ಲಖನೌ: ಮತೀಯ ಗಲಭೆ ಸೃಷ್ಟಿಸಿ, ಸಮಾಜದ ಶಾಂತಿ ಕದಡುವ ಪ್ರಯತ್ನದಲ್ಲಿದ್ದ ಇಬ್ಬರನ್ನು ಬಿಜ್ನೋರ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ತಮ್ಮದೇ ಸಮುದಾಯದ ಮೂರು ಪ್ರಾರ್ಥನಾ ಸ್ಥಳಗಳಲ್ಲಿ ಹಿಂದುಗಳ ವೇಷ ಧರಿಸಿ ಕಿಡಿಗೇಡಿತನ ಮಾಡಿ, ಮತೀಯ ಸಾಮರಸ್ಯ ಕದಡುವ ಆರೋಪದಲ್ಲಿ ಸಹೋದರ ಸಂಚನ್ನು ಪೊಲೀಸರು ಭೇದಿಸಿದ್ದಾರೆ. ತಮ್ಮ ಸಮುದಾಯದ ಪ್ರಾರ್ಥನಾ ಸ್ಥಳವನ್ನು ತಾವೇ ಹಾಳುಗೆಡವಿ, ಪಾವಿತ್ರ್ಯಕ್ಕೆ ಧಕ್ಕೆ ತಂದು, ಹಿಂದುಗಳ ತಲೆಯ ಮೇಲೆ ಕಟ್ಟುವ ಹುನ್ನಾರವಿದು ಎಂದು ಶಂಕಿಸಲಾಗಿದೆ.
ಮಝರ್ (ಗೋರಿ)ಗಳಲ್ಲಿ ಶ್ರದ್ಧಾಭಕ್ತಿಯಿಂದ ಇರಿಸಲಾಗಿದ್ದ ಪವಿತ್ರ ಚಾದರ್ಗಳನ್ನು ಸುಟ್ಟಿದ್ದಲ್ಲದೆ, ಗೋರಿಗಳಿಗೂ ಹಾನಿ ಉಂಟು ಮಾಡಿದ್ದಾರೆ. ಬಿಜ್ನೋರ್ನ ಶೇರ್ಕೋಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಿಡಿಗೇಡಿತನ ನಡೆಸಲಾಗಿದ್ದು, ಬಂಧಿತರನ್ನು ಮೊಹಮದ್ ಕಮಾಲ್ ಮತ್ತು ಆತನ ಸಹೋದರ ಮೊಹಮದ್ ಆದಿಲ್ ಎಂದು ಗುರುತಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಪವಿತ್ರ ಕನ್ವರ್ ಯಾತ್ರೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸಮಾಜಘಾತುಕ ಶಕ್ತಿಗಳು ಹಿಂದುಗಳ ಶ್ರದ್ಧಾಭಕ್ತಿಯ ಆಚರಣೆಗೆ ಅಡಚಣೆ ಮಾಡುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಪೊಲೀಸರಿಗೆ ಕಟ್ಟೆಚ್ಚರದಲ್ಲಿರುವಂತೆ ಸೂಚಿಸಲಾಗಿತ್ತು. ಗೋರಿಯ ಉಸ್ತುವಾರಿಗಳು ಭಾನುವಾರ ಸಂಜೆ ಪೊಲೀಸರಿಗೆ ಮಾಹಿತಿ ನೀಡಿ, ಯಾರೋ ದುಷ್ಕರ್ಮಿಗಳು ಗೋರಿಗೆ ಹಾನಿ ಮಾಡಿದ್ದಾರೆ ಎಂದು ತಿಳಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ತನಿಖೆ ಆರಂಭಿಸಿದಾಗ, ದುಷ್ಕರ್ಮಿಗಳು ಕೇಸರಿ ಶಾಲು ಹಾಕಿಕೊಂಡು ಬಂದಿದ್ದರು ಎಂಬ ಮಾಹಿತಿ ದೊರೆಯಿತು. ಕಿಲೋಮೀಟರ್ ದೂರದಲ್ಲಿದ್ದ ಮತ್ತೊಂದು ಗೋರಿಗೂ ಇದೇ ರೀತಿ ಹಾನಿ ಮಾಡಲಾಗಿತ್ತು ಎಂಬುದು ತಿಳಿಯಿತು.
ಅಲ್ಲಿಗೆ ಧಾವಿಸಿದಾಗ, ಬೈಕಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರನ್ನು ಊರವರ ಸಹಾಯದಿಂದ ಅಡ್ಡಗಟ್ಟಿ ಸೆರೆಹಿಡಿದರು. ಅವರಿಬ್ಬರೂ ಕೇಸರಿ ಶಾಲು ಧರಿಸಿ, ಹಿಂದುಗಳ ವೇಷದಲ್ಲಿದ್ದರು. ನಂತರ ಮೂರನೇ ಗೋರಿಯಲ್ಲಿಯೂ ಇದೇ ರೀತಿ ಕಿಡಿಗೇಡಿ ಕೃತ್ಯ ನಡೆಸಿರುವುದು ಪತ್ತೆಯಾಗಿತ್ತು. ಪೊಲೀಸರು ವಿಚಾರಿಸಿದಾಗ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ.
ಕಮಾಲ್ ವಿದೇಶದಲ್ಲಿ ದುಡಿಯುತ್ತಿದ್ದು, ಇತ್ತೀಚೆಗಷ್ಟೇ ವಾಪಸಾಗಿದ್ದ. ಆದಿಲ್ ಊರಲ್ಲೇ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ. ಗುಪ್ತಚರ ದಳ ಹಾಗೂ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಅಧಿಕಾರಿಗಳು ಬಂಧಿತರನ್ನು ವಿಚಾರಣೆಗೆ ಗುರಿಪಡಿಸಿದ್ದಾರೆ. ಇವರಿಗೆ ಯಾವುದಾದರೂ ಸಂಘಟನೆಗಳ ಸಂಬಂಧವಿದೆಯೇ ಎಂದು ತನಿಖೆ ನಡೆಯುತ್ತಿದೆ.
ಇತ್ತೀಚೆಗೆ ಮಂಗಳೂರಿನಲ್ಲಿ ಮದರಸ ವಿದ್ಯಾರ್ಥಿಯೊಬ್ಬ, ತನ್ನ ಮೇಲೆ ಅನ್ಯ ಕೋಮಿನವರು ದಾಳಿ ನಡೆಸಿದ್ದಾರೆಂದು ಆರೋಪಿಸಿದ್ದು ಸುದ್ದಿಯಾಗಿತ್ತು. ಇದನ್ನು ಹಲವಾರು ಪತ್ರಿಕೆಗಳು, ಮಾಧ್ಯಮಗಳು ಪ್ರಕಟಿಸಿದ್ದವು. ಆದರೆ, ಮದರಸದಲ್ಲಿ ಕಲಿಯುತ್ತಿದ್ದ ಈ ಹುಡುಗ, ತನ್ನ ಅಂಗಿಯನ್ನು ಪೆನ್ನಿನಿಂದ ತಾನೇ ಹರಿದುಕೊಂಡು, ಅನ್ಯ ಕೋಮಿನವರು ದಾಳಿ ಮಾಡಿದರು ಎಂದು ಆರೋಪಿಸಿದ್ದ. ಇದರ ಪರಿಣಾಮವಾಗಿ ಸುರತ್ಕಲ್, ಕೃಷ್ಣಾಪುರ, ಹೊಸಬೆಟ್ಟು ಪ್ರದೇಶದಲ್ಲಿ ಕೋಮು ಸಂಬಂಧಿತ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು. ಆದರೆ, ಸಿಸಿಟಿವಿ ಫೂಟೇಜ್ನಲ್ಲಿ ಸತ್ಯ ತಿಳಿದಾಗ, ಈ ಬಾಲಕನೂ ತಾನು ಸುಳ್ಳು ಹೇಳಿರುವುದನ್ನು ಬಾಯಿಬಿಟ್ಟಿದ್ದ. ಸುದ್ದಿ ಇಲ್ಲಿದೆ.
ಹಲವಾರು ವರ್ಷಗಳ ಮೊದಲು, ಮುಂಬಯಿ ಮೇಲಿನ ದಾಳಿಯಲ್ಲಿ ಸಿಕ್ಕಿಬಿದ್ದು ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಉಗ್ರಗಾಮಿ ಕಸಬ್ ಕೂಡ, ಬೆಂಗಳೂರಿನಲ್ಲಿ ಸಮೀರ್ ದಿನೇಶ್ ಚೌಧುರಿ ಹೆಸರಿನಲ್ಲಿ, ಕೈಗೆ ಕೇಸರಿ ದಾರ ಕಟ್ಟಿಕೊಂಡಿದ್ದ ಮತ್ತು ಹಿಂದು ಉಗ್ರಗಾಮಿಗಳ ಕೃತ್ಯ ಎಂದು ಬಿಂಬಿಸಲು ಯತ್ನಿಸಿದ್ದ ಎಂಬ ಅಂಶವೂ ಬಯಲಾಗಿತ್ತು.
ಇದಲ್ಲದೆ, ಕಳೆದ ಮೇ ತಿಂಗಳಲ್ಲಿ ಔರಂಗಾಬಾದಿನಲ್ಲಿ ಇಮ್ರಾನ್ ಖಾನ್ ಎಂಬ ಯುವಕನೊಬ್ಬ ಜೈಶ್ರೀರಾಂ ಎಂದು ಘೋಷಿಸುತ್ತಾ ಹಲ್ಲೆ ಮಾಡುತ್ತಿರುವ ನಕಲಿ (ತಿರುಚಿದ) ವಿಡಿಯೊ ಒಂದನ್ನು ಶೇರ್ ಮಾಡಿದ್ದ. ಸಾಮರಸ್ಯ ಕದಡಿಸಲು ಆತ ಹಿಂದುಗಳ ಮೇಲೆ ಆರೋಪ ಮಾಡಿದ ಅಂಶ ತನಿಖೆಯಿಂದ ಬಯಲಾಗಿತ್ತು.

Average Rating