ಲಖನೌ: ಇಲ್ಲಿನ ಪ್ರಖ್ಯಾತ ಲುಲು ಮಾಲ್ನಲ್ಲಿ ‘ಅನಧಿಕೃತ’ವಾಗಿ ನಮಾಜ್ ಮಾಡಿರುವ ಪ್ರಸಂಗದ ಹಿಂದಿನ ಸತ್ಯಾಂಶ ಬಯಲಾಗಿದೆ. ಇದನ್ನು ಹಿಂದುಗಳೇ ಮಾಡಿದ್ದಾರೆ ಎಂದು ಕೆಲವು ಕೋಮು ಮಾಧ್ಯಮಗಳು ವರದಿ ಮಾಡಿದ್ದು ಸುಳ್ಳು ಎಂಬುದು ಖಚಿತವಾಗಿದೆ. ಅನುಮತಿಯಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡಿದ ಆರೋಪದಲ್ಲಿ ಇಬ್ಬರನ್ನು ಭಾನುವಾರ (ಜು.24) ಪೊಲೀಸರು ಬಂಧಿಸುವ ಮೂಲಕ ಬಂಧಿತರ ಸಂಖ್ಯೆ 7ಕ್ಕೇರಿದೆ. ಇದು ಹಿಂದುಗಳೇ ಮುಸಲ್ಮಾನರ ಮೇಲೆ ದ್ವೇಷ ಸೃಷ್ಟಿಸಲು ಮಾಡಿದ ಸಂಚು ಎಂದು ಕೆಲವು ಮಾಧ್ಯಮಗಳು ಈ ಹಿಂದೆ ವರದಿ ಮಾಡಿದ್ದವು.
ಲುಲು ಮಾಲ್ ಅಬುಧಾಬಿ ಮೂಲದ ಲುಲು ಸಮೂಹ ಸಂಸ್ಥೆಯದ್ದಾಗಿದ್ದು, ಇದನ್ನು ಸ್ಥಾಪಕರು ಭಾರತ ಮೂಲದ ಕೋಟ್ಯಧಿಪತಿ ಯೂಸುಫ್ ಅಲಿ ಎಂ.ಎ.
ಸಾಮಾಜಿಕ ಶಾಂತಿ ಕದಡಲು ಪ್ರಯತ್ನಿಸುವವರ ವಿರುದ್ಧ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರವು ಉತ್ತರಪ್ರದೇಶದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಅಂಗವಾಗಿ, ‘ಸಾಮಾಜಿಕ ಅಶಾಂತಿ ಸೃಷ್ಟಿಸಲು ಪಣ ತೊಟ್ಟಂತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ’ ಎಂಬ ಖುದ್ದು ಮುಖ್ಯಮಂತ್ರಿಯ ಸೂಚನೆಯ ಮೇರೆಗೆ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ.
ಭಾನುವಾರ ಬಂಧನಕ್ಕೀಡಾದವರು ಇರ್ಫಾನ್ ಅಹ್ಮದ್ ಮತ್ತು ಸೌದ್. ಇವರಿಬ್ಬರೂ ಲಖನೌದ ಸಾದತ್ಗಂಜ್ ನಿವಾಸಿಗಳು ಎಂದು ಹೆಚ್ಚುವರಿ ಪೊಲೀಸ್ ಉಪಾಯುಕ್ತ ರಾಕೇಶ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ. ಜು.23ರಂದು ಚೌಪಾಟಿಯಾ ನಿವಾಸಿ ಮೊಹಮ್ಮದ್ ಅದಿಲ್ ಹಾಗೂ ಜು.19ರಂದು ಮೊಹಮದ್ ರೆಹಾನ್, ಅತೀಫ್ ಖಾನ್, ಮೊಹಮದ್ ಲೋಕಮನ್ ಮತ್ತು ಮೊಹಮದ್ ನೋಮನ್ ಎಂಬವರನ್ನು ಬಂಧಿಸಲಾಗಿತ್ತು. ಬಂಧಿತ 7 ಮಂದಿಯಲ್ಲಿ ಯಾರು ಕೂಡ ಲುಲು ಮಾಲ್ ಸಿಬ್ಬಂದಿಗಳಲ್ಲ ಎಂಬುದೂ ಗಮನಿಸಬೇಕಾದ ವಿಚಾರ.
ಈ ಅಬುಧಾಬಿ ಮೂಲದ ಈ ಮಾಲ್ ಅನ್ನು ಇತ್ತೀಚೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉದ್ಘಾಟಿಸಿದ್ದರು. ಜು.13ರಂದು ಇದರೊಳಗೆ ಅನುಮತಿಯಿಲ್ಲದೆ ನಮಾಜ್ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ, ನಾವು ಹನುಮಾನ್ ಚಾಲೀಸಾ ಪಠಿಸುತ್ತೇವೆ ಎಂದು ಬಲಪಂಥೀಯರೂ ಪ್ರತಿಭಟನಾತ್ಮಕವಾಗಿ ಎಚ್ಚರಿಕೆ ನೀಡಿದ್ದರಲ್ಲದೆ, ಮರುದಿನ ಅಲ್ಲಿ ಧರಣಿಯನ್ನೂ ನಡೆಸಿದ್ದರು.

Average Rating