ರಾಜಸ್ಥಾನದ ರಾಜಕೀಯ ಮತ್ತೊಂದು ತಿರುವು ಪಡೆದಿದ್ದು, ಕಾಂಗ್ರೆಸ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇದೀಗ, ರಾಜ್ಯ ವಿಧಾನಸಭೆ ಅಧಿವೇಶನ ಕರೆಯುವಂತೆ ಗೆಹ್ಲೋಟ್ ಅವರು ಕಳೆದ ಆರು ದಿನಗಳಲ್ಲಿ ಮೂರನೇ ಬಾರಿ ಸಲ್ಲಿಸಿದ ಪ್ರಸ್ತಾವನೆಯನ್ನೂ ರಾಜ್ಯಪಾಲರು ಬುಧವಾರ ತಿರಸ್ಕರಿಸಿದ್ದಾರೆ.
ಈ ಬೆಳವಣಿಗೆಯ ಮಧ್ಯೆ, ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯನ್ನು ರಾಜ್ಯದಲ್ಲಿನ ಕೋವಿಡ್-19 ಪರಿಸ್ಥಿತಿಯಿಂದಾಗಿ ‘ಮನೆಯಲ್ಲೇ ಆಚರಿಸುವ’ ಕಾರ್ಯಕ್ರಮವನ್ನೂ ರಾಜ್ಯಪಾಲ ಕಲರಾಜ್ ಮಿಶ್ರಾ ರದ್ದುಗೊಳಿಸಿದ್ದಾರೆ ಎಂದು ರಾಜಭವನ ಮೂಲಗಳು ತಿಳಿಸಿವೆ.
ಈ ಘೋಷಣೆಯ ಬೆನ್ನಿಗೇ ಸಿಎಂ ಅಶೋಕ್ ಗೆಹ್ಲೋಟ್ ಅವರು ಬುಧವಾರ ರಾಜಭವನಕ್ಕೆ ತೆರಳಿ ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿಯಾಗಿದ್ದರು. ತಕ್ಷಣವೇ ವಿಧಾನಸಭೆ ಅಧಿವೇಶನ ಕರೆಯಬೇಕೆಂದು ಆಗ್ರಹಿಸಿದರು. ಆದರೆ, ರಾಜ್ಯಪಾಲರು ಕೋವಿಡ್-19 ಪರಿಸ್ಥಿತಿಯ ಕಾರಣವೊಡ್ಡಿ ಮೂರನೇ ಬಾರಿಯೂ ಗೆಹ್ಲೋಟ್ ಮನವಿಯನ್ನು ಪುರಸ್ಕರಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ, ಕಾಂಗ್ರೆಸ್ ಸರ್ಕಾರವು ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನೇತೃತ್ವದ ಬಣವೊಂದು ಗೇಹ್ಲೋಟ್ ವಿರುದ್ಧ ಬಂಡಾಯವೆದ್ದಿದೆ. ಸಚಿನ್ ಪೈಲಟ್ ಮತ್ತು 18 ಬೆಂಬಲಿಗರು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಂಡಾಯವೆದಿದ್ದರು. ಪೈಲಟ್ ಅವರನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ಹಾಗೂ ರಾಜಸ್ಥಾನದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು.

Average Rating