ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಫೇಕ್ ಸುದ್ದಿ ಹರಡುತ್ತಾ, ಅವರ ವರ್ಚಸ್ಸಿಗೆ ಕುಂದು ತರುವ ಹಾಗೂ ಒಳ್ಳೆಯ ಕೆಲಸಗಳಿಗೆ ಕಲ್ಲು ಹಾಕುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇದೆ. ಕಾಂಗ್ರೆಸ್ ಮತ್ತು ಅವರ ಪರವಾಗಿರುವ ಪತ್ರಕರ್ತರು ಕೂಡ ಇದರಲ್ಲಿ ನಿರತರಾಗಿದ್ದಾರೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಈಗ ಬಯಲಾಗಿದೆ.
ನರೇಂದ್ರ ಮೋದಿ ಮತ್ತು ಜಶೋದಾಬೆನ್ ಅವರು ಬಾಲ್ಯ ವಿವಾಹವಾದವರು ಎಂದು ಬಿಂಬಿಸಲು 1994ರ ಫೋಟೋವೊಂದನ್ನು ಬಳಸಿಕೊಂಡು, ಸ್ವಾತಿ ಚತುರ್ವೇದಿ ಎಂಬ ‘ಖ್ಯಾತ’ ಪತ್ರಕರ್ತೆಯೊಬ್ಬರು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದರು. ಈಕೆ ಎನ್‌ಡಿಟಿವಿ, ದಿ ವೈರ್ ಮುಂತಾದ ನರೇಂದ್ರ ಮೋದಿ-ವಿರೋಧಿ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿ ಅನುಭವವುಳ್ಳವರು.
ಮಂಗಳವಾರ ಈಕೆ ಮಾಡಿದ ಟ್ವೀಟ್‌ನಲ್ಲಿ, ‘ಇದು ಬಲವಂತದ ಬಾಲ್ಯವಿವಾಹವೆಂಬಂತೆ ಕಾಣಿಸುತ್ತದೆಯೇ? ಆದರೂ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗುವಾಗ ಕಡ್ಡಾಯವಾಗಿ ಮಾಡಬೇಕಾದ ಘೋಷಣೆಯಲ್ಲಿ ಇದರ ಉಲ್ಲೇಖವಿಲ್ಲ’ ಎಂಬರ್ಥದಲ್ಲಿ ಬರೆದು, ದಾರಿ ತಪ್ಪಿಸುವ ಟ್ವೀಟ್ ಮಾಡಿದ್ದರು.
ವಾಸ್ತವವಾಗಿ ಅದು 1994ರಲ್ಲಿ ನರೇಂದ್ರ ಮೋದಿ ಅವರು ಗುಜರಾತ್‌ನ ಮಾಜಿ ಸಚಿವ ಹೇಮಂತ್ ಚಾಪಟ್‌ವಾಲಾ ಅವರ ಪುತ್ರಿ ಅಲ್ಪಾ ಎಂಬಾಕೆಯ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದ ಚಿತ್ರ. ಅದನ್ನು ಮೋದಿ ಮತ್ತು ಪತ್ನಿ ಜಶೋದಾ ಬೆನ್ ಎಂದು ಬಿಂಬಿಸಿ ಶೇರ್ ಮಾಡಲಾಗಿತ್ತು.
ಇಂಥ ಪತ್ರಕರ್ತರಿಗೆ ಟ್ವಿಟರ್ ವೆರಿಫೈಡ್ ಖಾತೆ ಎಂಬ ಬ್ಯಾಡ್ಜ್ ಕೊಟ್ಟಿದೆ. ಈ ಬಗ್ಗೆ ಜನ ಸಾಮಾನ್ಯ ಓದುಗರೇ ಸತ್ಯಾಂಶ ತಿಳಿಸಿದ ಬಳಿಕ ಆಕೆ ತನ್ನ ಟ್ವೀಟನ್ನು ಅಳಿಸಿದ್ದಾರೆ.
ಆ ಟ್ವೀಟ್ ಆರ್ಕೈವ್‌ನಲ್ಲಿ ಸಿಗುತ್ತದೆ. ಅದು ಇಲ್ಲಿದೆ.
ಬಳಿಕ ಇದೇ ಪತ್ರಕರ್ತೆ ಸ್ಪಷ್ಟನೆ ನೀಡಿ, ತಾನು ಗೂಗಲ್‌ನಿಂದ ಹುಡುಕಿದಾಗ ಸಿಕ್ತು ಅಂತ ಮುಖವುಳಿಸಿಕೊಳ್ಳುವ ಹೇಳಿಕೆ ನೀಡಿದ್ದಾರೆ.
ವಾಸ್ತವವಾಗಿ ಈ ಫೇಕ್ ಸುದ್ದಿಯು 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಪಟ್ಟಕ್ಕೇರಿದ ಹಂತದಲ್ಲೇ ಸಾಕಷ್ಟು ಚಲಾವಣೆಯಾಗಿತ್ತು. ಇದನ್ನು ಮೋದಿ ವಿರೋಧಿಗಳು, ಕಾಂಗ್ರೆಸ್ ಬೆಂಬಲಿಗರು ಸಾಕಷ್ಟು ಟ್ರಾಲ್ ಮಾಡಿದ್ದರು.
ನರೇಂದ್ರ ಮೋದಿ ಮತ್ತವರ ಸರ್ಕಾರ ಕೈಗೊಳ್ಳುವ ಒಳ್ಳೆಯ ಕ್ರಮಗಳಿಗೆಲ್ಲದಕ್ಕೂ ಕಲ್ಲು ಹಾಕುವ, ಅಪಪ್ರಚಾರ ಮಾಡುವ ಈ ಫೇಕ್ ಸುದ್ದಿ ಸೃಷ್ಟಿಸುವ ಕಾರ್ಖಾನೆ, ಇದೀಗ ಮೋದಿ ವೈಯಕ್ತಿಕ ಬದುಕಿಗೂ ದಾಂಗುಡಿಯಿಟ್ಟಿದ್ದು, ದೇಶ-ವಿದೇಶಗಳಲ್ಲಿ ಅವರು ಗಳಿಸಿರುವ ವರ್ಚಸ್ಸಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದೆ.

Average Rating