Rahul Gandhi Disqualification: ಲೋಕಸಭೆ ಅಧಿಸೂಚನೆಗೆ ಕಾರಣ ಇದು | ಪೂರ್ಣ ವಿವರ ಇಲ್ಲಿದೆ
Read Time:6 Minute, 16 Second

Rahul Gandhi Disqualification: ಲೋಕಸಭೆ ಅಧಿಸೂಚನೆಗೆ ಕಾರಣ ಇದು | ಪೂರ್ಣ ವಿವರ ಇಲ್ಲಿದೆ

0 0

ನವದೆಹಲಿ: Rahul Gandhi Disqualification: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಈಗ ಸಂಸದರಾಗಿ ಉಳಿದಿಲ್ಲ. ಅವರೀಗ ಅನರ್ಹ ಸಂಸದ. ಅವರೇ ಹೇಳಿಕೊಂಡಂತೆ ‘ಡಿಸ್-ಕ್ವಾಲಿಫೈಡ್ ಎಂಪಿ’. ತಪ್ಪೆಸಗಿ 2 ವರ್ಷ ಶಿಕ್ಷೆಗೆ ಗುರಿಯಾಗಿದ್ದ ರಾಹುಲ್ ಗಾಂಧಿ, ಕಾನೂನಿನ ಪ್ರಕಾರ ಯಾವುದೇ ಅಧಿಸೂಚನೆಯಿಲ್ಲದೆಯೇ ಲೋಕಸಭೆ ಸದಸ್ಯತ್ವ ಕಳೆದುಕೊಳ್ಳುತ್ತಾರೆ. ಇದು ವಾಸ್ತವ. ಇದರಲ್ಲಿ ನರೇಂದ್ರ ಮೋದಿಯದ್ದಾಗಲೀ, ಬಿಜೆಪಿಯದ್ದಾಗಲೀ ಕೈವಾಡ ಇಲ್ಲವೇ ಇಲ್ಲ. ಇದು ದೇಶದ ಸಂವಿಧಾನದಲ್ಲಿರುವ ಕಾನೂನಿನಲ್ಲೇ ಇರುವ ಅಂಶ.

ಆದರೆ, ಲೋಕಸಭಾ ಕಾರ್ಯಾಲಯವು ರಾಹುಲ್ ಸದಸ್ಯತ್ವ ರದ್ದಾಗಿರುವ ಬಗ್ಗೆ ಅಧಿಸೂಚನೆ ಹೊರಡಿಸಲೇಬೇಕಾಯಿತೇಕೆ? ಇದಕ್ಕೆ ಉತ್ತರ ಇಲ್ಲಿದೆ.

Rahul Gandhi Disqualification: ದೀರ್ಘ ವಿಚಾರಣೆಯ ಬಳಿಕವೇ ತೀರ್ಪು
ಕಳ್ಳರೆಲ್ಲರೂ ಮೋದಿ ಉಪನಾಮ ಹೊಂದಿದ್ದಾರೆ ಎಂದು 2019ರಲ್ಲಿ ಕೋಲಾರದಲ್ಲಿ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಮಾಡಿದ್ದ ಭಾಷಣದ ವಿರುದ್ಧ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಸೂರತ್‌ನಲ್ಲಿ ಕೇಸು ದಾಖಲಿಸಿದ್ದರು. ಮೋದಿ ಸಮುದಾಯಕ್ಕೇ ಇದು ಅವಮಾನ, ಮಾನಹಾನಿಯಾಗಿದೆ ಎಂಬ ಕಾರಣಕ್ಕಾಗಿ ಈ ಕೇಸು ಜಡಿಯಲಾಗಿತ್ತು. ನಾಲ್ಕು ವರ್ಷಗಳ ಕಾಲ ಸುದೀರ್ಘ ವಿಚಾರಣೆ – ವಾದ – ವಿವಾದ ನಡೆದ ಬಳಿಕವಷ್ಟೇ ಮೊನ್ನೆ ಶುಕ್ರವಾರ ಈ ಕುರಿತು ತೀರ್ಪು ಹೊರಬಿದ್ದಿದೆ. ಹೀಗಾಗಿ ಇದರಲ್ಲಿ ಕೂಡ ನರೇಂದ್ರ ಮೋದಿ ಅಥವಾ ಬಿಜೆಪಿಯ ಕೈವಾಡ ಇರಲಿಲ್ಲ. ನ್ಯಾಯಾಲಯದ ಮೇಲೆ ಸಂಶಯ ಪಡುವಂಥದ್ದೂ ಏನೂ ಇಲ್ಲ. ಇಲ್ಲಿ ನೆಲದ ಕಾನೂನಿನ ಆಧಾರದಲ್ಲಿ ಕೂಲಂಕಷ ವಿಚಾರಣೆ ನಡೆದ ಬಳಿಕವೇ ತೀರ್ಪು ಬಂದಿದೆ.

ಈ ಕುರಿತು ತೀರ್ಪು ನೀಡಿದ್ದು ಸೂರತ್‌ನ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಹೆಚ್.ಹೆಚ್.ವರ್ಮಾ ಅವರು. ಭಾರತೀಯ ದಂಡ ಸಂಹಿತೆ 499 ಹಾಗೂ 500ರ ಆಧಾರದಲ್ಲೇ ಈ ತೀರ್ಪು, ಶಿಕ್ಷೆ ಘೋಷಣೆಯಾಗಿದೆ. ಆದರೆ, ಕಾನೂನಿನ ನಿಯಮದ ಪ್ರಕಾರ ಅವರಿಗೆ ಜಾಮೀನನ್ನೂ ನೀಡಿದೆ ಮತ್ತು 30 ದಿನಗಳ ಕಾಲ ಶಿಕ್ಷೆಯನ್ನು ಅಮಾನತಿನಲ್ಲಿರಿಸಿ, ಮೇಲಿನ ಹಂತದ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಕಾಲಾವಕಾಶವನ್ನೂ ನೀಡಲಾಗಿತ್ತು.

ಯಾಕೆ ಅಧಿಸೂಚನೆ?
ಲೋಕಸಭೆಯ ಕಾರ್ಯಾಲಯವು ರಾಹುಲ್ ಸದಸ್ಯತ್ವ ರದ್ದತಿ ಬಗ್ಗೆ ಅಧಿಸೂಚನೆ ಹೊರಡಿಸಬೇಕಾಗಿರಲಿಲ್ಲ. ಶಿಕ್ಷೆ ಘೋಷಣೆಯಾಗಿರುವ ಹಿನ್ನೆಯಲ್ಲಿ ಡೀಫಾಲ್ಟ್ ಆಗಿ ಅವರ ಸದಸ್ಯತ್ವ ರದ್ದೇ ಆಗುತ್ತದೆ. ಆದರೆ, ಅನಿವಾರ್ಯವಾಗಿ ಅಧಿಸೂಚನೆ ಹೊರಡಿಸಬೇಕಾಗಿದ್ದೇಕೆಂದರೆ, ಗುರುವಾರ ತೀರ್ಪು ಪ್ರಕಟವಾದರೂ, ಶುಕ್ರವಾರ ರಾಹುಲ್ ಗಾಂಧಿ ಲೋಕಸಭೆಗೆ ಪ್ರವೇಶಿಸಿದ್ದರು! ಇದು ಅರಿವಿದ್ದೇ ಮಾಡಿದ ತಪ್ಪು. ಅಷ್ಟೇ ಅಲ್ಲದೆ, ಕಾಂಗ್ರೆಸಿಗರಾಗಲೀ, ರಾಹುಲ್ ಗಾಂಧಿಯೇ ಆಗಲಿ – ಯಾರು ಕೂಡ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿಯನ್ನೂ ಸಲ್ಲಿಸುವ ಗೋಜಿಗೆ ಹೋಗಿರಲಿಲ್ಲ. ಶಿಕ್ಷೆಯಾದರೂ ಸಂಸತ್ತಿಗೆ ಬಂದಿದ್ದಕ್ಕಾಗಿಯೇ ಲೋಕಸಭೆ ಕಾರ್ಯಾಲಯವು ಪ್ರಜಾಪ್ರತಿನಿಧಿ ಕಾಯ್ದೆಯ ಅನುಸಾರವಾಗಿಯೇ ಅನರ್ಹತೆಯ ಅಧಿಸೂಚನೆ ಹೊರಡಿಸಬೇಕಾಯಿತು ಎಂದು ಮೂಲಗಳು ಹೇಳಿವೆ. ರಾಹುಲ್ ಲೋಕಸಭೆಗೆ ಕಾಲಿಟ್ಟಿದ್ದನ್ನು ನೋಡಿಯೂ ಲೋಕಸಭೆ ಕಾರ್ಯದರ್ಶಿಯವರು ಈ ಅಧಿಸೂಚನೆ ಹೊರಡಿಸದೇ ಇದ್ದರೆ, ಕಾಯ್ದೆ ಅನುಸಾರ ಅವರು ಕ್ರಮ ಕೈಗೊಳ್ಳಲಿಲ್ಲ ಎಂಬ ಟೀಕೆಗೂ ಗುರಿಯಾಗಬಹುದಾಗಿತ್ತು.

ವಾಸ್ತವವಾಗಿ ಸಂಸತ್ ಸದಸ್ಯರೇ ಲೋಕಸಭೆ ಕಾರ್ಯಾಲಯಕ್ಕೆ ತಮಗೆ ಶಿಕ್ಷೆಯಾಗಿರುವ ಕುರಿತು ಮಾಹಿತಿ ನೀಡಬೇಕಿತ್ತು. ಅದನ್ನೂ ಮಾಡಿರಲಿಲ್ಲ ಎಂದಿವೆ ಮೂಲಗಳು.

ರಾಹುಲ್‌ಗೆ ಶಿಕ್ಷೆಯಾದದ್ದು ಯಾವ ಆಧಾರದಲ್ಲಿ?
2013ರ ಲಿಲಿ ಥೋಮಸ್ vs ಕೇಂದ್ರ ಸರ್ಕಾರ ಹಾಗೂ 2018ರ ಲೋಕಪ್ರಹರಿ Vs ಕೇಂದ್ರ ಸರ್ಕಾರ – ಈ ಎರಡೂ ಹಿಂದಿನ ಪ್ರಕರಣಗಳ ತೀರ್ಪಿನ ಆಧಾರದಲ್ಲಿ, ಯಾವುದೇ ಸಂಸತ್ಸದಸ್ಯ, ಶಾಸಕ ಅಥವಾ ಪರಿಷತ್ ಸದಸ್ಯರು ಯಾವುದೇ ಅಪರಾಧ ಸಾಬೀತಾಗಿ ಕನಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದರೆ, ತಕ್ಷಣದಿಂದಲೇ ಅವರ ಸದಸ್ಯತ್ವ ರದ್ದಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಕಾಕತಾಳೀಯ ಎಂದರೆ, ಈ ತೀರ್ಪನ್ನೇ ತಡೆಹಿಡಿಯಲು ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರವು (ಯುಪಿಎ) ಸುಗ್ರೀವಾಜ್ಞೆ ತರಲು ಉದ್ದೇಶಿಸಿತ್ತು. ಈ ಕುರಿತ ಪತ್ರಿಕಾಗೋಷ್ಠಿಗೆ ಅಂದು ದಿಢೀರ್ ಆಗಮಿಸಿದ್ದ ರಾಹುಲ್ ಗಾಂಧಿ, ಇದೇ ಸುಗ್ರೀವಾಜ್ಞೆಯ ಪ್ರತಿಯನ್ನೇ ಹರಿದು, ಸಿಟ್ಟು ಪ್ರದರ್ಶಿಸಿದ್ದರು ಮತ್ತು ಈ ಕಾಯ್ದೆಯನ್ನು ಬೆಂಬಲಿಸಿದ್ದರು. ಅವರೇ ಬೆಂಬಲಿಸಿದ್ದ ಕಾಯ್ದೆಯಡಿಯೇ ಅವರಿಗೆ ಶಿಕ್ಷೆಯಾಗಿದೆ ಎಂಬುದು ವಿಪರ್ಯಾಸ. ಆ ಘಟನೆಯಿಂದ ಮನನೊಂದ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಪದತ್ಯಾಗಕ್ಕೆ ನಿರ್ಧರಿಸಿದ್ದರು. ಇಲ್ಲಿದೆ ವಿವರ.

ಈಗ ಸಂಸತ್ ಸದಸ್ಯತ್ವ ರದ್ದಾಗಿರುವುದರಿಂದ ರಾಹುಲ್ ಗಾಂಧಿ ಅವರು ಸರಕಾರ ಕೊಡಮಾಡಿದ ಬಂಗಲೆಯನ್ನೂ ತೆರವು ಮಾಡಬೇಕಾಗಿದೆ. ಈ ಕುರಿತು ಲೋಕಸಭೆಯ ವಸತಿ ಸಮಿತಿಯು ರಾಹುಲ್ ಗಾಂಧಿಗೆ ನೋಟಿಸ್ ನೀಡಿದೆ.

ಆದರೆ, ಎಲ್ಲವೂ ಕಾಯ್ದೆಯ ಅನುಸಾರವೇ ನಡೆದಿದ್ದರೂ, ಎಲ್ಲದಕ್ಕೂ ನರೇಂದ್ರ ಮೋದಿ ಕಾರಣ, ಕೇಂದ್ರ ಸರ್ಕಾರ ಕಾರಣ, ಬಿಜೆಪಿ ಕಾರಣ ಎಂದೆಲ್ಲ ಪ್ರತಿಪಕ್ಷಗಳು ಗದ್ದಲವೆಬ್ಬಿಸುತ್ತಿದ್ದಾರೆ.

Avatar for Web Desk

About Post Author

Web Desk

Kannada News Enthusiasts | Professional Journalists | ಕನ್ನಡದ ಸುದ್ದಿ ಜೀವಿಗಳು
Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post 2047ರೊಳಗೆ ಭಾರತದ ಇಸ್ಲಾಮೀಕರಣ: ಪಿಎಫ್ಐನಿಂದ ‘ಸೇವಾ ತಂಡ, ಕಿಲ್ಲರ್ ಸ್ಕ್ವಾಡ್ಸ್’
Next post ₹2000 ಮುಖಬೆಲೆಯ ನೋಟು ತರುವುದು ಪ್ರಧಾನಿ ಮೋದಿಗೇ ಇಷ್ಟವಿರಲಿಲ್ಲ

ಸುದ್ದಿ ಸಂಚಯ

ಇವುಗಳನ್ನೂ ನೋಡಿ