ತಿರುವನಂತಪುರ: ಇದು ಮತ್ತೊಂದು ‘ಕೇರಳ ಮಾದರಿ’. ಎಪಿಎಂಸಿಯೇ ಇಲ್ಲದ ಕೇರಳ ಸರ್ಕಾರವು ಕೇಂದ್ರದ ಕೃಷಿ ಕಾಯ್ದೆಯ ಬಗ್ಗೆ ಚರ್ಚಿಸಲು ಅಧಿವೇಶನ ಕರೆದಿದೆ ಮತ್ತು ದಲ್ಲಾಳಿಗಳಿಗೆ ಅವಕಾಶವಿಲ್ಲದ ಕಾಯ್ದೆ ಜಾರಿಗೆ ತಂದ ನರೇಂದ್ರ ಮೋದಿ ಸರ್ಕಾರದ ವಿರುದ್ಧದ ರೈತರ ಹೋರಾಟಕ್ಕೆ ಬೆಂಬಲ ನೀಡಿದೆ!
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ ಕೈಗೊಳ್ಳಲೆಂದು ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರವು ಡಿ.23ರಂದು ವಿಶೇಷ ಅಧಿವೇಶನ ಕರೆಯಲು ಉದ್ದೇಶಿಸಿತ್ತು. ಇದಕ್ಕೆ ರಾಜ್ಯಪಾಲರು ಅವಕಾಶ ನೀಡಿರಲಿಲ್ಲ.
ಇದನ್ನೂ ಓದಿ: ಕಾಯ್ದೆಯಿಂದ ರೈತರಿಗೆ ಲಾಭ, ಕಾಂಗ್ರೆಸ್ ಸುಳ್ಳುಗಳನ್ನು ನಂಬಬೇಡಿ ಅಂದಿದ್ದೇಕೆ ಮೋದಿ? ಇಲ್ಲಿದೆ ಡೀಟೇಲ್ಸ್!
ಕೇರಳದಲ್ಲಿ ಎಪಿಎಂಸಿ (ಕೃಷ್ಯುತ್ಪನ್ನ ಮಾರುಕಟ್ಟೆ ಸಮಿತಿ)ಯೇ ಇಲ್ಲ, ಹೀಗಿರುವಾಗ ಸುಖಾಸುಮ್ಮನೆ ಅಧಿವೇಶನ ಕರೆಯುವುದು, ಪ್ರತಿಭಟನೆ ನಡೆಸುವುದರ ಮೂಲಕ ಕೇರಳ ಸರ್ಕಾರವು ಸಾರ್ವಜನಿಕರ ಹಣವನ್ನೇ ಪೋಲು ಮಾಡುತ್ತಿದೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್ ಕಿಡಿ ಕಾರಿದ್ದಾರೆ.
ಈ ನಾಟಕದ ಬದಲಾಗಿ, ಚಿನ್ನದ ಸ್ಮಗ್ಲಿಂಗ್, ಡ್ರಗ್ಸ್ ಹಗರಣ ಮತ್ತು ಲೈಫ್ ಮಿಶನ್ ಹಗರಣವೇ ಮುಂತಾಗಿ ರಾಜ್ಯವನ್ನು ಕಾಡುತ್ತಿರುವ ಭ್ರಷ್ಟಾಚಾರದ ವಿರುದ್ಧ ನಿರ್ಣಯ ಕೈಗೊಳ್ಳಲಿ ಎಂದು ಕೇರಳದ ಬಿಜೆಪಿ ಮುಖಂಡರೂ ಆಗಿರುವ ಸಚಿವ ಮುರಳೀಧರನ್ ಒತ್ತಾಯಿಸಿದ್ದಾರೆ.
ಕೇಂದ್ರದ ಕೃಷಿ ಕಾಯ್ದೆಗಳಲ್ಲಿ ರೈತರಿಗೆ ಎಪಿಎಂಸಿಯ ಹೊರಗೆ ಮಾರಾಟ ಮಾಡುವುದಕ್ಕೆ ಹಾಗೂ ಹೆಚ್ಚು ಹಣ ಕೊಡಬಹುದಾದ ಯಾರಿಗೇ ಆದರೂ ತಾವು ಬೆಳೆದ ಫಸಲು ಮಾರಾಟಕ್ಕೆ ಅನುವು ಮಾಡಿಕೊಡುತ್ತದೆ. ಎಪಿಎಂಸಿ ಮಂಡಿಗಳಲ್ಲಿ ಭರ್ಜರಿ ದುಡ್ಡು ಮಾಡಿ, ರೈತರ ಆದಾಯ ಕಸಿಯುತ್ತಿರುವ ದಲ್ಲಾಳಿಗಳಿಗೆ ಅವಕಾಶವಿಲ್ಲ. ಹೀಗಾಗಿ ಕೆಲವು ರೈತರು ರಾಜಕೀಯ ಪ್ರಚೋದನೆಯಿಂದ, ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಹಿತಕ್ಕಾಗಿ ತಾವು ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಈ ಕಾಯ್ದೆಯನ್ನು ಜಾರಿಗೆ ತಂದರೆಂಬ ಕಾರಣಕ್ಕಾಗಿ ದೇಶದ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮೋದಿ ವಿರುದ್ಧದ ರೈತ ಹೋರಾಟ | ಕಿಸಾನ್ ಯೂನಿಯನ್ಗೆ ವಿದೇಶದಿಂದ ಅಕ್ರಮವಾಗಿ ಹರಿದುಬರುತ್ತಿದೆ ಲಕ್ಷ ಲಕ್ಷ ಹಣ!
ಕೇರಳದಲ್ಲಿ ಎಪಿಎಂಸಿ ವ್ಯವಸ್ಥೆಯೇ ಇಲ್ಲದಿರುವುದರಿಂದ, ಕೇರಳ ಸರ್ಕಾರವು ಈ ಕೃಷಿ ಕಾಯ್ದೆಯ ವಿರುದ್ಧ ಹೋರಾಡುತ್ತಿರುವವರನ್ನು ಬೆಂಬಲಿಸುವುದೆಂದರೆ, ತನ್ನ ನೀತಿಯ ವಿರುದ್ಧವೇ ಹೋರಾಡಿದಂತೆ. ರೈತರ ಪ್ರಮುಖ ಬೇಡಿಕೆಗಳಲ್ಲೊಂದು ಎಪಿಎಂಸಿ ಸುಧಾರರಣೆಗೆ ಮೋದಿ ಸರ್ಕಾರ ಕೈಗೊಂಡ ತಿದ್ದುಪಡಿಗಳು. ತಾವೇ ರೈತರಿಗೆ ಎಪಿಎಂಸಿ ಮೂಲಕ ಮಾರಾಟಕ್ಕೆ ಅನುವು ಮಾಡಿಕೊಡದಿದ್ದರೂ, ಈಗ ಎಪಿಎಂಸಿಗಾಗಿ ಹೋರಾಡುತ್ತಿರುವ ರೈತರನ್ನು ಪಿಣರಾಯಿ ಸರ್ಕಾರ ಬೆಂಬಲಿಸುತ್ತಿರುವುದು ರಾಜಕೀಯದ ಪರಾಕಾಷ್ಠೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಕುರಿತ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಪಿಣರಾಯಿ ವಿಜಯನ್, ತಮ್ಮಲ್ಲಿ ಎಪಿಎಂಸಿ ವ್ಯವಸ್ಥೆಯಿಲ್ಲದಿದ್ದರೂ, ರೈತರ ಹೋರಾಟಕ್ಕೆ ಬೆಂಬಲಿಸುತ್ತಿದ್ದೇವೆ. ಯಾಕೆಂದರೆ ದೇಶದಲ್ಲಿ ಆಹಾರದ ಕೊರತೆ ಉಂಟಾದರೆ, ಹೆಚ್ಚು ಆಹಾರ ಸೇವಿಸುವ ಕೇರಳದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದೆಂಬ ಕಾರಣಕ್ಕೆ ಅಂತ ಉತ್ತರಿಸಿದ್ದಾರೆ.
ಕೇರಳದಲ್ಲಿ 2003ರ ಎಪಿಎಂಸಿ ಕಾಯ್ದೆಯನ್ನು ಹಿಂದಿನ ಯಾವುದೇ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಥವಾ ಎಡರಂಗ ನೇತೃತ್ವದ ಎಲ್ಡಿಎಫ್ ಸರ್ಕಾರಗಳು ಯಾವುವೂ ಜಾರಿಗೊಳಿಸುವ ಪ್ರಯತ್ನ ಮಾಡಿರಲಿಲ್ಲ.
ಇದನ್ನೂ ಓದಿ: ಕೃಷಿ ಕಾಯ್ದೆ ಬೆಂಬಲಿಸಿದ ರೈತರು | 20 ಸಾವಿರಕ್ಕೂ ಹೆಚ್ಚು ಮಂದಿಯ ಟ್ರ್ಯಾಕ್ಟರ್ ರ್ಯಾಲಿ

Average Rating