ಬೆಂಗಳೂರು: ಫೇಸ್ಬುಕ್ನಲ್ಲಿ ಪ್ರವಾದಿ ಅವಹೇಳನಕ್ಕೆ ಆಕ್ರೋಶಗೊಂಡು ಮಂಗಳವಾರ ರಾತೋರಾತ್ರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಷ್ಟೇ ಅಲ್ಲದೆ, ಸಿಕ್ಕ ಸಿಕ್ಕ ವಾಹನಗಳಿಗೆ ಬಡಿಗೆಯಿಂದ ಹೊಡೆದು, ಕಲ್ಲು ತೂರಾಟ ಮಾಡಿ, ಬೆಂಕಿ ಹಚ್ಚಿ ದಾಂಧಲೆ ನಡೆಸಿದ 110 ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಮೂವರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ.
ಕಾವಲ್ ಬೈರಸಂದ್ರದಲ್ಲಿ ದೇವರ ಜೀವನ ಹಳ್ಳಿ (ಡಿ.ಜಿ.ಹಳ್ಳಿ) ಪೊಲೀಸ್ ಠಾಣೆಯ ಸುತ್ತಮುತ್ತ ಮಂಗಳವಾರ ರಾತ್ರಿ ಏಕಾಏಕಿಯಾಗಿ ಸಾವಿರಾರು ಮಂದಿಯ ಗುಂಪು ದಾಂಧಲೆಗಿಳಿದಿತ್ತು. ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾನಿಗೀಡಾಗಿದ್ದು, ದುಷ್ಕರ್ಮಿಗಳು ಸಿಕ್ಕಿದ್ದ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡರು. ನಿಲ್ಲಿಸಲಾಗಿದ್ದ ಪೊಲೀಸ್ ವಾಹನ, ಕಾರು, ಬಸ್ಸು ಮತ್ತಿತರ ಸಾರ್ವಜನಿಕ ವಾಹನಗಳಿಗೆ ದೊಡ್ಡ ದೊಡ್ಡ ಸ್ಟೀಲ್ ರಾಡ್ಗಳಿಂದ ಬಡಿದು ಪುಡಿಗಟ್ಟುವ, ಕಾಲಿನಿಂದ ಒದೆಯುವ, ವಾಹನಗಳನ್ನು ಮಗುಚಿಹಾಕುವ ಆಕ್ರೋಶಭರಿತರ ದೃಶ್ಯಗಳು ಟಿವಿ ವಾಹಿನಿಗಳಲ್ಲಿ ಕಂಡುಬರುತ್ತಿದ್ದವು. ನಿಲ್ಲಿಸಲಾಗಿದ್ದ ಅಮಾಯಕರ ದ್ವಿಚಕ್ರ ವಾಹನಗಳನ್ನೂ ಪುಡಿಗಟ್ಟಿ, ರಾಶಿ ಹಾಕುತ್ತಿದ್ದ ದೃಶ್ಯ ಆತಂಕಕಾರಿಯಾಗಿತ್ತು.
ಪ್ರವಾದಿ ಬಗ್ಗೆ ಅವಹೇಳನಕಾರಿ ಬರಹ ಪ್ರಕಟಿಸಿದಾತನನ್ನು ಬಂಧಿಸಲು ಈ ರೀತಿಯ ಗಲಭೆ ನಡೆದಿತ್ತು ಎಂಬುದು ಬಳಿಕ ತಿಳಿಯಿತು. ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆ ಹಾಗೂ ಪೊಲೀಸ್ ಠಾಣೆಗೂ ಕಲ್ಲು ತೂರಿ ಬೆಂಕಿ ಹಚ್ಚಿ ಸಂಭ್ರಮಿಸುತ್ತಿದ್ದ ದೃಶ್ಯಗಳು ಇಡೀ ಬೆಂಗಳೂರಿಗೇ ಆತಂಕ ಮೂಡಿಸಿತ್ತು. ಮನೆಮನೆಗಳಿಗೂ ಬೆಂಕಿ ವ್ಯಾಪಿಸಿದ್ದು, ಹಲವರು ಮನೆಯಿಂದ ಹೊರಗೋಡಿರುವ ದೃಶ್ಯಗಳು ವಾಹಿನಿಗಳಲ್ಲಿ ಪ್ರಸಾರವಾಗಿ ಆತಂಕಕ್ಕೆ ಕಾರಣವಾಗಿತ್ತು.
ಘಟನೆಯಲ್ಲಿ ಪತ್ರಕರ್ತರು, ಸಾರ್ವಜನಿಕರು ಹಾಗೂ ಪೊಲೀಸರ ಮೇಲೂ ಹಲ್ಲೆ ನಡೆದಿದ್ದು, ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿಷ್ಪಾಪಿ ಸಾರ್ವಜನಿಕರ ಹಲವು ವಾಹನಗಳು ಸುಟ್ಟು ಕರಕಲಾಗಿದ್ದು, ಕೆಲವರಂತೂ ತಮ್ಮ ಜೀವನೋಪಾಯವನ್ನೇ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.
ರಾತ್ರಿ ನಡೆದ ವಿದ್ಯಮಾನವು ಜನರಲ್ಲಿ ಭಾರಿ ಭಯಕ್ಕೆ ಕಾರಣವಾಗಿತ್ತು. ಪೊಲೀಸ್ ಆಯುಕ್ತ ಕಮಲಪಂತ್ ಅವರು ಎಲ್ಲ ಡಿಸಿಪಿಗಳನ್ನು ತಕ್ಷಣವೇ ವಿವಿಧೆಡೆಯಿಂದ ಕರೆಸಿಕೊಳ್ಳಬೇಕಾಗಿಬಂದಿತ್ತು. ಕೊನೆಗೂ ಭಾರಿ ಶ್ರಮದ ಬಳಿಕ ಪೊಲೀಸರು ಲಾಠಿ ಚಾರ್ಜ್, ಅಶ್ರುವಾಯು ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಅವಹೇಳನಕಾರಿ ಬರಹ ಪ್ರಕಟಿಸಿದ ನವೀನ್ ಎಂಬಾತನನ್ನು ಬಂಧಿಸಲಾಗಿದ್ದು, ಈತ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಅವರ ಅಳಿಯ (ಸಹೋದರಿಯ ಪುತ್ರ) ಎಂದು ತಿಳಿದುಬಂದಿದೆ. 50 ಮಂದಿ ಪೊಲೀಸರಿಗೆ ದುಷ್ಕರ್ಮಿಗಳ ದಾಳಿಯಿಂದಾಗಿ ಗಾಯವಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೆ ಕೆಲವರು ಪ್ರಚೋದನಕಾರಿ ಪೋಸ್ಟ್ ಹಾಕಿ, ಗಲಭೆಗೆ ಬರುವಂತೆ ಆಹ್ವಾನಿಸಿದ್ದರು. ಅವರ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ. ಈಗಾಗಲೇ 110 ಮಂದಿಯನ್ನು ಬಂಧಿಸಲಾಗಿದ್ದು, ತಲೆ ಮರೆಸಿಕೊಂಡಿರುವ ಮತ್ತಷ್ಟು ದುಷ್ಕರ್ಮಿಗಳಿಗಾಗಿ ಹುಡುಕಾಟ ಮುಂದುವರಿದಿದೆ.
ಈ ಮಧ್ಯೆ, ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ಚರ್ಚೆಯ ಕಾವೇರಿದ್ದು, ಹಿಂದೂ ಧರ್ಮದ ಅವಹೇಳನವಾದರೆ ಯಾರೂ ಏನೂ ಮಾಡುವುದಿಲ್ಲ, ನೆಲದ ಕಾನೂನಿನ ಪ್ರಕಾರ ದೂರು ದಾಖಲಿಸಲಾಗುತ್ತದೆ. ಅಂಥವರನ್ನೂ ಬಂಧಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಕಾನೂನು ಕೈಗೆತ್ತಿಕೊಂಡವರ ಮೇಲೆ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆದೇಶ ನೀಡಿದ್ದಾರೆ.

Average Rating