Read Time:7 Minute, 2 Second

ಕೋವಿಡ್-19 ಲಸಿಕೆಯಲ್ಲಿ ಹಂದಿಯ ಅಂಶ: ಮುಸಲ್ಮಾನರಲ್ಲಿ ಆತಂಕ, ‘ಹರಾಮ್’ ಅಲ್ಲ ಎಂದ ಯುಎಇ ಫತ್ವಾ ಮಂಡಳಿ

0 0

ನವದೆಹಲಿ: ಇಡೀ ಜಗತ್ತೇ ಕೋವಿಡ್-19 ಲಸಿಕೆಗಾಗಿ ಕಾತರದಿಂದ ಕಾಯುತ್ತಿರುವಂತೆಯೇ ಮುಸಲ್ಮಾನರು ಕಳವಳಗೊಂಡಿದ್ದಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ, ಹಂದಿಯ ಮಾಂಸದ ಅಂಶವಿರುವ (ಜಿಲೆಟಿನ್) ಚೀನಾದ ಕೋವಿಡ್-19 ಲಸಿಕೆಯು ಮುಸಲ್ಮಾನರಿಗೆ ‘ಹರಾಮ್’ ಆಗಿರುತ್ತದೆಂಬ ವಿಚಾರ.

ಮುಂಬಯಿಯ ರಾಝಾ ಅಕಾಡೆಮಿಯ ಸುನ್ನಿ ಮುಸ್ಲಿಂ ವಿದ್ವಾಂಸರೆಲ್ಲರೂ ಪೋರ್ಕ್ ಜಿಲೆಟಿನ್ ಅಂಶವಿರುವ ಕೋವಿಡ್-19 ಲಸಿಕೆಯನ್ನು ವಿರೋಧಿಸುವ ನಿರ್ಣಯ ಕೈಗೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಡಿಯೊ ಹೇಳಿಕೆಯ ಮೂಲಕ ರಾಝಾ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಸಯೀದ್ ನೂರೀ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ಹಂದಿಯ ಜಿಲೆಟಿನ್ ಅಂಶವಿರುವ ಚೀನಾದ ವ್ಯಾಕ್ಸಿನ್ (ಲಸಿಕೆ)ಗಳನ್ನು ತರಿಸಿಕೊಳ್ಳದಂತೆ ಕೇಳಿಕೊಂಡಿದ್ದಾರೆ.

https://twitter.com/HussnainAnwar16/status/1341272413871493123

ಭಾರತದಲ್ಲಿ ತಯಾರಿಸಿದ ಅಥವಾ ಬೇರೆ ಕಡೆಯಿಂದ ಆರ್ಡರ್ ಮಾಡಿಕೊಂಡಿರುವ ಯಾವುದೇ ಲಸಿಕೆಯಲ್ಲಿ ಯಾವ್ಯಾವ ಅಂಶಗಳಿವೆ ಎಂಬ ಪಟ್ಟಿಯನ್ನು ಸರ್ಕಾರವು ತೋರಿಸಬೇಕು. ಯಾವ ಲಸಿಕೆ ತೆಗೆದುಕೊಳ್ಳಬಹುದೆಂದು ತಮ್ಮ ಸಮುದಾಯದವರಿಗೆ ಸೂಚಿಸಲು ಇದರಿಂದ ಸಹಾಯವಾಗುತ್ತದೆ ಎಂದು ನೂರೀ ಹೇಳಿದ್ದಾರೆ.

ಆದರೆ, ಅಸೋಸಿಯೇಟೆಡ್ ಪ್ರೆಸ್ (ಎಪಿ) ವರದಿಯ ಪ್ರಕಾರ, ಕೋವಿಡ್-19 ಸೋಂಕು ತಡೆಗಾಗಿ ಅಭಿವೃದ್ಧಿಪಡಿಸಿರುವ ಲಸಿಕೆಗಳಿಗೆ ಮುಸ್ಲಿಂ ಬಾಹುಳ್ಯವಿರುವ ಯುಎಇಯಲ್ಲಿ ಯಾವುದೇ ನಿರ್ಬಂಧಗಳಿರುವುದಿಲ್ಲ.

ಇಸ್ಲಾಮಿಕ್ ದೇಶದ ಪರಮೋಚ್ಚ ಸಂಸ್ಥೆಯಾಗಿರುವ ಯುಎಇ ಫತ್ವಾ ಮಂಡಳಿಯ ಮುಖ್ಯಸ್ಥರಾದ ಶೇಖ್ ಅಬ್ದಲ್ಲಾ ಬಿನ್ ಬಯ್ಯಾ ಅವರು ಹೇಳಿಕೆಯೊಂದನ್ನು ನೀಡಿದ್ದಾರೆ.

ಅವರ ಪ್ರಕಾರ, ಹಂದಿಯಿಂದ ದೊರೆಯುವ ಉತ್ಪನ್ನಗಳಿಗೆ ಇಸ್ಲಾಮ್‌ನಲ್ಲಿ ನಿಷೇಧವಿದ್ದರೂ, ಕೊರೊನಾ ವೈರಸ್ ಸೋಂಕು ತಡೆಗಟ್ಟುವ ಲಸಿಕೆಗಳು ಇದರ ಪರಿಧಿಯಲ್ಲಿ ಬರುವುದಿಲ್ಲ. ಇದಕ್ಕೆ ಕಾರಣವೆಂದರೆ, ಅದರ ಉದ್ದೇಶ ಮಾನವ ದೇಹವನ್ನು ರಕ್ಷಿಸುವ ಪರಮ ಗುರಿಯನ್ನು ಹೊಂದಿದೆ.

ಹಂದಿಯ ದೇಹದ ಜಿಲೆಟಿನ್ ಅಂಶವಿರುವ ಲಸಿಕೆಗಳನ್ನು ಔಷಧವಾಗಿ ಪರಿಗಣಿಸಲಾಗುತ್ತದೆಯೇ ಹೊರತು ಆಹಾರವಾಗಿ ಅಲ್ಲ ಎಂದು ಯುಎಇ ಫತ್ವಾ ಮಂಡಳಿ ತೀರ್ಪು ನೀಡಿದೆ.

ಜಾಗತಿಕವಾಗಿಯೂ ಮುಸ್ಲಿಮರು ಕೋವಿಡ್ ಲಸಿಕೆ ಸೇವನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.

ಆದರೆ, ಹಂದಿ ಜನ್ಯ ಅಂಶವಿರುವ ಲಸಿಕೆ ಪ್ರಯೋಗವಾಗಿರುವುದು ಇದೇ ಮೊದಲೇನಲ್ಲ. ಕೊರೊನಾ ವೈರಸ್‌ನಿಂದ ಹರಡಿದ ಈ ಹಿಂದಿನ ರೋಗಗಳಿಗೂ ಇದೇ ಮಾದರಿಯ ಲಸಿಕೆಗಳನ್ನು ಪ್ರಯೋಗಿಸಲಾಗುತ್ತಿತ್ತು.

ಲಸಿಕೆಗಳ ಸಾಗಾಟ ಮತ್ತು ಸಂಗ್ರಹಣೆಯ ಸಂದರ್ಭದಲ್ಲಿ ಅವುಗಳ ಸುರಕ್ಷಿತವಾಗಿರುವಂತೆ ಮಾಡಲು ಹಂದಿಯ ಮಾಂಸದಿಂದ ಪಡೆಯುವ ಜಿಲೆಟಿನ್‌ಗಳನ್ನು ಹಿಂದಿನಿಂದಲೂ ಉಪಯೋಗಿಸಲಾಗುತ್ತಿದೆ. ಕೆಲವು ಔಷಧ ಸಂಸ್ಥೆಗಳು ಹಂದಿ ಮಾಂಸವಿಲ್ಲದ ಲಸಿಕೆಗಳ ತಯಾರಿಕೆಯಲ್ಲಿಯೂ ನಿರತವಾಗಿದ್ದವು.

ಸ್ವಿಜರ್ಲೆಂಡ್‌ನ ನೋವಾರ್ಟಿಸ್ ಔಷಧ ಕಂಪನಿಯು ಹಂದಿಯ ಜಿಲೆಟಿನ್ ಇಲ್ಲದ ಲಸಿಕೆಯನ್ನು ಮೆನಿಂಜೈಟಿಸ್ ಕಾಯಿಲೆಗೆ ಸಿದ್ಧಪಡಿಸಿದ್ದರೆ, ಸೌದಿ ಮತ್ತು ಮಲೇಷ್ಯಾ ಮೂಲದ ಎಜಿ ಫಾರ್ಮಾ ಕಂಪನಿಗಳು ತಮ್ಮದೇ ಲಸಿಕೆ ತಯಾರಿಗೆ ಸಿದ್ಧತೆ ನಡೆಸುತ್ತಿವೆ.

ಆದರೆ, ಬೇಡಿಕೆ, ತುರ್ತು ಸ್ಥಿತಿ, ಪೂರೈಕೆ ಸರಪಣಿ, ವೆಚ್ಚ ಮತ್ತು ಹಂದಿ ಮಾಂಸದ ಅಂಶವಿಲ್ಲದ ಲಸಿಕೆಗಳ ಕಡಿಮೆ ಅವಧಿಯ ಬಾಳಿಕೆ (ಶೆಲ್ಫ್ ಲೈಫ್) – ಇವುಗಳಿಂದಾಗಿ ಹೆಚ್ಚಿನ ಲಸಿಕೆಗಳನ್ನು ತಯಾರಿಸುವುದು ಈಗಿನ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯ.

ಈ ಮಧ್ಯೆ, ತಮ್ಮ ಕೋವಿಡ್-19 ಲಸಿಕೆಗಳಲ್ಲಿ ಹಂದಿಯ ಅಂಶ ಇರುವುದಿಲ್ಲ ಎಂಬುದನ್ನು ಫೈಜರ್, ಮೋಡರ್ನಾ ಮತ್ತು ಆಸ್ಟ್ರಾಜೆನೆಕಾ ಕಂಪನಿಗಳ ವಕ್ತಾರರು ಹೇಳಿದ್ದಾರೆ. ಆದರೆ, ಕಡಿಮೆ ಪೂರೈಕೆ, ಬೇರೆ ಕಂಪನಿಗಳ ಜೊತೆ ಮೊದಲೇ ಮಾಡಿಕೊಂಡಿರುವ ಒಪ್ಪಂದಗಳು – ಇವನ್ನೆಲ್ಲ ಪರಿಗಣಿಸಿದರೆ ಹೆಚ್ಚು ಮುಸ್ಲಿಂ ಬಾಹುಳ್ಯವಿರುವ ಇಂಡೋನೇಷ್ಯಾ, ಸೌದಿಯಂತಹಾ ದೇಶಗಳಿಗೆ ನೀಡಲಾಗುವ ಲಸಿಕೆಗಳು ಜಿಲೆಟಿನ್-ಮುಕ್ತ ಎಂಬ ಪ್ರಮಾಣಪತ್ರವಿನ್ನೂ ದೊರೆತಿಲ್ಲ.

ಇದೇ ಸಮಸ್ಯೆ ಯಹೂದಿಗಳದ್ದು ಕೂಡ. ಅವರ ಕಾನೂನಿನ ಪ್ರಕಾರ, ಸಹಜ ಪದ್ಧತಿಯಲ್ಲಿ ಹಂದಿ ತಿನ್ನುವುದು ಅಥವಾ ಬಳಸುವುದಕ್ಕೆ ನಿಷೇಧವಿದೆ. ಆದರೆ, ಬಾಯಿಯಿಂದ ತಿನ್ನುವ ಬದಲಾಗಿ, ಅದನ್ನು ದೇಹದೊಳಕ್ಕೆ ಇಂಜೆಕ್ಟ್ ಮಾಡಿದಲ್ಲಿ, ಯಾವುದೇ ಸಮಸ್ಯೆಯಿರುವುದಿಲ್ಲ ಎಂದಿದ್ದಾರೆ ಇಸ್ರೇಲ್‌ನ ಸಂಘಟನೆಯೊಂದರ ಮುಖ್ಯಸ್ಥರಾದ ಜೋಹರ್.

https://twitter.com/YehoshaphatIsr1/status/1341261230024089602

ಇಂಡೋನೇಷ್ಯಾದಲ್ಲಿ ಯಾವುದೇ ಉತ್ಪನ್ನವು ಹಲಾಲ್ ಅಥವಾ ಇಸ್ಲಾಮಿಕ್ ಕಾನೂನಿನ ಪ್ರಕಾರ ಬಳಕೆಗೆ ಯೋಗ್ಯವೇ ಎಂದು ಪ್ರಮಾಣಪತ್ರ ನೀಡುವ ಉಲೇಮಾ ಮಂಡಳಿ 2018ರಲ್ಲಿ ಆದೇಶವೊಂದನ್ನು ಹೊರಡಿಸಿ, ದಡಾರ ಮತ್ತು ರುಬೆಲಾ ಲಸಿಕೆಗಳಲ್ಲಿ ಹಂದಿಯ ಜಿಲೆಟಿನ್ ಇರುವುದರಿಂದ ‘ಹರಾಮ್’ (ನಿಷಿದ್ಧ) ಎಂದು ಘೋಷಿಸಿತ್ತು. ಇದರಿಂದಾಗಿ, ಮಕ್ಕಳಿಗೆ ಈ ಲಸಿಕೆ ಹಾಕಿಸಲು ಮುಸಲ್ಮಾನ ಪೋಷಕರು ಹಿಂದೇಟು ಹಾಕಿದ್ದರು.

ಇದರಿಂದಾಗಿ ದಡಾರ ಪ್ರಕರಣವಂತೂ ಜೋರಾಗಿ ವ್ಯಾಪಿಸಿತು ಮತ್ತು ಇಂಡೋನೇಷ್ಯಾವು ಜಗತ್ತಿನಲ್ಲೇ ಮೂರನೇ ಸ್ಥಾನಕ್ಕೇರಿತು ಎಂದಿದ್ದಾರೆ ಹೆಲ್ತ್ ಕೇರ್ ಮಾರುಕಟ್ಟೆ ಸಂಶೋಧನಾ ಸಂಸ್ಥೆ ‘ರಿಸರ್ಚ್ ಪಾರ್ಟ್‌ನರ್‌ಶಿಪ್’ ನಿರ್ದೇಶಕ ರಾಶೆಲ್ ಹೋವರ್ಡ್.

ಆ ಬಳಿಕ ಈ ಲಸಿಕೆ ಬಳಸಬಹುದು ಎಂದು ತಿದ್ದುಪಡಿ ಮಾಡಿ ಆದೇಶ ಹೊರಡಿಸಿತಾದರೂ, ತಮ್ಮ ಸಾಮುದಾಯಿಕ ನೀತಿಯಿಂದಾಗಿ ಲಸಿಕೆ ನೀಡಿಕೆ ಪ್ರಮಾಣವಿನ್ನೂ ಕಡಿಮೆಯೇ ಇದೆ ಎಂದಿದ್ದಾರೆ ಹೋವರ್ಡ್.

ಚೀನಾದಲ್ಲಿ ಸಿನೊವ್ಯಾಕ್ ಬಯೊಟೆಕ್, ಸಿನೋಫಾರ್ಮ್ ಹಾಗೂ ಕ್ಯಾನ್‌ಸಿನೋ ಬಯೋಲಾಜಿಕ್ಸ್ – ಇವುಗಳಲ್ಲಿ ಲಸಿಕೆ ತಯಾರಿಕೆಯು ಅಂತಿಮ ಪ್ರಾಯೋಗಿಕ ಹಂತದಲ್ಲಿದ್ದರೂ, ಲಸಿಕೆಯಲ್ಲಿ ಏನೇನಿದೆ ಎಂಬುದನ್ನು ಅವುಗಳು ಬಹಿರಂಗಪಡಿಸಿಲ್ಲ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ಕಿಸಾನ್ ನಿಧಿ ಹಣ ಸರ್ಕಾರಕ್ಕೆ ಕೊಡಿ ಎಂದ ಮಮತಾ ಬ್ಯಾನರ್ಜಿಗೆ ಸೆಡ್ಡು: ಬಂಗಾಳದ 23 ಲಕ್ಷ ರೈತರಿಂದ ಸ್ವಯಂ ನೋಂದಣಿ
Next post Kashmir DDC Polls | ವಾಸ್ತವ ಇಲ್ಲಿದೆ: ಮಿತ್ರಕೂಟಕ್ಕೆ ಗರಿಷ್ಠ ಸ್ಥಾನವಾದರೂ ನಿಜವಾಗಿ ಛಾಪು ಮೂಡಿಸಿದ್ದು ಬಿಜೆಪಿ!

ಸುದ್ದಿ ಸಂಚಯ

ಇವುಗಳನ್ನೂ ನೋಡಿ