ನವದೆಹಲಿ: ಕಾಂಗ್ರೆಸಿಗರಿಗೂ ಈಗ ವಾಸ್ತವದ ಅರಿವಾಗುತ್ತಿರುವಂತಿದೆ. ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಹಿರಿಯ ಮುಖಂಡರು ಈಗಾಗಲೇ ಹಲವು ಬಾರಿ ಧ್ವನಿ ಎತ್ತಿದ್ದಾರೆ. ಈ ಕುರಿತಾಗಿ ಇತ್ತೀಚೆಗೆ ಅಧಿನಾಯಕಿ ಸೋನಿಯಾ ಗಾಂಧಿಗೆ ಪತ್ರವನ್ನೂ ಬರೆದಿದ್ದರು.
ಪಕ್ಷದಲ್ಲಿ ಭರ್ಜರಿ ಬದಲಾವಣೆಯಾದರೆ ಮಾತ್ರ ಉಳಿವು ಸಾಧ್ಯ ಎಂದು ಧ್ವನಿಯೆತ್ತಿದ್ದ ಈ 23 ಕಾಂಗ್ರೆಸಿಗರಲ್ಲಿ ಒಬ್ಬರಾದ ಹಿರಿಯ ಮುಖಂಡ ಕಪಿಲ್ ಸಿಬಲ್, ಈಗ ಮತ್ತೆ ಮೌನ ಮುರಿದಿದ್ದಾರೆ.
ಬಿಹಾರ ಅಸೆಂಬ್ಲಿ ಚುನಾವಣೆಗಳು ಹಾಗೂ ದೇಶದ ವಿವಿಧೆಡೆ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲಾಗಿರುವ ಹಿನ್ನೆಲೆಯಲ್ಲಿ ಭಾನುವಾರ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡುತ್ತಾ ತಮ್ಮ ದುಗುಡವನ್ನು ಮತ್ತೆ ಹೊರಗೆಡಹಿದ್ದಾರೆ.
ಇದನ್ನೂ ಓದಿ: Election Result 2020 | ಬಿಹಾರದಲ್ಲಿ ಬಿಜೆಪಿ ಭರ್ಜರಿ ಬೇಟೆ, ದೇಶದೆಲ್ಲೆಡೆ 59ರಲ್ಲಿ 40 ಸ್ಥಾನ: ಮೋದಿಗೆ ಸ್ಪಷ್ಟ ಜನಾದೇಶ
ಈ ಚುನಾವಣಾ ಫಲಿತಾಂಶದ ಪ್ರಕಾರ, ಜನರು ಕಾಂಗ್ರೆಸ್ಸನ್ನು ಒಂದು ಪರಿಣಾಮಕಾರಿಯಾದ ಪರ್ಯಾಯ ಶಕ್ತಿಯಾಗಿ ಎಂದಿಗೂ ಪರಿಗಣಿಸಿಲ್ಲ ಎಂಬುದು ವೇದ್ಯವಾಗುತ್ತದೆ. ನಾಯಕತ್ವವು ಕೂಡ ಪಕ್ಷದೊಳಗಿನ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುತ್ತಲೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪಕ್ಷಕ್ಕೇನು ಸಮಸ್ಯೆ ಎಂಬುದು ಕಾಂಗ್ರೆಸ್‌ಗೆ ತಿಳಿದಿದೆ, ಅದಕ್ಕೆ ಉತ್ತರವೂ ಇದೆ. ಆದರೆ, ಅವುಗಳನ್ನು ಗುರುತಿಸುವ ಔದಾರ್ಯವಿಲ್ಲ. ಈ ಕಾರಣಕ್ಕಾಗಿಯೇ ಪರಿಹಾರ ಕಾಣುತ್ತಿಲ್ಲ. ನಾಯಕರೂ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದಿದ್ದಾರೆ ಕಪಿಲ್ ಸಿಬಲ್.
ಬಿಹಾರದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಆರ್‌ಜೆಡಿ ಬೆಳೆದು, ಅತಿದೊಡ್ಡ ಪಕ್ಷವಾಗಿ ಮೂಡಿಬಂತು. ಗುಜರಾತ್‌ನಲ್ಲಿ ಉಪಚುನಾವಣೆಗಳಲ್ಲಿ ಕಾಂಗ್ರೆಸ್ಸನ್ನು ಜನರು ಗುಡಿಸಿ ಸಾರಿಸಿದರು. ಉತ್ತರ ಪ್ರದೇಶದ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಂತೂ ಶೇ.2 ಮತಗಳನ್ನೂ ಗಳಿಸಲಿಲ್ಲ ಎಂದು ಕಪಿಲ್ ಹೇಳಿದರು.
ಇದನ್ನೂ ಓದಿ: Rajya Sabha: 10ರಲ್ಲಿ ಒಂದು ಸ್ಥಾನವೂ ಇಲ್ಲ: ಕಾಂಗ್ರೆಸ್ ಮಹಾಪತನಕ್ಕೆ ಸಾಕ್ಷಿಯಾದ ಮೇಲ್ಮನೆ ಚುನಾವಣೆ
ಕಾಂಗ್ರೆಸಿಗೆ ಆತ್ಮಾವಲೋಕನ ಮಾಡಿಕೊಳ್ಳಲು 6 ವರ್ಷ ದೊರೆತಿತ್ತು. ಸಮಸ್ಯೆಗಳಿಗೆ ಪರಿಹಾರವೂ ಇತ್ತು. ಆದರೆ, ಈ ಪರಿಹಾರಗಳನ್ನು ಗುರುತಿಸುತ್ತಲೇ ಇಲ್ಲ ಎಂದು ಪಕ್ಷದ ಮುಖಂಡರ ವಿರುದ್ಧ ಕಪಿಲ್ ಸಿಬಲ್ ಕಿಡಿ ಕಾರಿದರು.
ಪಕ್ಷದ ಪುನಶ್ಚೇತನಕ್ಕೆ ಕಪಿಲ್ ಸಿಬಲ್ ಸಹಿತ 23 ಹಿರಿಯ ಕಾಂಗ್ರೆಸಿಗರು ಸೋನಿಯಾ ಗಾಂಧಿಗೆ ಹಿಂದೆ ಪತ್ರ ಬರೆದಿದ್ದರು. ಇಷ್ಟಲ್ಲದೆ, ಇಲ್ಲಿ ಚುನಾವಣೆ ನಡೆಯುತ್ತಿದ್ದರೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕ ವಾದ್ರಾ ಅವರು ಪಿಕ್‌ನಿಕ್‌ಗೆ ಹೋಗಿದ್ದುದನ್ನು ಪ್ರಶ್ನಿಸಿದ್ದರು. ಆದರೆ, ನಾವೇನೋ ಏನು ಮಾಡಬೇಕೆಂದು ಸಲಹೆ ನೀಡಿ ಪತ್ರ ಬರೆದೆವು. ನಮ್ಮ ಧ್ವನಿಗೆ ಕಿವಿಗೊಡುವ ಬದಲು ಅವರು ಬೆನ್ನು ತಿರುಗಿಸಿದರು. ಫಲಿತಾಂಶ ಈಗ ನಮ್ಮ ಕಣ್ಣೆದುರಿಗೇ ಇದೆ ಎಂದಿದ್ದಾರೆ ಇಂಡಿಯನ್ ಎಕ್ಸ್‌ಪ್ರೆಸ್ ಸಂದರ್ಶನದಲ್ಲಿ ಕಪಿಲ್ ಸಿಬಲ್.
ಇದನ್ನೂ ಓದಿ:
ಪತ್ರ ಬರೆದವರಿಗೆ ಸ್ಪಷ್ಟ ಸಂದೇಶ: ಯುವ ನಾಯಕರಿಗೆ ಮಣೆ ಹಾಕಿದ ಕಾಂಗ್ರೆಸ್
CWC Meet | ಕಾಂಗ್ರೆಸ್ ನಾಯಕತ್ವಕ್ಕೆ ಚುನಾವಣೆ: 23 ಹಿರಿಯ ಕಾಂಗ್ರೆಸಿಗರ ಪತ್ರ
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

Average Rating