ಮುಂಬಯಿ: ಅರ್ನಾಬ್ ಗೋಸ್ವಾಮಿ ಅವರ ರಿಪಬ್ಲಿಕ್ ಭಾರತ್‌ಗೆ ಯುಕೆಯ ಪ್ರಸಾರ ನಿಯಂತ್ರಣ ಇಲಾಖೆಯು 19.7 ಲಕ್ಷ ರೂ. ದಂಡ ವಿಧಿಸಿರುವುದರಿಂದ ಭಾರತದ ಕೆಲವು ಬುದ್ಧಿ ಜೀವಿಗಳು, ಎಡಪಂಥೀಯ ಮಾಧ್ಯಮಗಳು ದೊಡ್ಡ ಹೆಡ್‌ಲೈನ್‌ಗಳಲ್ಲಿ ಖುಷಿ ಪಟ್ಟು ಸಂಭ್ರಮವನ್ನೇ ಆಚರಿಸಿವೆ.
ಭಾರತದಲ್ಲೇ ಸಾಕಷ್ಟು ಸುಳ್ಳುಗಳನ್ನು ಹರಡುತ್ತಿರುವ, ಅಪಪ್ರಚಾರ ಮಾಡುತ್ತಿರುವ ಮಾಧ್ಯಮಗಳಿಗೆ ಈ ರೀತಿಯಾಗಿ ದಂಡ ವಿಧಿಸಿದರೆ, ಅದು ‘ಅಭಿಪ್ರಾಯ ಸ್ವಾತಂತ್ರ್ಯದ ಮೇಲೆ ಸವಾರಿ’ಯೂ, ‘ಮಾಧ್ಯಮ ಸ್ವಾತಂತ್ರ್ಯಕ್ಕೆ ಹೊಡೆತ’ವೂ, ‘ತುಘಲಕ್’ ಆಡಳಿತವಾಗಿಯೂ, ಕರಾಳ ಸಂಗತಿಯಾಗಿಯೂ ಕೆಲವರು ಬೊಬ್ಬೆ ಹೊಡೆಯುತ್ತಾರೆ.
ವಿಶೇಷವೇನೆಂದರೆ, ದೇಶದ ನಂಬರ್ 1 ಸುದ್ದಿ ಚಾನೆಲ್ ನೆಟ್ವರ್ಕ್- ರಿಪಬ್ಲಿಕ್ ಟಿವಿಯ ಹಿಂದಿ ಅವತರಣಿಕೆಗೆ ದಂಡ ವಿಧಿಸಿದ್ದಕ್ಕೆ ಖುಷಿಪಟ್ಟವರೆಲ್ಲರೂ, ತಮ್ಮದೇ ದೇಶದ ವಿರುದ್ಧದ ಬೆಳವಣಿಗೆಯೊಂದಕ್ಕೆ ಖುಷಿಪಟ್ಟಿದ್ದಾರೆ ಎಂಬುದು ಈಗ ಗೊತ್ತಾಗಿದೆ. ಮತ್ತು ದೇಶದಲ್ಲಿ ಹಲವಾರು ಭ್ರಷ್ಟಾಚಾರಗಳನ್ನು, ರಾಜಕೀಯ ಮುಖಂಡರ ಸುಳ್ಳುಗಳನ್ನು ಬಯಲಿಗೆಳೆದ ಅರ್ನಾಬ್ ಗೋಸ್ವಾಮಿಗೆ ತೊಂದರೆಯಾಗಿದೆ ಎಂಬ ಕಾರಣಕ್ಕಾಗಿಯಷ್ಟೇ ಅವರು ಸಂಭ್ರಮಿಸಿರುವುದು, ಇಂಥ ಗೋಸುಂಬೆಗಳನ್ನು ನಂಬುವ ಬಗೆಗಿನ ವಿಶ್ವಾಸಕ್ಕೆ ಕೊಡಲಿಯೇಟು ಕೊಟ್ಟಂತಾಗಿದೆ.
ಯುಕೆಯಲ್ಲಿ ರಿಪಬ್ಲಿಕ್ ಭಾರತ್ ಅನ್ನು ಪ್ರಸಾರ ಮಾಡುತ್ತಿರುವ ವರ್ಲ್ಡ್‌ವೈಡ್ ಮೀಡಿಯಾ ನೆಟ್ವರ್ಕ್ ಲಿಮಿಟೆಟ್‌ಗೆ ಬ್ರಿಟಿಷ್ ಪ್ರಸಾರ ನಿಯಂತ್ರಕ ‘ಆಫ್‌ಕಾಮ್’ ದಂಡ ವಿಧಿಸಿತ್ತು. ಅದು ನೀಡಿದ ಕಾರಣವೆಂದರೆ, ಹೇಟ್ ಸ್ಪೀಚ್ ಅಥವಾ ದ್ವೇಷ ಭಾಷಣ. ಆದರೆ ಅರ್ನಾಬ್ ನೇತೃತ್ವದ ರಾಷ್ಟ್ರವಾದಿ ಚಾನೆಲ್ ಪ್ರಸಾರ ಮಾಡಿದ್ದು, ಪಾಕಿಸ್ತಾನದ ಕುತಂತ್ರಗಳ ಕುರಿತಾಗಿ ಮಾಹಿತಿ ನೀಡುವ ಕಾರ್ಯಕ್ರಮವನ್ನು!
ಚಾನೆಲ್‌ನಲ್ಲಿ ನಡೆದ ಚರ್ಚೆಯೊಂದರಲ್ಲಿ ಕೇಳಿಬಂದ ಮಾತುಕತೆಗಳು ಪ್ರಸಾರದ ನಿಯಮಾವಳಿಗೆ ಬದ್ಧವಾಗಿಲ್ಲ ಎಂಬ ಕಾರಣಕ್ಕೆ ಬ್ರಿಟನ್‌ನ ಆಫೀಸ್ ಆಫ್ ಕಮ್ಯುನಿಕೇಶನ್ಸ್ (ಆಫ್-ಕಾಮ್), ರಿಪಬ್ಲಿಕ್ ಭಾರತ್‌ಗೆ 20 ಸಾವಿರ ಪೌಂಡ್ ದಂಡ ವಿಧಿಸಿತ್ತು.
‘ಪೂಛಾ ಹೈ ಭಾರತ್’ ಎಂಬ ಹಿಂದಿ ಶೋ 2019ರ ಸೆ.6ರಂದು ಮಧ್ಯಾಹ್ನ ಪ್ರಸಾರವಾಗಿತ್ತು. ಅದರಲ್ಲಿ ಪಾಕಿಸ್ತಾನದ ಜನರ ವಿರುದ್ಧ ದ್ವೇಷ ಕೆರಳಿಸುವ ಮಾತುಗಳಿದ್ದವೆಂಬ ಕಾರಣಕ್ಕೆ ಈ ದಂಡ ವಿಧಿಸಲಾಗಿದೆ.
ಪಾಕಿಸ್ತಾನಿ ಜನರ ರಾಷ್ಟ್ರೀಯತೆಯ ಆಧಾರದಲ್ಲಿ ಅವರ ವಿರುದ್ಧ ನಿಂದನಾತ್ಮಕ ಮತ್ತು ದ್ವೇಷ ಕೆರಳಿಸುವಂಥ ಮಾತುಗಳು ಈ ಚರ್ಚಾಗೋಷ್ಠಿಯಲ್ಲಿದ್ದವು. ಈ ಸಂಭಾವ್ಯ ಹಾನಿಕಾರಕ ಮತ್ತು ಆಕ್ರಮಣಕಾರಿ ಪ್ರವೃತ್ತಿಯ ಕಂಟೆಂಟ್ ಪ್ರಸಾರ ಮಾಡಬಾರದಿತ್ತು ಎಂಬುದು ಬ್ರಿಟಿಷ್ ಸರ್ಕಾರದ ಒಟ್ಟಾರೆ ಹೇಳಿಕೆಯ ಸಾರಾಂಶ.
ಆದರೆ, ಇದಕ್ಕೆ ರಿಪಬ್ಲಿಕ್ ಟಿವಿಯ ಕಾರ್ಯಕ್ರಮ ಪ್ರಸಾರ ಮಾಡಿರುವ ವರ್ಲ್ಡ್ ಮೀಡಿಯಾ ನೆಟ್ವರ್ಕ್ ಪ್ರತಿಕ್ರಿಯಿಸಿದ್ದು, ಅದು ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆಗಳನ್ನು ಬಯಲಿಗೆಳೆಯುವ ಮಾಹಿತಿ ಇದ್ದ ಕಾರ್ಯಕ್ರಮವಾಗಿತ್ತು ಎಂದು ಸಮರ್ಥಿಸಿಕೊಂಡಿದೆ.
ಇತ್ತೀಚಿನ ಘಟನೆಗಳು ಮತ್ತು ಪಾಕಿಸ್ತಾನದ ಪ್ರಮುಖ ನಾಯಕರ ಹೇಳಿಕೆಗಳನ್ನು ಆಧರಿಸಿ, ಭಯೋತ್ಪಾದನಾ ಚಟುವಟಿಕೆಗಳಲ್ಲಿ ಪಾಕಿಸ್ತಾನದ ಕೈವಾಡವನ್ನು ತೋರಿಸಿದ ನ್ಯಾಯಬದ್ಧ ಸ್ಟೋರಿ ಅದಾಗಿತ್ತು. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವು ಮುನ್ನಡೆದ ಹಂತದಲ್ಲಿ ಪಾಕಿಸ್ತಾನವು ಹೇಗೆ ವೈಫಲ್ಯ ಅನುಭವಿಸಿತು ಎಂಬುದರ ಮೇಲೆ ಬೆಳಕು ಚೆಲ್ಲಲಾಗಿತ್ತು ಮತ್ತು ಪಾಕಿಸ್ತಾನದಲ್ಲಿ ಉಗ್ರಗಾಮಿ ಸಂಘಟನೆಗಳ ಕಾರ್ಯಾಚರಣೆಗೆ ಹೇಗೆ ಅವಕಾಶ ಮಾಡಿಕೊಡಲಾಯಿತು ಎಂಬುದನ್ನೂ ತಿಳಿಸಲಾಗಿತ್ತು ಎಂದು ವರ್ಲ್ಡ್‌ವೈಡ್ ಮೀಡಿಯಾ ಹೇಳಿದೆ.
ಕಾರ್ಯಕ್ರಮದಲ್ಲಿ ಬಳಸಿದ ‘ಪಾಕಿ’ ಎಂಬ ಶಬ್ದವು ಯಾರನ್ನೂ ಅವಮಾನಿಸುವುದಕ್ಕಾಗಿ ಅಲ್ಲ. ಅದು ಪಾಕಿಸ್ತಾನದ ವ್ಯಕ್ತಿಗಳನ್ನು ಸಾಮಾನ್ಯವಾಗಿ ಕರೆಯುವ ಒಂದು ಪದವಷ್ಟೇ ಎಂದೂ ಸ್ಪಷ್ಟಪಡಿಸಲಾಗಿದೆ.
ಇದೀಗ, ಪಾಕಿಸ್ತಾನದ ಭಯೋತ್ಪಾದಕ ತಂತ್ರಗಳ ವಿರುದ್ಧ ಕಾರ್ಯಕ್ರಮ ಪ್ರಸಾರ ಮಾಡಿದ್ದಕ್ಕೆ ದಂಡ ವಿಧಿಸಿದ್ದನ್ನು ಭಾರತೀಯರು ಸಂಭ್ರಮಿಸಿದ್ದೇಕೆ ಎಂಬ ಪ್ರಶ್ನೆ ಎದ್ದಿದೆ. ಯಾರ ದೇಶ ಭಕ್ತಿ ಎಷ್ಟರ ಮಟ್ಟಿಗಿದೆ ಎಂಬುದೂ ಬಯಲಾಗಿದೆ.

Average Rating