ಕೋಲ್ಕತಾ: ಪಿಎಂ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ ಹಣವನ್ನು ರೈತರ ಖಾತೆಗಲ್ಲ, ತಮ್ಮ ಸರ್ಕಾರಕ್ಕೆ ವರ್ಗಾಯಿಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಳಿಕೊಂಡ ಬೆನ್ನಿಗೇ, ಪಶ್ಚಿಮ ಬಂಗಾಳದ ರೈತರು ಸ್ವತಃ ತಮ್ಮ ಮುಖ್ಯಮಂತ್ರಿಗೇ ಆಘಾತ ನೀಡಿದ್ದಾರೆ.
ದೇಶಾದ್ಯಂತ ಈಗಾಗಲೇ 8.45 ಕೋಟಿ ರೈತರಿಗೆ ಲಾಭಪ್ರದವಾಗಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಿಂದ ಎಲ್ಲ ರೈತರಿಗೂ ಲಾಭವಿದೆ ಎಂಬುದನ್ನು ಮನಗಂಡಿರುವ ಪಶ್ಚಿಮ ಬಂಗಾಳದ ರೈತರು, ಇದಕ್ಕಾಗಿ ತಾವೇ ಅರ್ಜಿ ಸಲ್ಲಿಸಿದ್ದಾರೆ.
ತೃಣಮೂಲ ಕಾಂಗ್ರೆಸ್, ಎಡಪಂಥೀಯರ ರಣ ಕಣವಾಗಿರುವ ಪಶ್ಚಿಮ ಬಂಗಾಳದಲ್ಲಿ ಸುಮಾರು 23 ಲಕ್ಷ ಮಂದಿ ರೈತರು, ಸ್ವಯಂ ಆಗಿ ಪಿಎಂ ಕಿಸಾನ್ ನಿಧಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
‘ದೀದಿ’ ಹೆಸರಿನಲ್ಲಿ ಬೀದಿ ರಾಜಕೀಯ ಮಾಡುತ್ತಿರುವ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವೂ, ರೈತರ ಹಿತಕ್ಕಾಗಿ ಕೇಂದ್ರವು ಜಾರಿಗೆ ತಂದ ಕಾಯ್ದೆಗಳನ್ನು, ನರೇಂದ್ರ ಮೋದಿ ಜಾರಿಗೆ ತಂದರೆಂಬ ಏಕೈಕ ಕಾರಣಕ್ಕೆ ವಿರೋಧಿಸುತ್ತಿದೆ.
ರೈತರ ಅನುಕೂಲಕ್ಕಾಗಿರುವ ಕೇಂದ್ರದ ಈ ಯೋಜನೆಗೆ ಮಮತಾ ಸಮ್ಮತಿ ಸೂಚಿಸಿಲ್ಲ. ಹೀಗಾಗಿ ರಾಜ್ಯದ ಸುಮಾರು 70 ಲಕ್ಷ ಮಂದಿ ರೈತರಿಗೆ ಈ ಯೋಜನೆಯ ಲಾಭ ಸಿಗುತ್ತಿಲ್ಲ.
ಎಕನಾಮಿಕ್ ಟೈಮ್ಸ್ನಲ್ಲಿರುವ ವರದಿಯ ಪ್ರಕಾರ (ಕೇಂದ್ರ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದಂತೆ), ಮಮತಾ ಬ್ಯಾನರ್ಜಿ ಸಮ್ಮತಿ ನೀಡಿದ್ದಿದ್ದರೆ ಇದುವರೆಗೆ (ಶುಕ್ರವಾರವೂ ದೇಶದ ರೈತರಿಗೆ ನರೇಂದ್ರ ಮೋದಿ ಬಿಡುಗಡೆ ಮಾಡಿದ 18 ಸಾವಿರ ಕೋಟಿ ರೂ. ನೆರವು ಸೇರಿದಂತೆ) ಪ್ರತೀ ರೈತರ ಖಾತೆಗೆ 14 ಸಾವಿರ ರೂ. ಜಮೆಯಾಗುತ್ತಿತ್ತು. ರಾಜ್ಯ ರೈತರಿಗೆ ಒಟ್ಟು ಸುಮಾರು 9800 ಕೋಟಿ ರೂ. ಸಿಗುತ್ತಿತ್ತು. ಆದರೆ ಮಮತಾ ಇದಕ್ಕೆ ಕಲ್ಲು ಹಾಕಿದ್ದು, ತಮ್ಮದೇ ಸರ್ಕಾರದ ಮೂಲಕ ಪಾವತಿಸುವುದಾಗಿ ಹೇಳುತ್ತಿದ್ದಾರೆ.
ಇದುವರೆಗೆ ಪಿಎಂ ಕಿಸಾನ್ ನೋರ್ಟಲ್ನ ‘ಫಾರ್ಮರ್ಸ್ ಕಾರ್ನರ್’ನಲ್ಲಿ 22.6 ಲಕ್ಷ ರೈತರು ಸ್ವಯಂ ಆಗಿ ನೋಂದಾಯಿಸಿಕೊಂಡಿದ್ದಾರೆ. ಆದರೆ, ಹಣ ವರ್ಗಾಯಿಸಲು ಬಂಗಾಳ ಸರ್ಕಾರವು ನೋಡಲ್ ಅಧಿಕಾರಿಯನ್ನು ನೇಮಿಸಿಯೂ ಇಲ್ಲ ಮತ್ತು ಈ ರೈತರನ್ನು ದೃಢೀಕರಿಸುವ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ಈ ಅಧಿಕಾರಿ ಹೇಳಿರುವುದಾಗಿ ಎಕನಾಮಿಕ್ ಟೈಮ್ಸ್ ತಿಳಿಸಿದೆ.
ಪ್ರಧಾನಿ ಮೋದಿ ಅವರು ಶುಕ್ರವಾರ ಪಿಎಂ ಕಿಸಾನ್ ಸಮ್ಮಾನ್ ವಿಧಿ ಯೋಜನೆಯಡಿ ದೇಶದ 8 ಕೋಟಿ ರೈತರ ಖಾತೆಗೆ 18 ಸಾವಿರ ಕೋಟಿ ರೂ. ಕಂತಿನ ಹಣವನ್ನು ವರ್ಗಾಯಿಸಿದ್ದರು. ಮಮತಾ ಬ್ಯಾನರ್ಜಿ ರಾಜಕೀಯದಿಂದಾಗಿ ಇದರಲ್ಲಿಯೂ ಪ.ಬಂಗಾಳದ ರೈತರಿಗೆ ಪಾಲು ಸಿಗುತ್ತಿಲ್ಲದಿರುವುದು ದುರದೃಷ್ಟಕರ.
ಈ ಮಧ್ಯೆ, ಇದೇ ಮಮತಾ ಬ್ಯಾನರ್ಜಿಯು ಡಿ.21ರಂದು ಕೇಂದ್ರಕ್ಕೆ ಪತ್ರ ಬರೆದು, ಪಿಎಂ ಕಿಸಾನ್ ಹಣವನ್ನು ರಾಜ್ಯ ಸರ್ಕಾರಕ್ಕೆ ವರ್ಗಾಯಿಸಿ, ನೇರವಾಗಿ ರೈತರ ಖಾತೆಗಳಿಗೆ ಬೇಡ ಎಂದು ಮನವಿ ಮಾಡಿಕೊಂಡಿರುವುದು ಕೂಡ ಬಯಲಾಗಿದೆ.
ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್ ಅವರೂ ಮಮತಾ ಬ್ಯಾನರ್ಜಿ ಕ್ರಮಕ್ಕೆ ವಿಷಾದ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ರಾಜ್ಯ ಸರ್ಕಾರವು ರೈತರ ಖಾತೆಯ ಮಾಹಿತಿಯನ್ನು ದೃಢೀಕರಿಸಿದ ಬಳಿಕ, ನೇರವಾಗಿ ಫಲಾನುಭವಿ ರೈತರ ಖಾತೆಗೇ ಜಮೆ ಮಾಡುವ ಉದ್ದೇಶವನ್ನಷ್ಟೇ ಈ ಯೋಜನೆ ಹೊಂದಿದೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲೇ ಮಮತಾ ಅವರು ಪತ್ರವನ್ನು ಕೇಂದ್ರಕ್ಕೆ ಬರೆದಿದ್ದರು. ಆದರೆ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು, ಹಣವನ್ನು ಮಮತಾ ಅವರ ಸರ್ಕಾರಕ್ಕೆ ವರ್ಗಾಯಿಸಲು ನಿರಾಕರಿಸಿದ್ದರು. ಇದು ನೇರ ಫಲಾನುಭವಿಗಳಿಗೇ ನೀಡಬೇಕಾದ ಹಣವೆಂದು ಒತ್ತಿ ಹೇಳಿದ್ದರು.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರವು ಸಂಕಷ್ಟದಲ್ಲಿರುವ ರೈತರಿಗೆ ಮೂರು ಕಂತುಗಳಲ್ಲಿ ವರ್ಷಕ್ಕೆ 6 ಸಾವಿರ ರೂ. ಹಣವನ್ನು ನೀಡುತ್ತಿದೆ.

Average Rating