Read Time:6 Minute, 33 Second

US Election Results | ಅಮೆರಿಕದಲ್ಲಿ ತೂಗು ಸಂಸತ್ತು: ಬೈಡೆನ್‌ಗೆ ದಕ್ಕಿಲ್ಲ, ಟ್ರಂಪ್ ಬಿಡಲ್ಲ- ಏನಿದರ ಮಸಲತ್ತು?

0 0

ನವದೆಹಲಿ: ಅಮೆರಿಕದಲ್ಲಿ ಅಧ್ಯಕ್ಷ ಪದವಿಗಾಗಿನ ಕತ್ತು ಕತ್ತಿನ ಹೋರಾಟದಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಹಿನ್ನಡೆಯಾಗಿದ್ದು, ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್‌ಗೆ ಮ್ಯಾಜಿಕ್ ಸಂಖ್ಯೆ 270 ತಲುಪಿ, ದೇಶದ 46ನೇ ಅಧ್ಯಕ್ಷರಾಗಲು ಆರು ಎಲೆಕ್ಟೋರಲ್ ಮತಗಳಷ್ಟೇ ಬೇಕಿದೆ.

ಆದರೆ 214 ಎಲೆಕ್ಟೋರಲ್ ಮತಗಳನ್ನು ಗಳಿಸಿರುವ ಹಾಲಿ ಅಧ್ಯಕ್ಷ ಟ್ರಂಪ್ ಅವರು ಬುಧವಾರವೇ ತಮ್ಮ ಗೆಲುವನ್ನು ಘೋಷಿಸಿದ್ದರಲ್ಲದೆ, ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ. ಅವರು ಪೆನ್ಸಿಲ್ವೇನಿಯಾ, ನಾರ್ತ್ ಕರೊಲಿನಾ ಮತ್ತು ಜಾರ್ಜಿಯಾ ರಾಜ್ಯಗಳಲ್ಲಿ ಮುನ್ನಡೆಯಲ್ಲಿದ್ದಾರೆ.

264 ಎಲೆಕ್ಟೋರಲ್ ಮತಗಳನ್ನು ಗಳಿಸಿ ಗೆಲುವಿನ ಸನಿಹದಲ್ಲಿರುವ ಜೋ ಬೈಡನ್, ಶ್ವೇತ ಭವನದಲ್ಲಿ ಅಧಿಕಾರ ಸ್ಥಾಪಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಕೆಲವು ರಾಜ್ಯಗಳಲ್ಲಿನ ಮತ ಎಣಿಕೆಯನ್ನು ಟ್ರಂಪ್ ಅವರು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲು ಮುಂದಾಗಿದ್ದಾರೆ.

ಪ್ರಸ್ತುತ ಪೆನ್ಸಿಲ್ವೇನಿಯಾ, ನೇವಡಾ ಮುಂತಾದ ರಾಜ್ಯಗಳಲ್ಲಿನ ಮತ ಎಣಿಕೆ ಬಾಕಿಯಿದ್ದು, ಗೆಲುವಿನ ಗಾಳಿ ಯಾರ ಪರವಾಗಿಯಾದರೂ ಬೀಸಬಹುದಾಗಿದೆ. ಬೈಡನ್ ಅವರು ನೇವಡಾ (ಆರು ಎಲೆಕ್ಟೋರಲ್ ಮತಗಳು) ಗೆದ್ದರೆ, ಅವರು 270 ಮ್ಯಾಜಿಕ್ ನಂಬರ್ ತಲುಪಿ, ವಿಜೇತರಾಗುತ್ತಾರೆ.

ಆದರೆ, ಪೆನ್ಸಿಲ್ವೇನಿಯಾ, ನಾರ್ತ್ ಕರೊಲಿನಾ, ಜಾರ್ಜಿಯಾ ಮತ್ತು ಅಲಸ್ಕಾಗಳಲ್ಲಿ ಟ್ರಂಪ್ ಮತ್ತು ಬೈಡನ್ ಅವರು ನಿಕಟ ಸ್ಫರ್ಧೆಯಲ್ಲಿದ್ದಾರೆ ಎಂಬುದನ್ನು ಇತ್ತೀಚಿನ ಟ್ರೆಂಡ್‌ಗಳು ತೋರಿಸಿವೆ. ಟ್ರಂಪ್ ಅವರು ಇಲ್ಲಿ ಗೆದ್ದರೆ, ಎರಡು ಎಲೆಕ್ಟೋರಲ್ ಮತಗಳ ಕೊರತೆಯಾಗುತ್ತದೆ.

ಈ ಹಿನ್ನೆಲೆಯಲ್ಲಿ ಟ್ರಂಪ್ ಸುಪ್ರೀಂ ಮೊರೆ ಹೋಗುವುದಾಗಿ ಘೋಷಿಸಿದ್ದು, ಮತಗಳ ಎಣಿಕೆ ಮತ್ತಷ್ಟು ದಿನಗಳು ಅಥವಾ ತಿಂಗಳ ಕಾಲ ವಿಳಂಬವಾಗುವ ಸಾಧ್ಯತೆಯೂ ಇದೆ.

ಇದಕ್ಕೆಲ್ಲ ಕಾರಣವೆಂದರೆ, ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂಬುದು ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಆರೋಪ.

ಕೊರೊನಾ ವೈರಸ್ ಹಾವಳಿಯಿಂದಾಗಿ ರಾಜ್ಯಗಳಲ್ಲಿ ಅಂಚೆ-ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಅಂಚೆ ಮತ ಸ್ವೀಕಾರದ ದಿನಾಂಕವನ್ನು ವಿಸ್ತರಿಸಲಾಗಿತ್ತು. ಇದಕ್ಕೆ ಕಾರಣ, ಅಮೆರಿಕ ಅಂಚೆ ಸೇವೆಯಲ್ಲಾದ ದಿಢೀರ್ ಚಟುವಟಿಕೆ. ಅಂಚೆ ರವಾನೆ ವಿಳಂಬವಾದುದರಿಂದ ಮತ ಎಣಿಕೆಗೆ ಹೆಚ್ಚು ಸಮಯಾವಕಾಶ ಕೇಳಲಾಗಿದೆ. ಈ ಪ್ರಕ್ರಿಯೆ ಸುಲಭವಾಗಿಸಲು ನಿಯಮಗಳನ್ನೂ ಬದಲಾಯಿಸಲಾಗಿದೆ.

ಆದರೆ, ಕೆಲವು ಬದಲಾವಣೆಗಳನ್ನು ಅಸಮರ್ಪಕವಾಗಿ ಮಾಡಿ ನಿರ್ಧರಿಸಿದ್ದು, ಅದು ಡೆಮಾಕ್ರಟ್ ಪಕ್ಷದ ಪರವಾಗಿದೆ ಎಂಬುದು ಟ್ರಂಪ್ ಪಕ್ಷದ ಆರೋಪ.

ಅಂತಿಮ ಫಲಿತಾಂಶಕ್ಕೆ ಎಷ್ಟು ಕಾಲ ಬೇಕಾಗಬಹುದು?
ಲಕ್ಷಾಂತರ ಅಂಚೆ ಮತಗಳನ್ನು ಇನ್ನೂ ಎಣಿಕೆ ಮಾಡಬೇಕಾಗಿರುವುದರಿಂದ, ಮತ ಎಣಿಕೆ ಪ್ರಕ್ರಿಯೆಯು ಎರಡನೇ ದಿನಕ್ಕೆ ಹೋಗಿತ್ತು ಮತ್ತು ಪೂರ್ಣಗೊಳಿಸಲು ಹಲವು ದಿನಗಳೇ ಬೇಕು, ಅಥವಾ ತಿಂಗಳುಗಳೇ ತಗುಲಬಹುದು ಎನ್ನಲಾಗುತ್ತಿದೆ. ಒಂದು ಕಾರಣ, ಟ್ರಂಪ್ ಅವರು ಕೋರ್ಟಿಗೆ ಹೋಗುತ್ತೇನೆ ಎಂದಿದ್ದಾರೆ.

ಇದರೊಂದಿಗೆ, ಅಮೆರಿಕದ ಹೊಸ ಅಧ್ಯಕ್ಷ ಯಾರೆಂಬ ತೀರ್ಮಾನವೂ ವಿಳಂಬವಾಗುತ್ತಿದೆ. 9 ರಾಜ್ಯಗಳಲ್ಲಿ ಮತ ಎಣಿಕೆ ಮುಂದುವರಿದಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಅಲಸ್ಕಾದಲ್ಲಿ ಶೇ.56 ಮತಗಳ ಎಣಿಕೆಯಾಗಿದ್ದರೆ ಅರಿಜೋನದಲ್ಲಿ ಶೇ.86, ಜಾರ್ಜಿಯಾದಲ್ಲಿ ಶೇ.95 ಮತ ಎಣಿಕೆಯಾಗಿವೆ. ಮೈನೆ, ವಿಸ್ಕಾನ್ಸಿನ್, ಉತ್ತರ ಕರೊಲಿನಾ, ಪೆನ್ಸಿಲ್ವೇನಿಯಾ, ನೇವಡಾ ಮತ್ತು ಮಿಷಿಗನ್ ರಾಜ್ಯಗಳಲ್ಲಿಯೂ ಎಣಿಕೆ ಪೂರ್ಣಗೊಂಡಿಲ್ಲ.

ಅಂಚೆ ಮತದಾನವು ವಂಚನೆಗೆ ಕಾರಣವಾಗುತ್ತಿದೆ ಎಂದು ಹೇಳಿರುವ ಟ್ರಂಪ್, ಜೋ ಬೈಡನ್ ಎದುರು ಸೋತಲ್ಲಿ ಅಧಿಕಾರವನ್ನು ಸುಲಭವಾಗಿ ಹಸ್ತಾಂತರಿಸುವುದಿಲ್ಲ ಎಂದೂ ಹೇಳಿದ್ದಾರೆ. ಇದು ಕಾನೂನಾತ್ಮಕ ಹೋರಾಟ ಮತ್ತು ರಾಜಕೀಯ ನಾಟಕಗಳಿಗೆ ಕಾರಣವಾಗಬಹುದಾಗಿದೆ.

ಇದು ಅಮೆರಿಕ ಇತಿಹಾಸದಲ್ಲೇ ಅತ್ಯಂತ ನಿಕಟ ಸ್ಫರ್ಧೆಯಾಗಿದೆ. ಈಗಿನ ಟ್ರೆಂಡ್ ಗಮನಿಸಿದರೆ, ಟ್ರಂಪ್‌ಗೆ 268 ಎಲೆಕ್ಟೋರಲ್ ಮತಗಳು ದೊರೆಯುವ ಸಾಧ್ಯತೆಗಳಿದ್ದು, ಪ್ರತಿಸ್ಫರ್ಧಿ ಬೈಡನ್ ವಿರುದ್ಧ ಗೆಲ್ಲಲು 2 ಮತಗಳು ಬೇಕಿವೆ. ಮುನ್ನಡೆಯಲ್ಲಿರುವ ನೇವಡಾದಲ್ಲಿ ಬೈಡನ್ ಗೆದ್ದರೆ, ಅವರೇ ಬಹುಮತ ಪಡೆಯುತ್ತಾರೆ.

ಇದುವರೆಗೆ ಘೋಷಣೆಯಾದ ಫಲಿತಾಂಶ ನೋಡಿದರೆ, ಅಮೆರಿಕ ಇತಿಹಾಸದಲ್ಲೇ ರಾಷ್ಟ್ರಪತಿ ಅಭ್ಯರ್ಥಿಯೊಬ್ಬ ಪಡೆದ ಗರಿಷ್ಠ ಮತಗಳ ದಾಖಲೆ ಬೈಡೆನ್ ಅವರದು. ಅವರಿಗೆ 7,20,48,770 ಮತಗಳು ದಕ್ಕಿದ್ದು, 2008ರಲ್ಲಿ ಬರಾಕ್ ಒಬಾಮ (6,68,62,039) ಮಾಡಿದ್ದ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಟ್ರಂಪ್ ಅವರೂ ಒಬಾಮ ದಾಖಲೆಯನ್ನು ಮುರಿದು, 6,85,86,149 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಸಮೀಕ್ಷೆಗಳು ಪುನಃ ಸುಳ್ಳಾದವು
2016ರಲ್ಲಿ ಟ್ರಂಪ್ ಬರೋದಿಲ್ಲ ಅಂತ ಸಮೀಕ್ಷೆಗಳು ಹೇಳಿದ್ದೆಲ್ಲವೂ ಸುಳ್ಳಾಯಿತೋ, ಅದೇ ಅವಸ್ಥೆ ಈ ಬಾರಿಯೂ ಆಗಿದೆ. ಬೈಡನ್ ಅವರಿಗೆ ಕೆಲವೆಡೆ ಹಿನ್ನಡೆಯಾಗಿದ್ದರೆ, ಟ್ರಂಪ್‌ಗೆ ಹಿನ್ನಡೆಯಾಗುತ್ತದೆ ಎಂದಿದ್ದೆಲ್ಲ ಸುಳ್ಳಾಗಿದೆ.

435 ಸದಸ್ಯ ಬಲದ ಅಮೆರಿಕ ಸಂಸತ್ತಿನಲ್ಲಿ, ಬಹುಮತಕ್ಕೆ ಬೇಕಿರುವುದು 218 ಸ್ಥಾನ. ಈಗಿನ ಟ್ರೆಂಡ್ ಪ್ರಕಾರ ಡೆಮಾಕ್ರಟ್‌ಗಳು 204 ಸ್ಥಾನ ಹಾಗೂ ರಿಪಬ್ಲಿಕ್ ಪಕ್ಷದವರು 190 ಸ್ಥಾನಗಳನ್ನೂ ಹೊಂದಿದ್ದಾರೆ.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy
Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post Arnab Goswami Arrest | ಪಾಲ್ಗರ್ ಸನ್ಯಾಸಿಗಳ ಹತ್ಯೆ: ಕಾಂಗ್ರೆಸ್‌ನ ಮೌನ ಪ್ರಶ್ನಿಸಿದ್ದೇ ಕಾರಣವೇ? ಇಲ್ಲಿದೆ ಪೂರ್ತಿ ಡೀಟೇಲ್ಸ್
Next post WhatsApp Payment | ಡಿಜಿಟಲ್ ಪರ್ಸ್ ಕ್ಷೇತ್ರದಲ್ಲಿ ಸಂಚಲನ: ವಾಟ್ಸ್ಆ್ಯಪ್ ಮೂಲಕ ಹಣ ಕಳುಹಿಸಬಹುದು!

ಸುದ್ದಿ ಸಂಚಯ

ಇವುಗಳನ್ನೂ ನೋಡಿ