಸ್ಥಾಪನೆಯ ಆಗ್ರಹದೊಂದಿಗೆ ಆಟ ಶುರು ಮಾಡಿವೆ.

Average Rating