ಚೆನ್ನೈ: ದಕ್ಷಿಣ ಭಾರತೀಯರ ಪ್ರೀತಿಯ, ಹೆಮ್ಮೆಯ ಹೆಸರಾಂತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಕೋವಿಡ್-19 ಸೋಂಕಿನಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೆ, ಕೋವಿಡ್ ನೆಗೆಟಿವ್ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿರುವುದನ್ನು ಬಾಲಸುಬ್ರಹ್ಮಣ್ಯಂ ಅವರ ಪುತ್ರ ಚರಣ್ ನಿರಾಕರಿಸಿದ್ದಾರೆ.
ಗಾಯಕ ಎಸ್ಪಿಬಿ ಇನ್ನೂ ಜೀವರಕ್ಷಣಾ ವ್ಯವಸ್ಥೆಯಲ್ಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್, ಅವರು ಕೋವಿಡ್ ಗೆದ್ದುಬಂದಿದ್ದಾರೆ ಎಂಬೆಲ್ಲ ವರದಿಗಳು “ಗಾಳಿಸುದ್ದಿ” ಎಂದು ಪುತ್ರ, ಚಿತ್ರ ನಿರ್ಮಾಪಕ ಎಸ್.ಪಿ.ಚರಣ್ ಹೇಳಿದ್ದಾರೆ.
ಬೆಳಿಗ್ಗೆ ಸ್ವತಃ ಎಸ್ಪಿ ಅವರ ಪ್ರಚಾರಾಧಿಕಾರಿ ಹೇಳಿಕೆ ನೀಡಿ, ಎಸ್ಪಿಬಿ ಅವರಿಗೆ ಕೋವಿಡ್ ನೆಗೆಟಿವ್ ಬಂದಿದೆ ಎಂದು ಸಂತಸದಿಂದ ಸುದ್ದಿ ಹಂಚಿಕೊಂಡಿದ್ದರು. ಕೋವಿಡ್ ನೆಗೆಟಿವ್ ಆಗರಲಿ, ಪಾಸಿಟಿವ್ ಆಗಿರಲಿ, ಪರಿಸ್ಥಿತಿ ಹಾಗೆಯೇ ಮುಂದುವರಿದಿದೆ. ಅವರು ಕ್ಲಿನಿಕಲೀ ಜೀವರಕ್ಷಕ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಚರಣ್ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
74ರ ಹರೆಯದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಆಗಸ್ಟ್ 5ರಂದು ಕೋವಿಡ್ ಸೋಂಕಿನಿಂದಾಗಿ ಚೆನ್ನೈಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಗಸ್ಟ್ 13ರಂದು ಅವರ ಆರೋಗ್ಯ ಬಿಗಡಾಯಿಸಿದ ಪರಿಣಾಮ ತುರ್ತು ಚಿಕಿತ್ಸಾ ಘಟಕಕ್ಕೆ ಸೇರಿಸಲಾಗಿತ್ತು. ಕೃತಕ ಉಸಿರಾಟ (ವೆಂಟಿಲೇಟರ್) ಹಾಗೂ ಎಕ್ಟ್ರಾಕಾರ್ಪೋರಿಯಲ್ ಮೆಂಬ್ರೇನ್ ಆಕ್ಸಿಜನೇಷನ್ ECMO (ಕೃತಕ ಆಮ್ಲಜನಕ ಪೂರೈಕೆ) ವ್ಯವಸ್ಥೆ ಮಾಡಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.
ಎಸ್ಪಿಬಿ ಅವರು 16 ಭಾಷೆಗಳಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ, ನಾಡಿನ ಜನ ಮನ ಗೆದ್ದಿದ್ದಾರೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy .

Average Rating