ಕೋಲ್ಕತಾ: ಭಾರತ ವಿರೋಧಿಗಳಿಗೆ ತಮ್ಮನ್ನು ಮಾರಿಕೊಂಡ ಮಾಧ್ಯಮಗಳು ಈ ವಿಷಯದ ಬಗ್ಗೆ ನಿಮಗೆ ಮಾಹಿತಿ ನೀಡುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ಹಿಂಸಾ ರಾಜಕೀಯದಿಂದಲೇ ಅಧಿಕಾರ ಚಲಾಯಿಸುತ್ತಿದ್ದ ಎಡಪಕ್ಷಗಳನ್ನು ಸೋಲಿಸಿ, ಅದೇ ರಾಜಕೀಯ ಮುಂದುವರಿಸುತ್ತಿರುವ ಮಮತಾ ಬ್ಯಾನರ್ಜಿ ಎಂಬ ಮಹಿಳೆಯ ವಿರುದ್ಧ ಸೆಟೆದು ನಿಂತ ಬಿಜೆಪಿ, ಕೇವಲ 3 ಸ್ಥಾನದಿಂದ 76 ಸ್ಥಾನಕ್ಕೆ ಏರಿದ್ದು ದೊಡ್ಡ ಸುದ್ದಿಯಾಗಲಿಲ್ಲ.
ಅಲ್ಲೂ ಕೂಡ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅಭಿನಂದಿಸುವಾಗ ಹೇಳಿದ್ದು, ಬಿಜೆಪಿಯನ್ನು ಸೋಲಿಸಿದ ಮಮತಾಗೆ ಅಭಿನಂದನೆ ಎಂದೇ! ಹಿಂಸಾಚಾರದ ನಾಡು ಬಂಗಾಳದಲ್ಲಿ ಬಿಜೆಪಿ ಅಷ್ಟು ಸ್ಥಾನ ಗೆದ್ದರೂ ಸೋತಿದೆ ಎಂದೇ ಬಿಂಬಿಸುವ ಭಾರತ ವಿರೋಧಿಗಳ ಸಾಲಿಗೆ ಈ ನಾಯಕನ ನುಡಿಯೂ ಅಮೃತ ಸಿಕ್ಕಿದಂತಾಗಿ, ಇದ್ದ ಯೋಚನಾ ಶಕ್ತಿಯನ್ನೆಲ್ಲಾ ಕಳೆದುಕೊಂಡು, ಬಿಜೆಪಿ ಸೋತಿದೆ ಎಂದೇ ಬಿಂಬಿಸಲಾಗುತ್ತಿದೆ.
ಅದಿರಲಿ, ಬಂಗಾಳದಲ್ಲಿ ನಿಜವಾಗಿ ಸೋತಿದ್ದು ಕಾಂಗ್ರೆಸ್ ಮತ್ತು ಎಡಪಕ್ಷಗಳು. ಅವುಗಳು ನಿರ್ನಾಮವಾಗಿ ಹೋಗಿವೆ. ಪಶ್ಚಿಮ ಬಂಗಾಳವೀಗ ಕಾಂಗ್ರೆಸ್-ಮುಕ್ತ ರಾಜ್ಯವಾಗಿಬಿಟ್ಟಿದೆ. ಅಷ್ಟೇ ಅಲ್ಲ, ಲಾಗಾಯ್ತಿನಿಂದಲೂ ಹಿಂಸಾಚಾರ, ನಕ್ಸಲ್ವಾದ, ಚೀನಾ ಓಲೈಕೆ ಮುಂತಾದ ರಾಜಕೀಯದಿಂದಲೇ ರಾಜ್ಯವನ್ನು ಆಳಿದ್ದ ಸಿಪಿಎಂ ಎಂಬ ಪಕ್ಷಕ್ಕೂ ಅಲ್ಲಿ ನೆಲೆಯಿಲ್ಲದಂತಾಗಿದೆ.
ಹೀಗಿರುವಾಗ, ತನ್ನ ಹಿಂದಿನ ಆಡಳಿತವು (ಎಡಪಕ್ಷಗಳು) ಹಾಕಿಕೊಟ್ಟ ಹಾದಿಯಲ್ಲೇ ಸಾಗಿದ ತೃಣಮೂಲ ಕಾಂಗ್ರೆಸ್ ಪಕ್ಷದ ಗೂಂಡಾಗಳ ಪಡೆಯು, ಪಕ್ಷವು ಭರ್ಜರಿಯಾಗಿ ಗೆದ್ದರೂ, ಬಿಜೆಪಿ ಕೈಯಲ್ಲಿ ಅಲ್ಲಲ್ಲಿ ಸೋತ ಹತಾಶೆಯಿಂದಾಗಿ ತಮ್ಮ ಹಳೇ ಚಾಳಿಗಿಳಿದಿವೆ.
ಹಿಂಸಾಚಾರದ ವಿಡಿಯೊಗಳು ಇಲ್ಲಿವೆ.
ಬಿಜೆಪಿ ಕಾರ್ಯಕರ್ತರ ಮನೆಗೆ ಬೆಂಕಿ ಹಚ್ಚಲಾಗಿದೆ, ಮಹಿಳೆಯರನ್ನು ಎಳೆದು ಅತ್ಯಾಚಾರದ ಬೆದರಿಕೆಯೊಡ್ಡಲಾಗಿದೆ, ಅಷ್ಟೇ ಏಕೆ, ಬಿಜೆಪಿ ಕಚೇರಿಗೂ ಬೆಂಕಿ ಹಚ್ಚಿ ದಾಂಧಲೆ ನಡೆಸಲಾಗಿದೆ.
ಸ್ವತಃ ಸಿಪಿಎಂ ಮುಖಂಡ ಸೀತಾರಾಮ ಯೆಚೂರಿ ಅವರೇ ಟಿಎಂಸಿ ಗೂಂಡಾಗಳ ವರ್ತನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ ಮತ್ತು ಸಂಬಂಧಿತ ಹಿಂಸಾಚಾರದ ಚಿತ್ರಗಳನ್ನು ಹಂಚಿಕೊಂಡು, ಇದು ಟಿಎಂಸಿಯ ವಿಜಯೋತ್ಸವ ಆಚರಣೆಯೇ ಎಂದು ಪ್ರಶ್ನಿಸಿದ್ದಾರೆ.
ಚುನಾವಣೋತ್ತರ ಹಿಂಸಾಚಾರದಲ್ಲಿ ಈಗಾಗಲೇ ಬಿಜೆಪಿಯನ್ನು ಬೆಂಬಲಿಸದ ಕನಿಷ್ಠ 6 ಮಂದಿಯನ್ನು ಟಿಎಂಸಿ ಗೂಂಡಾಗಳು ಹೊಡೆದು ಕೊಂದಿವೆ ಎಂದು ಬಿಜೆಪಿ ಈಗಾಗಲೇ ದೂರು ನೀಡಿದೆ.
ತಮ್ಮ ಪ್ರೀತಿಯ ನಾಯಿಯೊಂದನ್ನು ಟಿಎಂಸಿ ಗೂಂಡಾಗಳು ಹೇಗೆ ಕೊಂದರು ಎಂಬ ವಿಡಿಯೋವನ್ನು ಮತ್ತು ಉತ್ತರ 24 ಪರಗಣ ಜಿಲ್ಲೆಯಲ್ಲಿ ತನ್ನ ಮಗನನ್ನು ಗೂಂಡಾಗಳ ದಾಳಿಯಿಂದ ರಕ್ಷಿಸಲು ವೃದ್ಧೆಯೊಬ್ಬಳು ಹರಸಾಹಸ ಪಡುತ್ತಿರುವ ವಿಡಿಯೊವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ಬಿಜೆಪಿ ಕಾರ್ಯಕರ್ತನನ್ನೇ ಈ ಗೂಂಡಾಗಳು ಕೋಲ್ಕತಾದಲ್ಲಿ ಹೊಡೆದು ಕೊಂದಿದ್ದಾರೆ.
ಈ ಮಧ್ಯೆ, ನಮ್ಮ ಮೇಲೂ ರಾಜಕೀಯ ಪ್ರತೀಕಾರದ ದಾಳಿ ನಡೆದಿದೆ, ನಮ್ಮ ನಾಲ್ವರು ಕಾರ್ಯಕರ್ತರು ಸತ್ತಿದ್ದಾರೆ ಎಂದು ಟಿಎಂಸಿಯೂ ಪ್ರತ್ಯಾರೋಪ ಮಾಡಿದ್ದರೆ, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ನಿರ್ನಾಮವಾಗಿರುವ ಐಎಸ್ಎಫ್ ಕೂಡ, ತನ್ನ ಕಾರ್ಯಕರ್ತನೊಬ್ಬ ಬಲಿಯಾಗಿದ್ದಾನೆ ಎಂದು ಆರೋಪಿಸಿದೆ.
ಅಸಾನ್ಸಾಲ್ನಲ್ಲಿ ಬಿಜೆಪಿ ಕಚೇರಿಯನ್ನು ಧ್ವಂಸ ಮಾಡಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಕ್ಷದ 15-20 ಗೂಂಡಾಗಳು ಎಬಿವಿಪಿಯ ಕೋಲ್ಕತಾ ಕಚೇರಿಗೆ ದಾಳಿ ನಡೆಸಿ, ಹಲ್ಲೆ ಮಾಡಿದ್ದಾರೆ ಮತ್ತು ಸಂಘಟನೆಯ ರಾಜ್ಯ ಕಚೇರಿಯಲ್ಲಿ ದಾಂಧಲೆ ನಡೆಸಿದ್ದಾರೆ ಎಂದು ಎಬಿವಿಪಿ ಆರೋಪಿಸಿದೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ವತಃ ರಾಜ್ಯಪಾಲರೊಂದಿಗೆ ಮಾತನಾಡಿ ಆತಂಕ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಡೆದಿರುವ ಹಿಂಸಾಚಾರವನ್ನು ಯಾವುದೇ ಪ್ರಮುಖ ರಾಜಕೀಯ ಪಕ್ಷಗಳು ಮೌನವಾಗಿ ಸಹಿಸಿಕೊಂಡಿದ್ದು, ವಿದೇಶೀ ಶಕ್ತಿಗಳ ಕೈಗೊಂಬೆಯಾಗಿರುವ ಕೆಲವು ಮಾಧ್ಯಮಗಳಂತೂ, ಕೋವಿಡ್ನಿಂದಾಗಿ ಹೆಣ ಸುಡುತ್ತಿರುವ ಫೋಟೋಗಳನ್ನು ವಿದೇಶೀ ಮಾಧ್ಯಮಗಳಿಗೆ ಕಳುಹಿಸಿ, ದೇಶದ ಮಾನ ಹರಾಜು ಮಾಡುವುದನ್ನೇ ಉದ್ಯೋಗವಾಗಿಸಿಕೊಂಡಿವೆ. ಕೋವಿಡ್ ಕಾಲದಲ್ಲಿ ಹತ್ತು ಹಲವು ದೇಶಕ್ಕಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಸಾವಿನ ಪ್ರಮಾಣ ಕೇವಲ ಶೇ.1.18 ಆಗಿದ್ದರೂ, ವಿರೋಧ ಪಕ್ಷಗಳ ಅಸಹಕಾರದ ನಡುವೆಯೂ ಪರಿಸ್ಥಿತಿಯನ್ನು ನಿಭಾಯಿಸಲು ಹಗಲು-ರಾತ್ರಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲಿಸುವ ಬದಲು, ಆಕ್ಸಿಜನ್ ಕೊರತೆ, ಲಸಿಕೆ ಕೊರತೆ ಮುಂತಾದವುಗಳ ಹೆಸರಲ್ಲಿ ಕೋರ್ಟ್ ಕೇಸುಗಳನ್ನು ಜಡಿಯುವುದು, ಮೋದಿಯನ್ನು ಟೀಕಿಸುವುದನ್ನೇ ಈ ಪಕ್ಷಗಳು ತಮ್ಮ ಏಕೈಕ “ಜನೋಪಯೋಗಿ” ಕಾರ್ಯವನ್ನಾಗಿ ಮಾಡಿಕೊಳ್ಳುತ್ತಿವೆ.
ಇದೀಗ ಪಶ್ಚಿಮ ಬಂಗಾಳದಲ್ಲಿನ ಹಿಂಸಾಚಾರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರವು, ಅಲ್ಲಿನ ರಾಜ್ಯಪಾಲರಿಂದ ವರದಿ ತರಿಸಿಕೊಂಡಿದೆ. ರಾಜ್ಯಪಾಲ ಜಗದೀಪ್ ಧನ್ಕರ್ ಅವರೂ ರಾಜ್ಯದ ಡಿಜಿಪಿ, ಗೃಹ ಕಾರ್ಯದರ್ಶಿ ಮತ್ತು ಕೋಲ್ಕತಾ ಕಮಿಶನರ್ ಅವರನ್ನು ರಾಜಭವನಕ್ಕೆ ಕರೆಸಿಕೊಂಡು, ಚುನಾವಣೋತ್ತರ ಹಿಂಸಾಚಾರ ತಡೆಯುವಂತೆ, ಕೊಲೆಗಳು ಅಂತ್ಯವಾಗುವಂತೆ ನೋಡಿಕೊಳ್ಳಬೇಕೆಂದು ತಾಕೀತು ಮಾಡಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪಶ್ಚಿಮ ಬಂಗಾಳಕ್ಕೆ ಧಾವಿಸಿದ್ದು, ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರ ರಕ್ಷಣೆಗಾಗಿ, ಟಿಎಂಸಿ ಗೂಂಡಾಗಳ ರಾಜಕೀಯ ಹಿಂಸಾಚಾರದ ವಿರುದ್ಧ ಬುಧವಾರ ದೇಶಾದ್ಯಂತ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದಾರೆ.
ಮೇ 2ರಂದು ಪ್ರಕಟವಾದ ಫಲಿತಾಂಶದಲ್ಲಿ ಟಿಎಂಸಿ 213 ಸ್ಥಾನಗಳನ್ನು ಭರ್ಜರಿಯಾಗಿ ಗೆದ್ದಿತ್ತು. ಬಿಜೆಪಿಯು ಕೂಡ 77 ಸ್ಥಾನಗಳಲ್ಲಿ ದಿಗ್ವಿಜಯ ಸಾಧಿಸಿತ್ತು. ಆದರೆ, 44 ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದ್ದರೆ, ಎಡಪಕ್ಷಗಳ ಮೈತ್ರಿಕೂಟಕ್ಕೆ ಕೇವಲ 1 ಸ್ಥಾನ ದಕ್ಕಿದೆ.

Average Rating