Read Time:9 Minute, 49 Second

ಗಾಜಿಯಾಬಾದ್: ತಾಯತದ ಜಗಳಕ್ಕಾಗಿ ಕೋಮುದ್ವೇಷ ಹರಡಿದ ಪತ್ರಕರ್ತರು, ಕಾಂಗ್ರೆಸ್ ಮುಖಂಡರ ವಿರುದ್ಧ ಕೇಸು

0 0

ಗಾಜಿಯಾಬಾದ್: ನಡೆದೇ ಇಲ್ಲದ್ದನ್ನು ವೈರಲ್ ಮಾಡುತ್ತಾ, ದೇಶಾದ್ಯಂತ ಕೋಮು ವಿಷವನ್ನು ಹರಡುತ್ತಿರುವವರು ಯಾರು? ಅವರ ಟಾರ್ಗೆಟ್ ಏನು ಎಂಬ ಬಗ್ಗೆ ಸತ್ಯ ಮಾಹಿತಿ ಇಲ್ಲಿದೆ.

ಇದು ಜೂ.5ರಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಘಟನೆ. ಮುಸ್ಲಿಂ ವೃದ್ಧರೊಬ್ಬರಿಗೆ ಜನರು ಥಳಿಸುತ್ತಿರುವ ವಿಡಿಯೊ ದೃಶ್ಯವೊಂದು ಅಂದು ವೈರಲ್ ಆಗಿತ್ತು. ಆತ ‘ಜೈ ಶ್ರೀ ರಾಂ’ ಅಂತ ಘೋಷಣೆ ಕೂಗಲು ಒಪ್ಪದೇ ಇರುವುದಕ್ಕಾಗಿ ಅವರನ್ನು ಥಳಿಸಲಾಯಿತು ಎಂಬ ಅಡಿಬರಹದೊಂದಿಗೆ ಎಡಪಂಥೀಯ ಮಾಧ್ಯಮಗಳು, ಕಾಂಗ್ರೆಸ್ ನಾಯಕರು, ಪ್ರಸಿದ್ಧ ಎಡ ಸಿನಿಮಾ ನಟಿ – ಇವರೆಲ್ಲರೂ ಟ್ವಿಟರ್‌ನಲ್ಲಿ ಅದನ್ನು ಶೇರ್ ಮಾಡಿದ್ದೇ ಮಾಡಿದ್ದು.

ಹಿರಿಯ ಮುಸ್ಲಿಂ ವ್ಯಕ್ತಿಯ ಮೇಲೆ ದಾಳಿ ಮಾಡಿದವರನ್ನು ಗಾಜಿಯಾಬಾದ್ ಇತ್ತೀಚೆಗೆ ಬಂಧಿಸಿದ್ದಾರೆ. ಬುಧವಾರವೂ ಇಬ್ಬರನ್ನು ಬಂಧಿಸಿದ ಬಳಿಕ ನಿಜ ವಿಷಯ ಬಯಲಾಗಿಬಿಟ್ಟಿದೆ.

ಬುಧವಾರ ಬಂಧಿತರಾದವರು ಇಂತೆಜಾರ್ ಮತ್ತು ಸದ್ದಾಂ ಅಲಿಯಾಸ್ ಬೌನಾ. ಅಬ್ದುಲ್ ಶಮದ್ ಸೈಫಿ ಎಂಬ ವಯೋವೃದ್ಧರಿಗೆ ತದುಕಿದವರಲ್ಲಿ ಇವರೂ ಇದ್ದರು ಎಂದು ಹಿರಿಯ ಎಸ್ಪಿ ಅಮಿತ್ ಪಾಠಕ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದನ್ನು ಕೆಲವೇ ಕೆಲವು ಮಾಧ್ಯಮಗಳು ಮಾತ್ರ ವರದಿ ಮಾಡಿವೆ, ನೆನಪಿರಲಿ.

ಇದೀಗ, ಸುಳ್ಳು ಸುದ್ದಿ ಹರಡುವುದಕ್ಕಾಗಿ ಸಾಮಾಜಿಕ ಮಾಧ್ಯಮ ಟ್ವಿಟರ್ ಮೇಲೂ ಗಾಜಿಯಾಬಾದ್ ಪೊಲೀಸರು ಪ್ರತ್ಯೇಕ ಕೇಸು ದಾಖಲಿಸಿದ್ದಾರೆ. ಜೊತೆಗೆ ಕೆಲವು ಮೋದಿ-ವಿರೋಧಿ ಪತ್ರಕರ್ತರು, ವಿರೋಧಪಕ್ಷ ಕಾಂಗ್ರೆಸ್‌ನ ಪ್ರಮುಖ ನಾಯಕರ ಮೇಲೂ ಕೇಸು ದಾಖಲಾಗಿದೆ. ಇವರೆಲ್ಲರೂ ಈ ದಾಳಿಯ ವಿಡಿಯೊಗಳನ್ನು ತಿರುಚಿ ಕೋಮುದ್ವೇಷಕ್ಕಾಗಿ ಪ್ರಚೋದನೆಗೆ ಹರಿಯಬಿಟ್ಟಿದ್ದರು ಎಂಬುದು ಪೊಲೀಸ್ ಕೇಸಿನಲ್ಲಿರುವ ವಿಷಯ.

ಮೋದಿ ವಿರೋಧಿ ಮಾಧ್ಯಮವಾಗಿರುವ ದಿ ವೈರ್, ಮೋದಿ ವಿರೋಧಿ ಪ್ರಸಿದ್ಧರಾದ ರಾಣಾ ಅಯ್ಯೂಬ್, ಸಾಬಾ ನಖ್ವಿ ಮುಂತಾದವರು ‘ಜೈ ಶ್ರೀರಾಂ ಹೇಳದೇ ಇದ್ದುದಕ್ಕಾಗಿ ಈ ವೃದ್ಧ ಮುಸ್ಲಿಮ್ ವ್ಯಕ್ತಿಗೆ ಥಳಿಸಲಾಯಿತು’ ಅಂತ ಸುಳ್ಳು ಸುದ್ದಿ ಹರಡಿರುವುದರ ಹಿಂದಿನ ಸತ್ಯಾಶವೇನು ಗೊತ್ತೇ? ಒಂದು ತಾಯತ!

ಹೌದು, ಹಲ್ಲೆಗೀಡಾದ ಈ ವ್ಯಕ್ತಿ ಕೆಡುಕಾಗದಂತೆ ತಾಯತ ಮಾಡಿಕೊಡುತ್ತಿದ್ದ. ಆದರೆ, ಈತ ದುಡ್ಡು ತೆಗೆದುಕೊಂಡು ಕೊಟ್ಟಿರುವ ತಾಯತ ಸರಿಯಾಗಿ ಕೆಲಸ ಮಾಡಲಿಲ್ಲ ಎಂಬ ಕಾರಣಕ್ಕೆ ಈತನ ಮೇಲೆ ಅವರೆಲ್ಲರೂ ಹಲ್ಲೆ ಮಾಡಿದ್ದರು. ಮೊದಲು ಬಂಧಿತರಾದವರು ಕಲ್ಲೂ ಗುರ್ಜರ್, ಪರ್ವೇಶ್ ಗುರ್ಜರ್ ಮತ್ತು ಅದಿಲ್. ಮತ್ತಿಬ್ಬರು ಇಂತೆಜಾರ್ ಹಾಗೂ ಸದ್ದಾಂ ಈಗ ಬಂಧಿತರಾಗಿದ್ದಾರೆ. ಇನ್ನೂ ಕೆಲವು ಮಂದಿಗೆ ಶೋಧ ನಡೆಸಲಾಗುತ್ತಿದೆ.

ಪರ್ವೇಶ್ ಎಂಬಾತ ಮನೆಯಲ್ಲಿನ ತೊಂದರೆ ನಿವಾರಣೆಗಾಗಿ ಈ ತಾಯತ ಕಟ್ಟುವ ಕೆಲಸ ಮಾಡುತ್ತಿದ್ದ ಸೈಫಿಯ ಮೊರೆ ಹೋಗಿದ್ದ. ಆದರೆ, ಕಟ್ಟಿದ ಬಳಿಕ ಪತ್ನಿಗೆ ಗರ್ಭಪಾತವಾಯಿತು, ಸಹೋದರನ ಅಪಘಾತವೂ ಆಯಿತು. ಇದಕ್ಕೆಲ್ಲ ಸೈಫಿಯ ತಾಯತವೇ ಕಾರಣ ಎಂಬುದು ಆತನ ಆಕ್ರೋಶ.

ಒಬ್ಬ ಆರೋಪಿ ಸದ್ದಾಂ, ಮತ್ತೊಬ್ಬ ಆರೋಪಿ ಇಂತೆಜಾರ್‌ನ ಪತ್ನಿಯ ಅಣ್ಣ. ಸದ್ದಾಂ ಕೂಡ ತನ್ನ ಮಗನಿಗಾಗಿ ತಾಯತ ಕಟ್ಟಿಸಿಕೊಂಡಿದ್ದ. ಅವರಿಬ್ಬರೂ ಪರ್ವೇಶ್ ಮನೆಗೆ ಹೋಗಿದ್ದ ಸೈಫಿಯನ್ನು ವಿಚಾರಿಸಿಕೊಳ್ಳಲು ಹೋಗಿದ್ದರು.

ಸುಳ್ಳು ಸುದ್ದಿ ಹಂಚಿ, ಕೋಮು ಭಾವನೆ ಕೆರಳಲು ಕಾರಣವಾಗಿದ್ದಕ್ಕಾಗಿ ದಿ ವೈರ್ ವೆಬ್ ಸೈಟ್, ಪತ್ರಕರ್ತರಾದ ಮೊಹಮ್ಮದ್ ಜುಬೈರ್ ಮತ್ತು ರಾಣಾ ಅಯ್ಯೂಬ್, ಕಾಂಗ್ರೆಸ್ ನಾಯಕರಾದ ಶಮ ಮೊಹಮದ್, ಸಲ್ಮಾನ್ ನಿಜಾಮಿ, ಮಸ್ಕೂರ್ ಉಸ್ಮಾನಿ ಹಾಗೂ ಬರಹಗಾರ್ತಿ ಸಾಬಾ ನಖ್ವಿ ಜೊತೆಗೆ ಟ್ವಿಟರ್ ಮೇಲೂ ಗಾಜಿಯಾಬಾದ್ ಪೊಲೀಸರು ಕೇಸು ದಾಖಲಿಸಿದ್ದಾರೆ.

ಇವರೆಲ್ಲರೂ ವಿಷಯದ ಸತ್ಯಾಂಶವನ್ನು ಖಚಿತಪಡಿಸಿಕೊಳ್ಳದೆಯೇ, ಅದಕ್ಕೆ ಕೋಮು ಆ್ಯಂಗಲ್ ನೀಡಿ, ಸಾರ್ವಜನಿಕ ಶಾಂತಿ ಕದಡುವ ದೃಷ್ಟಿಯಿಂದ ಮತ್ತು ಧಾರ್ಮಿಕ ಗುಂಪುಗಳ ಮಧ್ಯೆ ದ್ವೇಷ ಬಿತ್ತುವ ಉದ್ದೇಶದಿಂದ ಅದನ್ನು ಆನ್‌ಲೈನ್‌ನಲ್ಲೆಲ್ಲಾ ಶೇರ್ ಮಾಡಿದರು ಎಂದು ಗಾಜಿಯಾಬಾದ್‌ನ ಲೋನಿ ಬಾರ್ಡರ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದಾಖಲಿಸಲಾಗಿರುವ ಎಫ್ಐಆರ್‌ನಲ್ಲಿ ತಿಳಿಸಲಾಗಿದೆ.

ಈ ಘಟನೆಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಡುವೆ ಟ್ವಿಟರ್ ವಾಗ್ಯುದ್ಧವೇ ನಡೆದಿತ್ತು.

ಆದರೆ, ಪ್ರೆಸ್ ಕ್ಲಬ್ ಆಫ್ ಇಂಡಿಯಾದ ಪ್ರಕಾರ, ಈ ರೀತಿ ದ್ವೇಷ ಬಿತ್ತಿದ ಪತ್ರಕರ್ತರ ವಿರುದ್ಧ ಕೇಸು ದಾಖಲಿಸಿರುವುದು ‘ಪ್ರತೀಕಾರದ ಕ್ರಮ’ವಂತೆ. ಮಾಧ್ಯಮ ಹಾಗೂ ಒಟ್ಟಾರೆಯಾಗಿ ಸಮಾಜಲ್ಲಿ ‘ಭಯೋತ್ಪಾದನೆಯ ಭಾವನೆ’ ಬರುವಂತೆ ಮಾಡಿದೆಯಂತೆ.

ಈ ವಿಡಿಯೊ ಜೂ.14ರಂದು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿತ್ತು. ದುಡ್ಡು ಕೊಟ್ಟು ಖರೀದಿಸಿದ್ದ ತಾಯತ ಸರಿಯಾಗಿ ಕೆಲಸ ಮಾಡಿಲ್ಲವೆಂಬ ಕಾರಣಕ್ಕೆ ಆರೋಪಿಗಳು ಈ ಮುಸ್ಲಿಂ ವ್ಯಕ್ತಿಗೆ ಥಳಿಸಿದ್ದಾರೆ. ಈ ಸಂಬಂಧ ಐವರನ್ನು ಬಂಧಿಸಲಾಗಿದೆ ಮತ್ತು ತಲೆಮರೆಸಿಕೊಂಡಿರುವ ಪೋಲ್ಲಿ, ಹಿಮಾಂಶು, ಆರಿಫ್ ಮತ್ತು ಮುರ್ಷಿದ್ ಎಂಬವರಿಗಾಗಿ ಶೋಧ ನಡೆಯುತ್ತಿದೆ ಅಂತ ಗಾಜಿಯಾಬಾದ್ ಪೊಲೀಸರೇ ತಿಳಿಸಿದ್ದಾರೆ.

ಪೊಲೀಸರು ಸತ್ಯ ಸುದ್ದಿಯನ್ನು ದಾಖಲ ಸಮೇತ ನೀಡಿದರೂ, ಆರೋಪಿಗಳು ಟ್ವಿಟರ್ ಖಾತೆಯಿಂದ ಈ ವಿಡಿಯೊವನ್ನು ಅಳಿಸಲಿಲ್ಲ ಎಂದಿದ್ದಾರೆ ಪೊಲೀಸರು. ಟ್ವಿಟರ್ ಕೂಡ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದಾರವರು.

ಕೇಸು ದಾಖಲಾದ ಬಳಿಕ ಈ ಆರೋಪಿಗಳು ತಪ್ಪಾಯ್ತು, ತಿದ್ಕೋತೀವಿ ಎಂಬರ್ಥದಲ್ಲಿ ಟ್ವೀಟ್ ಮಾಡಿ, ಕಾನೂನಿನಿಂದ ರಕ್ಷಿಸಿಕೊಳ್ಳಲು ಯತ್ನಿಸಿರುವುದನ್ನೂ ಟ್ವಿಟರ್ ಬಳಕೆದಾರರು ಬಯಲಿಗೆಳೆದಿದ್ದಾರೆ. ನೀವೇ ನೋಡಿ.

ಈ ಹಿಂದೆ, ಪ್ರಧಾನಿ ನರೇಂದ್ರ ಮೋದಿಯನ್ನು, ಕೇಂದ್ರ ಸರ್ಕಾರವನ್ನು, ಬಿಜೆಪಿಯನ್ನು ಟಾರ್ಗೆಟ್ ಮಾಡಲು ಕಾಂಗ್ರೆಸ್ ಪಕ್ಷವೇ ಟೂಲ್-ಕಿಟ್ ಸಿದ್ಧಪಡಿಸಿ, ಹಂಚುತ್ತಿದೆ ಎಂಬುದನ್ನು ಬಿಜೆಪಿ ಮುಖಂಡ ಸಂಬಿತ್ ಪಾತ್ರ ಅವರು ದಾಖಲೆ ಸಮೇತ ಟ್ವೀಟ್ ಮಾಡಿದ್ದರು. ಅದನ್ನು ಟ್ವಿಟರ್ ಕೂಡ ‘ತಪ್ಪು ಮಾಹಿತಿ’ ಎಂದು ಮಾರ್ಕ್ ಮಾಡಿತ್ತು. ಆದರೆ, ನಿಜವಾದ ತಪ್ಪು ಮಾಹಿತಿಯನ್ನು ಪ್ರಸಾರವಾಗಲು ಅನುವು ಮಾಡಿಕೊಟ್ಟಿತ್ತು.

ರಾಹುಲ್ ಗಾಂಧಿಗೆ ಯೋಗಿ ಕೊಟ್ಟ ತಿರುಗೇಟು ಹೇಗಿತ್ತು ನೋಡಿ!
ಈ ಬಗ್ಗೆ ರಾಹುಲ್ ಗಾಂಧಿ ಏನು ಟ್ವೀಟ್ ಮಾಡಿದ್ದರು ಅಂತ ತಿಳಿದರೆ, ನಿಮಗೇ ಈ ಟೂಲ್-ಕಿಟ್ ಬಗ್ಗೆ ಸಂದೇಹ ಮೂಡದೇ ಇರದು. ಅವರ ಪ್ರಕಾರ, “ರಾಮನ ನಿಜಭಕ್ತರು ಈ ರೀತಿ ಮಾಡುತ್ತಾರೆಂಬುದನ್ನು ಒಪ್ಪಿಕೊಳ್ಳಲಾರೆ. ಇದು ಅಮಾನವೀಯ. ಸಮಾಜ ಮಾತ್ರವಲ್ಲ ಮತ್ತು ಆ ಧರ್ಮಕ್ಕೂ ನಾಚಿಕೆಗೇಡು.” ಅಂತ ಬರೆದಿದ್ದರು.

ಇದಕ್ಕೆ ಯೋಗಿ ಆದಿತ್ಯನಾಥ್ ಕಟು ಶಬ್ದಗಳಲ್ಲಿ ಉತ್ತರವನ್ನೂ ನೀಡಿದ್ದರು. ರಾಮನ ಮೊದಲ ಬೋಧನೆಯೇ ಸತ್ಯವನ್ನು ನುಡಿ ಎಂಬುದಾಗಿ. ನೀವಂತೂ ಜೀವಮಾನದಲ್ಲೇ ಇದನ್ನು ಪಾಲಿಸಿಲ್ಲ ಎಂದು ಯೋಗಿ ಚಾಟಿಯೇಟು ಬೀಸಿದ್ದರು.

ಪೊಲೀಸರು ಸತ್ಯ ಹೇಳಿದಮೇಲೂ ಸಮಾಜದಲ್ಲಿ ವಿಷ ಹರಡುತ್ತಿರುವುದಕ್ಕೆ ನಿಮಗೆ ನಾಚಿಕೆಯಾಗಬೇಕು. ಅಧಿಕಾರದ ದಾಹಕ್ಕಾಗಿ ನೀವು ಮಾನವೀಯತೆಯನ್ನೇ ಧಿಕ್ಕರಿಸುತ್ತೀರಿ. ಉತ್ತರ ಪ್ರದೇಶದ ಜನರನ್ನು ಅವಮಾನಿಸುವುದನ್ನು, ಅವರಿಗೆ ಕೆಟ್ಟ ಹೆಸರು ತರುವುದನ್ನು ತಕ್ಷಣ ನಿಲ್ಲಿಸಿ ಎಂದು ಯೋಗಿ ಅವರು ರಾಹುಲ್ ಗಾಂಧಿಗೆ ತಿರುಗೇಟು ಕೊಟ್ಟಿದ್ದಾರೆ.

ಇದೀಗ ಈ ಕೋಮುಭಾವನೆ ಕೆರಳಿಸಿದ ಪತ್ರಕರ್ತರು, ಲೇಖಕರು, ಕಾಂಗ್ರೆಸ್ ನಾಯಕರ ಮೇಲೆ ಭಾರತೀಯ ದಂಡ ಸಂಹಿತೆಯಸೆಕ್ಷನ್ 153 (ದಂಗೆಗೆ ಕಾರಣವಾಗುವ ಪ್ರಚೋದನೆ ನೀಡಿದ), 153ಎ (ಧರ್ಮ, ವರ್ಗ ಆಧಾರದಲ್ಲಿ ಎರಡು ಬಣಗಳ ನಡುವೆ ದ್ವೇಷ ಪ್ರಚೋದಿಸುವ), 295ಎ (ಧರ್ಮ ಅಥವಾ ಧಾರ್ಮಿಕ ನಂಬಿಕೆಯನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆ ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಭರಿತ ವಿಧಾನದ) ಹಾಗೂ 120ಬಿ (ಕ್ರಿಮಿನಲ್ ಸಂಚು) ಆಧಾರದಲ್ಲಿ ಕೇಸು ದಾಖಲಿಸಲಾಗಿದೆ ಎಂದು ಪಿಟಿಐ ಹಾಗೂ ಇತರ ಕೆಲವು ಮಾಧ್ಯಮಗಳು ಸತ್ಯವನ್ನು ವರದಿ ಮಾಡಿವೆ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ಕೋವಿಡ್ ಲಸಿಕೆ: ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಡದೆ ಭಾರತೀಯರೆಲ್ಲ ಹೆಮ್ಮೆ ಪಡಿ
Next post ಸದ್ದಿಲ್ಲದೆ ಉಗ್ರರ ನಿಗ್ರಹ: ಭಾರತಕ್ಕೆ ನರೇಂದ್ರ ಮೋದಿ ಎಂಬ ರಕ್ಷಾ ಕವಚ

ಸುದ್ದಿ ಸಂಚಯ

ಇವುಗಳನ್ನೂ ನೋಡಿ