ಹೈದರಾಬಾದ್: ಬಿಜೆಪಿಯಿಂದ ಅಮಾನತುಗೊಂಡಿರುವ ಶಾಸಕ ಟಿ.ರಾಜಾ ಸಿಂಗ್ (Raja Singh) ಒಬ್ಬ ಹಿಂದುತ್ವವಾದಿ ನಾಯಕ. ಅವರನ್ನೀಗ ಎರಡನೇ ಬಾರಿ ಬಂಧಿಸಲಾಗಿದೆ. ಇದರೊಂದಿಗೆ, ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವೇ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಇದರ ಮೂಲ ಕೆದಕಿದರೆ ಅರಿವಾಗುವ ಸಂಗತಿಯೆಂದರೆ, ಟಿ. ರಾಜಾ ಸಿಂಗ್ ಅವರು ಸ್ಟ್ಯಾಂಡಪ್ ಕಾಮಿಡಿಯನ್ ಎಂದು ಪ್ರಸಿದ್ಧಿ ಪಡೆದಿರುವ ಮುನವ್ವರ್ ಫಾರೂಕಿಯ ಪ್ರದರ್ಶನಕ್ಕೆ ಅಡ್ಡಿಪಡಿಸುವುದಾಗಿ ಹೇಳಿರುವುದು. ಇದಕ್ಕೆ ಕಾರಣ ಹುಡುಕಿದಾಗ ಸಿಕ್ಕಿದ್ದೇ, ಈ ಮುನವ್ವರ್ ಫಾರೂಕಿ ಎಂಬ ವ್ಯಕ್ತಿ ಕಾಮಿಡಿ (ಹಾಸ್ಯ) ಹೆಸರಲ್ಲಿ ಹಿಂದೂ ಸಮುದಾಯದ ದೇವರಾದ ಶ್ರೀರಾಮ – ಸೀತಾಮಾತೆಯನ್ನು ತನ್ನ ಕಾಮಿಡಿ ಶೋಗಳಲ್ಲಿ ಅಪಹಾಸ್ಯ ಮಾಡಿರುವುದು.
ಇದೇ ಕಾರಣಕ್ಕೆ, ವಿರೋಧ ಬಂದಾಗ ಕರ್ನಾಟಕದಲ್ಲಿ ಮುನಾವರ್ ಫಾರೂಕಿ ಪ್ರದರ್ಶನಕ್ಕೆ ಸರಕಾರ ಅನುಮತಿ ಕೊಟ್ಟಿರಲಿಲ್ಲ. ಆದರೆ, ತೆಲಂಗಾಣದಲ್ಲಿರುವುದು ಬಿಜೆಪಿ ವಿರೋಧಿ ಸರ್ಕಾರ. ಹೀಗಾಗಿ ಅಲ್ಲಿ ಅನುಮತಿ ಕೊಟ್ಟಿದೆ.
ಪ್ರವಾದಿ ಮಹಮದ್ ಬಗೆಗೆ ಅವಹೇಳನಕಾರಿಯಾಗಿ ಮಾತನಾಡಿದರೆಂಬ ಕಾರಣಕ್ಕೆ ನೂಪುರ್ ಶರ್ಮಾ ಎಂಬ ಬಿಜೆಪಿ ನಾಯಕಿಗೆ ಹತ್ಯೆಯ ಬೆದರಿಕೆಯ ಕರೆಗಳಷ್ಟೇ ಅಲ್ಲದೆ, ದೇಶಾದ್ಯಂತ ವಿವಿಧೆಡೆ ಹಿಂಸಾಚಾರಗಳೂ ನಡೆದಿದ್ದವು. ಇದೀಗ, ಅಂಥದ್ದೇ ಪರಿಸ್ಥಿತಿ ಟಿ. ರಾಜಾ ಸಿಂಗ್ ಅವರದು ಕೂಡ. ಅವರು ಧರ್ಮನಿಂದನೆ ಮಾಡಿದ್ದಾರೆ ಎಂಬ ಕಾರಣಕ್ಕೆ ತೆಲಂಗಾಣದಲ್ಲಿ ಭಾರಿ ಪ್ರತಿಭಟನೆ, ಹಿಂಸಾಚಾರ ನಡೆದಿತ್ತು.
ಆ ಯೂಟ್ಯೂಬ್ ವಿಡಿಯೊ
ಫಾರೂಕಿಯು ಸೀತಾ ಮಾತೆ ಹಾಗೂ ಪ್ರಭು ರಾಮಚಂದ್ರನನ್ನು ಅವಹೇಳನಕಾರಿಯಾಗಿ ಬಿಂಬಿಸಿ ಕಾಮಿಡಿ ಮಾಡಬಹುದಾದರೆ, “ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ಇದೆ” ಎನ್ನುತ್ತಾ ಪ್ರವಾದಿಯ ಕುರಿತಾದ ಹೇಳಿಕೆಯಿರುವ ವಿಡಿಯೊವೊಂದನ್ನು ರಾಜಾ ಸಿಂಗ್ ಯೂಟ್ಯೂಬ್ಗೆ ಅಪ್ಲೋಡ್ ಮಾಡಿದ್ದರು. ಅದನ್ನೀಗ ಡಿಲೀಟ್ ಮಾಡಲಾಗಿದೆ.
ಮರಳಿ ಬಂಧನ
ವಜೀಹುದ್ದೀನ್ ಸಲ್ಮಾನ್ ಎಂಬವರು ಸಿಂಗ್ ಅವರು ಪ್ರವಾದಿ ವಿರುದ್ಧ ಅಶ್ಲೀಲ ಭಾಷೆ ಬಳಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಸಿಂಗ್ ವಿರುದ್ಧ ಧರ್ಮ ಆಧಾರಿತವಾಗಿ ಎರಡು ಕೋಮುಗಳ ಮಧ್ಯೆ ದ್ವೇಷ ಹರಡಲು ಉತ್ತೇಜಿಸಿದ್ದಾರೆ ಎಂದು ಕೇಸು ದಾಖಲಿಸಲಾಗಿತ್ತು. ಹೀಗಾಗಿ, ಅವರೇ ಹೇಳಿರುವಂತೆ, ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯ ಕುರಿತಾಗಿ ಕ್ರಮ ಕೈಗೊಳ್ಳಲಾಗಿದೆ. ರಾಜಾ ಸಿಂಗ್ರನ್ನು ಮಂಗಳವಾರ (ಆ.23ರಂದು) ಬಂಧಿಸಿ 14 ದಿನಗಳ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿತ್ತು, ಅವರು ಜಾಮೀನು ಪಡೆದು ಹೊರಬಂದಿದ್ದರು. ಇದೀಗ, ಪುನಃ ಗುರುವಾರ (ಆ.25ರಂದು) ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲಾಗಿದೆ.
ಬಿಜೆಪಿಯಿಂದ ಅಮಾನತು
ಇದೀಗ ಮುಸ್ಲಿಮರು, ವಿಶೇಷವಾಗಿ ಎಐಎಂಐಎಂ ಮುಖ್ಯಸ್ಥ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ಕಾರಣಕ್ಕೆ ತೆಲಂಗಾಣದ ಟಿಆರ್ಎಸ್ ನೇತೃತ್ವದ ಸರಕಾರವು ರಾಜಾ ಸಿಂಗ್ ಅವರನ್ನು ಮತ್ತೆ ಬಂಧಿಸಿದೆ. ಇದರ ನಡುವೆ, ಪ್ರವಾದಿ ಕುರಿತು ಅವಹೇಳನ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯು ಅವರಿಗೆ ಶೋಕಾಸ್ ನೋಟಿಸ್ ನೀಡಿ, ಸೆ.2ರೊಳಗೆ ಉತ್ತರಿಸುವಂತೆ ಸೂಚಿಸಿದೆ. ಸದ್ಯ ಅಮಾನತುಗೊಳಿಸಿದ್ದು, ಪಕ್ಷದಿಂದ ಯಾಕೆ ಉಚ್ಚಾಟಿಸಬಾರದು ಎಂದು ಕೇಳಿದೆ.
ನೂಪುರ್ ಶರ್ಮಾ ವಿವಾದ
ಟಿವಿ ಚರ್ಚೆಯ ಸಂದರ್ಭದಲ್ಲಿ ಕುರಾನ್ನಲ್ಲಿನ ವಾಕ್ಯಗಳನ್ನು ಉಲ್ಲೇಖಿಸಿ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ನೀಡಿದ ಹೇಳಿಕೆ ಬಗ್ಗೆಯೂ, ಪ್ರವಾದಿ ವಿರುದ್ಧ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಕೇಸು ದಾಖಲಿಸಲಾಗಿತ್ತು. ದೇಶಾದ್ಯಂತ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು. ನಂತರ ಸುಪ್ರೀಂ ಕೋರ್ಟ್ನ ಕೆಲವು ನ್ಯಾಯಾಧೀಶರು ಕೂಡ, ದೇಶಾದ್ಯಂತ ಕ್ಷೋಭೆಗೆ, ಹಿಂಸಾಚಾರಕ್ಕೆ ನೂಪುರ್ ಅವರೇ ಕಾರಣ ಎಂದು ಹೇಳಿಕೆ ನೀಡಿದ್ದರು. ಇದು ಕೂಡ ಭಾರಿ ವಿವಾದಕ್ಕೆ ಕಾರಣವಾಗಿತ್ತು.
ವಿಡಿಯೊದ ಎರಡನೇ ಭಾಗ ಅಪ್ಲೋಡ್ ಮಾಡುವೆ ಎಂದಿದ್ದ ರಾಜಾ ಸಿಂಗ್
ಇದೀಗ, ಗೋಷಾಮಹಲ್ ಶಾಸಕ ರಾಜಾ ಸಿಂಗ್ ಅವರ ಸರದಿ. “ಅವರು ನನ್ನ ವಿಡಿಯೊವನ್ನು ಯೂಟ್ಯೂಬ್ನಿಂದ ತೆಗೆದಿದ್ದಾರೆ. ಪೊಲೀಸರೇನು ಮಾಡುತ್ತಾರೆ ಎಂದು ನನಗೆ ಗೊತ್ತಿಲ್ಲ. ಬಿಡುಗಡೆಯಾದ ಬಳಿಕ ಈ ವಿಡಿಯೊದ ಎರಡನೇ ಭಾಗವನ್ನೂ ಅಪ್ಲೋಡ್ ಮಾಡುತ್ತೇನೆ. ಸನಾತನ ಧರ್ಮದ ರಕ್ಷಣೆಗಾಗಿ ಇದನ್ನು ಮಾಡುತ್ತಿದ್ದೇನೆ. ಸನಾತನ ಧರ್ಮಕ್ಕಾಗಿ ನಾನು ಸಾಯಲು ಕೂಡ ಸಿದ್ಧನಾಗಿದ್ದೇನೆ” ಎಂದಿದ್ದಾರೆ ರಾಜಾ ಸಿಂಗ್.
ಮುನಾವರ್ ಫಾರೂಕಿ ಹಿಂದೂ ಧರ್ಮದ ಶ್ರೀರಾಮಚಂದ್ರ – ಸೀತಾಮಾತೆಯನ್ನು ಅವಮಾನಿಸಿ ಮಾಡಿದ ಕಾಮಿಡಿಯ ತುಣುಕು ಇಲ್ಲಿದೆ. ಅದು ಅಭಿವ್ಯಕ್ತಿ ಸ್ವಾತಂತ್ರ್ಯವಾದರೆ, ತನಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದಿದ್ದಾರೆ ರಾಜಾ ಸಿಂಗ್. ಮುಂದೇನು ಅಂತ ನ್ಯಾಯಾಲಯ ನಿರ್ಧರಿಸಲಿದೆ.
ಸರ್ ತನ್ ಸೇ ಜುಡಾ – ತಲೆ ಕತ್ತರಿಸುವ ಶಿಕ್ಷೆ ಎಂಬ ಸ್ಲೋಗನ್
ಈ ಮಧ್ಯೆ, ನೂಪುರ್ ಶರ್ಮಾ ಪ್ರಕರಣದ ಬಳಿಕ ವೈರಲ್ ಆಗಿರುವ “ಗುಸ್ತಾಕ್-ಇ-ರಸೂಲ್ ಕೀ ಎಕ್ ಹೀ ಸಝಾ, ಸರ್ ತನ್ ಸೇ ಜುಡಾ, ಸರ್ ತನ್ ಸೇ ಜುಡಾ” ಎಂಬ ಸ್ಲೋಗನ್ ಅನ್ನು ಹೈದರಾಬಾದ್ ಕಮಿಶನರ್ ಕಚೇರಿ ಎದುರು ಕೂಡ ಕೂಗಿದ್ದ ಹೈದರಾಬಾದ್ನ ಪ್ರಭಾವೀ ವ್ಯಕ್ತಿ ಸೈಯದ್ ಕಾಶಫ್ ಎಂಬಾತನನ್ನು ಬಂಧಿಸಲಾಗಿದೆ.
ರಾಜಸ್ಥಾನದ ಉದಯಪುರದಲ್ಲಿ ಪಾಪದ ಮುಗ್ಧ ಟೈಲರ್ ಕನ್ಹಯ್ಯಲಾಲ್ ಎಂಬಾತನ ತಲೆ ಕತ್ತರಿಸಿ ವಿಡಿಯೊ ಮಾಡಿದ್ದ ಇಸ್ಲಾಮಿಕ್ ಉಗ್ರವಾದಿಗಳು, ವಿಡಿಯೋದ ಕೊನೆಯಲ್ಲಿ ಸರ್ ತನ್ ಸೇ ಜುಡಾ (ತಲೆ ಕತ್ತರಿಸುತ್ತೇವೆ) ಎಂಬ ಸಂದೇಶ ನೀಡಿದ್ದರು. ಇದೇ ರೀತಿ, ಮಧ್ಯಪ್ರದೇಶದ ರೈಸೆನ್ ಜಿಲ್ಲೆಯಲ್ಲಿ ನಿಶಾಂಕ್ ರಾಥೋಡ್ ಎಂಬ ವ್ಯಕ್ತಿಯನ್ನೂ ಮುಸ್ಲಿಮರು ಕೊಂದಿದ್ದರೆನ್ನಲಾಗಿದ್ದು, ಆತನ ತಂದೆಗೆ ಆತನದ್ದೇ ಮೊಬೈಲ್ನಿಂದ ಕಳುಹಿಸಿದ ಸಂದೇಶದಲ್ಲಿ ಕೂಡ “ನಮ್ಮ ಪ್ರವಾದಿಗೆ ಅವಮಾನ ಮಾಡಿದರೆ ಇದೇ ಶಿಕ್ಷೆ, ತಲೆ ಕತ್ತರಿಸುತ್ತೇವೆ, ತಲೆ ಕತ್ತರಿಸುತ್ತೇವೆ (ಗುಸ್ತಾಕ್-ಇ-ರಸೂಲ್ ಕೀ ಎಕ್ ಹೀ ಸಝಾ, ಸರ್ ತನ್ ಸೇ ಜುಡಾ, ಸರ್ ತನ್ ಸೇ ಜುಡಾ)” ಎಂದು ಬರೆಯಲಾಗಿತ್ತು.

Average Rating