ನವದೆಹಲಿ: 26/11ರ ಮುಂಬಯಿ ದಾಳಿಯ ವಾರ್ಷಿಕ ದಿನದಂದು, ಪುಲ್ವಾಮಾ ಮಾದರಿಯಲ್ಲೇ ಭಯೋತ್ಪಾದನಾ ದಾಳಿಗೆ ಸಜ್ಜು ನಡೆಸುತ್ತಿದ್ದ ಜೈಶ್ ಎ ಮೊಹಮದ್ ಸಂಘಟನೆಯ ನಾಲ್ಕು ಮಂದಿ ಉಗ್ರಗಾಮಿಗಳನ್ನು ದಿಟ್ಟ ಭಾರತೀಯ ಸೈನಿಕರು ಹೊಡೆದುರುಳಿಸಿದ್ದು, ಭಾರಿ ದೊಡ್ಡ ಆತಂಕವೊಂದನ್ನು ನಿವಾರಿಸಿದ್ದಾರೆ.
ನವೆಂಬರ್ 18/19ರ (ಗುರುವಾರ) ಮಧ್ಯರಾತ್ರಿ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರ್ ಮೂಲಕ ಭಾರತದೊಳಗೆ ಈ ಉಗ್ರರು ನುಗ್ಗಿದ್ದು, ಜಮ್ಮುವಿನ ನಗ್ರೋಟಾ ಸೆಕ್ಟರ್ನಲ್ಲಿ ಭದ್ರತಾ ಪಡೆಗಳ ಗುಂಡೇಟಿಗೆ ಛಿದ್ರವಾಗಿ ಹೋಗಿದ್ದಾರೆ.
ಪುಲ್ವಾಮ ಮಾದರಿಯ ದಾಳಿ ಸಂಘಟಿಸಲು ಸ್ವತಃ ಪಾತಕಿ ಪಾಕಿಸ್ತಾನಿ ಸೇನೆಯ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್ಐ) ಕುಖ್ಯಾತ ಉಗ್ರಗಾಮಿ ಮೌಲಾನಾ ಮಸೂದ್ ಅಜರ್ ನೇತೃತ್ವದ ಜೈಶ್ ಸಂಘಟನೆಗೆ ಆಣತಿ ನೀಡಿತ್ತು ಎಂದು ಸರ್ಕಾರಿ ಮೂಲಗಳು ತಿಳಿಸಿವೆ ಎಂದು ಎಎನ್ಐ ವರದಿ ಮಾಡಿದೆ.
ಈ ದಾಳಿ ಸಂಘಟಿಸಲು ಅಜರ್ನ ಸಹೋದರ ಅಬ್ದುಲ್ ರವೂಫ್ ಅಸ್ಗರ್ಗೆ ಹೊಣೆ ವಹಿಸಲಾಗಿತ್ತು. ಭಾರತೀಯ ಗಡಿ ಸಮೀಪದಲ್ಲಿ ಪಾಕಿಸ್ತಾನದ ಸಹಕಾರ್ಘರ್ ಶಿಬಿರದಿಂದ ನಾಲ್ವರು ಜೈಶ್ ಜೆಹಾದಿ ಉಗ್ರರನ್ನು ರವೂಫ್ ಆಯ್ಕೆ ಮಾಡಿದ್ದ.
ಜೈಶ್ ಉಗ್ರರಾದ ಮೌಲಾನಾ ಅಬು ಜಿಂದಲ್ ಮತ್ತು ಮುಫ್ತಿ ತೌಸೀಫ್ ಸೇರಿದಂತೆ ಬಹಾವಲ್ಪುರದ ಜೈಶ್ ಮುಖ್ಯಾಲಯದಲ್ಲಿ ಈ ಕುರಿತು ಸಭೆಯೂ ನಡೆದಿದ್ದು, ಇದರಲ್ಲಿ ಐಎಸ್ಐ ಅಧಿಕಾರಿಗಳೂ ಇದ್ದರು ಎಂದು ಮೂಲಗಳು ಹೇಳಿವೆ.
ನಾಲ್ಕು ಉಗ್ರರಿಗೆ ಆತ್ಮಹತ್ಯಾ ದಾಳಿಯ ಕುರಿತು ತರಬೇತಿ ನೀಡಲಾಗಿತ್ತು ಮತ್ತು ಲಭ್ಯ ಶಸ್ತ್ರಾಸ್ತ್ರಗಳನ್ನು ಬಳಸಿ ಕಾಶ್ಮೀರ ಕಣಿವೆಯಲ್ಲಿ ಭಾರತೀಯರಿಗೆ ಗರಿಷ್ಠ ಹಾನಿ ಹೇಗೆ ಮಾಡಬಹುದೆಂದು ಕವಾಯತು ಮಾಡಿಸಲಾಗಿತ್ತು.
ಅದೇ ರೀತಿ, ಸಾಂಬಾ ಸೆಕ್ಟರ್ನಲ್ಲಿ ಭಾರತದೊಳಕ್ಕೆ ನುಸುಳಲು ಸ್ಥಳೀಯರ ನೆರವನ್ನೂ ಈ ಉಗ್ರರು ಪಡೆದಿದ್ದರು.
ತಡರಾತ್ರಿ 3-4 ಗಂಟೆ ಸುಮಾರಿಗೆ ಈ ರೀತಿ ಉಗ್ರರು ಟ್ರಕ್ನೊಳಗೆ ಅವಿತುಕೊಂಡು ಭಾರತದೊಳಗೆ ನುಸುಳುವುದು ಸಾಮಾನ್ಯ ಎಂದು ಹೇಳಲಾಗುತ್ತಿದೆ.
ಜಮ್ಮುವಿನ ಬಾನ್ ಟೋಲ್ ಪ್ಲಾಜಾದಲ್ಲಿ ಟ್ರಕ್ ಅನ್ನು ಪೊಲೀಸರು ಮತ್ತು ಸಿಆರ್ಪಿಎಫ್ ಪಡೆಗಳು ತಡೆದಾಗ, ಅದರ ಚಾಲಕ ಓಡಿ ಕತ್ತಲಲ್ಲಿ ಮರೆಯಾದ. ಸೇಬಿನ ಟ್ರಕ್ನಲ್ಲಿ ಅವಿತಿದ್ದ ಉಗ್ರಗಾಮಿಗಳು ಭಯಬಿದ್ದರು ಮತ್ತು ಎನ್ಕೌಂಟರ್ ಆರಂಭಗೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.
ಶರಣಾಗುವಂತೆ ಹಲವು ಬಾರಿ ಸೂಚಿಸಿದಾಗ ಈ ಉಗ್ರಗಾಮಿಗಳು ಅಲ್ಲಾಹೋ ಅಕ್ಬರ್, ಇಸ್ಲಾಮ್ ಜಿಂದಾಬಾದ್, ಪಾಕಿಸ್ತಾನ್ ಜಿಂದಾಬಾರ್, ಜೈಶ್ ಜಿಂದಾಬಾರ್ ಎಂದೆಲ್ಲಾ ಕೂಗುತ್ತಿದ್ದರಲ್ಲದೆ, ಭಾರತದಲ್ಲೇ ಸಾಯಲು ದೃಢವಾಗಿ ನಿಶ್ಚಯಿಸಿಯೇ ಬಂದಿದ್ದರು.
ಕೊನೆಗೆ ಭಾರತದ ಹೆಮ್ಮೆಯ ಸೈನಿಕರ ಗುಂಡಿಗೆ ಈ ಉಗ್ರಗಾಮಿಗಳು ಮಟಾಶ್ ಆಗಿದ್ದಾರೆ. ಅವರಿಂದ 11 ಎಕೆ ರೈಫಲ್ಗಳು, 23 ಮ್ಯಾಗಜಿನ್ಗಳು, 29 ಗ್ರೆನೇಡ್ಗಳು, 10 ಅಂಡರ್-ಬ್ಯಾರೆಲ್ ಗ್ರೆನೇಡ್ ಲಾಂಚರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಲ್ಲವೂ ಪಾಕಿಸ್ತಾನಿ ನಿರ್ಮಿತ.
ಜೊತೆಗೆ ಜಿಪಿಎಸ್ ಸಾಧನಗಳು ಮತ್ತು ಕ್ಯಾಸಿಯೋ ವಾಚುಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಈ ಉಗ್ರಗಾಮಿಗಳು ಭಾರತದೊಳಕ್ಕೆ ಕಾಲಿಟ್ಟ ಕ್ಷಣದಿಂದಲೂ ಅಬ್ದುಲ್ ರವೂಫ್ ಅಸ್ಗರ್ ಮತ್ತು ಕಾಶ್ಮೀರದ ಹ್ಯಾಂಡ್ಲರ್ ಮುಹಮದ್ ಅಸ್ಗರ್ ಖಾನ್ ಕಶ್ಮೀರಿ (ಕಾಶ್ಮೀರದ ಜೈಶ್ ಕಾರ್ಯಾಚರಣೆಯ ಕಮಾಂಡರ್) ಮುಂತಾದವರೊಂದಿಗೆ ಸಂಪರ್ಕದಲ್ಲಿದ್ದರು. ಭಾರತದೊಳಗೆ ನುಸುಳಲು ನೆರವಾದವರನ್ನು ಕೂಡ ಪತ್ತೆ ಮಾಡಲಾಗುತ್ತಿದೆ.
ಕಾಶ್ಮೀರದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿಯೂ ಪಾಕಿಸ್ತಾನಿ ಉಗ್ರರು ಹಿಂಸಾಚಾರ ನಡೆಸಲಿದ್ದಾರೆಂಬ ಕುರಿತು ಗುಪ್ತಚರ ವರದಿಗಳು ಬಂದಿದ್ದು, ಇದೀಗ ಪಾಕಿಸ್ತಾನಕ್ಕೆ ಭಾರತವು ಬಲವಾದ ಎಚ್ಚರಿಕೆ ಸಂದೇಶ ನೀಡಿದೆ.
ವಿದೇಶಾಂಗ ಸಚಿವಾಲಯವು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಭಯೋತ್ಪಾದನೆ ವಿರುದ್ಧ ಮತ್ತು ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಭಾರತವು ಬದ್ಧವಾಗಿದೆ ಎಂದು ತಿಳಿಸಿದೆ.
ಇದೇ ವೇಳೆ, ಭಾರತದಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಯ ಅಧಿಕಾರಿಗೆ ಸಮನ್ಸ್ ನೀಡಿರುವ ಭಾರತವು, ತನ್ನ ನಿಯಂತ್ರಣದಲ್ಲಿರುವ ನೆಲವನ್ನು ಭಾರತ ವಿರೋಧಿ ಚಟುವಟಿಕೆಗೆ ಬಳಕೆಯಾಗದಂತೆ ಉಭಯ ದೇಶಗಳ ನಡುವಿನ ಅಂತರರಾಷ್ಟ್ರೀಯ ಬದ್ಧತೆಯನ್ನೂ ನೆನಪಿಸಿದೆ.
ಶನಿವಾರ ಕಾಶ್ಮೀರ ಪರಿಸ್ಥಿತಿ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿಗಳು ಹಾಗೂ ಗುಪ್ತ ದಳದ ಅಧಿಕಾರಿಗಳ ಉನ್ನತ ಮಟ್ಟದ ಸಮಾಲೋಚನಾ ಸಭೆಯೂ ನಡೆದಿದೆ.
ಭದ್ರತಾ ಪಡೆಗಳ ಈ ಯಶಸ್ಸಿಗೆ ಮತ್ತು ಘೋರ ದುರಂತ ತಪ್ಪಿಸಿದ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ, ಬೆನ್ನು ತಟ್ಟಿದ್ದಾರೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

Average Rating