Read Time:6 Minute, 13 Second

Dawood Ibrahim ಇರುವಿಕೆ: ಮತ್ತೆ ಉಲ್ಟಾ ಹೊಡೆದ ಪಾಕಿಸ್ತಾನ

0 0

ಇಸ್ಲಾಮಾಬಾದ್: ಕುಖ್ಯಾತ ಭೂಗತ ಪಾತಕಿ, ಜಾಗತಿಕ ಉಗ್ರಗಾಮಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕೈಗೊಂಬೆಯಾಗಿ ಭಾರತದಲ್ಲಿ ಮಾಡಿಸಿದ ಹಿಂಸಾಚಾರ ಅಷ್ಟಿಷ್ಟಲ್ಲ. ಆತನನ್ನು ವಶಕ್ಕೊಪ್ಪಿಸುವಂತೆ ಭಾರತವು ಅದೆಷ್ಟೋ ಬಾರಿ ಹೇಳುತ್ತಿದ್ದರೂ, ‘ನಮ್ಮಲ್ಲಿಲ್ಲ’ ಎಂದು ಪಾಕಿಸ್ತಾನ ಹೇಳುತ್ತಲೇ ಬಂದಿದೆ.

ಇದೀಗ “ದಾವೂದ್ ನಮ್ಮಲ್ಲೇ ಇದ್ದಾನೆ” ಎಂಬರ್ಥದ ಹೇಳಿಕೆ ನೀಡಿದ್ದ ಪಾಕಿಸ್ತಾನ, ದಿಢೀರ್ ಆಗಿ ಯುಟರ್ನ್ ಹೊಡೆದು, ಅಷ್ಟೇ ವೇಗದಲ್ಲಿ, “ಇಲ್ಲ, ಇಲ್ಲ, ಹಾಗೆ ಹೇಳಿಯೇ ಇಲ್ಲ, ಆತ ನಮ್ಮಲ್ಲಿಲ್ಲ” ಎಂದು ಹೇಳುವ ಮೂಲಕ ಮತ್ತೆ ತನ್ನ ಧೂರ್ತತನ ಪ್ರದರ್ಶಿಸಿದೆ.

ಕರಾಚಿಯ ಐಷಾರಾಮಿ ಬಂಗಲೆಯಲ್ಲಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಐಎಸ್ಐ ರಕ್ಷಣೆಯಲ್ಲಿ ಸುರಕ್ಷಿತವಾಗಿದ್ದಾನೆ ಎಂಬ ಬಗ್ಗೆ ಸಾಕಷ್ಟು ವರದಿಗಳು ಹಿಂದೆಯೇ ಬಂದಿದ್ದವಾದರೂ, ಪಾಕಿಸ್ತಾನ ಅದನ್ನು ನಿರಾಕರಿಸುತ್ತಲೇ ಬಂದಿತ್ತು. ಇದೀಗ ಮತ್ತೊಮ್ಮೆ ಹೇಳಿದೆ.

ವಿಶ್ವಸಂಸ್ಥೆಯ ಹಣಕಾಸು ನೆರವು ಪಡೆಯಬೇಕಿದ್ದರೆ, 88 ನಿಷೇಧಿತ ಉಗ್ರ ಸಂಘಟನೆಗಳು ಮತ್ತು ಅದರ ನಾಯಕರ ಮೇಲೆ ನಿರ್ಬಂಧ ವಿಧಿಸಬೇಕು ಎಂಬುದು ವಿಶ್ವಸಂಸ್ಥೆಯ ಷರತ್ತು. ಹಣಕಾಸು ನೆರವು ಪಡೆಯುವುದಕ್ಕಾಗಿ, 88 ಮಂದಿ ವಿರುದ್ಧ ನಿರ್ಬಂಧ ವಿಧಿಸಿರುವುದಾಗಿ ಪಾಕಿಸ್ತಾನ ಶನಿವಾರ ಘೋಷಿಸಿತು. ಅದರಲ್ಲಿ ಭಾರತದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ದಾವೂದ್ ಇಬ್ರಾಹಿಂ ಹೆಸರೂ ಇತ್ತು.

ಜಾಗತಿಕವಾಗಿ ಮನಿ ಲಾಂಡರಿಂಗ್ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುವುದರ ವಿರುದ್ಧ ಕಾವಲುನಾಯಿಯಂತೆ ಕೆಲಸ ಮಾಡುತ್ತಿರುವ, ವಿಶ್ವ ಸಂಸ್ಥೆಯ ಹಣಕಾಸು ಕ್ರಿಯಾ ಸಮಿತಿಯಿಂದ (ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್) ಕಪ್ಪು ಪಟ್ಟಿಗೆ ಸೇರ್ಪಡೆಯಾಗುವುದನ್ನು ತಪ್ಪಿಸಿಕೊಳ್ಳಲು ಪಾಕಿಸ್ತಾನವು ಶುಕ್ರವಾರ 88 ಭಯೋತ್ಪಾದನಾ ಸಂಘಟನೆಗಳು ಮತ್ತು ದಾವೂದ್ ಸಹಿತವಾಗಿ ಅವುಗಳ ನಾಯಕರ ವಿರುದ್ಧ ಕಠಿಣ ಹಣಕಾಸು ನಿರ್ಬಂಧಗಳನ್ನು ವಿಧಿಸಿ ಅಧಿಸೂಚನೆ ಹೊರಡಿಸಿತ್ತು.

ಪಟ್ಟಿಯಲ್ಲಿ 26/11 ಮುಂಬಯಿ ದಾಳಿಯ ರೂವಾರಿ, ಜಮಾತ್ ಉದ್ ದಾವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಜೈಶ್ ಎ ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್ ಹೆಸರು ಕೂಡ ಇದೆ.

ಹಣ ಸಿಗುವುದಿಲ್ಲವೆಂದು ಗೊತ್ತಾದ ತಕ್ಷಣ, ಈ ಸಂಘಟನೆಗಳು ಮತ್ತು ವ್ಯಕ್ತಿಗಳ ಎಲ್ಲ ಚರ, ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಮತ್ತು ಅವರ ಬ್ಯಾಂಕ್ ಖಾತೆಗಳನ್ನು ಫ್ರೀಝ್ ಮಾಡುವಂತೆ ಪಾಕಿಸ್ತಾನ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿಯೇ ಬಿಟ್ಟಿತು.

ಭಾರಿ ಸಂಖ್ಯೆಯಲ್ಲಿ ಅಕ್ರಮ ವ್ಯವಹಾರಗಳ ನೇತಾರಿಕೆ ವಹಿಸಿರುವ ದಾವೂದ್ ಇಬ್ರಾಹಿಂ 1993ರ ಮುಂಬಯಿ ಸರಣಿ ಸ್ಫೋಟದಲ್ಲಿಯೂ ಭಾಗಿಯಾಗಿದ್ದ. 2003ರಲ್ಲಿ ಅಮೆರಿಕವು ಆತನನ್ನು ಜಾಗತಿಕ ಉಗ್ರಗಾಮಿ ಎಂದು ಸಾರಿತ್ತು. ಭಾರತವಂತೂ ಆತನನ್ನು ವಶಕ್ಕೊಪ್ಪಿಸುವಂತೆ ಲೆಕ್ಕವಿಲ್ಲದಷ್ಟು ಬಾರಿ ಪಾಕಿಸ್ತಾನಕ್ಕೆ ಮನವಿ ಮಾಡಿತ್ತು.

ಆದರೆ ಭಾನುವಾರ ಯು-ಟರ್ನ್ ತೆಗೆದುಕೊಂಡಿರುವ ಪಾಕಿಸ್ತಾನ, ವಿದೇಶಾಂಗ ಸಚಿವಾಲಯವು ಹೊರಡಿಸಿರುವ ಶಾಸನಾತ್ಮಕ ನಿರ್ಬಂಧ ಆದೇಶಗಳಲ್ಲಿ, ವಿಶ್ವಸಂಸ್ಥೆ ಒದಗಿಸಿರುವ ಪಟ್ಟಿಯಲ್ಲಿದ್ದ ಹೆಸರುಗಳಿವೆ. ಹೊಸದೇನೂ ಇಲ್ಲ. ಇದರರ್ಥ ಕೆಲವು ವ್ಯಕ್ತಿಗಳು ಪಾಕಿಸ್ತಾನದಲ್ಲಿ ಇದ್ದಾರೆ ಎಂದಲ್ಲ. ಈ ಕುರಿತ ಮಾಧ್ಯಮ ವರದಿಗಳೆಲ್ಲವೂ ಆಧಾರ ರಹಿತ ಎಂದು ಪಾಕ್ ಹೇಳಿಕೆಯಲ್ಲಿ ತಿಳಿಸಿದೆ.

ದಾವೂದ್ ಪಾಕಿಸ್ತಾನದಲ್ಲಿದ್ದಾನೆ ಎಂದು ಒಪ್ಪಿಕೊಂಡರೆ, ಭಯೋತ್ಪಾದಕರನ್ನು ಅದು ಪೋಷಿಸುತ್ತಿದೆ ಎಂಬ ಭಾರತ ಹಾಗೂ ಅಮೆರಿಕದ ವಾದವನ್ನು ಒಪ್ಪಿಕೊಂಡಂತಾಗುತ್ತದೆ.

ಲಷ್ಕರ್ ಇ ತೈಬಾ ಮತ್ತು ಜೈಶ್ ಮುಂತಾದ ಉಗ್ರಗಾಮಿ ಸಂಘಟನೆಗಳಿಗೆ ಹಣದ ಹರಿವನ್ನು ತಡೆಯುವಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂಬ ಕಾರಣಕ್ಕೆ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿ ಇರಿಸಲು ಜೂನ್ ತಿಂಗಳಲ್ಲಿ ಹಣಕಾಸು ಕ್ರಿಯಾ ಸಮಿತಿ ನಿರ್ಧರಿಸಿತ್ತು. ಹಾಗೇ ಮುಂದುವರಿದರೆ, ಪಾಕಿಸ್ತಾನಕ್ಕೆ ಐಎಂಎಫ್‌ನಿಂದ (ಅಂತಾರಾಷ್ಟ್ರೀಯ ಹಣಕಾಸು ನಿಧಿ), ವಿಶ್ವ ಬ್ಯಾಂಕ್, ಎಡಿಬಿ ಮತ್ತು ಐರೋಪ್ಯ ಒಕ್ಕೂಟಗಳಿಂದ ಹಣ ಸಿಗುವುದು ಕಷ್ಟ. ಅದು ಈಗಾಗಲೇ ಹಣಕಾಸು ಹೀನಾಯ ಸ್ಥಿತಿಯಲ್ಲಿರುವ ಪಾಕಿಸ್ತಾನಕ್ಕೆ ದೊಡ್ಡ ಹೊಡೆತವಾಗಬಹುದು.

ಅಕ್ಟೋಬರ್ ತಿಂಗಳೊಳಗೆ ಹಣಕಾಸು ಕ್ರಿಯಾ ಸಮಿತಿಯ ಮಾನದಂಡಗಳನ್ನು ಈಡೇರಿಸುವಲ್ಲಿ ಪಾಕಿಸ್ತಾನ ವಿಫಲವಾದರೆ, ಉತ್ತರ ಕೊರಿಯಾ ಮತ್ತು ಇರಾನ್ ಜೊತೆಗೆ ಪಾಕಿಸ್ತಾನವೂ ಕಪ್ಪು ಪಟ್ಟಿಗೆ ಸೇರುವುದು ಖಚಿತವಾಗುತ್ತದೆ.

ಏನಿದು FATF
ಹಣಕಾಸು ಕ್ರಿಯಾ ಸಮಿತಿಯು 1989ರಲ್ಲಿ ರಚನೆಯಾದ ಅಂತರ್-ಸರಕಾರೀಯ ಸಂಸ್ಥೆಯಾಗಿದ್ದು, ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್), ಭಯೋತ್ಪಾದಕರಿಗೆ ಹಣಕಾಸು ಪೂರೈಕೆ ಮುಂತಾಗಿ, ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಸಾರ್ವಭೌಮತೆಗೆ ಧಕ್ಕೆ ತರುವ ಇತರ ಬೆದರಿಕೆಗಳ ಮೇಲೆ ಇದು ಹದ್ದಿನ ಕಣ್ಣಿಡುತ್ತದೆ.

ಪ್ರಸ್ತುತ FATF ನಲ್ಲಿ ಐರೋಪ್ಯ ಆಯೋಗ ಮತ್ತು ಗಲ್ಫ್ ಸಹಕಾರ ಮಂಡಳಿ ಎಂಬ ಎರಡು ಪ್ರಾದೇಶಿಕ ಸಂಸ್ಥೆಗಳ ಸಹಿತವಾಗಿ 39 ಸದಸ್ಯರಿದ್ದಾರೆ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post Article 370 ಮರುಸ್ಥಾಪನೆ: ಕಾಶ್ಮೀರದ ‘ದಿಕ್ಕೆಟ್ಟ’ ಪಕ್ಷಗಳಿಂದ ಒಗ್ಗಟ್ಟಿನ ಮಂತ್ರ
Next post ರಾಷ್ಟ್ರಪಕ್ಷಿ ಜೊತೆ ರಾಷ್ಟ್ರಶಕ್ತಿ: ನವಿಲಿನ ಜೊತೆ ಮೋದಿ ಅನುಬಂಧ (Video ನೋಡಿ)

ಸುದ್ದಿ ಸಂಚಯ

ಇವುಗಳನ್ನೂ ನೋಡಿ