ಉತ್ತಮ ಗುಣಮಟ್ಟ ಮತ್ತು ಜೇಬಿಗೆ ಹಗುರ ಎಂಬ ಕಾರಣಕ್ಕೆ ಖಾದಿ ಮಾಸ್ಕ್ಗಳಿಗೆ ಸಾಕಷ್ಟು ಬೇಡಿಕೆಯಿದೆ. ಇದೀಗ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ (KVIC) ಪ್ರತಿಷ್ಠಿತ ಆರ್ಡರ್ ಕೂಡ ಬಂದಿದೆ. ಅದೆಂದರೆ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಈಗ 1.80 ಲಕ್ಷ ಮಾಸ್ಕ್ ಪೂರೈಸುವಂತೆ ಖಾದಿ ಮಂಡಳಿಗೆ ಬೇಡಿಕೆ ಮುಂದಿಟ್ಟಿದೆ.
ಮಂಡಳಿ ಪ್ರಕಾರ, ರೆಡ್ ಕ್ರಾಸ್ಗೆ ಪೂರೈಸಲಿರುವ ಮಾಸ್ಕ್ಗಳು ಕೈಮಗ್ಗದ ಹತ್ತಿ ಬಟ್ಟೆಯಿಂದ ತಯಾರಿಸಲಾಗುತ್ತದೆ. ಕಂದು ಬಣ್ಣದಲ್ಲಿ ಕೆಂಪು ಪೈಪಿಂಗ್ ಇರುತ್ತದೆ ಮತ್ತು ಎರಡು ಪದರಗಳಿರುತ್ತವೆ. ಇದರಲ್ಲಿ ರೆಡ್ ಕ್ರಾಸ್ ಸೊಸೈಟಿಯ ಲಾಂಛನ ಮತ್ತು ಖಾದಿ ಇಂಡಿಯಾ ಟ್ಯಾಗ್ ಕೂಡ ಇರುತ್ತದೆ. ಮುಂದಿನ ತಿಂಗಳಿಂದ ಈ ಮಾಸ್ಕ್ ಪೂರೈಸಲಾಗುತ್ತದೆ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ತಿಳಿಸಿದೆ.
ಈ ಆರ್ಡರ್ ಪೂರೈಸಲು 20 ಸಾವಿರ ಮೀಟರ್ ಬಟ್ಟೆ ಬೇಕಾಗುತ್ತದೆ ಮತ್ತು ಖಾದಿ ನೌಕರರಿಗೆ 9000 ದಿನಗಳ ಕೆಲಸ ಹೆಚ್ಚುವರಿಯಾಗಿ ದೊರೆಯಲಿದೆ. ಇದು ಆತ್ಮನಿರ್ಭರ ಭಾರತದ ಭಾಗವಾಗಿದ್ದು, ಖಾದಿ ತಯಾರಿಸುವವರಿಗೆ ಈ ಸಂಕಷ್ಟದ ದಿನಗಳಲ್ಲಿ ಸಂಪಾದನೆಗೆ ಮಾರ್ಗವಾಗಿ ರೂಪುಗೊಂಡಿದೆ ಎಂದು ಕೆವಿಐಸಿ ಅಧ್ಯಕ್ಷ ವಿನಯ್ ಕುಮಾರ್ ಸಕ್ಸೇನಾ ತಿಳಿಸಿದ್ದಾರೆ.
ಇದುವರೆಗೆ ಸುಮಾರು 10 ಲಕ್ಷದಷ್ಟು ಎರಡು ಪದರಗಳುಳ್ಳ ಹತ್ತಿ ಬಟ್ಟೆಯ ಹಾಗೂ ಮೂರು ಪದರಗಳ ರೇಷ್ಮೆ ಮಾಸ್ಕ್ಗಳನ್ನು ಖಾದಿ ಮಂಡಳಿಯು ಮಾರಾಟ ಮಾಡಿದೆ. ಜಮ್ಮು ಮತ್ತು ಕಾಶ್ಮೀರ ಸರ್ಕಾರದಿಂದ 7 ಲಕ್ಷ ಮಾಸ್ಕ್ಗೆ ಬೇಡಿಕೆ ಬಂದಿರುವುದು ಇದುವರೆಗೆ ದೊರೆತ ಅತಿದೊಡ್ಡ ಬೇಡಿಕೆ ಎಂದಿದ್ದಾರವರು.
ರಾಷ್ಟ್ರಪತಿ ಭವನ, ಪ್ರಧಾನಿ ಕಾರ್ಯಾಲಯ, ಭಾರತೀಯ ರೈಲ್ವೇ, ಕೇಂದ್ರ ಸಚಿವಾಲಯಗಳು ಮತ್ತು ಕೆವಿಐಸಿ ಇಪೋರ್ಟಲ್ ಮೂಲಕ ಸಾರ್ವಜನಿಕರಿಂದಲೂ ಸಾಕಷ್ಟು ಬೇಡಿಕೆ ಬಂದಿದೆ.

Average Rating