ನವದೆಹಲಿ: ಅಂತೂ ಇಂತೂ ಹಲವು ತಿಂಗಳುಗಳ ಅನಿಶ್ಚಿತತೆಯ ಬಳಿಕ ಕೊನೆಗೂ ಫೇಸ್‌ಬುಕ್ ಒಡೆತನದ ವಾಟ್ಸ್ಆ್ಯಪ್‌ಗೆ ಡಿಜಿಟಲ್ ಪಾವತಿ ವ್ಯವಸ್ಥೆಯ ಕಾರ್ಯಾಚರಣೆಗೆ ಭಾರತವು ಅನುಮತಿ ನೀಡಿದೆ.
ಜಗತ್ತಿನ ಅತಿದೊಡ್ಡ ಮುಕ್ತ ತಂತ್ರಜ್ಞಾನ ಮಾರುಕಟ್ಟೆಯಾಗಿರುವ ಭಾರತದಲ್ಲಿ ವಾಟ್ಸ್ಆ್ಯಪ್ ಪಾವತಿ ವ್ಯವಸ್ಥೆಯು ದೇಶೀಯವಾದ, ಬಹುಬ್ಯಾಂಕ್ ಬೆಂಬಲಿತ ಏಕೀಕೃತ ಪಾವತಿ ಇಂಟರ್ಫೇಸ್ (ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ – ಯುಪಿಐ) ಮೂಲಕ ಕಾರ್ಯಾಚರಣೆ ನಡೆಸಬಹುದು ಎಂದು ಭಾರತದ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.
ಇದೀಗ ಅಮೆರಿಕ ಮೂಲದ ಈ ಸಂಸ್ಥೆಯು 2 ಕೋಟಿ ಬಳಕೆದಾರರ ಮೂಲಕ ಆರಂಭಿಸಿ ತನ್ನ ಯುಪಿಐ ಸೇವೆಯನ್ನು ನಿಧಾನವಾಗಿ ವಿಸ್ತರಿಸಬಹುದಾಗಿದೆ.
ವಾಟ್ಸ್ಆ್ಯಪ್ ಪಾವತಿ ವ್ಯವಸ್ಥೆಗಾಗಿ ಫೇಸ್‌ಬುಕ್ ಹಲವು ವರ್ಷಗಳಿಂದ ಪ್ರಯೋಗನಿರತವಾಗಿತ್ತು. ಆದರೆ, ಭಾರತ ಸರ್ಕಾರದ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಅದು ಕೆಲವೇ ಕೆಲವು ಬಳಕೆದಾರರಿಗೆ ಮಾತ್ರ ತನ್ನ ಪೈಲಟ್ ಯೋಜನೆಯನ್ನು ಸೀಮಿತಗೊಳಿಸಿತ್ತು.
ಪೇಟಿಎಂ, ಆಲ್ಫಬೆಟ್ ಇಂಕ್‌ನ ಗೂಗಲ್ ಪೇ, ವಾಲ್‌ಮಾರ್ಟ್‌ನ ಫೋನ್‌ಪೇ, ಅಮೆಜಾನ್‌ನ ಅಮೆಜಾನ್ ಪೇ ಮತ್ತು ನೂರಾರು ಇತರ ಸ್ಟಾರ್ಟಪ್‌ಗಳು ಈ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ.
ಆದರೆ, ಇದೀಗ ಭಾರಿ ಜನಪ್ರಿಯತೆ ಗಳಿಸಿರುವ ವಾಟ್ಸ್ಆ್ಯಪ್ ಪಾವತಿ ವ್ಯವಸ್ಥೆ ಆರಂಭವಾದರೆ, ಯುಪಿಐ ಸೇವೆಗಳ ಮುಂದಾಳುಗಳೆಲ್ಲವೂ ಪ್ರಬಲ ಸ್ಫರ್ಧೆ ಎದುರಿಸಬೇಕಾಗುತ್ತದೆ. ವಾಟ್ಸ್ಆ್ಯಪ್ ಭಾರತದಲ್ಲಿ 40 ಕೋಟಿಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವುದರಿಂದ, ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನೇ ಮರುವಿನ್ಯಾಸಗೊಳಿಸಬಹುದು ಎಂಬ ನಿರೀಕ್ಷೆಯಿದೆ.
ವಾಟ್ಸ್ಆ್ಯಪ್ ಜನಪ್ರಿಯತೆಯಿಂದಾಗಿ ಸಹಜವಾಗಿ ಹೆಚ್ಚು ಹೆಚ್ಚು ಮಂದಿ ಇದರ ಪಾವತಿ ವ್ಯವಸ್ಥೆಯೊಡನೆ ಸೇರಿಕೊಳ್ಳಬಹುದಾಗಿದೆ. ಇದರಿಂದಾಗಿ ಡಿಜಿಟಲ್ ವ್ಯಾಲೆಟ್ ಕ್ಷೇತ್ರದಲ್ಲೇ ಭರ್ಜರಿ ಬದಲಾವಣೆಗಳೊಂದಿಗೆ, ಸ್ಫರ್ಧೆ ಹೆಚ್ಚಿ ಗ್ರಾಹಕರಿಗೆ ಮತ್ತಷ್ಟು ಅನುಕೂಲವಾಗುವ ನಿರೀಕ್ಷೆಗಳಿವೆ. ಆದರೆ, ವಾಟ್ಸ್ಆ್ಯಪ್ ಪಾವತಿ ವ್ಯವಸ್ಥೆಯನ್ನು 40 ಕೋಟಿ ಬಳಕೆದಾರರಲ್ಲಿ 2 ಕೋಟಿ ಮಂದಿಗೆ ಮಾತ್ರವೇ ನೀಡಬಹುದು ಎಂಬ ಮಿತಿಯೂ ಇದೆ.
ಇದಕ್ಕೆ ಕಾರಣ, ಸದ್ಯಕ್ಕೆ ಗೂಗಲ್ ಪೇ ಹಾಗೂ ಫೋನ್‌ಪೇಗಳು ಯುಪಿಐ ವಹಿವಾಟಿನಲ್ಲಿ ತಲಾ.ಶೇ.40ರಂತೆ ಒಟ್ಟು ಶೇ.80 ಪಾಲು ಹೊಂದಿವೆ. ಮಾರುಕಟ್ಟೆಯಲ್ಲಿ ವ್ಯತ್ಯಾಸವಾಗದಂತಿರಲು ರಾಷ್ಟ್ರೀಯ ಪಾವತಿ ನಿಗಮವು ಜನವರಿ 2021ರಿಂದ ಅನ್ವಯವಾಗುವಂತೆ ಶೇ.30ರ ಪಾಲಿಗೆ ಹಾಕಿದೆ.
ಹೀಗಾಗಿ ಎಲ್ಲ ಬಳಕೆದಾರರಿಗೆ ಈ ಪಾವತಿ ವ್ಯವಸ್ಥೆ ದೊರೆಯುವ ಸಾಧ್ಯತೆಗಳಿಲ್ಲ.
ಭಾರತವು ವಾಟ್ಸ್ಆ್ಯಪ್‌ನ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಫೇಸ್‌ಬುಕ್‌ಗೂ ಅತ್ಯಂತ ಮಹತ್ವದ ದೇಶ. ಫೇಸ್‌ಬುಕ್ ಈಗಾಗಲೇ ಅಮೆರಿಕ ಮತ್ತು ಯೂರೋಪ್ ರಾಷ್ಟ್ರಗಳಲ್ಲಿ ಬಳಕೆದಾರರ ಸಂಖ್ಯೆಯು ಒಂದು ಹಂತದಲ್ಲೇ ನಿಂತಿದ್ದು, ಹೆಚ್ಚಿನ ಸಾಧ್ಯತೆಗಳಿರುವ ಭಾರತದಲ್ಲಿ ತನ್ನ ಬಳಕೆದಾರರ ಸಂಖ್ಯೆಯನ್ನು ವಿಸ್ತರಿಸಿಕೊಳ್ಳುವತ್ತ ಹೆಜ್ಜೆಯಿಟ್ಟಿದೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

Average Rating