ಲಖನೌ: ತಮ್ಮ ನಿಜವಾದ ಧರ್ಮವನ್ನು ಬಚ್ಚಿಟ್ಟು, ಬೇರೆ ಧರ್ಮದ ಹುಡುಗಿಯರು, ಮಹಿಳೆಯರೊಂದಿಗೆ ಸಂಬಂಧ ಬೆಳೆಸಿಕೊಳ್ಳುವ ಪ್ರಯತ್ನ ನಡೆಸುತ್ತಿರುವ ದುಷ್ಕರ್ಮಿಗಳಿಗೆ ಕಟುವಾದ ಎಚ್ಚರಿಕೆ ನೀಡಿದ್ದಾರೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್.
ಮದುವೆಗೆ ಧಾರ್ಮಿಕ ಮತಾಂತರ ಆಗಲೇಬೇಕಿಲ್ಲ ಎಂದು ಅಲಹಾಬಾದ್ ಹೈಕೋರ್ಟೇ ತೀರ್ಪು ನೀಡಿದೆ. ಬೇರೆ ಧರ್ಮದ ಹೆಣ್ಣು ಮಕ್ಕಳನ್ನು ತಮ್ಮ ಧರ್ಮಕ್ಕೆ ಸೆಳೆಯಲು ನಡೆಸಲಾಗುತ್ತಿರುವ ಪ್ರೀತಿಯ ನಾಟಕಕ್ಕೆ ಕಡಿವಾಣ ಹಾಕಬೇಕಿದೆ. ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ತರುತ್ತೇವೆ ಎಂದಿದ್ದಾರೆ ಯೋಗಿ ಆದಿತ್ಯನಾಥ್.
“ತಮ್ಮ ನಿಜ ರೂಪ ಬಚ್ಚಿಟ್ಟು ನಮ್ಮ ಸಹೋದರಿಯರ ಗೌರವದೊಂದಿಗೆ ಆಟವಾಡುವವರಿಗೆ ನಾನು ಕಟುವಾದ ಎಚ್ಚರಿಕೆ ನೀಡಲು ಬಯಸಿದ್ದೇನೆ. ಇನ್ನಾದರೂ ಇಂಥ ಪ್ರಯತ್ನ ನಿಲ್ಲಿಸದಿದ್ದರೆ ‘ರಾಮ್ ನಾಮ್ ಸತ್ಯ ಹೈ’ ಪ್ರಯಾಣ ಆರಂಭಿಸಲು ಸಿದ್ಧರಾಗಿ” ಎಂದು ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ ಜಾನ್ಪುರದಲ್ಲಿ ನಡೆದ ಸಭೆಯೊಂದರಲ್ಲಿ ಎಚ್ಚರಿಸಿದ್ದಾರೆ.
ಕೇವಲ ಮದುವೆಯಾಗುವುದಕ್ಕಾಗಿ ಧಾರ್ಮಿಕ ಮತಾಂತರವಾಗುವುದನ್ನು ಅಸಿಂಧು ಎಂದು ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿತ್ತು. ಮಹಿಳೆಯೊಬ್ಬಳು ಮದುವೆಗೆ ಒಂದು ತಿಂಗಳು ಮೊದಲು ತನ್ನ ಧರ್ಮ ಬದಲಿಸಿದ್ದು, ಹೊಸ ಧರ್ಮದ ಪ್ರಕಾರವೇ ಮದುವೆಯಾಗಿದ್ದಳು. ಅ.30ರ ಶುಕ್ರವಾರ ಈ ಕುರಿತು ನ್ಯಾಯಾಲಯವು ತೀರ್ಪು ನೀಡಿದ್ದು, ಮದುವೆಗಾಗಿಯೇ ಮತಾಂತರವಾಗುವುದು ಸಿಂಧು ಅಲ್ಲ ಎಂದು ಹೇಳಿತ್ತು.
ಇದಕ್ಕೆ ಪ್ರಧಾನ ಕಾರಣ, ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಮುಸ್ಲಿಂ ಯುವಕರು ತಮ್ಮ ಧಾರ್ಮಿಕತೆಯನ್ನು ಬಚ್ಚಿಟ್ಟು, ತಮ್ಮನ್ನು ಮುಸ್ಲಿಮೇತರರು ಅಂತ ಬಿಂಬಿಸುತ್ತಾ, ಮುಸ್ಲಿಮೇತರ ಹುಡುಗಿಯರು, ಮಹಿಳೆಯರನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿಕೊಳ್ಳುತ್ತಿದ್ದರು. ಕೊನೆಗೆ ಅವರನ್ನು ಮದುವೆಯಾಗುವಂತೆ ಒಪ್ಪಿಸುತ್ತಿದ್ದರು.
ಹೆಚ್ಚಿನ ಸಂದರ್ಭಗಳಲ್ಲಿ ಈ ಮಹಿಳೆಗೆ ಸತ್ಯ ತಿಳಿದಾಗ, ಒಂದೋ ಆಕೆಯನ್ನು ಹಿಂಸಿಸಲಾಗುತ್ತಿತ್ತು ಅಥವಾ ಕೊಲೆ ಮಾಡಲಾಗುತ್ತಿತ್ತು. ಇನ್ನು ಕೆಲವು ಸಂದರ್ಭಗಳಲ್ಲಿ, ಈ ಮುಗ್ಧ ಸ್ತ್ರೀಯರ ಮಾನಸಿಕ ಸ್ಥಿತಿಯೊಂದಿಗೆ ಚೆಲ್ಲಾಟವಾಡುವ ಈ ಹುಡುಗರು, ತನ್ನನ್ನು ಮದುವೆಯಾಗಬೇಕಿದ್ದರೆ ಮತಾಂತರ ಆಗಬೇಕೆಂದು ಷರತ್ತು ಒಡ್ಡಲಾಗುತ್ತಿತ್ತು, ಇಲ್ಲವಾದಲ್ಲಿ ಹಿಂಸೆ ನೀಡಲಾಗುತ್ತಿತ್ತು.
ಈ ಕಾರಣಕ್ಕಾಗಿಯೇ ಯೋಗಿ ಅವರು ಕಠಿಣ ಕಾನೂನಿನ ಮಾತು ಆಡಿದ್ದಾರೆ. ರಾಜ್ಯಾದ್ಯಂತ ಕಳೆದ ತಿಂಗಳು ಸುಮಾರು 20ರಷ್ಟು ಲವ್ ಜಿಹಾದ್ ಪ್ರಕರಣಗಳು ವರದಿಯಾದ ಸಂದರ್ಭದಲ್ಲೇ ಯೋಗಿ ಅವರು ಬಲವಂತದ ಧಾರ್ಮಿಕ ಮತಾಂತರದ ವಿರುದ್ಧ ಸುಗ್ರೀವಾಜ್ಞೆಯೊಂದನ್ನು ಜಾರಿಗೊಳಿಸುವ ಬಗ್ಗೆ ಚಿಂತಿಸುತ್ತಿದ್ದರು ಎಂಬ ಬಗ್ಗೆ ಊಹಾಪೋಹಗಳು ಕೇಳಿಬಂದಿದ್ದವು.
ಬಲವಂತವಾಗಿ, ಆಮಿಷಗಳನ್ನೊಡ್ಡಿ ಅಥವಾ ವಂಚನೆಯ ಮೂಲಕ ಧಾರ್ಮಿಕ ಮತಾಂತರಗಳು ನಡೆಯುತ್ತಿದ್ದು, ಇದನ್ನು ತಡೆಯುವುದಕ್ಕಾಗಿ ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.
14ರ ಹರೆಯದ ಹಿಂದೂ ಬಾಲಕಿಯನ್ನು ತಾನು ಕೂಡ ಹಿಂದೂ ಅಂತ ಹೇಳಿಕೊಂಡಿದ್ದ ಮುಸ್ಲಿಂ ಯುವಕನೊಬ್ಬ ಪ್ರೀತಿಯ ಬಲೆಯಲ್ಲಿ ಹಾಕಿಕೊಂಡಿದ್ದ ಪ್ರಕರಣವು ಕಾನ್ಪುರದ ಗೋಪಾಲ ನಗರದಿಂದ ವರದಿಯಾಗಿತ್ತು. ರಾಜ್ಯ ಬಜರಂಗ ದಳ ಕಾರ್ಯದರ್ಶಿ ರಾಮ್ಜಿ ತಿವಾರಿ ನೆರವಿನಿಂದ ಈ ಕುರಿತು ಹುಡುಗಿಯ ಕುಟುಂಬವು ಪೊಲೀಸರಿಗೆ ಕಳೆದ ಸೋಮವಾರ ದೂರು ನೀಡಿತ್ತು. ಆರ್ಯನ್ ಮೆಹ್ರೋತ್ರಾ ಹೆಸರು ಇಟ್ಟುಕೊಂಡಿದ್ದ ಫತೇ ಖಾನ್ ಎಂಬಾತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ದೂರು ನೀಡಿದ್ದರು.
ಕಾನ್ಪುರ ಪೊಲೀಸರು ಸೆಪ್ಟೆಂಬರ್ ತಿಂಗಳಲ್ಲಿ ಈ ರೀತಿಯ ಲವ್ ಜಿಹಾದ್ ಪ್ರಕರಣಗಳನ್ನು ಭೇದಿಸಲೆಂದೇ ವಿಶೇಷ ತನಿಖಾ ತಂಡವೊಂದನ್ನು (ಎಸ್ಐಟಿ) ರಚಿಸಿದ್ದು, ಒಂದೇ ತಿಂಗಳಲ್ಲಿ 11 ಪ್ರಕರಣಗಳು ಕಾನ್ಪುರ ಜಿಲ್ಲೆಯೊಂದರಿಂದಲೇ ವರದಿಯಾಗಿರುವುದು ಆತಂಕಕ್ಕೆ ಕಾರಣವಾಗಿತ್ತು.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

Average Rating