ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆ ಸೋಮವಾರ ನಡೆಯಲು ನಿಗದಿಯಾಗಿರುವಂತೆಯೇ ಪಕ್ಷದೊಳಗೆ ಸಂಚಲನ ಮೂಡಿದೆ. 23 ಹಿರಿಯ ಕಾಂಗ್ರೆಸಿಗರು ಪಕ್ಷದ ವರಿಷ್ಠ ನಾಯಕಿ ಸೋನಿಯಾ ಗಾಂಧಿಗೆ ಪತ್ರ ಬರೆದು, ನಾಯಕತ್ವದ ಬಿಕ್ಕಟ್ಟಿನ ಬಗ್ಗೆ ಧ್ವನಿಯೆತ್ತಿದ್ದಾರೆ. ಅಷ್ಟೇ ಅಲ್ಲದೆ, ಆಂತರಿಕ ಚುನಾವಣೆ ನಡೆಸುವಂತೆ ಅವರು ಕೋರಿದ್ದರೆ, ಮತ್ತೊಂದು ವರ್ಗವು ರಾಹುಲ್ ಗಾಂಧಿ ಅವರನ್ನೇ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮುಂದಿವರಿಸಬೇಕು ಎಂದು ಕೂಗುತ್ತಿದೆ.
ಗುಲಾಂ ನಬಿ ಅಜಾದ್, ಆನಂದ್ ಶರ್ಮಾ, ಮನೀಷ್ ತಿವಾರಿ, ಮಿಲಿಂದ್ ದೇವ್ರಾ, ಜಿತಿನ್ ಪ್ರಸಾದ್ ಮುಂತಾದ 23 ಮಂದಿ ಹಿರಿಯರು, ಕಿರಿಯರು, ಕಾಂಗ್ರೆಸ್ನಲ್ಲಿ ಆಮೂಲಾಗ್ರ ಬದಲಾವಣೆ ಬಯಸಿದ್ದರೆ, ಇದು ರಾಹುಲ್ ಗಾಂಧಿಯ ಪಟ್ಟ ತಪ್ಪಿಸುವ ಪ್ರಯತ್ನ ಎಂದು ಮತ್ತೊಂದು ವರ್ಗದವರು ಅಭಿಪ್ರಾಯಪಡುತ್ತಾರೆ.
ಈ ರೀತಿ ಪತ್ರ ಬರೆದಿರುವುದರ ಬಗ್ಗೆ ಕಿಡಿ ಕಾರಿರುವ ಮುಂಬಯಿ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರುಪಮ್, ರಾಹುಲ್ ಗಾಂಧಿ ನಾಯಕತ್ವಕ್ಕೆ ತಡೆಯೊಡ್ಡುವ ಸಂಚಿದು ಎಂದು ಹೇಳಿದ್ದಾರೆ.
ಸಲ್ಮಾನ್ ಖುರ್ಷಿದ್ ಅವರು ಹೇಳಿಕೆ ನೀಡಿ, ಚುನಾವಣೆ ನಡೆಸಿದರೆ ವಿಭಜನಾವಾದಕ್ಕೆ ಒತ್ತು ನೀಡಿದಂತಾಗುತ್ತದೆ. ಹೀಗಾಗಿ, ಒಮ್ಮತದ ಆಯ್ಕೆಯ ಮೂಲಕ ಹೊಸ ಅಧ್ಯಕ್ಷರ ನೇಮಕವಾಗಬೇಕು ಎಂದಿದ್ದಾರೆ.
ರಾಹುಲ್ ಗಾಂಧಿಗೆ ಪಕ್ಷ ಮುಖಂಡರು ಮತ್ತು ಕಾರ್ಯಕರ್ತರ ಪೂರ್ಣ ಬೆಂಬಲವಿದೆ ಎಂದೂ ಖುರ್ಷಿದ್ ಹೇಳಿದ್ದಾರೆ.
“ಗಾಂಧಿಗಳು ಕಾಂಗ್ರೆಸ್ನ ನಾಯಕರು. ಇದನ್ನು ಯಾರೂ, ಪ್ರತಿಪಕ್ಷಗಳು ಕೂಡ ನಿರಾಕರಿಸಲಾರರು. ನಮಗೆ ಅಧ್ಯಕ್ಷರಿಲ್ಲದಿದ್ದರೂ ಪರವಾಗಿಲ್ಲ, ರಾಹುಲ್ ಗಾಂಧಿಯಂಥ ನಾಯಕರಿದ್ದಾರೆ” ಎಂದು ಕೇಂದ್ರದ ಮಾಜಿ ಸಚಿವ ಖುರ್ಷಿದ್ ಹೇಳಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೂ ಗಾಂಧಿ ಕುಟುಂಬದ ಬೆಂಬಲಕ್ಕೆ ನಿಂತಿದ್ದು, ಭಾರತವನ್ನು ಬಾಹ್ಯ ಮತ್ತು ಆಂತರಿಕ ಬೆದರಿಕೆಗಳಿಂದ ರಕ್ಷಿಸಲು ಸಶಕ್ತ ಪ್ರತಿಪಕ್ಷವೊಂದರ ಅಗತ್ಯವಿದೆ ಎಂದಿದ್ದಾರೆ.
ಸೋಮವಾರ ಸಿಡಬ್ಲ್ಯುಸಿ ಸಭೆ ನಡೆಯಲಿದ್ದು, ನಾಯಕತ್ವದ ವಿಷಯ ಪ್ರಸ್ತಾಪವಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಪಕ್ಷದೊಳಗಿನ ಈ ವಿದ್ಯಮಾನಗಳು ಮಹತ್ವ ಪಡೆದುಕೊಂಡಿವೆ. 2019ರ ಮಹಾ ಚುನಾವಣೆಗಳಲ್ಲಿ ಪಕ್ಷದ ಹೀನಾಯ ಸೋಲಿನ ಬಳಿಕ ರಾಹುಲ್ ಗಾಂಧಿ ಪದತ್ಯಾಗ ಮಾಡಿದ್ದರಿಂದ ಸೋನಿಯಾ ಗಾಂಧಿ ಅವರೇ ಮಧ್ಯಂತರ ಅಧ್ಯಕ್ಷೆಯಾಗಿ ಮುಂದುವರಿದಿದ್ದರು.
ಪಕ್ಷದೊಳಗೆ ಆಂತರಿಕ ಚುನಾವಣೆಯಾಗಬೇಕು ಎಂಬ ಕೆಲವು ನಾಯಕರ ಅಭಿಪ್ರಾಯದ ಬಗ್ಗೆ ಪ್ರತಿಕ್ರಿಯಿಸಿದ ಖುರ್ಷಿದ್, ಬೇರೆ ಪಕ್ಷಗಳಲ್ಲಿಯೂ ಈ ರೀತಿ ಆಗದಿರುವಾಗ, ಕಾಂಗ್ರೆಸ್ನಲ್ಲಿ ಚುನಾವಣೆ ನಡೆಸಲು ಅಷ್ಟೊಂದು ಆತುರವೇಕೆ? ಕಮ್ಯೂನಿಸ್ಟ್ ಪಾರ್ಟಿ ಅಥವಾ ಬಿಜೆಪಿಯಲ್ಲೂ ಇಂಥ ಆಗ್ರಹ ಕೇಳಿಬಂದಿಲ್ಲ ಎಂದು ಅವರು ತಿರುಗಿ ನುಡಿದರು.
ಶಶಿ ತರೂರ್ ಅವರು ಕೂಡ ಸಿಡಬ್ಲ್ಯುಸಿ ಚುನಾವಣೆಯಾಗಬೇಕೆಂದು ಹೇಳುತ್ತಲೇ ಬಂದಿದ್ದರು. ಸಂದೀಪ್ ದೀಕ್ಷಿತ್ ಅಭಿಪ್ರಾಯದ ಪ್ರಕಾರ, ಕಾಂಗ್ರೆಸ್ಗೆ ಪೂರ್ಣಕಾಲಿಕ ಅಧ್ಯಕ್ಷರು ಆಯ್ಕೆ ಅಥವಾ ಚುನಾವಣೆಯ ಮೂಲಕವಾದರೂ ಆಗಬೇಕಾದುದು ಈಗಿನ ತುರ್ತು ಅಗತ್ಯ ಎಂದಿದ್ದಾರೆ.
23 ಮಂದಿ ಈ ಪತ್ರವನ್ನು ಎರಡು ವಾರಗಳ ಹಿಂದೆ ಸೋನಿಯಾ ಗಾಂಧಿಗೆ ಕಳುಹಿಸಿರಬೇಕು ಎನ್ನಲಾಗಿದೆಯಾದರೂ, ಇಂಥ ಯಾವುದೇ ಪತ್ರ ಇಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ.
ಪಕ್ಷಾಧ್ಯಕ್ಷತೆಗೆ ಮರಳುವುದಿಲ್ಲ, ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದು ರಾಹುಲ್ ಗಾಂಧಿ ಹಲವಾರು ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ಆದರೆ, ಕಳೆದ ವರ್ಷವೇ ರಾಹುಲ್ ಗಾಂಧಿ ಪಕ್ಷಾಧ್ಯಕ್ಷತೆಗೆ ರಾಜೀನಾಮೆ ನೀಡಿದ್ದರೂ, ಪಕ್ಷದ ಪ್ರಮುಖ ಹುದ್ದೆಗಳ ನೇಮಕಾತಿಯಲ್ಲಿ, ರಾಜ್ಯಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಯಲ್ಲಿ, ರಾಜಸ್ಥಾನದ ಕಾಂಗ್ರೆಸ್ ಬಿಕ್ಕಟ್ಟು ಶಮನದಲ್ಲಿ ಅವರು ಪಾತ್ರ ವಹಿಸಿದ್ದರು ಎಂಬುದು ನಿರ್ವಿವಾದ.
ಹೀಗಾಗಿ, ಎಲ್ಲರ ಕಣ್ಣು ಈಗ ಸೋಮವಾರ ನಡೆಯುವ ಸಿಡಬ್ಲ್ಯುಸಿ ಸಭೆಯತ್ತ ನೆಟ್ಟಿದೆ.

Average Rating