ಕೇರಳದ ಸಾಮಾಜಿಕ ಕಾರ್ಯಕರ್ತ, ಲೇಖಕ ಚಂದ್ರನ್ ಎಂಬವರಿಗೆ ಜಾಮೀನು ನೀಡುವಾಗ ಕೇರಳದ ಸೆಶನ್ಸ್ ನ್ಯಾಯಾಲಯವು ನೀಡಿರುವ ತೀರ್ಪಿನ ಅಂಶವೊಂದು ಹಲವರ ಹುಬ್ಬೇರಿಸಿದೆ. ಲೈಂಗಿಕ ಕಿರುಕುಳದ ಆರೋಪಿ ಸಿವಿಕ್ ಚಂದ್ರನ್ ಅವರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸುವಾಗ, ಜೊತೆಗೆ ಒಂದಷ್ಟು ಫೋಟೋಗಳನ್ನೂ ಸಲ್ಲಿಸಿದ್ದರು. ಜೊತೆಗೆ, “ಆಪಾದನೆ ಮಾಡಿರುವ ಮಹಿಳೆಯು ಲೈಂಗಿಕವಾಗಿ ಪ್ರಚೋದಕವಾದ ಉಡುಪುಗಳನ್ನು (sexually provocative dresses) ಧರಿಸಿದ್ದಾರೆ” ಎಂಬ ಅಂಶವನ್ನೂ ಸೇರಿಸಲಾಗಿತ್ತು.
ಹಾಗಿದ್ದರೆ ಲೈಂಗಿಕ ಪ್ರಚೋದಕ ಉಡುಪಿನಿಂದ ಕಾಮ ಪ್ರಚೋದನೆಯಾಗುತ್ತದೆಯೇ ಎಂಬ ಚರ್ಚೆಯೀಗ ಮತ್ತೆ ಮುನ್ನೆಲೆಗೆ ಬಂದಿದೆ. ಆರೋಪಿಯು ಬಲವಂತವಾಗಿ ತನ್ನ ತೊಡೆಯಲ್ಲಿ ಮಹಿಳೆಯನ್ನು ಕುಳ್ಳಿರಿಸಿ ಸ್ತನಭಾಗವನ್ನು ಮುಟ್ಟಿದರು ಎಂಬ ಆರೋಪ ಎದುರಿಸುತ್ತಿದ್ದರು. ಅವರಿಗೆ ಜಾಮೀನು ನೀಡಿದ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಆಪಾದನೆ ಮಾಡಿದ ಮಹಿಳೆಗೆ ಒಂದು ಪ್ರಶ್ನೆಯನ್ನು ಮುಂದಿಟ್ಟಿತ್ತು. “ಲೈಂಗಿಕ ಕಿರುಕುಳದ ಪರಿಣಾಮಗಳ ಕುರಿತಾಗಿ ಪೂರ್ಣವಾಗಿ ಅರಿವು ಇರುವ ಸುಶಿಕ್ಷಿತ ಮಹಿಳೆಯು ದೂರು ನೀಡಲು ಎರಡು ವರ್ಷಕ್ಕೂ ಹೆಚ್ಚು ಕಾಲ ವಿಳಂಬ ಮಾಡಿದ್ದೇಕೆ?” ಎಂಬುದು ಈ ಪ್ರಶ್ನೆ. ಈ ಘಟನೆ ನಡೆದಿದ್ದು 2020ರ ಫೆಬ್ರವರಿ 8ರಂದು, ಈ ಕುರಿತು ಎಫ್ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಾಗಿದ್ದು 2022ರ ಜುಲೈ 29ರಂದು.
ಈ ಲೈಂಗಿಕ ಕಿರುಕುಳ ನಡೆದ ಸಂದರ್ಭದಲ್ಲಿ ಮಹಿಳೆ ಧರಿಸಿದ್ದ ಉಡುಪುಗಳ ಕುರಿತು ಉಲ್ಲೇಖಿಸುತ್ತಾ ನ್ಯಾಯಾಲಯವು, ಈ ಉಡುಪುಗಳು ಲೈಂಗಿಕತೆ ಪ್ರಚೋದಕವಾದ ರೀತಿಯಲ್ಲಿದ್ದುದರಿಂದ, ಚಂದ್ರನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಲಾಗದು ಎಂದಿತು.
ಭಾರತೀಯ ದಂಡ ಸಂಹಿತೆಯ 354 ಎ ವಿಧಿಯಡಿಯಲ್ಲಿ ಲೈಂಗಿಕ ಕಿರುಕುಳ ಕಾಯ್ದೆಯ ವಿಧಿಗಳನ್ನು ದಾಖಲಿಸುವ ನಿಟ್ಟಿನಲ್ಲಿ, “ದೈಹಿಕ ಸಂಪರ್ಕ ಅಥವಾ ಸ್ವಾಗತಾರ್ಹವಲ್ಲದ, ವಿಶೇಷ ಲೈಂಗಿಕ ಕ್ರಮಗಳು ಅಥವಾ ಲೈಂಗಿಕತೆಗೆ ಸಹಕರಿಸುವಂತಹಾ ಕೋರಿಕೆ, ಆಗ್ರಹಗಳು ಇಲ್ಲವೇ ಲೈಂಗಿಕ ಪ್ರಚೋದಕ ಹೇಳಿಕೆಗಳು” ಇರಬೇಕಾಗುತ್ತದೆ.
ಆದರೂ, ಮಹಿಳೆ ಮತ್ತು ಚಂದ್ರನ್ ಮಧ್ಯೆ ದೈಹಿಕ ಸಂಪರ್ಕವಾಗಿದೆ ಎಂಬುದನ್ನು ಒಪ್ಪಬಹುದಾದರೂ, 74 ವರ್ಷದಷ್ಟು ಹಿರಿಯರಾದ ಮತ್ತು ಆಪಾದನೆ ಮಾಡಿದಾಕೆಯನ್ನು ತನ್ನ ತೊಡೆಯ ಮೇಲೆ ಮಲಗಿಸಿ, ಎದೆ ಮುಟ್ಟಲು ಅಶಕ್ತರಾಗಿರುವ ವ್ಯಕ್ತಿಯೊಬ್ಬರು ಬಲವಂತವಾಗಿ ಹೀಗೆ ಮಾಡಿದರೆಂಬುದನ್ನು ನಂಬುವುದು ಕಷ್ಟವಾಗುತ್ತದೆ. ಇದಕ್ಕಾಗಿ ಈ ಪ್ರಕರಣವು ಜಾಮೀನು ನೀಡುವುದಕ್ಕೆ ಅರ್ಹವಾದ ಪ್ರಕರಣ ಎಂದಿದೆ.
ಈಗ ಉಡುಪುಗಳು ಕೂಡ ಲೈಂಗಿಕತೆ ಪ್ರಚೋದಿಸಬಲ್ಲವು ಎಂಬುದು ಮತ್ತೆ ಚರ್ಚೆಯಾಗುತ್ತಿದೆ.

Average Rating