ಅಹಮದಾಬಾದ್: ಪುಲ್ವಾಮಾದಲ್ಲಿ 40 ಸಿಆರ್‌ಪಿಎಫ್ ಯೋಧರ ಬಲಿದಾನಕ್ಕೆ ಕಾರಣವಾಗಿದ್ದ ಭಯೋತ್ಪಾದಕ ದಾಳಿಯನ್ನು ತಾನೇ ಮಾಡಿಸಿದ್ದು ಎಂದು ಪಾಕಿಸ್ತಾನವೇ ತನ್ನ ಸಂಸತ್ತಿನಲ್ಲಿ ಒಪ್ಪಿಕೊಂಡ ಬಳಿಕ, ಮೋದಿ ವಿರೋಧಕ್ಕಾಗಿ ದೇಶವನ್ನು, ದೇಶದ ಸೇನೆಯನ್ನು ಅವಮಾನಿಸಿದ್ದ ಕಾಂಗ್ರೆಸ್, ಕಮ್ಯುನಿಸ್ಟ್ ಮುಂತಾದ ವಿರೋಧಿ ಪಕ್ಷಗಳು ತುಟಿ ಪಿಟಕ್ ಎನ್ನುತ್ತಿಲ್ಲ.
ಲೆಕ್ಕ ಕೊಡಿ, ಸಾಕ್ಷಿ ಕೊಡಿ ಅಂತೆಲ್ಲಾ ಕೂಗಾಡುತ್ತಾ, ಇದು ಚುನಾವಣೆಯಲ್ಲಿ ಗೆಲ್ಲಲು ಪ್ರಧಾನಿ ನರೇಂದ್ರ ಮೋದಿಯೇ ಮಾಡಿಸಿದ ಕೃತ್ಯ ಎಂಬಲ್ಲಿವರೆಗೂ ಹೀಯಾಳಿಸಿದ್ದ ವಿರೋಧ ಪಕ್ಷಗಳ ಜೊತೆಗೆ, ಈ ದಾಳಿಯಿಂದ ಯಾರಿಗೆಲ್ಲ ‘ಲಾಭ’ ಆಗಿದೆ ಎಂದು ಪ್ರಶ್ನಿಸಿದ್ದ ದೇಶದ ‘ಯುವ ರಾಜ’ ಖ್ಯಾತಿಯ ರಾಹುಲ್ ಗಾಂಧಿ – ಇವರ್ಯಾರೂ ಸುಳ್ಳು ಹೇಳಿದ್ದಕ್ಕಾಗಿ ಕ್ಷಮೆ ಕೇಳುವ ಪ್ರಯತ್ನವನ್ನೂ ಮಾಡಿಲ್ಲ.
ಎರಡು ದಿನಗಳ ಗುಜರಾತ್ ಭೇಟಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ವಿರೋಧ ಪಕ್ಷಗಳಿಗೆ ಬಲವಾದ ಚಾಟಿಯನ್ನೇ ಬೀಸಿದ್ದಾರೆ.
ಕಳೆದ ವರ್ಷ 2019ರ ಫೆಬ್ರವರಿ ತಿಂಗಳ 14ರಂದು ಪುಲ್ವಾಮಾದಲ್ಲಿ ಭಾರತೀಯ ಸಿಆರ್‌ಪಿಎಫ್ ಯೋಧರ ಮೇಲೆ ಪಾಕಿಸ್ತಾನದ ಜೈಶೆ ಮೊಹಮದ್ ಉಗ್ರಗಾಮಿಯೊಬ್ಬ ಆತ್ಮಾಹುತಿ ದಾಳಿ ನಡೆಸಿದ್ದು, ಇದರಲ್ಲಿ 40 ಮಂದಿ ಭಾರತೀಯ ವೀರರು ಹುತಾತ್ಮರಾಗಿದ್ದರು. ಹೀಗೆ ‘ಭಾರತಕ್ಕೆ ನುಗ್ಗಿ ಹೊಡೆದಿದ್ದೇವೆ, ಇದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಾಹಸ’ ಅಂತ ಪಾಕಿಸ್ತಾನದ ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಕಳೆದ ಗುರುವಾರ (ಅ.29) ಅಲ್ಲಿನ ಸಂಸತ್ತಿನಲ್ಲೇ ಹೇಳಿಕೆ ನೀಡಿದ್ದ.
ಪುಲ್ವಾಮಾ ದಾಳಿಗಾಗಿ ದೇಶ ವಿದೇಶಗಳಲ್ಲಿ ತಮ್ಮನ್ನು ಸುಳ್ಳು ಸುಳ್ಳೇ ಟೀಕಿಸುತ್ತಾ ಬಂದಿದ್ದ ಪ್ರತಿಪಕ್ಷಗಳ ಬಗ್ಗೆ ಮೋದಿ ಕೊನೆಗೂ ನೋವಿನಿಂದಲೇ ಮೌನ ಮುರಿದಿದ್ದಾರೆ.
“ಪುಲ್ವಾಮಾ ದಾಳಿಯಲ್ಲಿ ಬಲಿದಾನಗೈದ ಯೋಧರ ಬಗ್ಗೆ ಕೆಲವರಿಗೆ ದುಃಖವೇ ಆಗಿಲ್ಲ ಎಂಬುದನ್ನು ಈ ದೇಶ ಯಾವತ್ತೂ ಮರೆಯುವುದಿಲ್ಲ. ಅವರು ಪುಲ್ವಾಮಾ ದಾಳಿಯಲ್ಲಿಯೂ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಹುಡುಕಾಟ ಮಾಡುತ್ತಿದ್ದರು. ಅಂದು ಅವರು ಏನೆಲ್ಲಾ ಮಾತನಾಡಿದರು ಎಂಬುದನ್ನು ಈ ದೇಶವೆಂದಿಗೂ ಮರೆಯದು. ಎಲ್ಲ ಆಪಾದನೆಗಳನ್ನು ಮೌನವಾಗಿಯೇ ಸಹಿಸಿಕೊಂಡಿದ್ದೆ, ಯಾಕೆಂದರೆ, ಯೋಧರ ಮೇಲಿನ ದಾಳಿಯಲ್ಲೂ ಈ ಜನರು ರಾಜಕೀಯ ಲಾಭ ಎಲ್ಲಿ ಸಿಗುತ್ತದೆ ಅಂತ ಹುಡುಕಾಡುತ್ತಿದ್ದರೆಂಬುದು ನನಗೆ ಗೊತ್ತಿತ್ತು” ಎಂದಿದ್ದಾರೆ ಮೋದಿ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy
‘ನೆರೆಯ ದೇಶವು ತನ್ನ ಸಂಸತ್ತಿನಲ್ಲಿ ಈ ದಾಳಿಯ ಹೊಣೆಗಾರಿಕೆಯನ್ನು ಒಪ್ಪಿಕೊಂಡಾಗ, ದೇಶವೇ ಸಂಕಷ್ಟದಲ್ಲಿ ರೋದಿಸುತ್ತಿದ್ದಾಗ ಸ್ವಾರ್ಥ, ಅಹಂಕಾರ ತುಂಬಿದ ಕೀಳು ರಾಜಕೀಯಕ್ಕಿಳಿದಿದ್ದ ಈ ಜನರ ನಿಜ ಬಣ್ಣ ಬಯಲಾಯಿತು. ದೇಶದ ಹಿತಕ್ಕಾಗಿ, ದೇಶದ ಭದ್ರತೆಗಾಗಿ, ನಮ್ಮ ಯೋಧರ ಆತ್ಮಬಲಕ್ಕಾಗಿ ನೀವು ಇನ್ನಾದರೂ ಈ ರೀತಿ ಕೆಟ್ಟ ರಾಜಕಾರಣ ಮಾಡಬೇಡಿ ಅಂತ ನನ್ನ ಪ್ರಾರ್ಥನೆ’ ಎಂದು ಬೇಸರದಿಂದಲೇ ಹೇಳಿದ್ದಾರೆ ಮೋದಿ.
ಕಾಂಗ್ರೆಸ್ ವಿರುದ್ಧ ಹೆಸರೆತ್ತದೆ ಟೀಕೆ ಮಾಡಿದ ಪ್ರಧಾನಿ ಮೋದಿ, “ಈ ಪಕ್ಷಗಳು ಭಾರತ-ವಿರೋಧಿ ಶಕ್ತಿಗಳ ದಾಳಗಳಾಗುತ್ತಿವೆ. ತಮ್ಮ ಗುರಿ ಸಾಧನೆಗಾಗಿ ದೇಶ-ವಿರೋಧಿ ಶಕ್ತಿಗಳ ಜೊತೆ ಇವರು ತಿಳಿದೋ ತಿಳಿಯದೆಯೋ ಕೈಜೋಡಿಸುತ್ತಾರೆ ಮತ್ತು ಅಂಥ ಚಟುವಟಿಕೆಗಳಿಗೆ ಪ್ರೋತ್ಸಾಹಿಸುತ್ತಿದ್ದಾರೆ. ಇದರಿಂದ ದೇಶಕ್ಕಾಗಿ ಆಗಲೀ ಅಥವಾ ನಿಮ್ಮ ಪಕ್ಷಕ್ಕಾಗಲೀ ಯಾವುದೇ ರೀತಿಯಲ್ಲಿ ಒಳಿತಾಗುವುದಿಲ್ಲ” ಎಂದು ಎಚ್ಚರಿಸಿದರು.
ಇದಕ್ಕೆ ಮೊದಲು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನವಾದ ಇಂದು ‘ರಾಷ್ಟ್ರೀಯ ಏಕತಾ ದಿವಸ’ ಪ್ರಯುಕ್ತ ಗುಜರಾತ್‌ನ ಕೇವಡಿಯಾದಲ್ಲಿರುವ ಏಕತಾ ಪ್ರತಿಮೆಗೆ ಮೋದಿ ಪುಷ್ಪ ನಮನ ಸಲ್ಲಿಸಿದರು.

Average Rating