ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ, ಹಿಂದಿ ನಟ ಸುಶಾಂತ್ ಸಿಂಗ್ ರಾಜಪೂತ್ ಅವರ ನಿಗೂಢ ಸಾವಿನ ಸಿಬಿಐ ತನಿಖೆಗೆ ಬುಧವಾರ ಸುಪ್ರೀಂ ಕೋರ್ಟ್ ಸಮ್ಮತಿ ನೀಡಿ ತೀರ್ಪು ನೀಡಿದೆ.
ಜೂ.14ರಂದು ಸುಶಾಂತ್ ಸಿಂಗ್ ಅವರು ಮುಂಬಯಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಸಿಬಿಐ ತನಿಖೆಗೆ ವಿರೋಧಿಸಿದ್ದ ಮಹಾರಾಷ್ಟ್ರದ ಶಿವಸೇನೆ-ಕಾಂಗ್ರೆಸ್ ಸರ್ಕಾರಕ್ಕೆ ಇದರಿಂದ ಮುಖಭಂಗವಾಗಿದೆ. ಇದೀಗ ಇದು ನ್ಯಾಯಾಲಯದ ಆದೇಶದ ಸಿಬಿಐ ತನಿಖೆ ಆಗಿರುವುದರಿಂದ, ತನಿಖೆಗೆ ಸಹಕರಿಸುವಂತೆ ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಅವರ ಸುಪ್ರೀಂ ಕೋರ್ಟ್ ನ್ಯಾಯಪೀಠವು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಸುಶಾಂತ್ ಅವರ ತಂದೆ ಕೆ.ಕೆ.ಸಿಂಗ್ ಅವರು ಜು.25ರಂದು ನೀಡಿದ ದೂರಿನ ಆಧಾರದಲ್ಲಿ, ಬಿಹಾರದಲ್ಲಿ ಪಟನಾ ಪೊಲೀಸರು ದಾಖಲಿಸಿಕೊಂಡ ಎಫ್ಐಆರ್ ಕೂಡ ಮಾನ್ಯ ಎಂದು ನ್ಯಾಯಾಲಯವು ಹೇಳುವ ಮೂಲಕ, ಮಹಾರಾಷ್ಟ್ರ ಹಾಗೂ ಬಿಹಾರ ಪೊಲೀಸರ ನಡುವಿನ ತಿಕ್ಕಾಟಕ್ಕೂ ಇದು ಅಂತ್ಯ ಹಾಡಿದಂತಾಗಿದೆ.
ಮುಂಬಯಿ ಪೊಲೀಸರು ಎಫ್ಐಆರ್ ದಾಖಲಿಸಲೇ ಇಲ್ಲ, ಬದಲಾಗಿ, ಕೇವಲ ವಿಚಾರಣೆಯ ಹಂತದಲ್ಲಷ್ಟೇ ಸಮಯ ಕಳೆಯಿತು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಇದು ಮುಂಬಯಿಗೆ ಸಂಬಂಧಪಟ್ಟಿರುವುದರಿಂದ ಪಟನಾದಲ್ಲಿ ದಾಖಲಾದ ಕೇಸನ್ನೂ ಮಹಾರಾಷ್ಟ್ರಕ್ಕೆ ವರ್ಗಾಯಿಸಬೇಕು ಎಂದು ಸುಶಾಂತ್ ಅವರ ಲಿವ್-ಇನ್ ಸಹಯೋಗಿಯಾಗಿದ್ದ ನಟಿ ರಿಯಾ ಚಕ್ರವರ್ತಿ ಮನವಿ ಸಲ್ಲಿಸಿದ್ದರು. ರಿಯಾ ಅವರೇ ತನ್ನ ಪುತ್ರನ ಜೀವನದಲ್ಲಿ ಆಟವಾಡಿದ್ದಾರೆ ಮತ್ತು ಅವನ ಹಣವನ್ನು ಕಸಿದುಕೊಂಡಿದ್ದಾರೆ ಎಂದು ಸುಶಾಂತ್ ತಂದೆ ಆರೋಪಿಸಿದ್ದರು.
ಬಿಹಾರ ಪೊಲೀಸರ ಶಿಫಾರಸಿನ ಆಧಾರದಲ್ಲಿ ಸಿಬಿಐ ಈಗಾಗಲೇ ತನಿಖೆ ಆರಂಭಿಸಿತ್ತು. ಇದನ್ನು ಪ್ರಶ್ನಿಸಿ ರಿಯಾ ಕಡೆಯವರು ಸುಪ್ರೀಂ ಕೋರ್ಟ್ಗೆ ಹೋಗಿದ್ದರು.
ತನಿಖೆಗೆ ಮುಂಬಯಿಗೆ ಬಂದಿದ್ದ ಬಿಹಾರ ಪೊಲೀಸರನ್ನು ಕೋವಿಡ್ ನೆಪದಲ್ಲಿ ಮಹಾರಾಷ್ಟ್ರದಲ್ಲಿ ಕ್ವಾರಂಟೈನ್ಗೆ ಒಳಪಡಿಸಿ, ತನಿಖೆಗೆ ಲಗಾಮು ಹಾಕಲು ಮಹಾರಾಷ್ಟ್ರ ಸರ್ಕಾರ ಪ್ರಯತ್ನಿಸಿತ್ತೆಂಬ ಆರೋಪವೂ ಕೇಳಿಬಂದಿತ್ತು.
ಇಂಟರ್ನೆಟ್ನಲ್ಲಂತೂ ಸುಶಾಂತ್ ಸಿಂಗ್ ಕುಟುಂಬದ ಪರವಾಗಿ ಭಾರಿ ಬೆಂಬಲ ವ್ಯಕ್ತವಾಗಿದ್ದು, ಸುಪ್ರೀಂ ಕೋರ್ಟ್ ತೀರ್ಪಿಗೆ ಸಂಭ್ರಮಿಸಿದ್ದಾರೆ. ಸಿಬಿಐ ತನಿಖೆಗೆ ವಿರೋಧಿಸುವ ಸರ್ಕಾರದ ನಡೆಯಿಂದಾಗಿ, ಸುಶಾಂತ್ ಸಾವಿನ ಹಿಂದಿರುವ ರಾಜಕೀಯ ಬಯಲಿಗೆಳೆಯುವಂತೆ ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.

Average Rating