ಮುಂಬಯಿ: ಮಹಾರಾಷ್ಟ್ರ ಸರಕಾರಕ್ಕಾಗಿಯೇ ಪೂರೈಸಲು ಬಿಜೆಪಿ ಉದ್ದೇಶಿಸಿದ ರೆಮ್‌ಡಿಸಿವಿರ್ ಔಷಧಿಯನ್ನು ಮಹಾರಾಷ್ಟ್ರ ಸರ್ಕಾರವೇ ರಾಜಕೀಯ ಕಾರಣಕ್ಕಾಗಿ ಬಿಜೆಪಿಗೆ ಕಪ್ಪು ಮಸಿ ಬಳಿಯಲು ಬಳಸಿದ ಘಟನೆ ಆತಂಕಕ್ಕೆ ಕಾರಣವಾಗಿದೆ.
ಬಿಜೆಪಿಯು ರೆಮ್‌ಡಿಸಿವಿರ್ ಔಷಧಿಯನ್ನು ಅಕ್ರಮವಾಗಿ ದಾಸ್ತಾನಿಟ್ಟಿದೆ ಎಂದೆಲ್ಲಾ ಆರೋಪಿಸಿದ್ದ ಮಹಾರಾಷ್ಟ್ರದ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸರ್ಕಾರವು, ದಮನ್ ಮೂಲದ ಔಷಧ ಕಂಪನಿ ಬ್ರೂಕ್ ಫಾರ್ಮಾ ನಿರ್ದೇಶಕ ರಾಜೇಶ್ ಡೊಕಾನಿಯಾ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿತ್ತು.
ಮಹಾರಾಷ್ಟ್ರ ಪೊಲೀಸರ ಕ್ರಮವನ್ನು ಖಂಡಿಸಿದ ಬಿಜೆಪಿ, ‘ಮಹಾರಾಷ್ಟ್ರದ ಜನರಿಗೆ ನೀಡುವ ಸಲುವಾಗಿಯೇ ₹ 4.75 ಕೋಟಿ ಮೌಲ್ಯದ ರೆಮ್‌ಡಿಸಿವಿರ್‌ಗೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಔಷಧ ಕಂಪನಿಯ ನಿರ್ದೇಶಕರನ್ನೇ ವಶಕ್ಕೆ ಪಡೆಯುವ ಮೂಲಕ ಜಾಗತಿಕ ಪಿಡುಗಿನ ಸಂದರ್ಭದಲ್ಲೂ ಮಹಾರಾಷ್ಟ್ರ ಸರ್ಕಾರವು ರಾಜಕೀಯ ಮಾಡುತ್ತಿದೆ’ ಎಂದು ಅದು ಆರೋಪಿಸಿತ್ತು.
ಮಹಾರಾಷ್ಟ್ರ ಜನತೆಗಾಗಿಯೇ ಇದರ ವ್ಯವಸ್ಥೆ ಮಾಡಲಾಗಿತ್ತು ಎಂಬ ಬಿಜೆಪಿ ಮುಖಂಡ ಫಡಣವೀಸ್ ಮಾತನ್ನು ಶಿವಸೇನಾ ಒಪ್ಪಿರಲೇ ಇಲ್ಲ.
ಇದೀಗ ಸತ್ಯಾಂಶ ಬಯಲಾಗಿದೆ. ರೆಮ್‌ಡಿಸಿವಿರ್ ಜೀವರಕ್ಷಕ ಔಷಧಿಯನ್ನು ಬಿಜೆಪಿಯೇ ಮಹಾರಾಷ್ಟ್ರ ಜನತೆಗೆ ವಿತರಿಸಲೆಂದು ಬಿಜೆಪಿಯೇ ಮಹಾರಾಷ್ಟ್ರ ಸರ್ಕಾರಕ್ಕೆ ಕೇಂದ್ರದಿಂದ ಕೊಡಿಸುವ ವ್ಯವಸ್ಥೆ ಮಾಡಿತ್ತೆಂಬುದನ್ನು ಸ್ವತಃ ಆಹಾರ ಮತ್ತು ಔಷಧ ಆಡಳಿತ ವಿಭಾಗದ ಸಚಿವ ಡಾ.ರಾಜೇಂದ್ರ ಶಿಂಗ್ನೆ ಸ್ಪಷ್ಟಪಡಿಸಿದ್ದಾರೆ.
ಇದರೊಂದಿಗೆ ಇಷ್ಟು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಆರೋಪ-ಪ್ರತ್ಯಾರೋಪ ಮತ್ತು ಮಹಾರಾಷ್ಟ್ರ ವಿಕಾಸ್ ಅಘಡಿ ಸರ್ಕಾರದ ಕುತಂತ್ರವೂ ಬಯಲಾಗಿದೆ.
60000 ರೆಮ್‌ಡಿಸಿವಿರ್ ಅಕ್ರಮ ದಾಸ್ತಾನಿಟ್ಟಿದ್ದರು ಎಂಬ ಆರೋಪದಲ್ಲಿ ಬ್ರುಕ್ ಫಾರ್ಮಾದ ಮುಖ್ಯಸ್ಥರನ್ನು ಠಾಣೆಗೆ ಕರೆಸಿದ ಸುದ್ದಿಯೊಂದಿಗೆ ಕಳೆದ ಶನಿವಾರ-ಭಾನುವಾರ ಮಹಾರಾಷ್ಟ್ರದಲ್ಲಿ ರಾಜಕೀಯ ತಿಕ್ಕಾಟವೇ ನಡೆದಿತ್ತು.
ಇದೀಗ ರೆಮ್‌ಡಿಸಿವಿರ್ ರಫ್ತು ನಿಷೇಧವಾಗಿದೆ. ರಫ್ತು ಸಂಸ್ಥೆಯೂ ಆಗಿರುವ ಬ್ರುಕ್ ಫಾರ್ಮಾ ಬಳಿ ಇದ್ದ ಈ ಜೀವರಕ್ಷಕ ಔಷಧಿ ಡೋಸ್‌ಗಳನ್ನೇ ಅಕ್ರಮ ಮತ್ತು ಬಿಜೆಪಿಯ ಕುತಂತ್ರ ಎಂದೆಲ್ಲಾ ಅಲ್ಲಿನ ಸರ್ಕಾರ ಬಿಂಬಿಸಿತ್ತು.
ಹೌದು, ನನಗೆ ಗೊತ್ತಿತ್ತು. ಬಿಜೆಪಿ ಮುಖಂಡರು ನನ್ನನ್ನು ಭೇಟಿಯಾಗಿದ್ದರು. ಬಿಜೆಪಿ ನಾಯಕ ಪ್ರವೀಣ್ ದರೇಕರ್ ನನಗಿದನ್ನು ತಿಳಿಸಿದ್ದರು. ರಾಜ್ಯ ಸರ್ಕಾರದ ಪರವಾಗಿ ಈ ದಾಸ್ತಾನನ್ನು ಪಡೆಯಲು ಸಹಾಯ ಮಾಡುವುದಾಗಿ ಅವರು ನನ್ನಲ್ಲಿ ಕೇಳಿಕೊಂಡಾಗ, ನಾನು ಒಪ್ಪಿದ್ದೆ. ಇದು ನಮ್ಮದೇ ರಾಜ್ಯದ ಜನರಿಗಾಗಿಯೇ ಹೊರತು ರಫ್ತಿಗಾಗಿ ಅಲ್ಲ ಎಂದು ಮರಾಠಿ ಚಾನೆಲ್ ಒಂದಕ್ಕೆ ಡಾ.ಶಿಂಗ್ನೆ ಸ್ಪಷ್ಟನೆ ನೀಡಿದ್ದಾರೆ.
ಇದೀಗ, ಈ ವಿಷಯ ಯಾವ್ಯಾವುದೋ ತಿರುವು ಪಡೆಯಿತು. ಕೋವಿಡ್-19 ಪರಿಸ್ಥಿತಿಯಲ್ಲಿ ಈ ಬಗ್ಗೆ ರಾಜಕೀಯ ಬೇಡ ಎಂದು ಸಚಿವರು ಪ್ರಕರಣಕ್ಕೆ ಮಂಗಳ ಹಾಡಲು ಪ್ರಯತ್ನಿಸಿದರು.
ಮಹಾರಾಷ್ಟ್ರ ವಿಧಾನ ಪರಿಷತ್ ಪ್ರತಿಪಕ್ಷ ಮುಖಂಡ ಪ್ರವೀಣ್ ದರೇಕರ್ ಅವರು ಹೇಳಿಕೆ ನೀಡಿ, ರಾಜ್ಯ ಸರ್ಕಾರಕ್ಕಾಗಿ ನಾವು ಈ ಡೋಸ್‌ಗಳನ್ನು ಮೀಸಲಿಡುವ ಪ್ರಯತ್ನದ ಬಗ್ಗೆ ಶಿಂಗ್ನೆ ನಮಗೆ ಧನ್ಯವಾದ ಹೇಳಿದ್ದಾರೆ ಎಂದು ಹೇಳಿದ್ದಾರೆ.
ಇದರಿಂದಾಗಿ, ಇಂಥ ಸಂಕಷ್ಟ ಸಮಯದಲ್ಲೂ ಉದ್ಧವ್ ಠಾಕ್ರೆಯ ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಎಡಬಿಡಂಗಿತನ ರಾಜಕೀಯವಂತೂ ಬಯಲಿಗೆ ಬಿದ್ದಿದೆ.

Average Rating