ನವದೆಹಲಿ: ಅತ್ಯಂತ ಮಹತ್ವದ ಬೆಳವಣಿಗೆಯನ್ನು ದೇಶದ ಪ್ರಮುಖ ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಮಿಸ್ ಮಾಡಿ, ಬಚ್ಚಿಡಲು ಯತ್ನಿಸಿವೆ. ಇದು ಸುದ್ದಿ ವಾಹಿನಗಳ ನಕಲಿ ಟಿಆರ್‌ಪಿ (ಟೆಲಿವಿಷನ್ ರೇಟಿಂಗ್ ಪಾಯಿಂಟ್) ಹಗರಣಕ್ಕೆ ಸಂಬಂಧಿಸಿದ್ದು.
ಉತ್ತರ ಪ್ರದೇಶ ಪೊಲೀಸರ ಮನವಿಯ ಅನುಸಾರ ಇದೀಗ ಟಿಆರ್‌ಪಿ ಹಗರಣದ ತನಿಖೆಯನ್ನು ದೇಶದ ಪ್ರಮುಖ ತನಿಖಾ ಸಂಸ್ಥೆಯಾಗಿರುವ ಸಿಬಿಐ ವಹಿಸಿಕೊಂಡಿರುವುದು ಕೆಲವರಿಗೆ ಚಳಿ ಹುಟ್ಟಿಸಿದೆ.
CBI ತನಿಖೆ ನಡೆಸುವ ಯಾವುದೇ ಸಂಗತಿಗಳನ್ನು ಬ್ರೇಕಿಂಗ್ ಸುದ್ದಿ ಆಗಿ ತೋರಿಸುತ್ತಿದ್ದ ಕೆಲವು ಮಾಧ್ಯಮಗಳು ಈ ಬಗ್ಗೆ ಮಹತ್ವವನ್ನೇ ನೀಡಿಲ್ಲ. ಆದರೆ, ಅನವಶ್ಯವಾಗಿ ಹೆಸರು ಸೇರ್ಪಡೆಯಾಗಿರುವ ರಿಪಬ್ಲಿಕ್ ಟಿವಿ ಈ ಬಗ್ಗೆ ಸಮಗ್ರ ವಿವರವನ್ನು ಜನತೆಯ ಮುಂದಿಟ್ಟಿದೆ.
ಪಾಲ್ಘರ್‌ನಲ್ಲಿ ಸಾಧುಗಳನ್ನು ಹೊಡೆದು ಕೊಂದ ಪ್ರಕರಣ ಹಾಗೂ ಇಡೀ ದೇಶಾದ್ಯಂತ ಡ್ರಗ್ಸ್ ದಂಧೆ ಹೊರಬರಲು ಕಾರಣವಾದ, ನಟ ಸುಶಾಂತ್ ಸಿಂಗ್ ರಾಜಪೂತ್ ಅವರ ನಿಗೂಢ ಸಾವಿನ ಬಗ್ಗೆ ಅರ್ನಾಬ್ ಗೋಸ್ವಾಮಿ ಮತ್ತು ಅವರ ರಿಪಬ್ಲಿಕ್ ಟಿವಿ ಸುದ್ದಿ ಚಾನೆಲ್ ಸತ್ಯಾಂಶಗಳನ್ನು ಮುಂದಿಟ್ಟು ಸರಣಿ ವರದಿ ಮಾಡುತ್ತಾ ಮುಂಬಯಿ ಪೊಲೀಸರು ಹಾಗೂ ಮಹಾರಾಷ್ಟ್ರ ಸರ್ಕಾರದ ಬುಡವನ್ನೇ ಅಲುಗಾಡಿಸಿತ್ತು.
ಈ ಹಿನ್ನೆಲೆಯಲ್ಲಿ ರಿಪಬ್ಲಿಕ್ ಟಿವಿ ಹೆಸರಿಗೆ ಮಸಿ ಬಳಿಯಲು ಎಲ್ಲ ಕಡೆಯಿಂದಲೂ ಪ್ರಯತ್ನ ನಡೆದಿತ್ತು. ಈ ಕಾರಣಕ್ಕಾಗಿಯೇ ಟಿಆರ್‌ಪಿ ಹಗರಣ ಎಂಬೊಂದು ಹಗರಣವನ್ನು ಹೊರ ಹಾಕಲಾಗಿದ್ದು, ಇದರಲ್ಲಿ ರಿಪಬ್ಲಿಕ್ ಟಿವಿ ಹೆಸರನ್ನು ಸೇರ್ಪಡಿಸಲಾಗಿದೆ.
ಆದರೆ, ವಾಸ್ತವವಾಗಿ ಮುಂಬಯಿ ಪೊಲೀಸರು ಅಕ್ಟೋಬರ್ 6ರಂದು ದಾಖಲಿಸಿದ ಪ್ರಥಮ ಮಾಹಿತಿ ವರದಿ (ಎಫ್ಐಆರ್)ಯಲ್ಲಿ ರಿಪಬ್ಲಿಕ್ ಟಿವಿ ಹೆಸರಿಲ್ಲ. ಬದಲಾಗಿ ಇಂಡಿಯಾ ಟುಡೇ ಗ್ರೂಪ್‌ನ ಟಿವಿ ವಾಹಿನಿಗಳ ಹೆಸರಿತ್ತು.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy
ಈ ಬೆಳವಣಿಗೆಗಳ ಮಧ್ಯೆಯೇ, ಮಹತ್ವದ ಬೆಳವಣಿಗೆಯಲ್ಲಿ ಎಫ್ಐಆರ್‌ನಲ್ಲಿ ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್ ಹೆಸರಿಸಲಾಗಿಲ್ಲ ಎಂಬುದನ್ನು ಮಹಾರಾಷ್ಟ್ರ ಸರ್ಕಾರವು ಸೋಮವಾರ ಬಾಂಬೇ ಹೈಕೋರ್ಟ್‌ನಲ್ಲಿ ಒಪ್ಪಿಕೊಂಡಿತು. ಮುಂಬಯಿ ಪೊಲೀಸರಿಂದ ಈ ನಕಲಿ ಟಿಆರ್‌ಪಿ ಹಗರಣದ ತನಿಖೆ ನಡೆಯುತ್ತಿತ್ತು.
ಮುಂಬಯಿ ಪೊಲೀಸ್ ಕಮಿಶನರ್ ಮಾಡಿದ ತಪ್ಪು
ಮಹಾರಾಷ್ಟ್ರದ ಕಾಂಗ್ರೆಸ್-ಶಿವಸೇನೆ ಮೈತ್ರಿಕೂಟದ ಸರ್ಕಾರದಡಿಯಲ್ಲಿ ಕೆಲಸ ಮಾಡುತ್ತಿರುವ ಮುಂಬಯಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಪತ್ರಿಕಾಗೋಷ್ಠಿ ಕರೆದು, ನಕಲಿ ಟಿಆರ್‌ಪಿ ಹಗರಣದಲ್ಲಿ ರಿಪಬ್ಲಿಕ್ ಟಿವಿಯ ಹೆಸರು ಸೇರಿಸಿದ್ದರು.
ಬಾಂಬೇ ಹೈಕೋರ್ಟ್‌ನಲ್ಲಿ ರಿಪಬ್ಲಿಕ್ ಟಿವಿ ಪರ ಖ್ಯಾತ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸುತ್ತಾ, ರಿಪಬ್ಲಿಕ್ ಟಿವಿಯ ಜನಪ್ರಿಯತೆಗೆ ಮಸಿ ಬಳಿಯಲು ಮುಂಬಯಿ ಪೊಲೀಸರು ದುರುದ್ದೇಶದ ಪ್ರಯತ್ನ ಮಾಡುತ್ತಿದ್ದಾರೆ ಎಂದರು. ಎಫ್ಐಆರ್ ದಾಖಲಿಸಿದ ಎರಡು ದಿನದ ಬಳಿಕ ಮುಂಬಯಿ ಪೊಲೀಸ್ ಕಮಿಶನರ್ ಸಿಂಗ್ ಪತ್ರಿಕಾಗೋಷ್ಠಿ ಕರೆದು, ‘ರಿಪಬ್ಲಿಕ್ ಟಿವಿ ಭಾಗಿಯಾಗಿರುವ ಸಾಧ್ಯತೆ’ ಇದೆ ಎಂದು ಹೇಳಿದ್ದರೆಂಬುದನ್ನು ಬಹಿರಂಗಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡ ಹಾಗೂ ಮಹಾರಾಷ್ಟ್ರ ಸರ್ಕಾರದ ಪರ ವಕೀಲ ಕಪಿಲ್ ಸಿಬಲ್, “FIR ನಲ್ಲಿ ರಿಪಬ್ಲಿಕ್ ಟಿವಿ ಹೆಸರಿಲ್ಲ” ಎಂದು ನುಡಿದರು. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 5ರಂದು ನಡೆಯಲಿದೆ.
ಇದೀಗ, ಪರಮ್ ಬೀರ್ ಸಿಂಗ್ ವಿರುದ್ಧ ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿ, 200 ಕೋಟಿ ರೂ. ಮಾನನಷ್ಟ ದಾವೆ ಹೂಡಲು ನಿರ್ಧರಿಸಿದೆ.
ಏನಿದು TRP ಹಗರಣ?
ಪರಮ್ ಬೀರ್ ಸಿಂಗ್ ಅವರು ಪತ್ರಿಕಾಗೋಷ್ಠಿ ಕರೆದು, ರಿಪಬ್ಲಿಕ್ ಟಿವಿ ಹಾಗೂ ಫಖ್ತ್ ಮರಾಠಿ ಹಾಗೂ ಬಾಕ್ಸ್ ಸಿನಿಮಾ ಎಂಬ ಎರಡು ಮರಾಠಿ ಚಾನೆಲ್‌ಗಳು, ನಿರ್ದಿಷ್ಟ ಕಾಲ ದಿನಂಪ್ರತಿ ಈ ಚಾನೆಲ್ ವೀಕ್ಷಿಸುವಂತೆ ಮಾಡಲು ಬಳಕೆದಾರರಿಗೆ ಹಣ ಪಾವತಿಸಿದ್ದವು ಎಂದು ಆರೋಪಿಸಿದ್ದರು. ನಿರ್ದಿಷ್ಟ ಅವಧಿಗೆ ಚಾನೆಲ್ ಆನ್ ಮಾಡಿರಿಸಲು 5 ಮನೆಗಳಿಗೆ ತಲಾ 1 ಸಾವಿರ ರೂ.ನಂತೆ ವಿತರಿಸಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಫಖ್ತ್ ಮರಾಠಿ ಮಾಲೀಕ ಶಿರೀಶ್ ಶೆಟ್ಟಿ, ಬಾಕ್ಸ್ ಸಿನಿಮಾ ಮಾಲೀಕ ನಾರಾಯಣ ಶರ್ಮಾ, ಹಂಸ ಸಂಶೋಧನಾ ಸಂಸ್ಥೆಯ (BARC ಮಾನ್ಯತೆ ಪಡೆದ ಉಪಸಂಸ್ಥೆ) ಮಾಜಿ ಉದ್ಯೋಗಿ ವಿಶಾಲ್ ಭಂಡಾರಿ ಮತ್ತು ಮಾಜಿ ಉದ್ಯೋಗಿ ಬೊಂಪಳ್ಳಿ ರಾವ್ ಮಿಸ್ತ್ರಿ ಎಂಬವರನ್ನು ಬಂಧಿಸಲಾಗಿದೆ.
ಎಫ್ಐಆರ್‌ನಲ್ಲಿ ರಿಪಬ್ಲಿಕ್ ಅಲ್ಲ, ಇಂಡಿಯಾ ಟುಡೇ ಹೆಸರು
ಆದರೆ, ಮುಂಬಯಿ ಪೊಲೀಸ್ ಆಯುಕ್ತರ ಪತ್ರಿಕಾಗೋಷ್ಠಿಗೆ ವಿರುದ್ಧವಾಗಿ, ಎಫ್ಐಆರ್‌ನಲ್ಲಿ ರಿಪಬ್ಲಿಕ್ ಟಿವಿ ಬದಲಾಗಿ, ಇಂಡಿಯಾ ಟುಡೇ ಹೆಸರಿರುವುದು ಪತ್ತೆಯಾಗಿದೆ. ಎಫ್ಐಆರ್ ಕಾಪಿ ಸಹಿತ ಈ ಕುರಿತು ರಿಪಬ್ಲಿಕ್ ಟಿವಿ ಸುದ್ದಿ ಪ್ರಕಟಿಸಿ ಸತ್ಯವನ್ನು ಮುಂದಿಟ್ಟಿದೆ.
ಈ ವಿಷಯವನ್ನು ಸ್ವತಃ ಇಂಡಿಯಾ ಟುಡೇ ಸಮೂಹವೂ ಸ್ಪಷ್ಟನೆಯಲ್ಲಿ ಒಪ್ಪಿಕೊಂಡಿದೆ. ಇಷ್ಟೇ ಅಲ್ಲ, ಇಂಡಿಯಾ ಟುಡೇಗೆ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಚರ್ಚ್ ಕೌನ್ಸಿಲ್ BARC (ವಾಹಿನಿಗಳ ನಿಯಂತ್ರಣದ ಪರಮೋಚ್ಚ ಸಂಸ್ಥೆ) ದಂಡವನ್ನೂ ವಿಧಿಸಿದೆ.
ಮುಖ್ಯವಾಗಿ ಪಾಲ್ಘರ್‌ನಲ್ಲಿ ನಿಷ್ಪಾಪಿ ಮುಗ್ಧ ಸಾಧುಗಳನ್ನು ಹೊಡೆದು ಕೊಂದ ಪ್ರಕರಣ ಹಾಗೂ ಸುಶಾಂತ್ ಸಿಂಗ್ ಸಾವಿಗೆ ಕಾರಣವೆನ್ನಲಾಗುತ್ತಿರುವ ಬಾಲಿವುಡ್ ಡ್ರಗ್ಸ್ ದಂಧೆಗೂ, ಮಹಾರಾಷ್ಟ್ರದಲ್ಲಿ ಆಡಳಿತಾರೂಢರ ಕೈವಾಡ ಇರುವ ಸಾಧ್ಯತೆಯ ಬಗ್ಗೆ ರಿಪಬ್ಲಿಕ್ ಟಿವಿ ಸರಣಿ ಕಾರ್ಯಕ್ರಮಗಳ ಮೂಲಕ ಸತ್ಯಾಂಶ ಮುಂದಿಡಲು ಯತ್ನಿಸುತ್ತಲೇ ಇತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ ಸಂಗತಿ.
ಇದರ ಮಧ್ಯೆ, ಹಥ್ರಾಸ್‌ನಲ್ಲೂ ಇದೇ ರೀತಿ ಸುಳ್ಳು ಸೃಷ್ಟಿಸಿ ದೇಶದ ಹೆಸರಿಗೆ ಮಸಿ ಬಳಿಯುವ ಪ್ರಯತ್ನದ ವಿರುದ್ಧ ಉತ್ತರ ಪ್ರದೇಶದ ದಿಟ್ಟ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಿಬಿಐ ತನಿಖೆಗೆ ಆದೇಶಿಸಿದ್ದರು. ಇದೀಗ ಉತ್ತರ ಪ್ರದೇಶ ಸರ್ಕಾರ ಟಿಆರ್‌ಪಿ ಹಗರಣವನ್ನೂ ಸಿಬಿಐಗೆ ಒಪ್ಪಿಸುವ ಮೂಲಕ, ಸುಳ್ಳು ಸೃಷ್ಟಿಸುವವರಿಗೆ ಸೂಕ್ತ ಎದಿರೇಟು ನೀಡಿದ್ದಾರೆ.
ಉತ್ತರ ಪ್ರದೇಶದ ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಕೇಸಿನ ಆಧಾರದಲ್ಲಿ ಉತ್ತರ ಪ್ರದೇಶ ಸರ್ಕಾರವು ಈ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿದೆ. ಇದೀಗ ಸಿಬಿಐ ತನಿಖೆಯಿಂದ ಮತ್ತಷ್ಟು ಹುಳುಕುಗಳು ಹೊರಬರುವ ನಿರೀಕ್ಷಿಯಿದೆ.

Average Rating