Read Time:7 Minute, 58 Second

US Election Result | ಬೈಡನ್‌ಗೆ ನಾ ‘ಬಿಡೆನ್’ ಎಂದ ಟ್ರಂಪ್: ಏನಾಗಲಿದೆ, ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

0 0

ವಾಷಿಂಗ್ಟನ್: ಮತ ಎಣಿಕೆಯ ವಿಳಂಬದ ಬಳಿಕ, ಡೆಮಾಕ್ರಟ್ ಅಭ್ಯರ್ಥಿ ಜೋ ಬೈಡನ್ ಅವರು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿ, ಅಮೆರಿಕದ 46ನೇ ರಾಷ್ಟ್ರಪತಿಯಾಗಲು ಸಿದ್ಧತೆ ನಡೆಸಿದ್ದಾರೆ.

ಅಂಚೆ ಮತಗಳ ಎಣಿಕೆ ವಿಳಂಬವಾದ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ಅನಿಶ್ಚಿತತೆಯಿತ್ತು. ಇದೇ ವೇಳೆ, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಟ್ರಂಪ್, ಜಾರ್ಜಿಯಾದಲ್ಲಿ ಮರು ಮತಎಣಿಕೆ ನಡಸೆಬೇಕೆಂದು ಆಗ್ರಹಿಸಿದ್ದಾರೆ.

77ರ ಬೈಡನ್ 290 ಎಲೆಕ್ಟೋರಲ್ ಮತಗಳನ್ನು ಪಡೆದಿದ್ದರೆ, ಟ್ರಂಪ್‌ಗೆ 214 ಮತಗಳು ಲಭಿಸಿವೆ. ಒಟ್ಟು 538 ಮತಗಳಿದ್ದು, ಬಹುಮತಕ್ಕೆ ಬೇಕಾಗಿದ್ದುದು 270 ಎಲೆಕ್ಟೋರಲ್ ಮತಗಳು. ಹೀಗಾಗಿ ಬೈಡನ್ ಅವರು ಸ್ಪಷ್ಟ ಬಹುಮತದೊಂದಿಗೆ ಹೊಸ ಸರ್ಕಾರ ರಚನೆಗೆ ಸಿದ್ಧರಾಗಿದ್ದಾರೆ.

ಬೈಡನ್ ಅವರು ಅಧ್ಯಕ್ಷರಾಗಿ ಶನಿವಾರ ಘೋಷಣೆಯಾಗಿದ್ದರೂ, ರಾಷ್ಟ್ರಾಧ್ಯಕ್ಷ ಹುದ್ದೆಗೇರಲು ಇದುವೇ ಅಂತಿಮ ಹಂತವೇನಲ್ಲ. 538 ಸದಸ್ಯ ಬಲದ ಎಲೆಕ್ಟೋರಲ್ ವ್ಯವಸ್ಥೆಯಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡಲು ಇನ್ನೂ ಒಂದು ತಿಂಗಳ ಪ್ರಕ್ರಿಯೆಯಿದೆ.

ಅಮೆರಿಕ ಚುನಾವಣೆ ಹೇಗೆ ನಡೆಯುತ್ತದೆ?
ಅಮೆರಿಕನ್ ಪ್ರಜೆಗಳು ರಾಷ್ಟ್ರಪತಿ ಅಭ್ಯರ್ಥಿಗೆ ಮತ ಹಾಕುವುದೆಂದರೆ, ವಾಸ್ತವವಾಗಿ ಅವರು ಓಟು ಹಾಕುವುದು ತಮ್ಮ ರಾಜ್ಯದ ಆಯ್ಕೆದಾರರಿಗೆ (ಎಲೆಕ್ಟರ್‌ಗಳು). ಈ ಆಯ್ಕೆದಾರರು ತಮ್ಮ ಮತದಾರರ ಆಯ್ಕೆಯ ಅಭ್ಯರ್ಥಿಗೇ ಮತ ಚಲಾಯಿಸುವ ಬದ್ಧತೆ ಹೊಂದಿರುತ್ತಾರೆ.

ಪ್ರತಿ ರಾಜ್ಯದಲ್ಲಿ ಆಯ್ಕೆದಾರರ ಸಂಖ್ಯೆಯು ಆಯ್ಕೆದಾರರ ಮತಗಳಿಗೆ (ಎಲೆಕ್ಟೋರಲ್ ಮತಗಳು) ಸರಿಸಮವಾಗಿರುತ್ತದೆ.

ಆದರೆ, ಎಲೆಕ್ಟರ್‌ಗಳನ್ನು ಆಯ್ಕೆ ಮಾಡುವ ರೀತಿಯಲ್ಲಿ ಆಯಾ ರಾಜ್ಯದ ಕಾನೂನುಗಳಲ್ಲಿ ಭಿನ್ನತೆಯಿರುತ್ತದೆ. ಸಾಮಾನ್ಯವಾಗಿ ಪಕ್ಷದ ಕೇಂದ್ರೀಯ ಸಮಿತಿ ಸಭೆ ಅಥವಾ ಪಕ್ಷದ ಸಮಾವೇಶದಲ್ಲಿ ಪ್ರತಿಯೊಂದು ಪಕ್ಷದ ಅಭ್ಯರ್ಥಿಗಾಗಿ ಎಲೆಕ್ಟರ್‌ಗಳ ಸಮೂಹವನ್ನು ಆಯ್ಕೆ ಮಾಡಲಾಗುತ್ತದೆ.

ಚುನಾವಣೆ ನಡೆದ ಬಳಿಕ, ಪ್ರತಿಯೊಂದು ರಾಜ್ಯವೂ ಜನಪ್ರಿಯ ಮತಗಳ ಫಲಿತಾಂಶಕ್ಕೆ ಪ್ರಮಾಣಪತ್ರ ನೀಡುತ್ತದೆ. ಈ ಪ್ರಕ್ರಿಯೆ ಪೂರ್ಣಗೊಂಡಾಗ, ರಾಜ್ಯಗಳ ರಾಜ್ಯಪಾಲರು ಮತದ ದೃಢೀಕರಣ ಪ್ರಮಾಣಪತ್ರಗಳನ್ನು ನೀಡಬೇಕಾಗುತ್ತದೆ. ಇದರಲ್ಲಿ ಎಲೆಕ್ಟರ್‌ಗಳ ಹೆಸರು ಮತ್ತು ಗೆದ್ದವರಿಗೆ, ಸೋತವರಿಗೆ ಲಭಿಸಿದ ಮತಗಳ ಸಂಖ್ಯೆ ಇರುತ್ತದೆ. ಪ್ರತಿ ರಾಜ್ಯದ ಮೊಹರು ಇರುವ ಈ ಪ್ರಮಾಣಪತ್ರವನ್ನು ಅಮೆರಿಕದ ಪತ್ರಾಗಾರಕ್ಕೆ ಕಳುಹಿಸಲಾಗುತ್ತದೆ.

ರಾಜ್ಯ ಮಟ್ಟದ ಚುನಾವಣಾ ಸಂಬಂಧಿತ ಯಾವುದೇ ವಿವಾದಗಳನ್ನು ಪರಿಹರಿಸಿಕೊಳ್ಳಲು ಡಿಸೆಂಬರ್ 8 ಅಂತಿಮ ದಿನಾಂಕ. ಮರು ಮತ ಎಣಿಕೆ ಅಥವಾ ನ್ಯಾಯಾಂಗದಲ್ಲಿ ಹೂಡಿದ ದಾವೆಗಳೆಲ್ಲವೂ ಆ ದಿನದೊಳಗೆ ಇತ್ಯರ್ಥವಾಗಬೇಕಿದೆ.

ಡಿಸೆಂಬರ್ 14ರಂದು ಎಲೆಕ್ಟರ್‌ಗಳೆಲ್ಲ ಸೇರಿ, ಕಾಗದದ ಮತ ಪತ್ರದ ಮೂಲಕ ತಮ್ಮ ರಾಜ್ಯಗಳಲ್ಲಿ (33 ರಾಜ್ಯಗಳು ಮತ್ತು ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ) ಮತದಾನ ಮಾಡುತ್ತಾರೆ. ರಾಜ್ಯದಲ್ಲಿ ಜನಪ್ರಿಯ ಮತ ಚಲಾವಣೆಯಾದ ರೀತಿಯಲ್ಲೇ ಎಲೆಕ್ಟರ್‌ಗಳು ಮತದಾನ ಮಾಡಬೇಕಾಗುತ್ತದೆ. ಕೆಲವು ರಾಜ್ಯಗಳಲ್ಲಿ, ಕಾಂಗ್ರೆಶನಲ್ ರಿಸರ್ಚ್ ಸರ್ವಿಸ್ ಅನುಸಾರವಾಗಿ ಎಲೆಕ್ಟರ್‌ಗಳನ್ನು ಬದಲಾಯಿಸಬಹುದು ಅಥವಾ ಪೆನಾಲ್ಟಿ ವಿಧಿಸಬಹುದಾಗಿದೆ.

ನಂತರ, ಅಧ್ಯಕ್ಷ, ಉಪಾಧ್ಯಕ್ಷರ ಮತಗಳನ್ನು ಎಣಿಕೆ ಮಾಡಿ ಮತದ ಪ್ರಮಾಣಪತ್ರ ನೀಡಲಾಗುತ್ತದೆ. ಈ ಪ್ರಮಾಣಪತ್ರಗಳನ್ನು, ಇತರ ಅಧಿಕೃತ ದಾಖಲೆಗಳೊಂದಿಗೆ, ನೋಂದಾಯಿತ ಅಂಚೆಯ ಮೂಲಕ ಸೆನೆಟ್ ಅಧ್ಯಕ್ಷರೂ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ.

ಡಿಸೆಂಬರ್ 23ರಂದು ಈ ಪ್ರಮಾಣಪತ್ರಗಳು ಎಲ್ಲ ಸಂಬಂಧಿತರನ್ನೂ ತಲುಪಬೇಕಾಗುತ್ತದೆ. ತಲುಪದಿದ್ದರೆ, ಫಲಿತಾಂಶ ಪಡೆಯಲು ಬೇರೆ ಮಾರ್ಗಗಳಿವೆ.

2021ರ ಜನವರಿ 6ರಂದು ಪ್ರತಿನಿಧಿ ಸಭೆ (ಹೌಸ್) ಹಾಗೂ ಸೆನೆಟ್ ಜಂಟಿ ಅಧಿವೇಶನದಲ್ಲಿ ಎಲೆಕ್ಟೋರಲ್ ಮತಗಳನ್ನು ಲೆಕ್ಕ ಹಾಕುತ್ತದೆ. ಯಾರಿಗಾದರೂ 270 ಅಥವಾ ಅಧಿಕ ಎಲೆಕ್ಟೋರಲ್ ಮತಗಳು ದೊರೆತರೆ ಆಗ ಸೆನೆಟ್ ಅಧ್ಯಕ್ಷರು (ಸದ್ಯ, ಈಗಿನ ಉಪಾಧ್ಯಕ್ಷ ಮೈಕ್ ಪೆನ್ಸ್) ಫಲಿತಾಂಶಗಳನ್ನು ಘೋಷಿಸುತ್ತಾರೆ.

ಕಾಂಗ್ರೆಸ್ ಸದಸ್ಯರು ಯಾವುದೇ ರಾಜ್ಯದ ಫಲಿತಾಂಶಕ್ಕೆ ಆಕ್ಷೇಪಿಸಬಹುದು. ಆಕ್ಷೇಪಣೆಯನ್ನು ಲಿಖಿತವಾಗಿ ಜಂಟಿ ಸದನದಲ್ಲೂ ಕನಿಷ್ಠ ಒಬ್ಬ ಸದಸ್ಯ ಸಲ್ಲಿಸಬೇಕು.

ಆಕ್ಷೇಪಣೆಯು ಸರಿಯಾಗಿದೆ ಎಂದಾದರೆ, ಗರಿಷ್ಠ ಎರಡು ಗಂಟೆಗಳ ಕಾಲ ಅವುಗಳನ್ನು ಸದನದಲ್ಲಿ ಚರ್ಚಿಸಿ, ಆಕ್ಷೇಪಣೆಯನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವುದಕ್ಕೆ ಮತ ಚಲಾಯಿಸಬಹುದು. ಪುನಃ ಜಂಟಿ ಅಧಿವೇಶನದಲ್ಲಿ ಇದರ ಫಲಿತಾಂಶವನ್ನು ಘೋಷಿಸಲಾಗುತ್ತದೆ.

ಯಾವುದೇ ರಾಜ್ಯದ ಎಲೆಕ್ಟೋರಲ್ ಮತಕ್ಕಿರುವ ಯಾವುದೇ ಆಕ್ಷೇಪಣೆಯನ್ನು ಎರಡೂ ಸದನಗಳು ಅಂಗೀಕರಿಸಬೇಕಾಗುತ್ತದೆ.

ಅಂತಿಮವಾಗಿ ಯಾವುದೇ ಅಧ್ಯಕ್ಷೀಯ ಅಭ್ಯರ್ಥಿಯೂ ಕನಿಷ್ಠ 270 ಮತಗಳನ್ನು ಗೆದ್ದುಕೊಳ್ಳದಿದ್ದರೆ, ಸಂವಿಧಾನದ 12ನೇ ತಿದ್ದುಪಡಿಯ ಅನುಸಾರ ಸದನದಲ್ಲಿ ಚುನಾವಣೆ ನಡೆಸುತ್ತದೆ. ಅಗತ್ಯ ಬಿದ್ದರೆ, ಸದನವು ಬಹುಮತದ ಆಧಾರದಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡಬಹುದು.

2021ರ ಜನವರಿ 20ರಂದು ನಿಯೋಜಿತ ಅಧ್ಯಕ್ಷರು ‘ಇನಾಗುರೇಶನ್ ದಿನ’ ಅಥವಾ ಪದಗ್ರಹಣ ದಿನದಂದು ಅಧಿಕಾರ ಸ್ವೀಕರಿಸುತ್ತಾರೆ.

ಟ್ರಂಪ್ ಕಾನೂನು ಹೋರಾಟ

ಇದೀಗ, ರಿಪಬ್ಲಿಕನ್ ಪಕ್ಷದ ಟ್ರಂಪ್ ಬೆಂಬಲಿಗರು ‘ಇದು ಇನ್ನೂ ಮುಗಿದಿಲ್ಲ, ಮತಗಳನ್ನು ಕದಿಯಲಾಗಿದೆ’ ಎಂದು ಕೂಗಾಡುತ್ತಾ ಬೀದಿಗಿಳಿದು ಪ್ರತಿಭಟನೆ ನಡೆಸತೊಡಗಿದ್ದಾರೆ. ಡೆಮಾಕ್ರಟ್‌ಗಳು ವಂಚನೆಯಿಂದ ಗೆದ್ದಿದ್ದಾರೆ ಎಂಬ ಟ್ರಂಪ್ ಆರೋಪಗಳನ್ನು ಬೆಂಬಲಿಸಿದ ಅವರು, ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ.

ಅಟ್ಲಾಂಟ, ಟಾಲಹಸ್ಸೀ, ಆಸ್ಟಿನ್, ಬಿಸ್ಮಾರ್ಕ್, ಬೋಯಿಸ್, ಫೀನಿಕ್ಸ್ ಮುಂತಾದೆಡೆಗಳಲ್ಲಿ ಜನರು ಬೀದಿಗಿಳಿದು ಜೋ ಬೈಡನ್ ವಿಜಯವನ್ನು ವಿರೋಧಿಸಿದ್ದಾರೆ.

ಇದರ ಜೊತೆಗೆ, ಕಾನೂನು ಹೋರಾಟ ಮಾಡುವುದಾಗಿಯೂ ಟ್ರಂಪ್ ಘೋಷಿಸಿದ್ದಾರೆ ಮತ್ತು ಕೆಲವು ರಾಜ್ಯಗಳ ಚುನಾವಣೆ ಫಲಿತಾಂಶ ಬದಲಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಆದರೆ, ವಿಶ್ಲೇಷಕರು, ತಜ್ಞರ ಅಭಿಪ್ರಾಯದ ಆಧಾರದಲ್ಲಿ ಅಲ್ಲಿನ ಮಾಧ್ಯಮಗಳು ಹೇಳುವಂತೆ, ಟ್ರಂಪ್ ಅವರು ಸೋಲು ಒಪ್ಪಿಕೊಳ್ಳಲೇಬೇಕಾಗುತ್ತದೆ. ಆದರೆ, ಪದಗ್ರಹಣ ದಿನವಾದ 2021ರ ಜನವರಿ ತಿಂಗಳವರೆಗೂ ಕಾದು ನೋಡಬೇಕಾಗಿದೆ. ಜೊತೆಗೆ, ಸೋಲಾದರೆ 2024ರ ಚುನಾವಣೆಗಾಗಿ ಟ್ರಂಪ್ ಮತ್ತೆ ಅಭಿಯಾನ ಆರಂಭಿಸುವ ಸಾಧ್ಯತೆಗಳಿವೆ. ಯಾಕೆಂದರೆ, 2016ರಲ್ಲಿ ಗೆದ್ದ ಬಳಿಕವೂ ಟ್ರಂಪ್ ಅವರು 2020ರ ಚುನಾವಣೆಗೆ (ಅಮೆರಿಕದ ಕಾನೂನಿನ ಪ್ರಕಾರ) ಅರ್ಜಿ ಸಲ್ಲಿಸಿದ್ದರು.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy
Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ISRO ಸಾಧನೆ: ನಭಕ್ಕೆ ನೆಗೆದ ಭೂಪರಿವೀಕ್ಷಣಾ ಉಪಗ್ರಹ EOS01
Next post ಸುಳ್ಳು ಹರಡುತ್ತಾ ಬೈಡನ್ ಗೆಲುವಿಗೂ ಮೋದಿ ವಿರುದ್ಧ ದ್ವೇಷ ಕಾರಿದ ಕಾಂಗ್ರೆಸ್

ಸುದ್ದಿ ಸಂಚಯ

ಇವುಗಳನ್ನೂ ನೋಡಿ